ADVERTISEMENT

ಯಾದಗಿರಿ: ಸ್ಪೀಕರ್‌ ಹೊಡೆದು, ಕಲಾವಿದರಿಗೆ ಬೆದರಿಕೆ; ಆರೋಪ

ಜಿಲ್ಲಾ ಕ್ರೀಡಾಂಗಣದಲ್ಲಿ ಆರ್‌ಡಿಪಿಆರ್ ನೌಕರರ ಕ್ರೀಡಾಕೂಟದ ರಸಮಂಜರಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 5:57 IST
Last Updated 5 ಜನವರಿ 2026, 5:57 IST
ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಿದ್ದ ರಸಮಂಜರಿ ಕಾರ್ಯಕ್ರಮ
ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಿದ್ದ ರಸಮಂಜರಿ ಕಾರ್ಯಕ್ರಮ   

ಯಾದಗಿರಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ (ಆರ್‌ಡಿಪಿಆರ್) ನೌಕರರ ಕ್ರೀಡಾಕೂಟದ ಅಂಗವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಜನವರಿ 2ರ ರಾತ್ರಿ ನಡೆದ ರಸಮಂಜರಿ ಕಾರ್ಯಕ್ರಮದ ವೇಳೆ ಕೆಲ ನೌಕರರು ಸಂಗೀತ ಸಲಕರಣೆಗಳನ್ನು ಹೊಡೆದು ಹಾಕಿ, ಕಲಾವಿದರಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾದ ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಆರ್‌ಡಿಪಿಆರ್ ಇಲಾಖೆಯು ಜಿಲ್ಲಾ ಕ್ರೀಡಾಂಗಣದಲ್ಲಿ ನೌಕರರ ಕ್ರೀಡಾಕೂಟವನ್ನು ಆಯೋಜಿಸಿತ್ತು. ಅದರ ಭಾಗವಾಗಿ ಕ್ರೀಡಾಂಗಣದ ವೇದಿಕೆಯ ಮೇಲೆ ತಡರಾತ್ರಿ ರಸಮಂಜರಿ ಕಾರ್ಯಕ್ರಮವನ್ನು ನಡೆಸಿತ್ತು. ಕಲಬುರಗಿಯಿಂದ ಒಬ್ಬರು  ಗಾಯಕಿ, ಮೂವರು ಗಾಯಕರು ಒಳಗೊಂಡು ಏಳೆಂಟು ಜನರಿದ್ದ ತಂಡವನ್ನು ಕರೆಸಲಾಗಿತ್ತು.

‘ಅಧಿಕಾರಿಗಳು ಎಲ್ಲರೂ ಹೋದ ಮೇಲೆ ಕೆಲವರೂ ಕುಡಿದು ಬಂದು ಅಶ್ಲೀಲ ಜನಪದ ಗೀತೆ ಹಾಡುವಂತೆ ಒತ್ತಾಯ ಮಾಡಿದರು. ಬ್ಯಾನ್ ಆಗಿರುವ ಅಶ್ಲೀಲ ಪದಗಳು ಹಾಡುವುದಿಲ್ಲ ಎಂದಿದ್ದಕ್ಕೆ ನಮ್ಮ ಮೈಮೇಲೆ ಬಂದು, ಯಾದಗಿರಿ ದಾಟಿ ಹೇಗೆ ಹೋಗಿತ್ತೀರಾ ಎಂದು ಬೆದರಿಕೆ ಹಾಕಿದ್ದಾರೆ. ಸೌಂಡ್‌ ಬಾಕ್ಸ್‌ಗಳನ್ನು ಹೊಡೆದು ಹಾನಿಗೇಡವಿದ್ದಾರೆ. ಸಂಗೀತವನ್ನೇ ನಂಬಿ ಜೀವನ ನಡೆಸುತ್ತಿರುವ ಬಡ ಕಲಾವಿದರಿಗೆ ನಷ್ಟವಾಗಿದೆ’ ಎಂದು ಕಲಾವಿದರೊಬ್ಬರು ಕಾನ್ಫ್‌ರೆನ್ಸ್ ಫೋನ್‌ ಕಾಲ್‌ನಲ್ಲಿ ತಮ್ಮ ಅಳಲು ತೊಂಡಿಕೊಂಡಿರುವುದು ಆಡಿಯೊದಲ್ಲಿದೆ.

ADVERTISEMENT

‘ಸರ್ಕಾರಿ ನೌಕರರು ಇದ್ದೀರಾ ಹೀಗೆಲ್ಲ ಮಾಡುವುದು ಸರಿಯಲ್ಲ. ನಾಳೆ ವಿಡಿಯೊ ಹರಿದಾಡಿದರೆ ನಮಗಿಂತ ನಿಮಗೆ ತೊಂದರೆ ಆಗುತ್ತದೆ ಎಂದರೂ ಕೇಳಿಲ್ಲ. ಕಾರಿನ ಸ್ಪೀಕರ್‌ಗಳನ್ನು ಚಾಲು ಮಾಡಿ ಪಬ್‌ ರೀತಿಯಲ್ಲಿ ಕುಣಿದಾಡಿದ್ದಾರೆ. ನಾನು ಹೊರಗಿನಿಂದ ಬಂದಿದ್ದು ಎಲ್ಲರು ಹೆಸರು ಗೊತ್ತಿಲ್ಲ. ಗುರು ಪಾಟೀಲ ಒಬ್ಬರ ಹೆಸರು ಗೊತ್ತಿದೆ, ಎದುರು ಬಂದರೆ ಗುರುತು ಹಿಡಿಯುವೆ’ ಎಂದಿರುವುದು ಸಹ ಸೆರೆಯಾಗಿದೆ.

ಸಂಭಾಷಣೆಯ ನಡುವೆ ಅಧಿಕಾರಿಯೊಬ್ಬರು ಸಮಾಧಾನಪಡಿಸಿದ್ದು, ‘ದೂರದಿಂದ ಬಂದವರಿಗೆ ಪಾಪ ಹಾಗೆಲ್ಲ ಮಾಡಬಾರದಿತ್ತು. ಅದು ಏನಾಗಿದೆ ದುರಸ್ತಿ ಮಾಡಿಸಿಕೊಡುತ್ತೇವೆ. ಕೆಲವರು ನಮ್ಮ ಸಿಬ್ಬಂದಿಯಲ್ಲ ಹೊರಗಡೆಯಿಂದ ಬಂದಿರುತ್ತಾರೆ. ಪಂಚಾಯಿತಿ ಸದಸ್ಯರು, ಅಧ್ಯಕ್ಷರು ಬಂದಿರುತ್ತಾರೆ. ಕ್ಷಮೆ ಇರಲಿ’ ಎಂದಿರುವುದು ಫೋನ್ ಕರೆ ಸಂಭಾಷಣೆಯಲ್ಲಿದೆ.

2.13, 5.54 ಹಾಗೂ 1.03 ಸೆಕೆಂಡ್‌ಗಳ ಫೋನ್ ಕಾಲ್ ಸಂಭಾಷಣೆಯ ಆಡಿಯೊ ಜೊತೆಗೆ ಕುಡಿದ ಮತ್ತಿನಲ್ಲಿ ನೌಕರರೊಬ್ಬರು ಮೊಬೈಲ್ ಕಸಿದುಕೊಳ್ಳಲು ಯತ್ನಿಸಿದ ಮೂರು ಸೆಕೆಂಡ್‌ಗಳ ವಿಡಿಯೊ ಸಹ ಹರಿದಾಡುತ್ತಿದೆ.

ಹಾನಿಗೀಡಾಗಿರುವ ಸ್ಪೀಕರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.