ADVERTISEMENT

ಶತಾವಧಾನ ಪ್ರದರ್ಶಿಸಿದ ಯತಿ ಜೋಡಿ

ಅವಳಿ ಬಾಲ ಮುನಿಗಳ ಅಸಾಧಾರಣ ಸ್ಮರಣಶಕ್ತಿ ಅನಾವರಣ

​ಪ್ರಜಾವಾಣಿ ವಾರ್ತೆ
Published 11 ಜನವರಿ 2020, 10:38 IST
Last Updated 11 ಜನವರಿ 2020, 10:38 IST
ಸುರಪುರದಲ್ಲಿ ಶುಕ್ರವಾರ ನಮಿಚಂದ್ರ ಮತ್ತು ನೇಮಿಚಂದ್ರ ಬಾಲ ಯತಿಗಳು (ಎಡದಿಂದ ಮೊದಲು ಇಬ್ಬರು) ಅರ್ಧ ಶತಾವಧಾನ ಪ್ರದರ್ಶಿಸಿದರು. ದೀಕ್ಷಾ ಗುರು ಅಭಿನಂದನಚಂದ್ರ ಸಾಗರ ಇದ್ದರು
ಸುರಪುರದಲ್ಲಿ ಶುಕ್ರವಾರ ನಮಿಚಂದ್ರ ಮತ್ತು ನೇಮಿಚಂದ್ರ ಬಾಲ ಯತಿಗಳು (ಎಡದಿಂದ ಮೊದಲು ಇಬ್ಬರು) ಅರ್ಧ ಶತಾವಧಾನ ಪ್ರದರ್ಶಿಸಿದರು. ದೀಕ್ಷಾ ಗುರು ಅಭಿನಂದನಚಂದ್ರ ಸಾಗರ ಇದ್ದರು   

ಸುರಪುರ: ಕೆಲ ನಿಮಿಷಗಳ ಹಿಂದೆ ಏನು ಮಾತನಾಡಿದೆವು ಎಂಬುದನ್ನು ಮರೆಯುವವರೆ ಹೆಚ್ಚು. ಆದರೆ ನೇಮಿಚಂದ್ರ ಸಾಗರ ಮತ್ತು ನಮಿಚಂದ್ರ ಸಾಗರ ಎಂಬ 11 ವರ್ಷದ ಅವಳಿ ಜೈನ ಮುನಿಗಳು ಪ್ರಶ್ನೆ ಕೇಳಿ 2 ಗಂಟೆ ನಂತರ ಉತ್ತರಿಸಿ ಎಲ್ಲರನ್ನೂ ಚಕಿತಗೊಳಿಸಿದರು.

ನಗರದ ರಾಜೇಂದ್ರ ಸೂರೇಶ್ವರಜಿ ಗುರುಮಂದಿರದಲ್ಲಿ ಜೈನ ಸಮುದಾಯ ಶುಕ್ರವಾರ ಆಯೋಜಿಸಿದ್ದ ಅರ್ಧ ಶತಾವಧಾನ ಕಾರ್ಯಕ್ರಮದಲ್ಲಿ ಈ ಯತಿ ಜೋಡಿ ತಮ್ಮ ಅಸಾಧಾರಣ ಸ್ಮರಣ ಶಕ್ತಿ ಅನಾವರಣಗೊಳಿಸಿ ಸಭಿಕರನ್ನು ಮಂತ್ರಮುಗ್ಧರನ್ನಾಗಿಸಿದರು.

ವಿವಿಧ ಭಾಷೆಯ ಹೆಸರನ್ನು ಹೇಳಿ ಅದರಲ್ಲಿ ಪ್ರವಚನವನ್ನು ಬೋಧಿಸುವುದು. ಜೈನ ಧರ್ಮದ ಶ್ಲೋಕಗಳು, ಭಗವದ್ಗೀತೆ, ಬೈಬಲ್, ಕುರಾನ್ ಸೇರಿದಂತೆ ಇನ್ನಿತರ ಧರ್ಮ ಗ್ರಂಥಗಳ ಅಂಶಗಳನ್ನು ಪಠಿಸುವುದು. ದೇಶದ ಹೆಸರನ್ನು ಹೇಳಿ ಅದರ ರಾಜಧಾನಿ ಮತ್ತು ಭಾಷೆಯನ್ನು ಹೇಳುವುದು. ಹೀಗೆ ವಿವಿಧ ಬಗೆಯ 15 ಅವಧಾನಗಳನ್ನು ಪ್ರದರ್ಶಿಸಿದರು.

ADVERTISEMENT

ಸಭಿಕರು ಪ್ರಶ್ನೆ ಕೇಳುವುದು, ವಸ್ತು, ಅಂಶಗಳನ್ನು ಸೂಚಿಸುವ ಪ್ರಕ್ರಿಯೆ 2 ಗಂಟೆಗೂ ಹೆಚ್ಚು ಕಾಲ ನಡೆಯಿತು. ನಂತರ ಯತಿ ಜೋಡಿ ಸಭಿಕರು ಕೇಳಿದ 54 ಪ್ರಶ್ನೆಗಳಿಗೆ ಆರೋಹಣ, ಅವರೋಹಣ, ರ್‍ಯಾಂಡಮ್ ಮಾದರಿಯಲ್ಲಿ ಹೇಳಿ ಉತ್ತರಿಸಿದ ಪರಿ ಅಸಾಮಾನ್ಯವಾಗಿತ್ತು.

ಪುಣ್ಯ ಕ್ಷೇತ್ರಗಳು, ಪ್ರವಾಸಿ ತಾಣಗಳು, ಮಹಾತ್ಮರ, ಸಂತ, ಶರಣ, ದಾರ್ಶನಿಕ, ರಾಷ್ಟ್ರ ಪುರುಷರ ಸಂದೇಶಗಳನ್ನು ತಿಳಿಸಿದರು. ಗಣಿತ, ವಿಜ್ಞಾನ, ಇತಿಹಾಸ, ಸಾಮಾನ್ಯ ಜ್ಞಾನಕ್ಕೆ ಸೇರಿದಂತೆ ಸಭಿಕರು ಕೇಳಿದ ಪ್ರಶ್ನೆಗಳಿಗೆ ಅದೇ ಭಾಷೆಯಲ್ಲಿ ಉತ್ತರಿಸಿ ಚಪ್ಪಾಳೆ ಗಿಟ್ಟಿಸಿಕೊಂಡರು.

ಬಾಲ ಯತಿಗಳ ದೀಕ್ಷಾ ಗುರು ಅಭಿನಂದನ್ ಚಂದ್ರಸಾಗರಜಿ, ಶಾಸಕ ರಾಜೂಗೌಡ, ರಾಜಾ ಹನುಮಪ್ಪನಾಯಕ, ಬಲಭೀಮ ನಾಯಕ ಬೈರಿಮಡ್ಡಿ, ವೇಣುಮಾಧವ ನಾಯಕ, ಉಸ್ತಾದ ವಜಾಹತ ಹುಸೇನ, ಶ್ರೀನಿವಾಸ ಜಾಲವಾದಿ, ಕೆ.ಅರವಿಂದಕುಮಾರ, ಗೋಪಾಲದಾಸ ಲಡ್ಡಾ, ಕಿಶೋರಚಂದ್ ಜೈನ್,ರಾಯಚಂದ್ ಜೈನ್, ತಾರಾಚಂದ್ ಜೈನ್, ಭರತಕುಮಾರ ಜೈನ್, ಉತ್ತಮ ಜೈನ್, ಕಾಂತಿಲಾಲ್ ಜೈನ್, ಪ್ರಕಾಶಚಂದ್ ಜೈನ್, ಅರವಿಂದಕುಮಾರ ಜೈನ್, ರಮೇಶ ಜೈನ್ ಮತ್ತು ವಿವಿಧ ಧಾರ್ಮಿಕರು ಮುಖಂಡರು ಕಾರ್ಯಕ್ರಮದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.