ADVERTISEMENT

RRBs: 9,900 ಲೊಕೊ ಪೈಲಟ್‌ಗಳ ನೇಮಕಾತಿ; ಏ.10ರಿಂದ ಅರ್ಜಿ ಸಲ್ಲಿಕೆ ಆರಂಭ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2025, 11:20 IST
Last Updated 10 ಏಪ್ರಿಲ್ 2025, 11:20 IST
ಭಾರತೀಯ ರೈಲ್ವೆ
ಭಾರತೀಯ ರೈಲ್ವೆ   

–ಪ್ರಜಾವಾಣಿ ಚಿತ್ರ

ಬೆಂಗಳೂರು: ರೈಲ್ವೆ ಇಲಾಖೆಯ 9,900 ಸಹಾಯಕ ಲೊಕೊ ಪೈಲಟ್‌ಗಳ (ALP) ನೇಮಕಾತಿ ಪ್ರಕ್ರಿಯೆಗೆ ಅರ್ಜಿ ಆಹ್ವಾನಿಸಿದೆ. 

ಈ ಹುದ್ದೆಗಳು ದೇಶದಲ್ಲಿರುವ ಒಟ್ಟು 21 ರೈಲ್ವೆ ಮಂಡಳಿಗಳ ವ್ಯಾಪ್ತಿಗೆ ಬರುತ್ತವೆ. ಅಭ್ಯರ್ಥಿಗಳು ತಮ್ಮ ಇಷ್ಟದ ಮಂಡಳಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ಒಬ್ಬ ಅಭ್ಯರ್ಥಿ ಒಂದು ಕಡೆಗೆ ಮಾತ್ರ ಅರ್ಜಿ ಸಲ್ಲಿಸಲು ಅರ್ಹ.

ADVERTISEMENT

ಅರ್ಜಿ ಸಲ್ಲಿಕೆ ಹಾಗೂ ಶುಲ್ಕ

ಏಪ್ರಿಲ್‌ 10 ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು, ಮೇ 09 ಕಡೆಯ ದಿನ. ಜನರಲ್, ಒಬಿಸಿ ಅವರಿಗೆ ₹500, ಎಸ್‌.ಸಿ/ಎಸ್‌ಟಿ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ₹250 ಅರ್ಜಿ ಶುಲ್ಕವಿದೆ.

ವಿದ್ಯಾರ್ಹತೆ ಏನಿದೆ?

ಮೆಟ್ರಿಕುಲೇಷನ್ (ಎಸ್‌ಎಸ್‌ಎಲ್‌ಸಿ) ಜೊತೆಗೆ ಐಟಿಐ ಮಾಡಿದವರು (ಆಯ್ದ ಕ್ಷೇತ್ರಗಳಲ್ಲಿ) ಅಥವಾ ಮೆಟ್ರಿಕುಲೇಷನ್ ಜೊತೆಗೆ ಮೂರು ವರ್ಷದ ಡಿಪ್ಲೊಮಾ, ಎಂಜಿನಿಯರಿಂಗ್ ಪದವಿ (ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್‌, ಆಟೊಮೊಬೈಲ್ ಎಂಜನಿಯರಿಂಗ್ ಮಾತ್ರ) ಮಾಡಿದವರು ಅರ್ಜಿ ಸಲ್ಲಿಸಲು ಅರ್ಹ. ಆರಂಭಿಕ ವೇತನ ₹19,900.

ವಯೋಮಾನ

18 ರಿಂದ 30 ವರ್ಷ ವಯೋಮಾನದವರು ಅರ್ಜಿ ಸಲ್ಲಿಸಲು ಅರ್ಹರು. ಎಸ್‌.ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅವರಿಗೆ 3 ವರ್ಷ ವಯೋಮಾನದಲ್ಲಿ ಸಡಿಲಿಕೆ ಇದೆ. ನಿವೃತ್ತ ಸೈನಿಕರಿಗೂ ನಿಯಮಾನುಸಾರ ಸಡಿಲಿಕೆ ಇದೆ.

ನೇಮಕಾತಿ ಪ್ರಕ್ರಿಯೆ ಹೇಗಿದೆ?

ಒಟ್ಟು 3 ಹಂತಗಳಲ್ಲಿ ನೇಮಕಾತಿ ಪರೀಕ್ಷೆ ನಡೆಯಲಿದೆ. ಆ ನಂತರ ನಿಗದಿಪಡಿಸಿದ ವೈದ್ಯಕೀಯ ಮಾನದಂಡಗಳನ್ನು ಅಭ್ಯರ್ಥಿಗಳು ಪೂರೈಸಬೇಕಾಗುತ್ತದೆ.

CBT–1: ಮೊದಲಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ–1 (CBT-1) ನಡೆಯಲಿದೆ. ಇದರಲ್ಲಿ 75 ಅಂಕಗಳಿಗೆ 75 ನಿಮಿಷದ ಒಂದೇ ಪತ್ರಿಕೆ ಇರುತ್ತದೆ. ತಲಾ ಮೂರು ತಪ್ಪು ಉತ್ತರಗಳಿಗೆ ಒಂದು ಅಂಕ ಕಳೆಯಲಾಗುತ್ತದೆ. ಮುಂದಿನ ಹಂತಕ್ಕೆ ಹೋಗಬೇಕಾದರೆ ಇದರಲ್ಲಿ ಕನಿಷ್ಠ ಅಂಕಗಳನ್ನು ಪಡೆಯಲೇಬೇಕು. ಇದರ ಅಂಕಗಳನ್ನು ಮೆರಿಟ್ ಪಟ್ಟಿಗೆ ಪರಿಗಣಿಸುವುದಿಲ್ಲ. ಕೇವಲ ಅರ್ಹತಾ ಪರೀಕ್ಷೆ ಇದಾಗಿರುತ್ತದೆ.

CBT–2: ಇದರಲ್ಲಿ 2.30 ಗಂಟೆಯ 175 ಪ್ರಶ್ನೆಗಳ ಎರಡು ಪತ್ರಿಕೆ ಇರುತ್ತವೆ. ಇದಕ್ಕೂ ಕೂಡ ನೆಗಟಿವ್ ಮಾರ್ಕ್ಸ್‌ ಇರುತ್ತವೆ. ಈ ಪರೀಕ್ಷೆಯಲ್ಲಿನ ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳು 1:15 ರಲ್ಲಿ ಮುಂದಿನ ಹಂತಕ್ಕೆ ಹೋಗುತ್ತಾರೆ.

CABT: ಕಂಪ್ಯೂಟರ್ ಬೇಸ್ಡ್‌ ಆಪ್ಟಿಟ್ಯೂಡ್ ಟೆಸ್ಟ್‌ ಇದು ಮೂರನೇ ಹಂತವಾಗಿದ್ದು ವಿವರಣಾತ್ಮಕವಾಗಿರುತ್ತದೆ. ಇದಕ್ಕೆ ದೃಷ್ಟಿ ತಪಾಸಣೆಯ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯ.

ಸಿಬಿಟಿ–2, ಸಿಎಬಿಟಿ ಪರೀಕ್ಷೆಯ ಅಂಕಗಳನ್ನು ಪರಿಗಣಿಸಿ ಆರ್‌ಆರ್‌ಬಿಗಳು ವೇಟೇಜ್ ಆಧಾರದ ಮೇಲೆ ಆಯ್ಕೆ ಪಟ್ಟಿ ಪ್ರಕಟಿಸುತ್ತವೆ. ಸಿಬಿಟಿ–1, ಸಿಬಿಟಿ–2 ಪರೀಕ್ಷೆಗಳು ಇಂಗ್ಲಿಷ್, ಹಿಂದಿ, ಕನ್ನಡ ಸೇರಿದಂತೆ ಇತರ ಆಯ್ದ ಪ್ರಾದೇಶಿಕ ಭಾಷೆಗಳಲ್ಲಿ ಇರುತ್ತವೆ. 

ಆಸಕ್ತ ಅಭ್ಯರ್ಥಿಗಳು ತಮ್ಮ ವ್ಯಾಪ್ತಿಯ ಮಂಡಳಿಯ ವೆಬ್‌ಸೈಟ್‌ಗಳಿಗೆ ಹೋಗಿ (ಬೆಂಗಳೂರು– www.rrbbnc.gov.in) ಹುದ್ದೆಗಳ ವರ್ಗೀಕರಣ, ಪರೀಕ್ಷಾ ಪಠ್ಯಕ್ರಮ ಹಾಗೂ ಇತರೆ ಹೆಚ್ಚಿನ ಮಾಹಿತಿಗೆ ಸಂಪೂರ್ಣ ಅಧಿಸೂಚನೆ (CEN) ನೋಡಿಕೊಂಡು ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 10–04–2025

ಅರ್ಜಿ ಸಲ್ಲಿಕೆ ಕಂಡೆ ದಿನಾಂಕ: 09–05–2025

ವೆಬ್‌ಸೈಟ್‌: www.rrbbnc.gov.in (ಬೆಂಗಳೂರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.