ADVERTISEMENT

ಕೆಪಿಎಸ್‌ಸಿಯಲ್ಲಿ ಸಹಾಯಕ ಸಾಂಖ್ಯಿಕ ಅಧಿಕಾರಿ ಹುದ್ದೆಗಳು

ಆತ್ರೇಯ
Published 19 ಅಕ್ಟೋಬರ್ 2022, 19:30 IST
Last Updated 19 ಅಕ್ಟೋಬರ್ 2022, 19:30 IST
   

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದಲ್ಲಿನ 58 ಸಹಾಯಕ ಸಾಂಖ್ಯಿಕ ಅಧಿಕಾರಿಗಳ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಇದರಲ್ಲಿ ಮೂರು ಬ್ಯಾಕ್‌ಲಾಗ್‌ ಹುದ್ದೆಗಳೂ ಸೇರಿವೆ.

ಅಭ್ಯರ್ಥಿಗಳು ಕೆಪಿಎಸ್‌ಸಿಯ ಅಧಿಕೃತ ವೆಬ್‌ಸೈಟ್‌ ಮೂಲಕ (ಆನ್‌ಲೈನ್‌) ಅರ್ಜಿ ಸಲ್ಲಿಸಬೇಕು. ಇಂದಿನಿಂದ (ಅ.20) ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ನವೆಂಬರ್ 18, 2022 ಅರ್ಜಿ ಸಲ್ಲಿಸಲು ಕೊನೆ ದಿನ.

ಅರ್ಜಿ ಶುಲ್ಕ ವಿವರ: ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ₹600, ಪ್ರವರ್ಗ 2(ಎ), 2(ಬಿ), 3(ಎ), 3(ಬಿ) ಅಭ್ಯರ್ಥಿಗಳಿಗೆ ₹300, ಮಾಜಿ ಸೈನಿಕರಿಗೆ ₹50 ಶುಲ್ಕವಿದೆ. ಎಸ್‌ಸಿ, ಎಸ್‌ಟಿ, ಪ್ರವರ್ಗ–1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ. ಅರ್ಜಿ ಪ್ರಕ್ರಿಯೆ ಶುಲ್ಕ ₹35 ಅನ್ನು ಎಲ್ಲರೂ ಪಾವತಿಸಬೇಕಿದೆ. ಅರ್ಜಿ ಶುಲ್ಕ ಸಲ್ಲಿಕೆಗೆ ನ.19 ಕೊನೆದಿನ. ಆನ್‌ಲೈನ್ ಮೂಲಕ ಶುಲ್ಕ ಪಾವತಿಸಬೇಕು.

ADVERTISEMENT

ವೇತನ: ₹ 37900 ರಿಂದ ₹70850/- ತಿಂಗಳಿಗೆ

ಶೈಕ್ಷಣಿಕ ಅರ್ಹತೆ:ಗಣಿತ, ಪ್ಯೂರ್ ಮ್ಯಾಥೆಮೆಟಿಕ್ಸ್‌, ಸ್ಟ್ಯಾಟಿಸ್ಟಿಕ್ಸ್‌, ಅಪ್ಲೈಡ್ ಸ್ಟ್ಯಾಟಿಸ್ಟಿಕ್ಸ್‌ , ಸ್ಟ್ಯಾಟಿಸ್ಟಿಕ್ಸ್‌ ಜತೆಗೆ ಅರ್ಥಶಾಸ್ತ್ರ, ಕ್ವಾಂಟಿಟೇಟಿವ್ ತಂತ್ರಗಳು, ಪ್ಯೂರ್ ಎಕನಾಮಿಕ್ಸ್‌, ಪ್ಯೂರ್ ಮ್ಯಾಥೆಮೆಟಿಕ್ಸ್‌, ಅರ್ಥಶಾಸ್ತ್ರ ಅಥವಾ ಕಂಪ್ಯೂಟರ್ ಸೈನ್ಸ್‌ ಯಾವುದಾದರೂ ಒಂದು ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.

ವಯೋಮಿತಿ: ಕನಿಷ್ಠ 18 ವರ್ಷಗಳು, ಗರಿಷ್ಠ 35 ವರ್ಷಗಳು. ಎಸ್‌ಸಿ, ಎಸ್‌ಟಿ, ಪ್ರ.ವ –1 ರ ಅಭ್ಯರ್ಥಿಗಳಿಗೆ 5 ವರ್ಷಗಳು, ಪ್ರ.ವ–2ಎ/2ಬಿ/3ಎ ಮತ್ತು 3 ಬಿ ಅಭ್ಯರ್ಥಿಗಳಿಗೆ 3 ವರ್ಷಗಳು, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇದೆ.

ಆಯ್ಕೆ ಪ್ರಕ್ರಿಯೆ: ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆ – ಈ ಎರಡು ವಿಧಾನಗಳಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಕನ್ನಡ ಭಾಷಾ ಪರೀಕ್ಷೆ ಕಡ್ಡಾಯ. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆಯದ ಹೊರತು, ಅಭ್ಯರ್ಥಿಗಳು ಮುಂದಿನ ಸುತ್ತಿನ ಆಯ್ಕೆಗೆ ಅರ್ಹರಾಗುವುದಿಲ್ಲ.

ಕನ್ನಡ ಭಾಷಾ ಪರೀಕ್ಷೆಯಲ್ಲಿ 150 ಅಂಕಗಳ ಒಂದು ಪ್ರಶ್ನೆಪತ್ರಿಕೆ ಇರುತ್ತದೆ. ಅಭ್ಯರ್ಥಿಯು ಉತ್ತೀರ್ಣನಾಗಲು/ಮುಂದಿನ ಹಂತಕ್ಕೆ ಅರ್ಹತೆ ಪಡೆಯಲು ಕನಿಷ್ಠ 50 ಅಂಕಗಳನ್ನು ಪಡೆಯಬೇಕು. ಇದು ಎಸ್‌ಎಸ್‌ಎಲ್‌ಸಿ ಹಂತದ ಪ್ರಥಮ ಭಾಷೆ ಕನ್ನಡವನ್ನು ಮಾನದಂಡವಾಗಿಟ್ಟುಕೊಂಡು ಈ ಪತ್ರಿಕೆಯನ್ನು ಸಿದ್ಧಪಡಿಸಲಾಗಿರುತ್ತದೆ.

ಸ್ಪರ್ಧಾತ್ಮಕ ಪರೀಕ್ಷೆ: ಕನ್ನಡ ಭಾಷೆಯಲ್ಲಿ ಪಾಸಾದ ನಂತರ, ಅಭ್ಯರ್ಥಿಯು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಬೇಕು. ಇದರಲ್ಲಿ ಎರಡು ಪತ್ರಿಕೆಗಳಿರುತ್ತವೆ. ಪ್ರತಿ ಪ್ರಶ್ನೆ ಪತ್ರಿಕೆ 100 ಅಂಕಗಳದ್ದು. ವಸ್ತುನಿಷ್ಠ ಬಹು ಆಯ್ಕೆ ಮಾದರಿಯ ಪ್ರಶ್ನೆಗಳಿರುತ್ತವೆ. ಪ್ರತಿ ತಪ್ಪು ಉತ್ತರಕ್ಕೆ ಪ್ರಶ್ನೆಗೆ ನಿಗದಿಪಡಿಸಿದ ಅಂಕಗಳ ನಾಲ್ಕನೇ ಒಂದು ಭಾಗದಷ್ಟು (1/4) ಅಂಕಗಳನ್ನು ಕಳೆಯಲಾಗುತ್ತದೆ(ನೆಗೆಟಿವ್ ಕರೆಕ್ಷನ್‌).

ಅಭ್ಯರ್ಥಿಯ ಎರಡು ಪತ್ರಿಕೆಗಳ ಪರೀಕ್ಷೆಗಳಿಗೆ ಕಡ್ಡಾಯವಾಗಿ ಹಾಜರಾಗಬೇಕು. ಪತ್ರಿಕೆ–1 ರಲ್ಲಿ ಸಾಮಾನ್ಯಜ್ಞಾನ ವಿಷಯವಿರುತ್ತದೆ. 100 ಅಂಕಗಳ, ಒಂದೂವರೆ ಗಂಟೆ ಅವಧಿಯ ಪರೀಕ್ಷೆ ಇದು. ಪತ್ರಿಕೆ ಎರಡರಲ್ಲಿ ಸಾಮಾನ್ಯ ಜ್ಞಾನ(35 ಅಂಕ), ಸಾಮಾನ್ಯ ಇಂಗ್ಲಿಷ್‌(35) ಮತ್ತು ಕಂಪ್ಯೂಟರ್ ಜ್ಞಾನ(30) ವಿಷಯದ ಪ್ರಶ್ನೆಗಳಿರುತ್ತವೆ. 2 ಗಂಟೆ ಅವಧಿಯ ಈ ಪತ್ರಿಕೆಯಲ್ಲಿ 100 ಅಂಕಗಳ ಪ್ರಶ್ನೆಗಳಿರುತ್ತವೆ. ಎರಡೂ ಪತ್ರಿಕೆಗಳೂ ಕನ್ನಡ ಮತ್ತು ಆಂಗ್ಲಭಾಷೆಯಲ್ಲಿರುತ್ತವೆ.

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಪರೀಕ್ಷಾ ದಿನಾಂಕಗಳನ್ನು ಆಯೋಗದ ಜಾಲತಾಣದಲ್ಲಿ ಪ್ರಕಟಿಸಲಾಗುವುದು.

ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಶೇಕಡಾ ವಾರು ಪ್ರಮಾಣದ ಮೇಲೆ ಹಾಗೂ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಗಳ ಅನ್ವಯ ಆಯ್ಕೆ ಮಾಡಲಾಗುವುದು. ಕನ್ನಡ ಭಾಷಾ ಪರೀಕ್ಷೆಯಲ್ಲಿ ಅರ್ಹತೆ ಪಡೆಯುವುದು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿನ ಒಟ್ಟು ಅಂಕಗಳಲ್ಲಿ ಕನಿಷ್ಠ ಶೇ 35ರಷ್ಟು ಅಂಕಗಳನ್ನು ಪಡೆಯುವುದು ಕಡ್ಡಾಯ.

ಅಧಿಸೂಚನೆ, ಅರ್ಜಿ ಸಲ್ಲಿಕೆ, ಪರೀಕ್ಷಾ ಪಠ್ಯಕ್ರಮ ಸೇರಿದಂತೆ ಹೆಚ್ಚಿನ ಮಾಹಿತಿಗಾಗಿ http//kpsc.kar.nic.in/Syllabus ಜಾಲತಾಣ ಕ್ಕೆ ಭೇಟಿ ನೀಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.