ADVERTISEMENT

ಸ್ಪರ್ಧಾತ್ಮಕ ಪರೀಕ್ಷೆ: ಪ್ರಚಲಿತ ವಿದ್ಯಮಾನಗಳು

ಪ್ರಜಾವಾಣಿ ವಿಶೇಷ
Published 27 ಏಪ್ರಿಲ್ 2023, 6:09 IST
Last Updated 27 ಏಪ್ರಿಲ್ 2023, 6:09 IST
ಮಧ್ಯಪ್ರದೇಶದ ರೇವಾದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆಯಲ್ಲಿ ಪ್ರದರ್ಶಿಸಲ್ಪಟ್ಟ ಹಳ್ಳಿಯ ಮಾದರಿಯೊಂದನ್ನು ಪ್ರಧಾನಿ ನರೇಂದ್ರ ಮೋದಿ ಅವರು ವೀಕ್ಷಿಸಿದರು.
ಮಧ್ಯಪ್ರದೇಶದ ರೇವಾದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆಯಲ್ಲಿ ಪ್ರದರ್ಶಿಸಲ್ಪಟ್ಟ ಹಳ್ಳಿಯ ಮಾದರಿಯೊಂದನ್ನು ಪ್ರಧಾನಿ ನರೇಂದ್ರ ಮೋದಿ ಅವರು ವೀಕ್ಷಿಸಿದರು.   ಚಿತ್ರ: ಪಿಟಿಐ

ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಚಲಿತ ವಿದ್ಯಮಾನಗಳ ಕುರಿತ ಮಾದರಿ ಪ್ರಶ್ನೋತ್ತರಗಳಿರುತ್ತವೆ. ಈ ಪ್ರಶ್ನೋತ್ತರಕ್ಕೆ ಪೂರಕವಾದ ಪ್ರಚಲಿತ ವಿದ್ಯಮಾನಗಳನ್ನು ಇಲ್ಲಿ ಕೊಡಲಾಗಿದೆ.

1. ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿ ಸಪ್ತಾಹ

  • ಏಪ್ರಿಲ್ 17ರಿಂದ ಏಪ್ರಿಲ್ 21ರವರೆಗೂ ಕೇಂದ್ರ ಪಂಚಾಯತ್ ರಾಜ್ ಸಚಿವಾಲಯ ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿ ಸಪ್ತಾಹ  ಹಮ್ಮಿಕೊಂಡಿತ್ತು.

    ADVERTISEMENT
  • ಈ ಕಾರ್ಯಕ್ರಮದ ಪ್ರಮುಖ ಉದ್ದೇಶವೇನೆಂದರೆ ಪಂಚಾಯತ್ ರಾಜ್ ಸಂಸ್ಥೆಗಳ ಸಾಧನೆಗೆ ಮಾನ್ಯತೆ ನೀಡುವುದು, ಸುಸ್ಥಿರ ಅಭಿವೃದ್ಧಿ ಗುರಿಗಳು ಹಾಗೂ ಉತ್ತಮ ಆಡಳಿತದ ತತ್ವ ಮತ್ತು ಸಿದ್ಧಾಂತಗಳನ್ನು ಕೆಳಹಂತದಿಂದ  ಸಾಧಿಸುವಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಶ್ಲಾಘಿಸುವ ಉದ್ದೇಶದಿಂದ ಈ ಸಪ್ತಾಹ ಹಮ್ಮಿಕೊಂಡಿತ್ತು.

  • ಈ ಕಾರ್ಯಕ್ರಮದಡಿ ಹಲವು ಸಮಾವೇಶಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಸಮಾವೇಶದಲ್ಲಿ ಸ್ಥಳೀಯ ಸರ್ಕಾರಗಳಲ್ಲಿ ಭಾಗವಹಿಸುತ್ತಿರುವ ಪ್ರಮುಖ ಸರ್ಕಾರೇತರ ಸಂಸ್ಥೆಗಳು, ಯಶಸ್ವಿಯಾಗಿ  ಅನುಷ್ಠಾನಗೊಳ್ಳುತ್ತಿರುವ ಕಾರ್ಯಕ್ರಮಗಳು, ಯಶಸ್ವಿ ಪ್ರಯೋಗಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ.

ರಾಷ್ಟ್ರೀಯ ಪಂಚಾಯತ್ ರಾಜ್ ದಿವಸ

ಪ್ರತಿ ವರ್ಷ ಏಪ್ರಿಲ್ 24ರಂದು ರಾಷ್ಟ್ರೀಯ ಪಂಚಾಯತ್ ರಾಜ್ ದಿವಸವನ್ನಾಗಿ ಆಚರಿಸಲಾಗುತ್ತದೆ. 73ನೇ ಸಂವಿಧಾನಾತ್ಮಕ ತಿದ್ದುಪಡಿಯನ್ನು ಜಾರಿಗೆ ತರುವ ಮೂಲಕ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಂವಿಧಾನಾತ್ಮಕ ಸ್ಥಾನಮಾನ ಕಲ್ಪಿಸಿದ ಹಿನ್ನೆಲೆಯಲ್ಲಿ ಈ ದಿನವನ್ನು ಪಂಚಾಯತ್ ರಾಜ್ ದಿವಸವೆಂದು ಆಚರಿಸಲಾಗುತ್ತದೆ.

2. ಗ್ರಾಮೀಣ ಸಮುದಾಯಗಳಿಗೆ ‘ನಿಮ್ಹಾನ್ಸ್‌ ’

  • ಇತ್ತೀಚಿಗೆ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯು (NIMHANS)ಆಶ್ರಯ ಹಸ್ತ ಟ್ರಸ್ಟ್ ಎನ್ನುವ ಸರ್ಕಾರೇತರ ಸಂಸ್ಥೆಯೊಂದಿಗೆ ಒಪ್ಪಂದವೊಂದಕ್ಕೆ ಸಹಿ ಹಾಕಿದೆ.

  • ಗ್ರಾಮೀಣ ಸಮುದಾಯಗಳಿಗೆ ಮಾನಸಿಕ ಆರೋಗ್ಯದ ಸವಲತ್ತುಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ನಮನ್ (NAMAN) ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

  • ಈ ಕಾರ್ಯಕ್ರಮದಡಿ ಮಾನಸಿಕ ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿರುವ ಗ್ರಾಮೀಣ ಪ್ರದೇಶದ ಜನರ ಆರೈಕೆಗೆ(ಶುಶ್ರೂಷೆಗೆ) ಹಾಗೂ ಪುನರ್ವಸತಿ ಸವಲತ್ತನ್ನೂ ಕಲ್ಪಿಸಲಾಗುತ್ತದೆ. 

ಈ ಕಾರ್ಯಕ್ರಮವನ್ನು ಮೂರು ವರ್ಷಗಳ ಕಾಲ 4 ಹಂತಗಳಲ್ಲಿ ಅನುಷ್ಠಾನಕ್ಕೆ ತರಲಾಗುತ್ತದೆ. ಮೊದಲ ಹಂತದ ಕಾರ್ಯಕ್ರಮದಡಿಯಲ್ಲಿ ಅವಶ್ಯಕ ಸಿಬ್ಬಂದಿಯ ನೇಮಕಾತಿ ಮಾಡಿಕೊಂಡು, ಅವರಿಗೆ ತರಬೇತಿ ಕಲ್ಪಿಸುವುದು. ಈ  ಮೂಲಕ ಸಂಪನ್ಮೂಲಗಳನ್ನು ಕ್ರೋಡೀಕರಿಸಲಾಗುತ್ತದೆ. ಎರಡನೇ ಹಂತದಲ್ಲಿ ಮಾನಸಿಕ ಆರೋಗ್ಯಕ್ಕೆ ಸಂಬಂಧಪಟ್ಟ ಪರೀಕ್ಷೆ ನಡೆಸಲಾಗುತ್ತದೆ. ಮೂರನೇ ಹಂತದಲ್ಲಿ ರೋಗಿಗಳಿಗೆ ಬೇಕಾದ ಶುಶ್ರೂಷೆ ಹಾಗೂ ಪುನರ್ವಸತಿ ಸೇವೆಗಳನ್ನು ಕಲ್ಪಿಸಲಾಗುತ್ತದೆ. ಅಂತಿಮ ಹಂತವನ್ನು ಮೌಲ್ಯಮಾಪನ ಪ್ರಕ್ರಿಯೆಗಾಗಿ ವಿನಿಯೋಗಿಸಲಾಗುತ್ತದೆ.

ಪ್ರಸ್ತುತ ಕರ್ನಾಟಕದ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕು ಹಾಗೂ ಉತ್ತರಾಖಂಡ್ ರಾಜ್ಯದ ಪಿತೋರ್ ಘರ್ ಜಿಲ್ಲೆಯ ಮುಂಸಿಯರಿ ಗ್ರಾಮದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.