ADVERTISEMENT

ಸ್ಪರ್ಧಾ ವಾಣಿ | DRDOನಿಂದ ‘ಸ್ಕ್ರಾಮ್‌ಜೆಟ್’ ಎಂಜಿನ್ ಭೂ ಪರೀಕ್ಷೆ ಯಶಸ್ವಿ

ರಕ್ಷಣಾ ವಿದ್ಯಮಾನಗಳು

​ಪ್ರಜಾವಾಣಿ ವಾರ್ತೆ
Published 28 ಮೇ 2025, 23:30 IST
Last Updated 28 ಮೇ 2025, 23:30 IST
   

DRDOನಿಂದ ‘ಸ್ಕ್ರಾಮ್‌ಜೆಟ್’ ಎಂಜಿನ್ ಭೂ ಪರೀಕ್ಷೆ ಯಶಸ್ವಿ

l ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಈಚೆಗೆ ‘ಸ್ಕ್ರಾಮ್‌ಜೆಟ್’ ದಹನಕಾರಿ ಎಂಜಿನ್‌ನ ಭೂ ಪರೀಕ್ಷೆಯನ್ನು 120 ಸೆಕೆಂಡ್‌ವರೆಗೆ ಯಶಸ್ವಿಯಾಗಿ ನಡೆಸಿತು. ಈ ವೇಳೆ ಹೈಪರ್‌ಸಾನಿಕ್ ಕ್ಷಿಪಣಿಗಳಲ್ಲಿ ಬಳಸುವ ಸಾಮರ್ಥ್ಯವನ್ನು ಎಂಜಿನ್‌ ಪ್ರದರ್ಶಿಸಿತು.

l ಹೈಪರ್‌ಸಾನಿಕ್ ಕ್ಷಿಪಣಿಗಳು ‘ಮ್ಯಾಕ್ 5’ ಕ್ಕಿಂತ ಹೆಚ್ಚಿನ ವೇಗದಲ್ಲಿ ಅಥವಾ ಗಂಟೆಗೆ 5,400 ಕಿ.ಮೀ.ಗಿಂತ ಹೆಚ್ಚು ವೇಗದಲ್ಲಿ ಚಲಿಸುತ್ತವೆ. ಇದು ಶಬ್ದದ ವೇಗಕ್ಕಿಂತ 5 ಪಟ್ಟು ಹೆಚ್ಚಾಗಿರುತ್ತದೆ.

ADVERTISEMENT

l ವಾಯು ರಕ್ಷಣಾ ವ್ಯವಸ್ಥೆಗಳನ್ನು ಬೈಪಾಸ್ ಮಾಡಲು ಹೈಪರ್‌ಸಾನಿಕ್ ಕ್ಷಿಪಣಿಗಳನ್ನು ವಿನ್ಯಾಸಗೊಳಿಸಲಾಗಿದೆ, ಈ ಮಾದರಿಯ ಕ್ಷಿಪಣಿಗಳು ತ್ವರಿತ ಮತ್ತು ಪರಿಣಾಮಕಾರಿ ದಾಳಿಗಳನ್ನು ನಿಖರವಾಗಿ ನಡೆಸುತ್ತವೆ.

l ಅಮೆರಿಕ, ರಷ್ಯಾ, ಚೀನಾ ಸೇರಿ ಪ್ರಮುಖ ದೇಶಗಳು ಹೈಪರ್‌ಸಾನಿಕ್ ತಂತ್ರಜ್ಞಾನದಲ್ಲಿ ಭಾರಿ ಪ್ರಮಾಣದ ಹೂಡಿಕೆ ಮಾಡುತ್ತಿವೆ.

l ಸ್ಕ್ರ್ಯಾಮ್‌ಜೆಟ್‌ಗಳಲ್ಲಿ ಇಂಧನ ದಹನ ಸವಾಲಿನ ಕೆಲಸವಾಗಿದ್ದು, ಇದು ‘ಚಂಡಮಾರುತದಲ್ಲಿ ಮೇಣದಬತ್ತಿಯನ್ನು ಬೆಳಗಿದಂತೆ’!

l ಹೈಪರ್‌ಸಾನಿಕ್ ಎಂಜಿನ್‌ಗಳ ಹಾರಾಟದ ಸಮಯದಲ್ಲಿ ತೀವ್ರ ತಾಪಮಾನವನ್ನು ತಡೆದುಕೊಳ್ಳಲು ಅತ್ಯಾಧುನಿಕ ಥರ್ಮಲ್ ಬ್ಯಾರಿಯರ್ ಕೋಟಿಂಗ್ (TBC) ಅನ್ನು ಬಳಸಲಾಗುತ್ತದೆ. ಈ ಸುಧಾರಿತ ಸೆರಾಮಿಕ್ ಲೇಪನ ಎಂಜಿನ್‌ನ ಕಾರ್ಯಕ್ಷಮತೆ ಮತ್ತು ದೀರ್ಘಾಯುಷ್ಯವನ್ನು ಹೆಚ್ಚಿಸುತ್ತದೆ.

l ಸ್ಥಿರ ದಹನ ಮತ್ತು ಉಷ್ಣ ನಿರ್ವಹಣೆಯ ಯಶಸ್ವಿ ಪ್ರದರ್ಶನ ಭಾರತವನ್ನು ಹೈಪರ್‌ಸಾನಿಕ್ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿ ಇರಿಸಿದೆ. ರಾಷ್ಟ್ರೀಯ ಭದ್ರತೆಯನ್ನು ಹೆಚ್ಚಿಸಲು ಕೊಡುಗೆ ನೀಡಿದೆ.

‘ಯುರೋಡ್ರೋನ್‌’ ವೀಕ್ಷಕ ರಾಷ್ಟ್ರವಾಗಿ ಭಾರತ ಸೇರ್ಪಡೆ

l ಭಾರತ ಇತ್ತೀಚೆಗೆ ಯುರೋಡ್ರೋನ್ ಕಾರ್ಯಕ್ರಮದ ವೀಕ್ಷಕ ರಾಷ್ಟ್ರವಾಗಿ ಸೇರಿಕೊಂಡಿದೆ.

l ಈ ಸೇರ್ಪಡೆಯೊಂದಿಗೆ, ಜಪಾನ್ ನಂತರ ಈ  ಸ್ಥಾನಮಾನ ಪಡೆದ ಎರಡನೇ ಏಷ್ಯಾ–ಪೆಸಿಫಿಕ್ ರಾಷ್ಟ್ರವಾಗಿ ಭಾರತ ಗುರುತಿಸಲ್ಪಟ್ಟಿದೆ.

l ‘ಯುರೋಡ್ರೋನ್’ ಕಾರ್ಯಕ್ರಮವು ಫ್ರಾನ್ಸ್ , ಜರ್ಮನಿ, ಸ್ಪೇನ್ ಮತ್ತು ಇಟಲಿಗಳನ್ನು ಒಳಗೊಂಡ 4 ರಾಷ್ಟ್ರಗಳ ಉಪಕ್ರಮವಾಗಿದೆ.

l ಬಾನ್ ಮೂಲದ ಜಂಟಿ ಶಸ್ತ್ರಾಸ್ತ್ರ ಸಹಕಾರ ಸಂಸ್ಥೆ(OCCAR: Organisation Conjointe de Coopération en matière d'Armement / Organisation for Joint Armament Co-operation) ‘ಯುರೋಡ್ರೋನ್’ ನಿರ್ವಹಿಸುತ್ತದೆ. ಇದನ್ನು ಏರ್‌ಬಸ್ ಡಿಫೆನ್ಸ್ ಅಂಡ್ ಸ್ಪೇಸ್ (ಜರ್ಮನಿ) ಮುನ್ನಡೆಸುತ್ತಿದ್ದು, ಲಿಯೊನಾರ್ಡೊ (ಇಟಲಿ), ಡಸಾಲ್ಟ್ ಏವಿಯೇಷನ್ ​​(ಫ್ರಾನ್ಸ್), ಮತ್ತು ಏರ್‌ಬಸ್ (ಸ್ಪೇನ್) ಪ್ರಮುಖ ಪಾಲುದಾರರಾಗಿದ್ದಾರೆ.

l ‘ಯುರೋಡ್ರೋನ್’ ಎಂದರೆ ಗುಪ್ತಚರ, ಕಣ್ಗಾವಲು, ವಿಚಕ್ಷಣ, ಕಡಲ ಕಣ್ಗಾವಲು, ಜಲಾಂತರ್ಗಾಮಿ ವಿರೋಧಿ ಯುದ್ಧ ಮತ್ತು ಮುನ್ನೆಚ್ಚರಿಕೆ ಕಾರ್ಯಾಚರಣೆಗಳಿಗಾಗಿ ವಿನ್ಯಾಸಗೊಳಿಸಿದ ರಿಮೋಟ್‌ ನಿಯಂತ್ರಿತ ಮಾನವರಹಿತ ವೈಮಾನಿಕ ವ್ಯವಸ್ಥೆ (RPAS: Remotely piloted aircraft system) ಆಗಿದೆ.

l 7.1 ಬಿಲಿಯನ್ ಯೂರೋ ಮೌಲ್ಯದ ಈ ಯೋಜನೆ ಫ್ರಾನ್ಸ್, ಜರ್ಮನಿ, ಇಟಲಿ ಮತ್ತು ಸ್ಪೇನ್ ದೇಶಗಳ ಸಹಯೋಗ ಹೊಂದಿದ್ದು, 20 ಘಟಕಗಳ ಉತ್ಪಾದನೆಯ ಗುರಿಯನ್ನು ಹೊಂದಿದೆ.

l ಈ ರಕ್ಷಣಾ ವ್ಯವಸ್ಥೆಯು ಅವಳಿ–ಎಂಜಿನ್ ವಿನ್ಯಾಸದ ಕಾರಣದಿಂದ ನಿರಂತರವಾಗಿ 40 ಗಂಟೆಗಳ ಕಾಲ ಗಾಳಿಯಲ್ಲಿ ಇರಬಲ್ಲದು ಮತ್ತು 2.3 ಟನ್ ತೂಕದ ಪೇಲೋಡ್ ಅನ್ನು ಹೊತ್ತೊಯ್ಯಬಲ್ಲದು.

l 2024ರಲ್ಲಿ ಈ ರಕ್ಷಣಾ ವ್ಯವಸ್ಥೆಯ ಪ್ರಾಥಮಿಕ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ್ದು, ಮೊದಲ ಪ್ರಾಯೋಗಿಕ ಅನುಷ್ಠಾನ 2026ರಲ್ಲಿ ನಡೆಯಲಿದೆ. 2028ರ ವೇಳೆಗೆ ಈ ವ್ಯವಸ್ಥೆ ರಕ್ಷಣಾ ಸೇವೆಗೆ ನಿಯೋಜನೆಗೊಳ್ಳಲಿದೆ. 2030ರಿಂದ ಪೂರ್ಣ ಪ್ರಮಾಣದ ಕಾರ್ಯಾಚರಣೆ ಆರಂಭವಾಗಲಿದೆ.

l→ ವೀಕ್ಷಕ ರಾಷ್ಟ್ರವಾಗಿ, ಭಾರತವು ಈ ರಕ್ಷಣಾ ವ್ಯವಸ್ಥೆಯ ತಾಂತ್ರಿಕ ದತ್ತಾಂಶವನ್ನು ಪಡೆಯಲು ಮತ್ತು ಯುರೋಡ್ರೋನ್‌ ಖರೀದಿಸಲು ಆದೇಶ ನೀಡುವ ಆಯ್ಕೆಯನ್ನು ಹೊಂದಿರುತ್ತದೆ.

l ‘ಯುರೋಡ್ರೋನ್’ ವ್ಯವಸ್ಥೆ ಯುರೋಪಿಯನ್ ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸುತ್ತದೆ, ಅಮೆರಿಕದ ‘ರೀಪರ್’ ಮತ್ತು ಇಸ್ರೇಲ್‌ನ ‘ಹೆರಾನ್’ ಡ್ರೋನ್‌ಗಳ ಮೇಲಿನ ಅವಲಂಬನೆಯನ್ನು ತಗ್ಗಿಸುತ್ತದೆ.

l ಈಚೆಗೆ ಚೀನಾ, ‘ಜೆ–20 ಸ್ಟೆಲ್ತ್ ಫೈಟರ್’ ಮತ್ತು ‘ಜೆ–35ಎ’ ರಕ್ಷಣಾ ವ್ಯವಸ್ಥೆಗಳನ್ನು ಅನಾವರಣಗೊಳಿಸಿರುವುದು ಹಾಗೂ ಪಾಕಿಸ್ತಾನ ಕೂಡ ‘ಜೆ–35ಎ’ ರಕ್ಷಣಾ ವ್ಯವಸ್ಥೆ ಖರೀದಿಗೆ ಮುಂದಾಗಿರುವುದು ಭಾರತದ ರಕ್ಷಣಾ ಸವಾಲುಗಳನ್ನು ಹೆಚ್ಚಿಸಿದೆ ಹೀಗಾಗಿ, ಭಾರತವು ‘ಯುರೋಡ್ರೋನ್’ ಖರೀದಿಸುವ ಸಾಧ್ಯತೆಗಳು ಹೆಚ್ಚಿವೆ. 

l ಐದನೇ ತಲೆಮಾರಿನ ಯುದ್ಧ ವಿಮಾನಗಳನ್ನು ಸ್ವಾಧೀನಪಡಿಸಿಕೊಳ್ಳಲು ಭಾರತವು ಈಚೆಗೆ ವಿವಿಧ ಆಯ್ಕೆಗಳನ್ನು ಹುಡುಕುತ್ತಿದೆ. ಅವುಗಳಲ್ಲಿ ಅಮೆರಿಕದ F–35 ಲೈಟ್ನಿಂಗ್ II, ರಷ್ಯಾದ Su–57 ಮತ್ತು ಸ್ಥಳೀಯ AMCA ಸೇರಿವೆ.

‘ಸಂಜಯ್’ ಯುದ್ಧಭೂಮಿ ಕಣ್ಗಾವಲು ವ್ಯವಸ್ಥೆಗೆ ಚಾಲನೆ

l ‘ಸಂಜಯ್’ ಯುದ್ಧಭೂಮಿ ಕಣ್ಗಾವಲು ವ್ಯವಸ್ಥೆಗೆ ಇತ್ತೀಚೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಿದರು.

l ಯುದ್ಧಭೂಮಿ ಕಣ್ಗಾವಲು ವ್ಯವಸ್ಥೆಯನ್ನು (BSS: Battlefield Surveillance System) ಭಾರತೀಯ ಸೇನೆಯ ಕಾರ್ಯಾಚರಣೆಯ ಸಾಮರ್ಥ್ಯ ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ.

l ಈ ವ್ಯವಸ್ಥೆಯು ಸ್ವಯಂಚಾಲಿತವಾಗಿ ಯುದ್ಧಭೂಮಿಯ ಸಮಗ್ರ ಕಣ್ಗಾವಲು ಚಿತ್ರಣವನ್ನು ಒದಗಿಸುತ್ತದೆ. ಭೂಮಿ ಮತ್ತು ವೈಮಾನಿಕ ಯುದ್ಧಕ್ಕೆ ಸಂಬಂಧಿಸಿದ ಸಂವೇದಕಗಳನ್ನು ಸಂಯೋಜಿಸುತ್ತದೆ.

l ಸಂಜಯ್‌’ ವ್ಯವಸ್ಥೆಯು ಸುರಕ್ಷಿತವಾಗಿರುವ ಸೇನಾ ದತ್ತಾಂಶ ಜಾಲ ಮತ್ತು ಉಪಗ್ರಹ ಸಂವಹನ ಜಾಲದ ಮೂಲಕ, ಅತ್ಯಾಧುನಿಕ ಸಂವೇದಕ ಮತ್ತು ವಿಶ್ಲೇಷಣೆಗಳನ್ನು ಒದಗಿಸುತ್ತದೆ.

l ಇದು ವಿಶಾಲವಾದ ಭೂ ಗಡಿಗಳ ಮೇಲ್ವಿಚಾರಣೆ ಮಾಡುವ, ಪರಿಸ್ಥಿತಿಯನ್ನು ಹೆಚ್ಚಿನ ನಿಖರತೆಯೊಂದಿಗೆ ನಿರ್ಣಯಿಸುವ ಸಾಮರ್ಥ್ಯ ಹೊಂದಿದೆ. ‌ಈ ಸಾಮರ್ಥ್ಯ ಗುಪ್ತಚರ, ಕಣ್ಗಾವಲು ಮತ್ತು ವಿಚಕ್ಷಣ (ISR: Intelligence, surveillance and reconnaissance) ಕಾರ್ಯಾಚರಣೆಗಳಲ್ಲಿ ಗುಣಕವಾಗಿ ಕಾರ್ಯನಿರ್ವಹಿಸುತ್ತದೆ.

l ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾದ ಸಂಜಯ್, ‘ಆತ್ಮನಿರ್ಭರ ಭಾರತ’ ಎಂಬ ಸ್ವಾವಲಂಬನೆಯ ಬದ್ಧತೆಯನ್ನು ಸಾಕಾರಗೊಳಿಸಿದೆ.

l ಯುದ್ಧಭೂಮಿಯ ಸನ್ನಿವೇಶಗಳನ್ನು ನಿರ್ಣಯಿಸಲು ಹಾಗೂ ವಿಶ್ಲೇಷಿಸಲು ‘ಸಂಜಯ್’ ಕೃತಕ ಬುದ್ಧಿಮತ್ತೆ ಮತ್ತು ಮಾಹಿತಿ ಆಧಾರಿತ ತಂತ್ರಗಳನ್ನು ಬಳಸಿಕೊಳ್ಳುತ್ತದೆ. ‘ಸಂಜಯ್‌’ ಸಂಗ್ರಹಿಸಿದ ದತ್ತಾಂಶವು ಸುರಕ್ಷಿತ ಡಿಜಿಟಲ್ ಸಂವಹನ ಲಿಂಕ್‌ಗಳ ಮೂಲಕ ರವಾನೆಯಾಗುವ ಧ್ವನಿ, ವಿಡಿಯೊ ಮತ್ತು ಚಿತ್ರಗಳನ್ನು ಒಳಗೊಂಡಿರುತ್ತದೆ. ಈ ತಂತ್ರಜ್ಞಾನವು ಮಿಲಿಟರಿ ಕಮಾಂಡರ್‌ಗಳಿಗೆ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಕರಿಸುತ್ತದೆ.

l ‘ಸಂಜಯ್’ ಯುದ್ಧಭೂಮಿ ಕಣ್ಗಾವಲು ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಸುಮಾರು ₹2,402 ಕೋಟಿ ವ್ಯಯಿಸಲಾಗಿದೆ.ಭಾರತೀಯ ಸೇನೆಯ ಎಲ್ಲಾ ಕಾರ್ಯಾಚರಣಾ ಬ್ರಿಗೇಡ್‌ಗಳು, ವಿಭಾಗಗಳು ಮತ್ತು ಕಾರ್ಪ್ಸ್‌ನಲ್ಲಿ ‘ಸಂಜಯ್’ ಕಣ್ಗಾವಲು ವ್ಯವಸ್ಥೆ ಸೇರಿಸಲು ರಕ್ಷಣಾ ಇಲಾಖೆ ನಿರ್ಧರಿಸಿದೆ.

ಸಮರಾಭ್ಯಾಸ ‘TROPEX’

l ಭಾರತೀಯ ನೌಕಾಪಡೆಯ ಅತಿದೊಡ್ಡ ದ್ವೈವಾರ್ಷಿಕ ನೌಕಾ ಸಮರಾಭ್ಯಾಸ ‘TROPEX–2025’ ಈಚೆಗೆ ನಡೆಯಿತು.

l ಇದರಲ್ಲಿ ಭಾರತೀಯ ನೌಕಾಪಡೆಯ INS ವಿಕ್ರಾಂತ್‌ ಸೇರಿ ಹಲವು ಪ್ರಮುಖ ನೌಕೆಗಳು ಪಾಲ್ಗೊಂಡಿದ್ದವು.

l TROPEX ಸಂಕೀರ್ಣ ಕವಾಯತುಗಳು, ನೇರ ಶಸ್ತ್ರಾಸ್ತ್ರ ಗುಂಡಿನ ದಾಳಿ ಮತ್ತು ಕಾರ್ಯಾಚರಣೆಯ ಪ್ರದರ್ಶನಗಳನ್ನು ಒಳಗೊಂಡಿತ್ತು.

l ಪೂರ್ವ ಮತ್ತು ಪಶ್ಚಿಮ ನೌಕಾಪಡೆಗಳ ಏಕೀಕೃತ ಕಡಲ ಪಡೆ ಈ ಸಮರಾಭ್ಯಾಸದ ಪ್ರಮುಖ ಆಕರ್ಷಣೆಯಾಗಿತ್ತು.

l ಪಶ್ಚಿಮ ನೌಕಾಪಡೆ ಅರೇಬಿಯನ್ ಸಮುದ್ರದ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಪೂರ್ವ ನೌಕಾಪಡೆಯು ಬಂಗಾಳಕೊಲ್ಲಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಸಮರಾಭ್ಯಾಸದ ಸಮಯದಲ್ಲಿ ಅವರ ಸಂಯೋಜಿತ ಪ್ರಯತ್ನಗಳು ಎದುರಾಳಿಗಳಿಗೆ ಪ್ರಬಲವಾದ ತಡೆಗಟ್ಟುವಿಕೆಯನ್ನು ಸೂಚಿಸುತ್ತವೆ ಮತ್ತು ಭಾರತವು ತನ್ನ ಸಂಪೂರ್ಣ ನೌಕಾ ಬಲವನ್ನು ಸಜ್ಜುಗೊಳಿಸುವ ಸಾಮರ್ಥ್ಯವನ್ನು ಪ್ರದರ್ಶಿಸುತ್ತವೆ.

l ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾಗಳನ್ನು ಒಳಗೊಂಡಿರುವ ‘ಕ್ವಾಡ್‌’ನಲ್ಲಿರುವ ಮಿತ್ರರಾಷ್ಟ್ರಗಳಿಗೆ, TROPEX–25 ಭಾರತದ ಪ್ರಾದೇಶಿಕ ಭದ್ರತೆಯ ಬದ್ಧತೆಯನ್ನು ತೋರಿದೆ. ಈ ಸಮರಾಭ್ಯಾಸವು ಭಾರತದ ಮಿಲಿಟರಿ ಸಾಮರ್ಥ್ಯಗಳ ಬಗ್ಗೆ ಸಂಭಾವ್ಯ ವಿರೋಧಿಗಳಿಗೆ ಸ್ಪಷ್ಟ ಸಂದೇಶವನ್ನು ನಿಡಿದೆ.

ಏನಿದು ‘LAAM’ ತಂತ್ರಜ್ಞಾನ?

l IIT ಹೈದರಾಬಾದ್, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮತ್ತು ವಿವಿಧ ಕೈಗಾರಿಕಾ ಪಾಲುದಾರರನ್ನು ಒಳಗೊಂಡ ಸಹಯೋಗದ ಉಪಕ್ರಮದಿಂದ ಒಡಮೂಡಿದ ದೊಡ್ಡ ಪ್ರದೇಶದ ಸಂಯೋಜಕ ಉತ್ಪಾದಕ ವಲಯ (LAAM: Large Area Additive Manufacturing) ಲೋಹದ ಘಟಕಗಳ ಉತ್ಪಾದನೆಯಲ್ಲಿ, ಅದರಲ್ಲೂ ವಿಶೇಷವಾಗಿ ಏರೋಸ್ಪೇಸ್ ವಲಯದಲ್ಲಿ ಕ್ರಾಂತಿಯನ್ನುಂಟು ಮಾಡುವತ್ತ ಮುಂದಡಿ ಇಟ್ಟಿದೆ.

l LAAM ದೊಡ್ಡ ಪ್ರದೇಶದ ಸಂಯೋಜಕ ಉತ್ಪಾದನೆಯು ದೊಡ್ಡ ಪ್ರಮಾಣದ ಲೋಹದ ಘಟಕಗಳ ತ್ವರಿತ ಉತ್ಪಾದನೆಗೆ ಅನುವು ಮಾಡಿಕೊಡುವ ಒಂದು ತಂತ್ರವಾಗಿದೆ.

l→LAAM ವ್ಯವಸ್ಥೆಯು ಪೌಡರ್–ಆಧಾರಿತ ಡೈರೆಕ್ಟೆಡ್ ಎನರ್ಜಿ ಡಿಪಾಸಿಷನ್ ತಂತ್ರಜ್ಞಾನವನ್ನು ಬಳಸುತ್ತದೆ, ಇದು ಲೇಸರ್‌ಗಳು ಮತ್ತು ಬ್ಲೋನ್–ಪೌಡರ್ ವಿಧಾನಗಳನ್ನು ಬಳಸಿಕೊಂಡು ಸಂಕೀರ್ಣ ರಾಕೆಟ್ ಘಟಕಗಳನ್ನು ಒಳಗೊಂಡಂತೆ ಸಂಕೀರ್ಣ ಭಾಗಗಳನ್ನು ಸೃಷ್ಟಿಸುತ್ತದೆ, ಇದು ಭಾರತದ ರಕ್ಷಣಾ ಮತ್ತು ಏರೋಸ್ಪೇಸ್ ಸಾಮರ್ಥ್ಯಗಳನ್ನು ಬಲಪಡಿಸಲಿದೆ.

l→IIT ಹೈದರಾಬಾದ್‌ನಲ್ಲಿರುವ DRDO ಅಂಗಸಂಸ್ಥೆ ‘DIA CoE’ (DRDO-Industry-Academia Centre of Excellence) ನಲ್ಲಿ ಅಭಿವೃದ್ಧಿಪಡಿಸಲಾದ LAAM ವ್ಯವಸ್ಥೆಯು ಭಾರತದ ಸಂಯೋಜಕ ಉತ್ಪಾದನಾ ಸಾಮರ್ಥ್ಯಗಳಲ್ಲಿ ಪ್ರಮುಖ ಸಾಧನೆಯಾಗಿದೆ.

l→ಇದನ್ನು IIT ಹೈದರಾಬಾದ್, DRDO ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯ ಮತ್ತು ಕೈಗಾರಿಕಾ ಪಾಲುದಾರರ ಸಹಯೋಗದ ಮೂಲಕ ಅಭಿವೃದ್ಧಿಪಡಿಸಲಾಗಿದೆ.

l→IIT ಹೈದರಾಬಾದ್‌ನಲ್ಲಿ ಅಭಿವೃದ್ಧಿಪಡಿಸಲಾದ LAAM ವ್ಯವಸ್ಥೆಯು 1m x 1m x 3m ನ ಗಣನೀಯ ನಿರ್ಮಾಣ ಪರಿಮಾಣವನ್ನು ಹೊಂದಿದೆ. ಇದು ಭಾರತದ ಅತಿದೊಡ್ಡ ಲೋಹದ ಸಂಯೋಜಕ ಉತ್ಪಾದನಾ ಯಂತ್ರಗಳಲ್ಲಿ ಒಂದಾಗಿದೆ.

l→ಈ ವ್ಯವಸ್ಥೆ ಉಷ್ಣ ಸಮತೋಲನ ಸುಗಮಗೊಳಿಸುವ ಮತ್ತು ಉತ್ಪಾದನಾ ವೇಗ ಹೆಚ್ಚಿಸುವ ಡ್ಯುಯಲ್ ಹೆಡ್‌ ಒಳಗೊಂಡಿದೆ.ಅಂಥ ಸಾಮರ್ಥ್ಯಗಳು ದೊಡ್ಡ ಘಟಕಗಳ ತಯಾರಿಕೆಯನ್ನು ಸಕ್ರಿಯಗೊಳಿಸುತ್ತವೆ,

l→ಲೇಸರ್ ಮತ್ತು ಬ್ಲೋನ್–ಪೌಡರ್ ತಂತ್ರಜ್ಞಾನ ಆಧರಿಸಿ LAAM ನೇರ ಶಕ್ತಿ ಶೇಖರಣೆಯನ್ನು ಬಳಸುತ್ತದೆ.

l→ LAAM ತಂತ್ರಜ್ಞಾನವನ್ನು ರಕ್ಷಣೆ, ಏರೋಸ್ಪೇಸ್ ಮಾತ್ರವಲ್ಲದೇ, ​​ಆಟೋಮೋಟಿವ್ ಮತ್ತು ಭಾರೀ ಎಂಜಿನಿಯರಿಂಗ್ ಕೈಗಾರಿಕೆಗಳಲ್ಲೂ ಬಳಸಬಹುದಾಗಿದೆ.

ಬ್ರಹ್ಮೋಸ್ NG ಕ್ರೂಸ್ ಕ್ಷಿಪಣಿ

l ಭಾರತದ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿ ಕಾರ್ಯಕ್ರಮ ಬ್ರಹ್ಮೋಸ್ NG (Next Generation) ಕ್ಷಿಪಣಿ ವ್ಯವಸ್ಥೆ ಅಭಿವೃದ್ಧಿಪಡಿಸುವಲ್ಲಿ ಪ್ರಗತಿಯಲ್ಲಿದೆ. 2027–28ರ ವೇಳೆಗೆ ಉತ್ಪಾದನೆ ಆರಂಭವಾಗಲಿದೆ.

l ಬ್ರಹ್ಮೋಸ್ NG ಕ್ಷಿಪಣಿ 290 ಕಿ.ಮೀ. ವ್ಯಾಪ್ತಿ ಹೊಂದಿದ್ದು, ಇದು ಸಣ್ಣ ವಿತರಣಾ ವ್ಯವಸ್ಥೆಗಳಿಗೆ ಹೊಂದಿಕೊಳ್ಳುವಂತಿರಲಿದೆ.

l ಕ್ಷಿಪಣಿ 3 ಟನ್ ತೂಕ ಮತ್ತು 9 ಮೀಟರ್ ಉದ್ದವಿದ್ದ ಹಳೆಯ ಆವೃತ್ತಿಗೆ ಹೋಲಿಸಿದರೆ ಚಿಕ್ಕದಿದ್ದು, ಸುಮಾರು 1.6 ಟನ್ ತೂಕ ಮತ್ತು 6 ಮೀಟರ್ ಉದ್ದವಿರುತ್ತದೆ.

l ಬ್ರಹ್ಮೋಸ್ NG ಕ್ಷಿಪಣಿಯನ್ನುರಷ್ಯಾ ಮೂಲದ ಸುಖೋಯ್–30MKI ಯುದ್ಧ ವಿಮಾನ ಮತ್ತು ಸ್ಥಳೀಯ ಲಘು ಯುದ್ಧ ವಿಮಾನ ತೇಜಸ್‌ನಲ್ಲಿ ಅಳವಡಿಸಬಹುದಾಗಿದೆ.

ಏನಿದು ‘ರಣಭೂಮಿ ದರ್ಶನ್’?

l 77 ನೇ ಸೇನಾ ದಿನದ ಸಂದರ್ಭದಲ್ಲಿ, ರಕ್ಷಣಾ ಸಚಿವಾಲಯ ‘ಭಾರತ್ ರಣಭೂಮಿ ದರ್ಶನ್’ ಎಂಬ ಉಪಕ್ರಮ ಪ್ರಾರಂಭಿಸಿದೆ.

l ಈ ಕಾರ್ಯಕ್ರಮವು ಭಾರತದಾದ್ಯಂತ ಯುದ್ಧಭೂಮಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಇದು ಭಾರತೀಯ ಸಶಸ್ತ್ರ ಪಡೆಗಳ ತ್ಯಾಗಗಳನ್ನು ಸ್ಮರಿಸುವ 77 ತಾಣಗಳ ಮೇಲೆ ಕೇಂದ್ರೀಕರಿಸುತ್ತದೆ.

l ‘ಭಾರತ್ ರಣಭೂಮಿ ದರ್ಶನ್’ ಪ್ರವಾಸಿಗರಿಗೆ ಡಿಜಿಟಲ್ ವೇದಿಕೆ ಮೂಲಕ 77 ಶೌರ್ಯ ಹಾಗೂ ಬಲಿದಾನದ ತಾಣಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಒದಗಿಸುತ್ತದೆ. ಮಿಲಿಟರಿ ಕಾರ್ಯಾಚರಣೆಗಳ ಸ್ಥಳಗಳು, ಯುದ್ಧ ಸ್ಮಾರಕಗಳು ಮತ್ತು ವಸ್ತು ಸಂಗ್ರಹಾಲಯಗಳಂಥ ತಾಣಗಳು ಇದರಲ್ಲಿ ಸೇರಿವೆ.

l ಗಮನಾರ್ಹ ತಾಣಗಳಲ್ಲಿ ಗಾಲ್ವಾನ್ ಕಣಿವೆ ಮತ್ತು ಲೋಂಗೆವಾಲಾ ಸೇರಿವೆ. ಈ ಪ್ರದೇಶಗಳು ನಿರ್ಣಾಯಕ ಯುದ್ಧಗಳಿಗೆ ಸಾಕ್ಷಿಯಾಗಿವೆ ಮತ್ತು ಭಾರತದ ಮಿಲಿಟರಿ ಇತಿಹಾಸದ ತ್ಯಾಗ–ಬಲಿದಾನಗಳನ್ನು ಅರ್ಥಮಾಡಿಕೊಳ್ಳಲು ಪ್ರಮುಖವಾಗಿವೆ.

l ‘ಭಾರತ್ ರಣಭೂಮಿ ದರ್ಶನ್’ ಉಪಕ್ರಮ ಗಡಿ ಪ್ರದೇಶಗಳಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಗುರಿ ಹೊಂದಿದೆ. ಲಡಾಖ್ ಮತ್ತು ಸಿಕ್ಕಿಂನಂಥ ಪ್ರದೇಶಗಳಿಗೆ ಪ್ರವಾಸಿಗರನ್ನು ಸೆಳೆಯಲು ಈ ಯೋಜನೆ ರೂಪಿಸಲಾಗಿದೆ. ಮಿಲಿಟರಿ ಸನ್ನದ್ಧತೆ ಕಾಪಾಡಿಕೊಳ್ಳಲು ಸ್ಥಳೀಯ ಸಹಯೋಗವನ್ನು ಸಹ ಈ ಉಪಕ್ರಮ ಪ್ರೋತ್ಸಾಹಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.