ADVERTISEMENT

ಪರೀಕ್ಷೆ ಮುಂದೂಡಿದರೂ ಸಿದ್ಧತೆ ಮುಂದೂಡದಿರಿ

ಅರುಣ ಬ ಚೂರಿ
Published 9 ಜೂನ್ 2021, 19:30 IST
Last Updated 9 ಜೂನ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭಾರತೀಯ ಸ್ಟೇಟ್‌ ಬ್ಯಾಂಕ್‌ನ ನೇಮಕಾತಿ ಮತ್ತು ಭರ್ತಿ ಇಲಾಖೆಯು ಏಪ್ರಿಲ್ ತಿಂಗಳಿನಲ್ಲಿ ಎಸ್‌ಬಿಐ ಕ್ಲರ್ಕ್ ಪರೀಕ್ಷೆಗೆ ಅಧಿಸೂಚನೆ ಹೊರಡಿಸಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ತಾತ್ಕಾಲಿಕ ವೇಳಾ ಪಟ್ಟಿಯನ್ನು ಬಿಡುಗಡೆಗೊಳಿಸಿತ್ತು. ಆದರೆ ದೇಶದಾದ್ಯಂತ ಹೆಚ್ಚುತ್ತಿರುವ ಕೋವಿಡ್‌ನಿಂದಾಗಿ ಪರೀಕ್ಷೆಯನ್ನು ಮುಂದೂಡಿರುವುದು ಈಗಾಗಲೇ ಗೊತ್ತಿರಬಹುದು.

ಮೇ 31ರ ಅಧಿಸೂಚನೆಯ ಪ್ರಕಾರ, ಎಸ್‌ಬಿಐ ಕ್ಲರ್ಕ್ ಪ್ರಿಲಿಮ್ಸ್‌ ಪರೀಕ್ಷೆಯನ್ನು ಮುಂದಿನ ಅಧಿಸೂಚನೆಯವರೆಗೂ ಮುಂದೂಡಿರುವುದಾಗಿ ತಿಳಿಸಿದ್ದಾರೆ. ಹಾಗಾಗಿ ಕೋವಿಡ್‌ ನಿಯಂತ್ರಣಕ್ಕೆ ಬಂದು ಪರೀಕ್ಷೆ ನಡೆಸಬಹುದು ಎಂಬ ವರದಿ ಕೈಸೇರಿದ ಯಾವುದೇ ದಿನದಲ್ಲಾದರೂ ಮುಂದಿನ ಅಧಿಸೂಚನೆ ಹೊರಬೀಳಬಹುದು. ಆದರೆ ಸ್ಪರ್ಧಾರ್ಥಿಗಳು ತಾವು ನಡೆಸುತ್ತಿರುವ ಪರೀಕ್ಷಾ ತಯಾರಿಗೆ ಅಲ್ಪವಿರಾಮ ಹಾಕುವುದು ಸರಿಯಲ್ಲ.

ಪರೀಕ್ಷೆಯನ್ನು ಅನಿರ್ದಿಷ್ಟ ಅವಧಿಯವರೆಗೆ ಮುಂದೂಡಿದಾಗ ಬಹುತೇಕ ಸ್ಪರ್ಧಾರ್ಥಿಗಳು ಪರೀಕ್ಷೆಯ ತಯಾರಿಯ ಬಗ್ಗೆ ಗಂಭೀರತೆಯನ್ನು ಕಳೆದುಕೊಳ್ಳುವುದು ಸಾಮಾನ್ಯ. ತಮ್ಮ ನಿಗದಿತ ವೇಳಾಪಟ್ಟಿ ಅನುಸಾರ ಅಭ್ಯಾಸಿಸದೆ ಇನ್ನೂ ಹೆಚ್ಚಿನ ಕಾಲಾವಧಿ ಇದೆ ಎಂದು ನಿರ್ಲಕ್ಷ್ಯ ವಹಿಸುತ್ತಾರೆ. ಸ್ಪರ್ಧಾರ್ಥಿ ಎಷ್ಟೇ ಬುದ್ಧಿವಂತನಾಗಿದ್ದರೂ ಸಹ ನಿರಂತರ ಅಭ್ಯಾಸಕ್ಕೆ ತಡೆ ಹಾಕಿದಾಗ ಅಥವಾ ನಿರ್ಲಕ್ಷ್ಯ ವಹಿಸಿದಾಗ ಯಶಸ್ಸು ಅಸಾಧ್ಯ.

ADVERTISEMENT

ತಯಾರಿ ಪೂರ್ಣಗೊಳ್ಳದ, ಉದ್ಯೋಗದ ಜೊತೆಗೆ ಸಿದ್ಧತೆಯಲ್ಲಿರುವ ಅಥವಾ ಮನೆಯಿಂದಲೇ ಕಚೇರಿ ಕೆಲಸ ಮಾಡುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶ ಎನ್ನಬಹುದು. ಪ್ರಥಮ ಬಾರಿಗೆ ಪರೀಕ್ಷೆಯನ್ನು ಎದುರಿಸುತ್ತಿರುವ, ತಮಗೆ ಕಷ್ಟ ಅಥವಾ ಗ್ರಹಿಸಲು ಹೆಚ್ಚು ಸಮಯ ಬೇಕು ಎಂದು ಕೆಲವೊಂದು ವಿಷಯಗಳನ್ನು ಓದದೆ ಕೈಬಿಟ್ಟ ಸ್ಪರ್ಧಾರ್ಥಿಗಳಿಗೆ ತಯಾರಿಗಾಗಿ ಇದು ಉತ್ತಮ ಕಾಲಾವಕಾಶ. ಹಾಗೆಯೇ ಉದ್ಯೋಗದೊಂದಿಗೆ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಸ್ಪರ್ಧಾರ್ಥಿಗಳಿಗೆ ನಿಖರತೆಯೊಂದಿಗೆ ವೇಗವನ್ನು ಹೆಚ್ಚಿಸಿಕೊಳ್ಳಲು ಅಗತ್ಯವಾದದ್ದು ಅಭ್ಯಾಸ. ಈ ಅವಶ್ಯಕತೆಯನ್ನು ಪೂರ್ಣಗೊಳಿಸಲು ಈ ತರಹದ ಸ್ಪರ್ಧಾರ್ಥಿಗಳಿಗೆ ಇದೊಂದು ಉತ್ತಮ ಅವಕಾಶ.

ಪ್ರಿಲಿಮ್ಸ್ ಅಧ್ಯಯನದ ಜೊತೆಗೆ ಮೇನ್ಸ್ ಅಧ್ಯಯನ

ಪ್ರಿಲಿಮ್ಸ್ ಪರೀಕ್ಷೆಗೆ ಸಾಕಷ್ಟು ಸಮಯ ದೊರೆತಿದೆ. ಹಾಗಾಗಿ ಪರೀಕ್ಷೆಯು ಕ್ಲಿಷ್ಟತೆಯಿಂದ ಕೂಡಿರಲಿದೆ ಎಂದು ಅಂದಾಜಿಸುವುದು ಸರಿಯಲ್ಲ. ಯಾವುದೇ ಸ್ಪರ್ಧಾರ್ಥಿಯಾಗಿರಲಿ, ಸತತವಾಗಿ ಅಧ್ಯಯನ ನಡೆಸಿದರೆ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ ಯಶಸ್ವಿಯಾಗುವುದು ಕಷ್ಟವೇನಲ್ಲ. ಹಾಗೆಂದ ಮಾತ್ರಕ್ಕೆ ಹೆಚ್ಚುವರಿಯಾಗಿ ದೊರೆತ ಈ ಸಮಯವನ್ನು ಕೇವಲ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸುವ ಗುರಿಗಾಗಿ ಮೀಸಲಿಡದಿರಿ, ಕಾರಣ ಇದು ಕೇವಲ ಅರ್ಹತಾ ಪರೀಕ್ಷೆ. ಆದ್ದರಿಂದ ನೀವು ಮೇನ್ಸ್ ಪರೀಕ್ಷೆಗೆ ಈಗಿನಿಂದಲೇ ಸೂಕ್ತ ತಯಾರಿ ನಡೆಸಬೇಕು. ಅತಿಮುಖ್ಯವಾಗಿ ಜನರಲ್ ಅವೇರ್‌ನೆಸ್/ ಫೈನಾನ್ಶಿಯಲ್ ಅವೇರ್‌ನೆಸ್ ವಿಭಾಗದಂತಹ ಹೆಚ್ಚು ಅಂಕ ಗಳಿಕೆಗೆ ಅವಕಾಶವಿರುವಂತಹ ವಿಷಯಗಳನ್ನು ಪ್ರತಿನಿತ್ಯ ಅಭ್ಯಾಸಿಸಿ ವಾರಕ್ಕೊಮ್ಮೆ ಪುನರಾವರ್ತಿಸಿ.

ಪರೀಕ್ಷಾ ತಂತ್ರ ನವೀಕರಿಸಿಕೊಳ್ಳಿ

ನಿಮಗೆ ಕ್ಲಿಷ್ಟ ಎನಿಸಿದ ಅಥವಾ ಹೆಚ್ಚಿನ ಸಮಯ ಅಧ್ಯಯನಕ್ಕೆ ಅವಶ್ಯಕ ಎಂದೆನಿಸಿ ಅಧ್ಯಯನ ಮಾಡದೇ ಹೋದ ವಿಷಯಗಳಿದ್ದರೆ ಈಗ ಹೆಚ್ಚುವರಿಯಾಗಿ ದೊರೆತ ಈ ಸಮಯದಲ್ಲಿ ಅಂತಹ ವಿಷಯಗಳ ಅಧ್ಯಯನ ಹಾಗೂ ಪುನರ್‌ಮನನ ಸಾಧ್ಯವೇ ಎಂಬುದನ್ನು ಅವಲೋಕಿಸಿ, ಸಾಧ್ಯವಿದ್ದಲ್ಲಿ ಅಧ್ಯಯನ ನಡೆಸಿ.⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.