ಸಾಂದರ್ಭಿಕ ಚಿತ್ರ
ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಹುದ್ದೆಗಳ ಸಂಖ್ಯೆ, ವಿದ್ಯಾರ್ಹತೆ, ಆಯ್ಕೆ ವಿಧಾನ, ಸಂದರ್ಶನ ಕುರಿತಾದ ಮಾಹಿತಿ ಇಲ್ಲಿದೆ.
***
ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಬೆರಳಚ್ಚುಗಾರ (ಟೈಪಿಸ್ಟ್) ಮತ್ತು ಜವಾನ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಈಗಾಗಲೇ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲಾಗುತ್ತಿದ್ದು, ಮಾರ್ಚ್ 20ರವರೆಗೆ ಕಾಲಾವಕಾಶ ಇದೆ.
ಬೆರಚ್ಚುಗಾರರ 30 ಹುದ್ದೆ ಹಾಗೂ ಜವಾನರ 28 ಹುದ್ದೆಗಳು ಖಾಲಿ ಇದ್ದು, ಇವುಗಳ ಭರ್ತಿ ಪ್ರಕ್ರಿಯೆ ಮೀಸಲಾತಿಗೆ ಅನುಗುಣವಾಗಿ, ಅರ್ಹತೆ ಆಧಾರದ ಮೇಲೆ ನಡೆಯಲಿದೆ.
ವಿದ್ಯಾರ್ಹತೆ: ಬೆರಚ್ಚುಗಾರ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವವರು ಪಿಯುಸಿ ಅಥವಾ ಮೂರು ವರ್ಷದ ಡಿಪ್ಲೊಮಾ ಇನ್ ಕಮರ್ಷಿಯಲ್ ಪ್ರಾಕ್ಟಿಸ್ ಪಾಸಾಗಿರಬೇಕು. ಪಿಯುಸಿ ವಿದ್ಯಾರ್ಹತೆ ಹೊಂದಿರುವವರು ಕಡ್ಡಾಯವಾಗಿ ಕನ್ನಡ, ಇಂಗ್ಲಿಷ್ ಸೀನಿಯರ್ ಗ್ರೇಡ್ ಟೈಪ್‌ರೈಟಿಂಗ್ ಪರೀಕ್ಷೆ ಪಾಸಾಗಿರಬೇಕು. ಜವಾನ ಹುದ್ದೆಗೆ ಅರ್ಜಿ ಸಲ್ಲಿಸುವವರು ಎಸ್ಸೆಸ್ಸೆಲ್ಸಿ ಪಾಸಾಗಿರಬೇಕು. ಕನ್ನಡ ಓದಲು ಹಾಗೂ ಬರೆಯಲು ಗೊತ್ತಿರಬೇಕು.
ಆಯ್ಕೆ ವಿಧಾನ: ಟೈಪಿಂಗ್ ಸ್ಪೀಡ್ ಪರೀಕ್ಷಿಸಲು ಬೆರಚ್ಚುಗಾರ ಹುದ್ದೆಗೆ 100 ಅಂಕಗಳ ಅರ್ಹತಾ ಪರೀಕ್ಷೆ ಇರುತ್ತದೆ. ಅದರಲ್ಲಿ ಕನಿಷ್ಠ 50 ಅಂಕಗಳನ್ನು ಪಡೆಯಬೇಕು. ಇದಕ್ಕೆ 15 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ.
ಇದರಲ್ಲಿ ಗಳಿಸುವ ಅಂಕಗಳನ್ನು ಆಧರಿಸಿ 1:5ರ ಅನುಪಾತದಲ್ಲಿ ಸಂದರ್ಶನಕ್ಕೆ ಕರೆಯಲಾಗುತ್ತದೆ. ಸಂದರ್ಶನಕ್ಕೆ ಗರಿಷ್ಠ 5 ಅಂಕ ನಿಗದಿಪಡಿಸಲಾಗಿದೆ. ಅರ್ಹತಾ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಗಳಿಸುವ ಅಂಕಗಳನ್ನು ಆಧರಿಸಿ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಜವಾನ ಹುದ್ದೆಗೆ ಎಸ್ಸೆಸ್ಸೆಲ್ಸಿಯಲ್ಲಿ ಗಳಿಸಿರುವ ಅಂಕಗಳನ್ನು ಆಧರಿಸಿ 1:10ರ ಅನುಪಾತದಲ್ಲಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ. ಸಂದರ್ಶನಕ್ಕೆ 10 ಅಂಕಗಳನ್ನು ನಿಗದಿಪಡಿಸಲಾಗಿದೆ.
ವಯೋಮಿತಿ: ಎರಡೂ ಹುದ್ದೆಗಳಿಗೆ ಕನಿಷ್ಠ ವಯೋಮಿತಿ 18 ವರ್ಷ. ವಿವಿಧ ಮೀಸಲಾತಿ ಪ್ರವರ್ಗಗಳಿಗೆ ಅನುಗುಣವಾಗಿ ಗರಿಷ್ಠ ವಯೋಮಿತಿ 40 ವರ್ಷ. ಅರ್ಜಿಗಳನ್ನು ಆನ್‌ಲೈನ್ ಮೂಲಕವೇ ಸಲ್ಲಿಸಬೇಕು. ವಿದ್ಯಾರ್ಹತೆ ಮತ್ತು ಮೀಸಲಾತಿಗೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ನಿಗದಿತ ದಿನಾಂಕದ ಒಳಗಾಗಿ ಪಡೆದುಕೊಂಡು ಅರ್ಜಿಯೊಂದಿಗೆ ಲಗತ್ತಿಸಬೇಕು.ಅರ್ಜಿ ಸಲ್ಲಿಸುವ ಮುನ್ನ ಅಧಿಸೂಚನೆಯನ್ನು ಸ್ಪಷ್ಟವಾಗಿ ಓದಿಕೊಂಡು, ಅದರಲ್ಲಿ ಕೇಳಿರುವ ಎಲ್ಲ ಮಾಹಿತಿ ಮತ್ತು ದಾಖಲೆಗಳನ್ನು ಸಲ್ಲಿಸಬೇಕು
ಮೀಸಲಾತಿಗೆ ಅನುಗುಣವಾಗಿ ಹುದ್ದೆಗಳ ಹಂಚಿಕೆಯಾಗಿದ್ದು, ಯಾವ ಪ್ರವರ್ಗದಡಿ ಎಷ್ಟು ಹುದ್ದೆಗಳು ಲಭ್ಯ ಇವೆ ಎಂಬುದನ್ನು ವಿವರವಾದ ಅಧಿಸೂಚನೆ ಓದುವ ಮೂಲಕ ತಿಳಿದುಕೊಳ್ಳಬಹುದು. ವೆಬ್‌ಸೈಟ್ ವಿಳಾಸ: https://bengalururural.dcourts.gov.in/online-recruitment/
ವೇತನ ಶ್ರೇಣಿ: ಬೆರಚ್ಚುಗಾರ ಹುದ್ದೆಗೆ 21,400–42,000 ವೇತನ ಶ್ರೇಣಿ ಹಾಗೂ ಜವಾನ ಹುದ್ದೆಗೆ 17,000–28,950 ವೇತನ ಶ್ರೇಣಿ ನಿಗದಿಯಾಗಿದೆ. ಈಗ ರಚನೆಯಾಗಿರುವ 7ನೇ ವೇತನ ಆಯೋಗದ ಶಿಫಾರಸುಗಳು ಜಾರಿಯಾದರೆ, ಆಗ ವೇತನ ಶ್ರೇಣಿಯಲ್ಲಿ ಬದಲಾವಣೆಯಾಗಲಿದೆ. ಆಯ್ಕೆಯಾದವರಿಗೆ ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್) ಅನ್ವಯವಾಗಲಿದೆ.
ಎರಡೂ ಹುದ್ದೆಗಳಿಗೆ ಸಾಮಾನ್ಯ ವರ್ಗದಡಿ ಬರುವ ಅಭ್ಯರ್ಥಿಗಳಿಗೆ ₹200 ಹಾಗೂ ಇತರರಿಗೆ ₹100 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ–1ರ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.