ADVERTISEMENT

ಕೆಎಸ್‌ಆರ್‌ಪಿ, ಐಆರ್‌ಬಿ, ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಮಾದರಿ ಪ್ರಶ್ನೋತ್ತರ

ಕೆಎಸ್‌ಆರ್‌ಪಿ ಮತ್ತು ಐಆರ್‌ಬಿ ಹಾಗೂ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಮಾದರಿ ಪ್ರಶ್ನೋತ್ತರ

ಪ್ರಜಾವಾಣಿ ವಿಶೇಷ
Published 9 ಮಾರ್ಚ್ 2022, 9:20 IST
Last Updated 9 ಮಾರ್ಚ್ 2022, 9:20 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಭಾಗ– 12

1. ಕೆಳಗಿನ ಹೇಳಿಕೆಗಳನ್ನು ಗಮನಿಸಿ

1. ಛತ್ರಪತಿ ಶಿವಾಜಿಯ ಮಗ ರಾಜಾರಾಮನಿಗೆ ಆಶ್ರಯ ಕೊಟ್ಟು, ಮೊಘಲ ದೊರೆಗೆ ಸೆಡ್ಡು ಹೊಡೆದ ಕನ್ನಡನಾಡಿನ ಮಹಾರಾಣಿ ಕೆಳದಿ ಚೆನ್ನಮ್ಮರ ಪಟ್ಟಾಭಿಷೇಷಕವಾಗಿ 350 ವರ್ಷಗಳಾಗಿವೆ.

ADVERTISEMENT

2. ಕೆಳದಿ ಚೆನ್ನಮ್ಮ 350 ವರ್ಷಗಳ ಹಿಂದೆಯೇ ಸತಿ ಸಹಗಮನ ಪದ್ಧತಿಯನ್ನು ವಿರೋಧಿಸಿದ್ದರು. ಅಂದರೆ ರಾಜಾರಾಮ್ ಮೋಹನ ರಾಯರಿಗಿಂತ ಹಿಂದೆಯೇ ಸತಿ ಸಹಗಮನ ಪದ್ಧತಿಯನ್ನು ವಿರೋಧಿಸಿದ್ದರು.

3. ಫೆಬ್ರುವರಿ 27, 1672ರಲ್ಲಿ ಕವಲೇದುರ್ಗದಲ್ಲಿ ಚೆನ್ನಮ್ಮ ಅವರ ಪಟ್ಟಾಭಿಷೇಕ ಮಹೋತ್ಸವ ನಡೆದಿತ್ತು. ರಾಣಿ ಚೆನ್ನಮ್ಮ 1672 ರಿಂದ 1697ರವರೆಗೆ ಕೆಳದಿಯನ್ನು ಆಳಿದ್ದರು.

4. ಕೆಳದಿ ಚೆನ್ನಮ್ಮನ ಪಟ್ಟಾಭಿಷೇಕದ ದಿನವನ್ನು ಮುಂದಿನ ವರ್ಷ ಸರ್ಕಾರದ ವತಿಯಿಂದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕೆಳದಿಯಲ್ಲಿ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಕೆಳದಿ ರಾಣಿ ಚೆನ್ನಮ್ಮರ ಪಟ್ಟಾಭಿಷೇಕದ 350ನೇ ವರ್ಷಾಚರಣೆ ಸಂದರ್ಭದಲ್ಲಿ ರಾಜ್ಯ ಸರ್ಕಾರ ಘೋಷಿಸಿದೆ.

5. ಕೆಳದಿ ಚೆನ್ನಮ್ಮ ಮತ್ತು ಬ್ರಿಟಿಷರಿಗೂ ನಡೆದ ಹೋರಾಟದಲ್ಲಿ ಸಾಗರ ಪಟ್ಟಣ ನಾಶವಾಗಿತ್ತು. ಆದರೆ ಬ್ರಿಟಿಷ್ ಸೇನಾನಿಯ ಹತ್ಯೆಯಾಗಿತ್ತು.

ಮೇಲಿನ ಯಾವೆಲ್ಲಾ ಹೇಳಿಕೆಗಳು ಸರಿಯಾಗಿವೆ?

ಎ. ಹೇಳಿಕೆ 1ರಿಂದ 5ರ ತನಕ ಎಲ್ಲವೂ ಸರಿಯಾಗಿವೆ

ಬಿ. ಹೇಳಿಕೆ 1, 2 ,4 ಮತ್ತು 5 ಮಾತ್ರ ಸರಿಯಾಗಿವೆ

ಸಿ. ಯಾವ ಹೇಳಿಕೆಯೂ ಸರಿಯಾಗಿಲ್ಲ

ಡಿ. 1, 2, 3 ಮತ್ತು 4ನೇ ಹೇಳಿಕೆಗಳು ಸರಿಯಾಗಿವೆ

ಉತ್ತರ: ಡಿ

2. ವಿಜ್ಞಾನಿ ಸರ್ ಸಿ.ವಿ. ರಾಮನ್ 1928ರ ಫೆಬ್ರುವರಿ 28ರಂದು ‘ಬೆಳಕಿನ ಚದುರುವಿಕೆ’ಯ ಪರಿಣಾಮವನ್ನು ವಿವರಿಸಿದ ದಿನವನ್ನು ‘ರಾಷ್ಟ್ರೀಯ ವಿಜ್ಞಾನ ದಿನ’ ಎಂದು ಆಚರಿಸಲಾಗುತ್ತದೆ. 1930ರಲ್ಲಿ ಇವರಿಗೆ ನೊಬೆಲ್ ಪ್ರಶಸ್ತಿಯೂ ಬಂತು. ಹಾಗಾದರೆ ರಾಮನ್‌ ಬೆಳಕಿನ ಚದುರುವಿಕೆಯ ಪರಿಣಾಮವನ್ನು ಎಲ್ಲಿ ವಿವರಿಸಿದ್ದರು?

ಎ. ಬೆಂಗಳೂರು

ಬಿ. ಕೊಲ್ಕತ್ತಾ

ಸಿ. ಮುಂಬೈ

ಡಿ. ದೆಹಲಿಯ ಐಐಟಿ

ಉತ್ತರ: ಎ

3. ಕೇಂದ್ರ ಕಾನೂನು ಕಾರ್ಯದರ್ಶಿಯೊಬ್ಬರನ್ನು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಕಾನೂನು ಕಾರ್ಯದರ್ಶಿಯವನ್ನು ನ್ಯಾಯಮೂರ್ತಿಯಾಗಿ ನೇಮಿಸಲಾಗಿದೆ. ಹಾಗಾದರೆ ಅವರು ಯಾರು?

ಎ. ಡಿ.ಎನ್. ಪಟೇಲ್

ಬಿ. ಅನೂಪ್ ಕುಮಾರ್ ಮೆಂದಿರತ್ತಾ

ಸಿ. ವಿಪಿನ್ ಸಿಂಗ್

ಡಿ. ಎಂ.ಎನ್. ಭಂಡಾರಿ

ಉತ್ತರ: ಬಿ

4. ನಮ್ಮ ರಾಜ್ಯದ ಬಜೆಟ್ ಕುರಿತಾದ ಕೆಳಗಿನ ಹೇಳಿಕೆಗಳನ್ನು ಗಮನಿಸಿ.

1) 2020-21ನೆಯ ಸಾಲಿಗೆ ಹೋಲಿಸಿದರೆ 2021-22 ನೇ ಸಾಲಿನಲ್ಲಿ ಕೋವಿಡ್‌ ನಂತರ ಎಲ್ಲಾ ಕ್ಷೇತ್ರಗಳು ಪುನಶ್ಚೇತನಗೊಂಡಿದ್ದು, ಬೆಳವಣಿಗೆಯೂಕಪ ಕಂಡುಬಂದಿದೆ. ಕೃಷಿ ವಲಯ ಶೇ 2.2, ಕೈಗಾರಿಕಾ ವಲಯ ಶೇ 7.4 ಮತ್ತು ಸೇವಾ ವಲಯ
ಶೇ 9.2 ಬೆಳವಣಿಗೆ ಕಂಡಿವೆ.

2) ಏಪ್ರಿಲ್-ಡಿಸೆಂಬರ್ 2021ರ ಅವಧಿಯಲ್ಲಿ ಭಾರತದ ಒಟ್ಟು ವಿದೇಶಿ ನೇರ ಹೂಡಿಕೆಯ (ಎಫ್‌ಡಿಐ) ಹರಿವಿನ ಪ್ರಮಾಣದಲ್ಲಿ ಕರ್ನಾಟಕವು ಶೇ 40ರಷ್ಟನ್ನು (₹1.27 ಲಕ್ಷ ಕೋಟಿ) ಆರ್ಕಷಿಸಿದ್ದು, ರಾಷ್ಟ್ರದಲ್ಲಿಯೇ ಅಗ್ರಸ್ಥಾನದಲ್ಲಿದೆ.

3) ಬಜೆಟ್‌ನಲ್ಲಿ ಪ್ರಮುಖ ನೀರಾವರಿ ಕಳಸಾ– ಬಂಡೂರಿ ₹1,000 ಕೋಟಿ, ಭದ್ರಾ ಮೇಲ್ದಂಡೆ ಯೋಜನೆ ₹3,000 ಕೋಟಿ, ಎತ್ತಿನಹೊಳೆ ಯೋಜನೆ ₹1,000 ಕೋಟಿ ಅನುದಾನ ಪ್ರಕಟಿಸಲಾಗಿದೆ.

4) ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ₹500 ಕೋಟಿ ಅನುದಾನ ಮತ್ತು ಶಿಕ್ಷಣದ ಗುಣಮಟ್ಟ ಉತ್ತಮಪಡಿಸಲು ಹೋಬಳಿ ಮಟ್ಟದಲ್ಲಿ ಮೂಲಭೂತ ಸೌಕರ್ಯವಿರುವ ಶಾಲೆಗಳು ‘ಮಾದರಿ ಶಾಲೆ’ಗಳಾಗಿ ಉನ್ನತೀಕರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಬಜೆಟ್ ಭಾಷಣದಲ್ಲಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ.

ಯಾವೆಲ್ಲಾ ಹೇಳಿಕೆಗಳು ಸರಿಯಾಗಿವೆ?

ಎ. ಹೇಳಿಕೆ 1, 2, 3 ಸರಿಯಾಗಿದೆ

ಬಿ. ಹೇಳಿಕೆ 1, ಮತ್ತು 4 ಮಾತ್ರ ಸರಿಯಾಗಿದೆ

ಸಿ. ಯಾವ ಹೇಳಿಕೆಯೂ ಸರಿಯಾಗಿಲ್ಲ

ಡಿ. 1, 2, 3 ಮತ್ತು 4ನೇ ಹೇಳಿಕೆ ಸರಿಯಾಗಿದೆ

ಉತ್ತರ: ಡಿ.

5. ನಮ್ಮ ರಾಜ್ಯದ ಬಜೆಟ್ ಕುರಿತಾದ ಕೆಳಗಿನ ಹೇಳಿಕೆಗಳನ್ನು ಗಮನಿಸಿ.

1. ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯ ಆಯವ್ಯಯ 2022-23ನ್ನು ಮಂಡಿಸಿದ್ದಾರೆ. ಇದು ಒಟ್ಟು ₹2,65,720 ಕೋಟಿ ಮೊತ್ತದ ಬಜೆಟ್ ಆಗಿದೆ. ಇದು ಕೊರತೆ ಬಜೆಟ್ ಆಗಿದ್ದು, ಆದಾಯಕ್ಕಿಂತಲೂ ₹5 ಸಾವಿರ ಕೋಟಿ ಹೆಚ್ಚಿನ ವೆಚ್ಚದ ಬಜೆಟ್ ಆಗಿದೆ. ರಾಜ್ಯದ ಮೇಲೆ ಒಟ್ಟು ₹72 ಸಾವಿರ ಕೋಟಿ ಸಾಲ ಇದೆ ಎಂದು ಮುಖ್ಯಮಂತ್ರಿ ತಮ್ಮ ಆಯವ್ಯಯದಲ್ಲಿ ತಿಳಿಸಿದ್ದಾರೆ.

2. ವಸತಿ ಇಲಾಖೆ - ₹3,594 ಕೋಟಿ, ಕೃಷಿ ಮತ್ತು ತೋಟಗಾರಿಕೆ ಇಲಾಖೆ – ₹8,457 ಕೋಟಿ, ಲೋಕೋಪಯೋಗಿ ಇಲಾಖೆ ₹10,447 ಕೋಟಿ, ಜಲ ಸಂಪನ್ಮೂಲ ಇಲಾಖೆ ₹20,601 ಕೋಟಿ, ನಗರಾಭಿವೃದ್ಧಿ ಇಲಾಖೆ ₹16,076 ಕೋಟಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ₹13,982 ಕೋಟಿ, ಕೆರೆಗಳ ಅಭಿವೃದ್ದಿಗೆ ₹ 500 ಅನುದಾನವನ್ನು ನೀಡಲಾಗಿದೆ.

3. ಕೃಷಿ ಉತ್ಪಾದಕತೆ ಹೆಚ್ಚಿಸಲು ಯಂತ್ರಗಳ ಬಳಕೆಯನ್ನು ಪ್ರೋತ್ಸಾಹಿಸಲು ‘ರೈತ ಶಕ್ತಿ’ ಯೋಜನೆ ಪ್ರಸ್ತಾಪಿಸಲಾಗಿದೆ. ನೈಸರ್ಗಿಕ ಕೃಷಿ ಪದ್ಧತಿಯನ್ನು ಇನ್ನಷ್ಟು ಪ್ರದೇಶಕ್ಕೆ ವಿಸ್ತರಿಸುವುದು, ರೈತರ ಮಕ್ಕಳಿಗೆ ಕೃಷಿ ಶಿಕ್ಷಣ ನೀಡಲು ಬಳ್ಳಾರಿ ಜಿಲ್ಲೆಯ ಹಗರಿ ಮತ್ತು ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಹೊಸ ಕೃಷಿ ಕಾಲೇಜುಗಳ ಆರಂಭ ಮಾಡಲಾಗುವುದು ಎಂದು ಬಜೆಟ್ ಭಾಷಣದಲ್ಲಿ ತಿಳಿಸಲಾಗಿದೆ

4. ಗೋಶಾಲೆಗಳಲ್ಲಿ ಸಾರ್ವಜನಿಕರು ಮತ್ತು ಖಾಸಗಿ ಸಂಸ್ಥೆಗಳು ವಾರ್ಷಿಕ ₹11,000 ಮೊತ್ತಕ್ಕೆ ಗೋವು ದತ್ತು ಪಡೆಯುವುದನ್ನು ಪ್ರೋತ್ಸಾಹಿಸಲು ‘ಪುಣ್ಯಕೋಟಿ ದತ್ತು ಯೋಜನೆ’ ಪ್ರಕಟಿಸಲಾಗಿದೆ.

ಯಾವೆಲ್ಲಾ ಹೇಳಿಕೆಗಳು ಸರಿಯಾಗಿವೆ?

ಎ. ಹೇಳಿಕೆ 1ರಿಂದ 3ರ ತನಕ ಸರಿಯಾಗಿದೆ

ಬಿ. ಹೇಳಿಕೆ 1, ಮತ್ತು 2 ಮಾತ್ರ ಸರಿಯಾಗಿದೆ

ಸಿ. ಯಾವ ಹೇಳಿಕೆಯೂ ಸರಿಯಾಗಿಲ್ಲ

ಡಿ. 1 ರಿಂದ 4ರ ತನಕ ಎಲ್ಲವೂ ಸರಿಯಾಗಿದೆ

ಉತ್ತರ: ಡಿ

6. ಕರ್ನಾಟಕ ತಂತ್ರಜ್ಞಾನ ಸಂಸ್ಥೆಯಾಗಿ (Karnataka Institue of Technology) ಎಷ್ಟು ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳನ್ನು ಉನ್ನತಿಕರಿಸಲು ಪ್ರತಿಷ್ಠಿತ ವಿದೇಶಿ ವಿಶ್ವವಿದ್ಯಾಲಯಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಯಿತು?

ಎ. ಏಳು

ಬಿ. ಎಂಟು

ಸಿ. ಹತ್ತು

ಡಿ. ಒಂಬತ್ತು

ಉತ್ತರ: ಎ

7. ಇವುಗಳಲ್ಲಿ ಯಾವ ಜೋಡಿ ತಪ್ಪಾಗಿದೆ?

1. ಬೆಂಗಳೂರು- ‘ಮೆಗಾ ಜ್ಯುವೆಲ್ಲರಿ ಪಾರ್ಕ್‌’ ಸ್ಥಾಪನೆ

2. ನವಲಗುಂದ ಮತ್ತು ರಾಣೆಬೆನ್ನೂರು -ಜವಳಿ ಪಾರ್ಕ್‌ ಸ್ಥಾಪನೆ

3. ಬಳ್ಳಾರಿ- ಜೀನ್ಸ್ ಮತ್ತು ಉಡುಪು ಸಂಬಂಧಿತ ಟೆಕ್ಸ್‌ಟೈಲ್‌ ಪಾರ್ಕ್‌ ಸ್ಥಾಪನೆ

4. ಬೆಳಗಾವಿ - ‘ಗ್ಲೋಬಲ್ ಎಮರ್ಜಿಂಗ್‌ ಟೆಕ್ನಾಲಜಿ ಡಿಸೈನ್ ಸೆಂಟರ್’ ಸ್ಥಾಪನೆ

5. ಗೋಕರ್ಣ- ಗೋಮಾತಾ ಸಹಕಾರ ಸಂಘ ಸ್ಥಾಪನೆ

ಉತ್ತರ ಸಂಕೇತಗಳು

ಎ. 1 ಮಾತ್ರ

ಬಿ. 1 ಮತ್ತು 3 ಮಾತ್ರ

ಸಿ. ಎಲ್ಲವೂ ತಪ್ಪಾಗಿದೆ

ಡಿ. 5 ಮಾತ್ರ ತಪ್ಪಾಗಿದೆ

ಉತ್ತರ: ಡಿ

8. ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಬಜೆಟ್‌ನಲ್ಲಿ ಪ್ರಸ್ತಾಪಿತ ಅಂಶಗಳ ಪೈಕಿ ಯಾವುದು ತಪ್ಪಾಗಿದೆ?

1. ಹುಬ್ಬಳಿಯಲ್ಲಿ ₹250 ಕೋಟಿ ವೆಚ್ಚದಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ಪ್ರಾದೇಶಿಕ ಹೃದ್ರೋಗ ಕೇಂದ್ರ ಹಾಗೂ ಬೆಳಗಾವಿಯಲ್ಲಿ ₹50 ಕೋಟಿ ವೆಚ್ಚದಲ್ಲಿ ಕಿದ್ವಾಯಿ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ ಸ್ಥಾಪಿಸಲು ಉದ್ದೇಶಿಸಲಾಗಿದೆ.

2. ಚಾಮರಾಜನಗರ ಮತ್ತು ದಕ್ಷಿಣಕನ್ನಡ ಜಿಲ್ಲೆಗಳಲ್ಲಿ ‘ಶುಚಿ’ ಯೋಜನೆಯಡಿ ಮುಟ್ಟಿನ ಕಪ್‌ಗಳನ್ನು ವಿತರಿಸಲಾಗುವುದು.

3. ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳನ್ನು ಜಿಲ್ಲಾ ಮಟ್ಟದಲ್ಲಿ ಪ್ರಾರಂಭಿಸಲು ಅನುವಾಗುವಂತೆ 200ಕ್ಕೂ ಹೆಚ್ಚು ಹಾಸಿಗೆಗಳ ಸಾಮರ್ಥ್ಯ ಇರುವ ಸರ್ಕಾರಿ ಆಸ್ಪತ್ರೆಗಳನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್ಎಂಸಿ) ಅನುಮೋದನೆ ಪಡೆದು ಬೋಧನಾ ಆಸ್ಪತ್ರೆಗಳಾಗಿ ಪರಿವರ್ತಿಸಲು ಉದ್ದೇಶಿಸಲಾಗಿದೆ.

4. ‘ಮುಖ್ಯಮಂತ್ರಿ ಆರೋಗ್ಯ ವಾಹಿನಿ’ಯೋಜನೆಯಡಿ ಮನೆ ಬಾಗಿಲಿಗೆ ವೈದ್ಯಕೀಯ ಸೇವೆ ಒದಗಿಸಲು ಬೀದರ್, ಚಾಮರಾಜನಗರ, ಹಾವೇರಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸಂಚಾರಿ ಕ್ಲಿನಿಕ್ ಪ್ರಾರಂಭಿಸಲು ಉದ್ದೇಶಿಸಲಾಗಿದೆ.

ಯಾವೆಲ್ಲಾ ಹೇಳಿಕೆಗಳು ತಪ್ಪಾಗಿವೆ?

ಎ. ಹೇಳಿಕೆ 1ರಿಂದ 3ರ ತನಕ ತಪ್ಪಾಗಿದೆ

ಬಿ. ಹೇಳಿಕೆ 1 ಮತ್ತು 2 ಮಾತ್ರ ತಪ್ಪಾಗಿದೆ

ಸಿ. ಯಾವ ಹೇಳಿಕೆಯೂ ತಪ್ಪಾಗಿಲ್ಲ

ಡಿ. 1 ಮತ್ತು 2ನೇ ಹೇಳಿಕೆ ಮಾತ್ರ ತಪ್ಪಾಗಿದೆ

ಉತ್ತರ: ಸಿ

9. ಭಾರತವು ಶ್ರೀಲಂಕಾಕ್ಕೆ ತೈಲ ಕೊರತೆ ನೀಗಿಸಲು ಹಣ ನೀಡಿ ಸಹಾಯ ಮಾಡಿದೆ. 26 ವರ್ಷದಲ್ಲಿಯೇ ಸುದೀರ್ಘ ವಿದ್ಯುತ್ ಕಡಿತ ಮಾಡುವ ಮೂಲಕ ಶ್ರೀಲಂಕಾ ತನ್ನ ಆರ್ಥಿಕ ಬಿಕ್ಕಟ್ಟನ್ನು ಜಗತ್ತಿಗೆ ತೋರಿಸಿದೆ. ಪ್ರಸ್ತುತ ಆ ದೇಶದಲ್ಲಿ ಆರ್ಥಿಕ ತುರ್ತುಪರಿಸ್ಥಿತಿ ಹೇರಲಾಗಿದೆ. ಹಾಗಾದರೆ ಯಾವಾಗಿನಿಂದ ಶ್ರೀಲಂಕಾದಲ್ಲಿ ಆರ್ಥಿಕ ತುರ್ತುಪರಿಸ್ಥಿತಿ ಇದೆ?

ಎ. 2020ರ ಸೆಪ್ಟೆಂಬರ್

‌ಬಿ. 20211 ಜನವರಿ

ಸಿ. 2022 ಜನವರಿ

ಡಿ. 2019 ಅಕ್ಟೋಬರ್

ಉತ್ತರ: ಎ.

10. ಆಪರೇಷನ್ ಗಂಗಾ ಯಾವುದಕ್ಕೆ ಸಂಬಂಧಿಸಿದೆ?

ಎ. ಭಾರತೀಯರನ್ನು ಯುದ್ಧ ಪೀಡಿತ ಉಕ್ರೇನ್‌ನಿಂದ ಏರ್‌ಲಿಫ್ಟ್ ಮಾಡಿ ಭಾರತಕ್ಕೆ ಕರೆ ತರುವುದು

ಬಿ. ಭಾರತೀಯ ನದಿಗಳ ಜೋಡಣೆ

ಸಿ. ಉತ್ತರಪ್ರದೇಶದ ಚುನಾವಣಾ ಪ್ರಚಾರ

ಡಿ. ಗಂಗಾನದಿ ಶುದ್ಧಿಕರಣ

ಉತ್ತರ: ಎ

*****

ನಿಮಗಿದು ಗೊತ್ತೆ?

ಕಸ್ತೂರಿ ಮೃಗ

ಇದು ಜಿಂಕೆಯ ಪ್ರಾಣಿವರ್ಗಕ್ಕೆ ಸೇರಿರುವ ಒಂದು ಸಸ್ತನಿ ಪ್ರಾಣಿ. ಇದುವರೆಗೆ 60ಕ್ಕೂ ಹೆಚ್ಚು ಜಾತಿ ಜಿಂಕೆಗಳ ಬಗ್ಗೆ ಅಧ್ಯಯನ ನಡೆಸಲಾಗಿದೆ. ಇವುಗಳಲ್ಲಿ ಕಸ್ತೂರಿ ಮೃಗ ಕೂಡ ಒಂದು ಜಾತಿಯ ಜಿಂಕೆಯಾಗಿದೆ.

ಕಸ್ತೂರಿ ಮೃಗ ಸದಾ ಏಕಾಂತದಲ್ಲಿರುವ ಚಿಕ್ಕ ಪ್ರಾಣಿ. ಇವು ಸೈಬೀರಿಯಾದಿಂದ ಹಿಮಾಲಯದವರೆಗಿರುವ ಪರ್ವತ ಪ್ರದೇಶಗಳಲ್ಲಿ ಕಾಣ ಸಿಗುತ್ತವೆ. ಇದರ ಕಿವಿಗಳು ದೊಡ್ಡದಾಗಿರುತ್ತವೆ. ಬಾಲ ಚಿಕ್ಕದಾಗಿರುತ್ತದೆ. ಇತರ ಜಿಂಕೆಗಳಂತೆ, ಇದಕ್ಕೆ ಕವಲೊಡೆದ ಕೊಂಬುಗಳಿರುವುದಿಲ್ಲ. ಕಸ್ತೂರಿ ಮೃಗದ ಎತ್ತರ 50 ರಿಂದ 60 ಸೆ.ಮಿ. ಗಳಷ್ಟು ಇರುತ್ತದೆ. ಭುಜದ ಭಾಗಕ್ಕಿಂತ, ಅದರ ಹಿಂಭಾಗದ ಎತ್ತರ ಸ್ವಲ್ಪ ಹೆಚ್ಚಾಗಿರುತ್ತದೆ. ಗಂಡು ಕಸ್ತೂರಿ ಮೃಗದ ಕೋರೆಹಲ್ಲು ಸ್ವಲ್ಪ ಉದ್ದವಾಗಿರುತ್ತದೆ. ಈ ಕೋರೆಹಲ್ಲುಗಳು ಬಾಯಿಂದ ಹೊರಗೆ ಬಂದು ಕೆಳಮುಖವಾಗಿ ಬಾಗಿರುತ್ತವೆ.

ಕಸ್ತೂರಿ

ಕಸ್ತೂರಿ ಸುಗಂಧಮಯವಾಗಿರುತ್ತದೆ. ಗಂಡು ಕಸ್ತೂರಿ ಮೃಗದ ಕಿಬ್ಬೊಟ್ಟೆಯ ತ್ವಚೆಯೊಳಗೆ ಒಂದು ಚೀಲವಿರುತ್ತದೆ. ಈ ಚೀಲದಲ್ಲಿ ಕಸ್ತೂರಿ ಉತ್ಪತ್ತಿಯಾಗುತ್ತಿರುತ್ತದೆ. ತಾಜಾಕಸ್ತೂರಿ, ಗಟ್ಟಿಯಾದ ದ್ರವರೂಪದಲ್ಲಿರುತ್ತದೆ. ಒಣಗಿದ ನಂತರ ಅದು ತರಿತರಿಯಾದ ಪುಡಿಯ ರೂಪಕ್ಕೆ ಬರುತ್ತದೆ. ಕಸ್ತೂರಿಯನ್ನು ಸಾಬೂನು ಮತ್ತು ಸುಗಂಧದ್ರವ್ಯಗಳ ತಯಾರಿಕೆಯಲ್ಲಿ ಬಳಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.