ADVERTISEMENT

ಕಂಪ್ಯೂಟರ್‌ ಕೋಡಿಂಗ್‌ ಅವಕಾಶಗಳು ಹೇರಳ

ಎಸ್‌.ಜಿ.ಕೃಷ್ಣ
Published 14 ಫೆಬ್ರುವರಿ 2021, 19:30 IST
Last Updated 14 ಫೆಬ್ರುವರಿ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪ್ರತಿಯೊಂದು ಕಂಪ್ಯೂಟರ್‌ ಅಪ್ಲಿಕೇಶನ್‌ಗೂ ಸರಿಯಾಗಿ ಬರೆದ ಕೋಡ್‌ಗಳ ಅಗತ್ಯವಿರುತ್ತದೆ. ಹೆಚ್ಚಿನ ಸಾಫ್ಟ್‌ವೇರ್‌ಗಳು ಕೋಟ್ಯಂತರ ಕೋಡ್‌ ಹಾಗೂ ನಂಬರ್‌ಗಳನ್ನು ಹೊಂದಿರುತ್ತವೆ.

ಕೋಡಿಂಗ್‌ ಬಗ್ಗೆ ಸಾಕಷ್ಟು ಜನರಿಗೆ ಗೊತ್ತೇ ಇದೆ. ಸರಳವಾಗಿ ಹೇಳುವುದಾದರೆ ಇದು ಕಂಪ್ಯೂಟರ್‌ ಭಾಷೆಯಾಗಿದ್ದು, ಆ್ಯಪ್ಸ್‌, ವೆಬ್‌ಸೈಟ್ಸ್‌, ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಲು ಬಳಕೆಯಾಗುತ್ತದೆ. ಇದಿಲ್ಲದಿದ್ದರೆ ಜನಪ್ರಿಯ ತಂತ್ರಜ್ಞಾನಗಳಾದ ಫೇಸ್‌ಬುಕ್‌, ಸ್ಮಾರ್ಟ್‌ಫೋನ್‌, ಬ್ರೌಸರ್‌ ಮೊದಲಾದವುಗಳನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿರಲಿಲ್ಲ.

ಇದರ ಕಾರ್ಯನಿರ್ವಹಣೆಯ ಬಗ್ಗೆ ಹೇಳುವುದಾದರೆ ತನ್ನದೇ ಭಾಷೆಯಲ್ಲಿ ಕಂಪ್ಯೂಟರ್‌ಗೆ ಏನು ಮಾಡಬೇಕೆಂಬುದನ್ನು ಹೇಳುತ್ತದೆ. ಕಂಪ್ಯೂಟರ್‌ಗೆ ಮಾರ್ಗದರ್ಶನ ನೀಡುವುದು ಟ್ರಾನ್ಸಿಸ್ಟರ್‌. ಇವುಗಳನ್ನು ಪ್ರತಿನಿಧಿಸುವುದು ಬೈನರಿ ಕೋಡ್‌ ಆದ 1 ಮತ್ತು 0. ಈ ಕೋಡ್‌ಗಳ ಅಪರಿಮಿತ ಜೋಡಣೆಯು ಕಂಪ್ಯೂಟರ್‌ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುತ್ತದೆ. ಈ ಬೈನರಿ ಕೋಡ್‌ಗಳ ನಿರ್ವಹಣೆಗೆ ಪ್ರೋಗ್ರಾಮಿಂಗ್‌ ಭಾಷೆಯನ್ನು ರೂಪಿಸಲಾಗಿದೆ. ಈ ಭಾಷೆಗಳ ಮೂಲಕ ಯಾವುದೇ ಆದೇಶವನ್ನು ಬೈನರಿ ಕೋಡ್‌ಗೆ ಬದಲಾಯಿಸಬಹುದಾಗಿದೆ.

ADVERTISEMENT

ಪ್ರತಿಯೊಂದು ಕಂಪ್ಯೂಟರ್‌ ಅಪ್ಲಿಕೇಶನ್‌ಗೂ ಸರಿಯಾಗಿ ಬರೆದ ಕೋಡ್‌ಗಳ ಅಗತ್ಯವಿರುತ್ತದೆ. ಹೆಚ್ಚಿನ ಸಾಫ್ಟ್‌ವೇರ್‌ಗಳು ಕೋಟ್ಯಂತರ ಕೋಡ್‌ ಹಾಗೂ ನಂಬರ್‌ಗಳನ್ನು ಹೊಂದಿರುತ್ತವೆ. ಇಂದಿನ ಡಿಜಿಟಲ್‌ ಜಗತ್ತಿನಲ್ಲಿ ಮೊಬೈಲ್‌ ಫೋನ್‌ನಿಂದ ಹಿಡಿದು ಸ್ಮಾರ್ಟ್‌ ಟಿವಿಯವರೆಗೂ ಕೋಡ್‌ ಹೊಂದಿದ ಸಾಫ್ಟ್‌ವೇರ್‌ ಬೇಕಾಗುತ್ತದೆ. ಯಾವುದೇ ತಪ್ಪಿಲ್ಲದೇ ಬರೆದಂತಹ ಕೋಡ್‌ ‘404 ಎರರ್‌’ ಹಾಗೂ ಸಾಫ್ಟ್‌ವೇರ್‌ ಕ್ರ್ಯಾಶ್‌ ಆಗುವುದನ್ನು ತಪ್ಪಿಸುತ್ತದೆ.

ಹಾಗಾದರೆ ಕೋಡಿಂಗ್‌ ಕಲಿಕೆ ಅಷ್ಟು ಕಷ್ಟವೇ? ತಂತ್ರಜ್ಞಾನದ ಕುರಿತು ಅರಿವು ಇರುವವರಿಗೆ ಕೋಡಿಂಗ್‌ ಎನ್ನುವುದು ಅತ್ಯಂತ ಸುಲಭ. ಸರಳವಾದ ಕೋಡಿಂಗ್‌ ಭಾಷೆಯನ್ನು ನೆನಪಿನಲ್ಲಿಟ್ಟುಕೊಳ್ಳುವುದು ಅಷ್ಟೊಂದು ಕಷ್ಟವಲ್ಲ. ಒಮ್ಮೆ ಈ ಭಾಷೆಯಲ್ಲಿ ಪರಿಣತಿ ಪಡೆದರೆ ಆರಾಮವಾಗಿ ನಿರ್ವಹಿಸಬಹುದು. ವೈರಸ್‌ ಬಂದ ಕಂಪ್ಯೂಟರ್‌ ಅಪ್ಲಿಕೇಶನ್‌ ಅನ್ನು ಸ್ವಚ್ಛಗೊಳಿಸಬಹುದು.

ತಂತ್ರಜ್ಞಾನ ಕೌಶಲದ ಜೊತೆಗೆ ಕೋಡ್‌ ಬರೆಯುವ ಪರಿಣತಿಯೂ ಜೊತೆಗಿರಬೇಕು.

ಕೆಲವು ಜನಪ್ರಿಯ ಕೋಡಿಂಗ್‌ ಭಾಷೆಗಳು

ಇದುವರೆಗೆ 700ಕ್ಕೂ ಅಧಿಕ ಪ್ರೋಗ್ರಾಮಿಂಗ್‌ ಭಾಷೆಗಳನ್ನು ಹುಟ್ಟುಹಾಕಲಾಗಿದೆ. ಪ್ರತಿಯೊಂದು ಭಾಷೆಯೂ ಕಂಪ್ಯೂಟರ್‌ಗೆ ಅಗಾಧ ಪ್ರಮಾಣದ ಮಾಹಿತಿಯನ್ನು ನಮಗೆ ನೀಡಲು ನೆರವಾಗುತ್ತದೆ. ಆದರೆ ಹೊಸದಾಗಿ ಕಲಿಯುವವರು 10– 15 ಪ್ರೋಗ್ರಾಮಿಂಗ್‌ ಭಾಷೆ ಕಲಿತರೆ ಸಾಕು. ಸ್ವಿಫ್ಟ್‌, ಜಾವಾಸ್ಕ್ರಿಪ್ಟ್‌, ಕೊಬಾಲ್‌, ಆಬ್ಜೆಕ್ಟಿವ್‌–ಸಿ, ವಿಶುವಲ್‌ ಬೇಸಿಕ್‌ ಮೊದಲಾದವು ಆರಂಭಿಕ ಕಲಿಕೆಯಲ್ಲಿ ಸೇರಿವೆ.

ಎಚ್‌ಟಿಎಂಎಲ್‌ (ಹೈಪರ್‌ಟೆಕ್ಸ್ಟ್‌ ಮಾರ್ಕ್‌ಅಪ್‌ ಲ್ಯಾಂಗ್ವೇಜ್‌): ವೆಬ್‌ ಪೇಜ್‌ ಕೋಡಿಂಗ್‌ಗೆ ಬಳಕೆಯಾಗುತ್ತದೆ. ಇದು ವಿಷಯ, ಚಿತ್ರ ಹಾಗೂ ವಿಡಿಯೊಗಳನ್ನು ಆನ್‌ಲೈನ್‌ನಲ್ಲಿ ನೀಡುತ್ತದೆ. ವೆಬ್‌ಸೈಟ್‌ಗಳನ್ನು ಯಾವ ರೀತಿ ತೋರಿಸಬೇಕು ಎಂಬುದನ್ನು ಇಂಟರ್‌ನೆಟ್‌ ಬ್ರೌಸರ್‌ಗೆ ಆದೇಶಿಸುತ್ತದೆ.

ಜಾವಾ: ಇದು ಮೊಬೈಲ್‌ ಆ್ಯಪ್ಸ್‌, ವಿಡಿಯೊ ಗೇಮ್ಸ್‌ ಸೇರಿದಂತೆ ಆ್ಯಂಡ್ರಾಯ್ಡ್‌ನಲ್ಲಿ ಪ್ರೋಗ್ರಾಮಿಂಗ್‌ ಮಾಡಲು ಬಳಸುವ ಕೋಡಿಂಗ್‌ ಭಾಷೆ. ಇಡೀ ಸರ್ವರ್‌ಗೂ ಅಪ್ಲಿಕೇಶನ್‌ ಬರೆಯಬಹುದು.

ಪೈಥಾನ್‌: ಇದು ಸರ್ವರ್‌ ಆಧಾರಿತ ವೆಬ್‌ ಹಾಗೂ ಸಾಫ್ಟ್‌ವೇರ್‌ ಅಭಿವೃದ್ಧಿಗೆ ಬಳಸುವ ಭಾಷೆಯಾಗಿದ್ದು, ಗೂಗಲ್‌ ಕೂಡ ಇದನ್ನು ಹೆಚ್ಚಾಗಿ ಬಳಸುತ್ತಿದೆ.

ಸಿಎಸ್‌ಎಸ್‌: ಅಂತರ್‌ಜಾಲದಲ್ಲಿ ಪ್ರತಿಯೊಂದು ಪುಟದ ಲೇಔಟ್‌, ಹಿನ್ನೆಲೆ ಬಣ್ಣ, ಅಕ್ಷರದ ಗಾತ್ರ, ಕರ್ಸರ್‌ ಆಕಾರ ಮೊದಲಾದವುಗಳು ಹೇಗಿರಬೇಕೆಂದು ಬ್ರೌಸರ್‌ಗೆ ಆದೇಶಿಸುತ್ತದೆ.

ಹಾಗೆಯೇ ಸಿ, ಸಿ++, ಪಿಎಚ್‌ಪಿ, ಎಸ್‌ಕ್ಯುಎಲ್‌ ಮೊದಲಾದ ಕೋಡಿಂಗ್‌ ಭಾಷೆಗಳಿವೆ.

ಕೋರ್ಸ್‌ ಕಲಿಕೆ ಹೇಗೆ?

ಕೋಡಿಂಗ್‌ ಕೋರ್ಸ್‌ ಅನ್ನು ಪದವಿಯ ನಂತರ ಸರ್ಟಿಫಿಕೇಟ್‌ ಕೋರ್ಸ್‌ ಆಗಿ ಕಲಿಯಬಹುದು. ಕಾಲೇಜಿನಲ್ಲಿ ಕಂಪ್ಯೂಟರ್‌ ವಿಜ್ಞಾನವನ್ನು ಕಲಿತವರಿಗೆ ಇದು ಸುಲಭ. ಹಾಗೆಯೇ ಮಾಹಿತಿ ತಂತ್ರಜ್ಞಾನ, ಡೇಟಾ ವಿಜ್ಞಾನ ಮೊದಲಾದ ಎಂಜಿನಿಯರಿಂಗ್‌ ಪದವಿಯಲ್ಲಿ ಇದ್ದೇ ಇರುತ್ತದೆ. ಕೆಲವು ಉದ್ಯೋಗಗಳಿಗೆ ಪದವಿ ಕೇಳುವುದಿಲ್ಲ. ಹೀಗಾಗಿ ಪಿಯುಸಿ ಆದ ನಂತರವೂ ಕಲಿಯಬಹುದು. ಜೊತೆಗೆ ಆನ್‌ಲೈನ್‌ನಲ್ಲಿ ಬೇಕಾದಷ್ಟು ಉಚಿತ ಹಾಗೂ ಶುಲ್ಕವಿರುವ ತರಬೇತಿ ಕೇಂದ್ರಗಳಿವೆ.

ಕೋಡಿಂಗ್‌ ಕಲಿತವರಿಗೆ ಬೇಕಾದಷ್ಟು ಉದ್ಯೋಗಾವಕಾಶಗಳಿವೆ. ಶಿಕ್ಷಣ, ಹಣಕಾಸು, ಆರೋಗ್ಯ ಮತ್ತಿತರ ಕ್ಷೇತ್ರಗಳು ಸೇರಿದಂತೆ ಹಲವು ಕಡೆ ಬೇಡಿಕೆ ಇದೆ. ಡೇಟಾಬೇಸ್‌ ಅಡ್ಮಿನಿಸ್ಟ್ರೇಟರ್‌, ವೆಬ್‌ ಡೆವಲಪರ್‌, ಅಪ್ಲಿಕೇಶನ್‌ ಡೆವಲಪರ್‌, ಮಾಹಿತಿ ಭದ್ರತೆ ವಿಶ್ಲೇಷಕ, ಇನ್‌ಸ್ಟ್ರಕ್ಷನಲ್‌ ಡಿಸೈನರ್‌ ಮೊದಲಾದ ಉದ್ಯೋಗಾವಕಾಶಗಳು ಹೇರಳವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.