ADVERTISEMENT

‘ಎಸ್‌ಬಿಐ’ಗೆ ಬೇಕು 5,008 ಜೂನಿಯರ್ ಅಸೋಸಿಯೇಟ್ಸ್‌

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2022, 22:15 IST
Last Updated 14 ಸೆಪ್ಟೆಂಬರ್ 2022, 22:15 IST
   

ದೇಶದ ಅತ್ಯಂತ ದೊಡ್ಡ ಬ್ಯಾಂಕುಗಳಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ದೇಶದಾದ್ಯಂತ ವಿವಿಧ ಶಾಖೆಗಳಲ್ಲಿ ಅಗತ್ಯವಿರುವ 5,008 ಜೂನಿಯರ್ ಅಸೋಸಿಯೇಟ್ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದೆ.

ಕರ್ನಾಟಕದಲ್ಲಿ 316 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಪರಿಶಿಷ್ಟ ಜಾತಿಯವರಿಗೆ 51, ಪರಿಶಿಷ್ಟ ಪಂಗಡದವರಿಗೆ 22, ಹಿಂದುಳಿದ ವರ್ಗದವರಿಗೆ 85, ಸಾಮಾನ್ಯ ವರ್ಗದವರಿಗೆ 127, ಆರ್ಥಿಕವಾಗಿ ಹಿಂದುಳಿದವರಿಗೆ 31 ಹುದ್ದೆಗಳು ಮೀಸಲಾಗಿವೆ.

ಸೆ. 14 ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಆರಂಭವಾಗಿದ್ದು, ಸೆಪ್ಟೆಂಬರ್ 27 ಅರ್ಜಿ ಸಲ್ಲಿಸಲು ಕೊನೆಯ ದಿನ.

ADVERTISEMENT

ಕನ್ನಡದಲ್ಲಿಯೇ ಪರೀಕ್ಷೆ

ರಾಜ್ಯದ ಅಭ್ಯರ್ಥಿಗಳು ಕನ್ನಡದಲ್ಲಿಯೇ ಪೂರ್ವ ಭಾವಿ ಮತ್ತು ಮುಖ್ಯ ಪರೀಕ್ಷೆ ಬರೆಯುವ ಅವಕಾಶವನ್ನು ಭಾರತೀಯ ಸ್ಟೇಟ್ ಬ್ಯಾಂಕ್ ಕಲ್ಪಿಸಿದೆ. ಕಳೆದ ಬಾರಿಯಂತೆಯೇ ನೇಮಕ ಪ್ರಕ್ರಿಯೆಯ ಭಾಗವಾಗಿ ಸ್ಥಳೀಯ ಭಾಷಾ ಪರೀಕ್ಷೆಯನ್ನೂ ನಡೆಸಲಿದೆ. ಕರ್ನಾಟಕದ ಅಭ್ಯರ್ಥಿಗಳು ಇಂಗ್ಲಿಷ್, ಹಿಂದಿ ಮತ್ತು ಕನ್ನಡ ಇವುಗಳಲ್ಲಿ ಯಾವುದಾದರೊಂದು ಭಾಷೆಯನ್ನು ಆಯ್ದುಕೊಂಡು ಪರೀಕ್ಷೆ ಬರೆಯಬಹುದು. ಈ ಆಯ್ಕೆ ಅಭ್ಯರ್ಥಿಗಳಿಗೆ ಬಿಟ್ಟಿದ್ದು, ಇಂಗ್ಲಿಷ್ ಭಾಷಾ ಪರೀಕ್ಷೆಯನ್ನು ಮಾತ್ರ ಇಂಗ್ಲಿಷ್ ಭಾಷೆಯಲ್ಲಿಯೇ ಬರೆಯಬೇಕಾಗುತ್ತದೆ. ಇದರಲ್ಲಿ ನೇಮಕ ಪ್ರಕ್ರಿಯೆಯ ಭಾಗವಾಗಿ ಸ್ಥಳೀಯ ಭಾಷಾ ಪರೀಕ್ಷೆಯನ್ನೂ ನಡೆಸಲಾಗುತ್ತಿದೆ. ಎಸ್ಸೆಸ್ಸೆಲ್ಸಿ ಅಥವಾ ಪಿಯುಸಿಯಲ್ಲಿ ಕನ್ನಡ ಭಾಷೆಯಲ್ಲಿ ಓದಿರುವ ಅಭ್ಯರ್ಥಿಗಳಿಗೆ ಸ್ಥಳೀಯ ಭಾಷಾ ಪರೀಕ್ಷೆ ನಡೆಸಲಾಗುವುದಿಲ್ಲ.

ನೆನಪಿರಲಿ: ಈಗಾಗಲೇ ಎಸ್‌ಬಿಐ ಕ್ಲರಿಕಲ್ ಕೇಡರ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವವರು ಅರ್ಜಿ ಸಲ್ಲಿಸಲು ಅವಕಾಶವಿಲ್ಲ.

ಗಮನಿಸಿ

ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಸಂಪೂರ್ಣವಾಗಿ ಅಧಿಸೂಚನೆ ಓದಿಕೊಳ್ಳಬೇಕು. ನೇಮಕಾತಿಗೆ ಸಂಬಂಧಿಸಿದಂತೆ ಎಲ್ಲಾ ಮಾಹಿತಿಯನ್ನು ಎಸ್‌ಬಿಐ ತನ್ನ ವೆಬ್‌ಸೈಟ್‌ನಲ್ಲೇ ಪ್ರಕಟಿಸುತ್ತದೆ.

ನೆನಪಿಡಿ:ಒಬಿಸಿ ವರ್ಗಕ್ಕೆ ಸೇರಿದ ಆದರೆ ಕೆನೆ ಪದರದ ಅಡಿಯಲ್ಲಿ ಬರುವ ಅಭ್ಯರ್ಥಿಗಳು ಒಬಿಸಿ ಮೀಸಲಾತಿಗೆ ಅರ್ಹರಾಗಿರುವುದಿಲ್ಲ. ಅವರು ಅರ್ಜಿಯಲ್ಲಿ ತಮ್ಮ ವರ್ಗವನ್ನು ‘ಸಾಮಾನ್ಯ’ ಎಂದು ಸೂಚಿಸಬೇಕು. ಅಭ್ಯರ್ಥಿಯು ಕಾಲಕಾಲಕ್ಕೆ ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಕೆನೆರಹಿತ ಪದರ (Non creamy layer) ಷರತ್ತಿನೊಂದಿಗೆ OBC ಪ್ರಮಾಣಪತ್ರವನ್ನು ಹೊಂದಿರಬೇಕು.

ವಿದ್ಯಾರ್ಹತೆ

ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಪದವಿ ಅಂತಿಮ ವರ್ಷ/ಸೆಮಿಸ್ಟರ್‌ ನಲ್ಲಿರುವವರು ಅರ್ಜಿ ಸಲ್ಲಿಸಬಹುದು. ಒಂದು ವೇಳೆ ಆಯ್ಕೆಯಾದಲ್ಲಿ, ಅವರು 30ನೇ ನವೆಂಬರ್ 2022 ಅಥವಾ ಅದಕ್ಕಿಂತ ಮೊದಲು ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದಕ್ಕೆ ಪುರಾವೆಗಳನ್ನು ಒದಗಿಸಬೇಕು. ಇಂಟಿಗ್ರೇಟೆಡ್ ಡ್ಯುಯಲ್ ಡಿಗ್ರಿ (ಐಡಿಡಿ) ಪ್ರಮಾಣಪತ್ರ ಹೊಂದಿರುವ ಅಭ್ಯರ್ಥಿಗಳು ಐಡಿಡಿ ಉತ್ತೀರ್ಣರಾದ ದಿನಾಂಕ 30 ನವೆಂಬರ್ 2022 ಅಥವಾ ಅದಕ್ಕಿಂತ ಮುಂಚೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

ವಯೋಮಿತಿ

ಕನಿಷ್ಠ (01.08.2022 ಕ್ಕೆ ಅನ್ವಯವಾಗುವಂತೆ) 20 ವರ್ಷ ಹಾಗೂ ಗರಿಷ್ಠ ವಯೋಮಿತಿ 28 ವರ್ಷ ನಿಗದಿಪಡಿಸಲಾಗಿದೆ. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.

ಅರ್ಜಿ ಶುಲ್ಕ

ಸಾಮಾನ್ಯ, ಆರ್ಥಿಕ ದುರ್ಬಲ ವರ್ಗ ಹಾಗೂ ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಇಂಟಿಮೇಷನ್ ಶುಲ್ಕ ಸೇರಿ ಒಟ್ಟು ₹750 ಅರ್ಜಿ ಶುಲ್ಕ ಪಾವತಿಸಬೇಕು. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು/ ಅಂಗವಿಕಲ ಅಭ್ಯರ್ಥಿಗಳು ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಸಂಪೂರ್ಣ ಶುಲ್ಕ ವಿನಾಯತಿ ನೀಡಲಾಗಿದೆ. ನೋಂದಣಿ ನಂತರ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್/ ಇಂಟರ್ನೆಟ್ ಬ್ಯಾಂಕಿಂಗ್ ಬಳಸಿ ಪಾವತಿಸಬೇಕಾಗುತ್ತದೆ.

ಪರೀಕ್ಷಾ ಪ್ರಕ್ರಿಯೆ

l ಮೊದಲ ಹಂತ: ಆನ್‌ಲೈನ್ ಪೂರ್ವಭಾವಿ ಪರೀಕ್ಷೆ– ನವೆಂಬರ್, 2022

l ಎರಡನೇ ಹಂತ: ಆನ್‌ಲೈನ್ ಮುಖ್ಯ ಪರೀಕ್ಷೆ– ಡಿಸೆಂಬರ್ 2022 / ಜನವರಿ, 2023

ಪರೀಕ್ಷೆ ಹೀಗಿರುತ್ತದೆ

ಪೂರ್ವಭಾವಿ ಪರೀಕ್ಷೆ ಒಂದು ಗಂಟೆಗಳ ಕಾಲ ನಡೆಯಲಿದ್ದು,(ಪ್ರತಿ ಪತ್ರಿಕೆಗೂ 20 ನಿಮಿಷಗಳಂತೆ ಒಟ್ಟಾರೆ 60 ನಿಮಿಷಗಳು) 100 ಅಂಕಗಳಿಗೆ ನೂರು ಪ್ರಶ್ನೆಗಳನ್ನು ಕೇಳಲಾಗುತ್ತದೆ (ಅಂದರೆ ಪ್ರತಿ ಪ್ರಶ್ನೆಗೆ ಒಂದೊಂದು ಅಂಕ ನಿಗದಿಯಾಗಿರುತ್ತದೆ ). ಇದರಲ್ಲಿ ಇಂಗ್ಲಿಷ್ ಭಾಷಾ ಪತ್ರಿಕೆಯ 30, ನ್ಯೂಮರಿಕಲ್ ಎಬಿಲಿಟಿ ವಿಷಯದ 35 ಹಾಗೂ ರೀಸನಿಂಗ್ ಎಬಿಲಿಟಿಯ 35 ಪ್ರಶ್ನೆಗಳಿರಲಿವೆ. ಪ್ರತಿ ಪರೀಕ್ಷೆಯಲ್ಲೂ ಕನಿಷ್ಟ ಅಂಕ ಗಳಿಸಬೇಕೆಂಬ ನಿಯಮವಿಲ್ಲ.ಅದರೆ ಒಟ್ಟಾರೆ ಹೆಚ್ಚು ಅಂಕ ಗಳಿಸುವುದು ಮುಖ್ಯ.(ಆಯಾ ವರ್ಗಗಳಿಗೆ ಇರುವ ಹುದ್ದೆಗಳ ಸಂಖ್ಯೆಗಿಂತ 10 ಪಟ್ಟು ಹೆಚ್ಚು ಅಭ್ಯರ್ಥಿಗಳನ್ನ ಮುಖ್ಯ ಪರೀಕ್ಷೆಗೆ ಆಯ್ಕೆ ಮಾಡಲಾಗುತ್ತದೆ. ಅಂದರೆ 1:10 ಅನುಪಾತದಲ್ಲಿ ಆಯ್ಕೆ ಮಾಡಲಾಗುತ್ತದೆ)

ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಮುಂದಿನ ಹಂತದ ಅಂದರೆ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆಯುತ್ತಾರೆ. ಮುಖ್ಯ ಪರೀಕ್ಷೆಯು ನಿಗದಿತ ದಿನದಂದು ಆನ್‌ಲೈನ್‌ನಲ್ಲಿಯೇ ನಡೆಯಲಿದೆ. ಮುಖ್ಯ ಪರೀಕ್ಷೆಯು 2 ಗಂಟೆ 40 ನಿಮಿಷಗಳ ಕಾಲಾವಧಿಯಲ್ಲಿ ನಡೆಯಲಿದೆ. ಪರೀಕ್ಷೆಯಲ್ಲಿ 200 ಅಂಕಗಳಿಗೆ 190 ಪ್ರಶ್ನೆಗಳನ್ನು ಕೇಳಲಾಗುತ್ತದೆ.

ಇಂಗ್ಲಿಷ್ ಭಾಷೆ ಒಂದನ್ನು ಹೊರತುಪಡಿಸಿ ಮತ್ತೆಲ್ಲಾ ಪ್ರಶ್ನೆಗಳು ಕನ್ನಡ, ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಇರುತ್ತವೆ. ತಪ್ಪು ಉತ್ತರ ಗುರುತಿಸಿದಲ್ಲಿ, ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆಗಳಲ್ಲಿ ಆಯಾ ವಿಷಯಕ್ಕೆ ಪ್ರತಿ ಪ್ರಶ್ನೆಗೆ ನಿಗದಿ ಪಡಿಸಿದ ಅಂಕದ 0.25 ಅಂಕವನ್ನು ಋಣಾತ್ಮಕ ಮೌಲ್ಯಮಾಪನದ ನಿಯಮದಂತೆ ಗಳಿಸಿದ ಅಂಕದಿಂದ ಕಳೆಯಲಾಗುತ್ತದೆ.

ವೇತನ: ₹17900 ರಿಂದ ₹ 47920 (ವೇತನ 17900 + ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಎರಡು ಹೆಚ್ಚುವರಿ ಇನ್‌ಕ್ರಿಮೆಂಟ್)

ಹೆಚ್ಚಿನ ಮಾಹಿತಿಗಾಗಿ:022-22820427

ವಿವರ ಹಾಗೂ ಅರ್ಜಿ ಸಲ್ಲಿಸಲು ವೆಬ್ ಲಿಂಕ್: https://bank.sbi/careers
https://www.sbi.co.in/careers

(ಮುಂದಿನ ವಾರ: ಬ್ಯಾಂಕಿಂಗ್‌ ನೇಮಕದ ಆಯ್ಕೆ ಪ್ರಕ್ರಿಯೆ ಮತ್ತು ಹೊಸ ನಿಯಮಗಳ ಕುರಿತ ವಿವರ)

(ಲೇಖಕರು: ಬ್ಯಾಂಕಿಂಗ್ ತರಬೇತುದಾರರು ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರರು ಮತ್ತು ವೃತ್ತಿ ಮಾರ್ಗದರ್ಶಕರು. ಮಡಿಕೇರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.