ADVERTISEMENT

ಸ್ಟಾಫ್ ಸಲೆಕ್ಷನ್‌ ಕಮಿಷನ್‌: ಸ್ಪರ್ಧಾತ್ಮಕ ಪರೀಕ್ಷಾ ಮಾರ್ಗದರ್ಶಿ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2021, 19:30 IST
Last Updated 29 ಡಿಸೆಂಬರ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೇಂದ್ರ ಸರ್ಕಾರದ ಸಿಬ್ಬಂದಿ ನೇಮಕಾತಿ ಪ್ರಾಧಿಕಾರವು(ಸ್ಟಾಫ್ ಸಲೆಕ್ಷನ್‌ ಕಮಿಷನ್‌– ಎಸ್ಎಸ್‌ಸಿ) 36 ವಿವಿಧ ವೃಂದಗಳಲ್ಲಿ(ಇಲಾಖೆಗಳಲ್ಲಿ) ಖಾಲಿ ಇರುವ ಗ್ರೂಪ್ ಬಿ ಮತ್ತು ಸಿ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಿದೆ.

ಈ ಕುರಿತು ಡಿ. 23ರಂದು ಅಧಿಸೂಚನೆ ಹೊರಡಿಸಿದ್ದು, ಅಂದಿನಿಂದಲೇ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ.

ಜನವರಿ 1, 2022 ಅರ್ಜಿ ಸಲ್ಲಿಕೆಗೆಕೊನೆಯ ದಿನವಾಗಿದೆ. ಕೇಂದ್ರ ಸರ್ಕಾರದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧವಾಗುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶವೂ ಹೌದು.

ADVERTISEMENT

ಹುದ್ದೆಗಳ ವಿವರ

ಭಾರತೀಯ ಲೆಕ್ಕ ಮತ್ತು ಪರಿಶೋಧನೆ ಇಲಾಖೆಯಲ್ಲಿ ಅಸಿಸ್ಟೆಂಟ್ ಆಡಿಟ್ ಆಫೀಸರ್, ಕೇಂದ್ರೀಯ ಸಚಿವಾಲಯದಲ್ಲಿ ಅಸಿಸ್ಟೆಂಟ್ ಸೆಕ್ಷನ್ ಆಫೀಸರ್, ಸಿಬಿಐ ಇಲಾಖೆಯಲ್ಲಿ ಉಪ ಅಧೀಕ್ಷಕರು, ಜಾರಿ ನಿರ್ದೇಶನಾಲಯದಲ್ಲಿ ಸಹಾಯಕ ಜಾರಿ ಅಧಿಕಾರಿ, ಎನ್ಐಎ ಇಲಾಖೆಯಲ್ಲಿ ಸಬ್-ಇನ್ಸ್‌ಪೆಕ್ಟರ್ ಸೇರಿದಂತೆ 36 ವಿವಿಧ ವೃಂದದ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಸಂಬಂಧಪಟ್ಟ ಇಲಾಖೆಗಳ ಬೇಡಿಕೆಗೆ ಅನುಸಾರವಾಗಿ ಎಸ್ಎಸ್‌ಸಿ ವೆಬ್‌ಸೈಟ್‌ನಲ್ಲಿ ಹುದ್ದೆಗಳ ಸಂಖ್ಯೆಯನ್ನು ಪ್ರಕಟಿಸಲಾಗುತ್ತದೆ.

ಶೈಕ್ಷಣಿಕ ವಿದ್ಯಾರ್ಹತೆ

ಲೆಕ್ಕ ಪರಿಶೋಧನಾಧಿಕಾರಿ, ಅಂಕಿ-ಸಂಖ್ಯೆ ಪರಿಶೋಧಕರಂತಹ ಕೆಲವೊಂದು ‘ವೃಂದದ’ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿರ್ದಿಷ್ಟ ವಿಷಯದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪೂರೈಸಿರಬೇಕು. ಉಳಿದಂತಹ ಬಹುತೇಕ ಹುದ್ದೆಗಳ ನೇಮಕಾತಿಗೆ, ಯುಜಿಸಿಯಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿರಬೇಕು.

ವಯೋಮಿತಿ

ಆದಾಯ ತೆರಿಗೆ ಅಧೀಕ್ಷಕರು, ವಾಣಿಜ್ಯ ತೆರಿಗೆ ಪರೀಕ್ಷಕರು, ಸಹಾಯಕ ಲೆಕ್ಕಾಧಿಕಾರಿ ಸೇರಿದಂತೆ ಬಹುತೇಕ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಪೂರೈಸಿರಬೇಕು ಮತ್ತು ಗರಿಷ್ಠ 30 ವರ್ಷ ಮೀರಬಾರದು. ಅಸಿಸ್ಟೆಂಟ್ ಸೆಕ್ಷನ್ ಆಫೀಸರ್‌ನಂತಹ ಕೆಲವೊಂದು ಹುದ್ದೆಗಳಿಗೆ 27 ವರ್ಷಗಳವರೆಗೆ ವಯೋಮಿತಿ ಸಡಿಲಿಸಲಾಗಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಅಭ್ಯರ್ಥಿಗಳಿಗೆನಿಗದಿಪಡಿಸಿರುವ ಗರಿಷ್ಠ ವಯೋಮಿತಿಯಲ್ಲಿ 5 ವರ್ಷ ಮತ್ತು ಹಿಂದುಳಿದ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ಮಾಡಲಾಗಿದೆ. ಅಂಗವಿಕಲ ಅಭ್ಯರ್ಥಿಗಳಿಗೆ ವರ್ಗಾನುಸಾರವಾಗಿ 10 ವರ್ಷ ವಯಸ್ಸಿನ ಸಡಿಲಿಕೆಗೆ ಅವಕಾಶವನ್ನು ಕಲ್ಪಿಸಲಾಗಿದೆ.

ಪರೀಕ್ಷಾ ವಿಧಾನ

ಅಧಿಸೂಚನೆಯಲ್ಲಿರುವ ಕೆಲವೊಂದು ಹುದ್ದೆಗಳ ಆಯ್ಕೆ ಮೂರು ಹಂತದ ಮತ್ತು ಕೆಲವೊಂದು ಹುದ್ದೆಗಳಿಗೆ ನಾಲ್ಕು ಹಂತದ ಪರೀಕ್ಷೆ ಇರುತ್ತದೆ.

ಮೊದಲ ಹಂತ ಪರೀಕ್ಷೆಯು ಬಹುಆಯ್ಕೆ ಮಾದರಿಯಲ್ಲಿರುತ್ತದೆ. 100 ಪ್ರಶ್ನೆಗಳನ್ನು ಒಳಗೊಂಡ 200 ಅಂಕಗಳ ಪರೀಕ್ಷೆಯಾಗಿದ್ದು, 60 ನಿಮಿಷ ಕಾಲವಕಾಶವಿರುತ್ತದೆ. ಈ ಹಂತದ ಪರೀಕ್ಷೆಯಲ್ಲಿ ಶೇ 30ಕ್ಕಿಂತ ಹೆಚ್ಚು ಅಂಕ ಗಳಿಸಿದ ಸಾಮಾನ್ಯ ಅಭ್ಯರ್ಥಿಗಳು, ಶೇ 25ಕ್ಕಿಂತ ಹೆಚ್ಚು ಅಂಕಗಳಿಸಿದ ಒಬಿಸಿ ಹಾಗೂ ಶೇ 20 ಕ್ಕಿಂತ ಹೆಚ್ಚು ಅಂಕಗಳಿಸಿದ ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳು ಎರಡನೇ ಹಂತದ ಪರೀಕ್ಷೆಗೆ ಅರ್ಹರಾಗಿರುತ್ತಾರೆ.

ಎರಡನೇ ಹಂತದಲ್ಲಿ ನಾಲ್ಕು ಪ್ರಶ್ನೆಪತ್ರಿಕೆಗಳಿದ್ದು, 800 ಅಂಕಗಳಿಗೆ ಬಹುಆಯ್ಕೆ ಮಾದರಿ ಪ್ರಶ್ನೆಗಳಿರುತ್ತವೆ. ಈ ಹಂತದ ಪರೀಕ್ಷೆಯಲ್ಲಿ ಶೇ 30ಕ್ಕಿಂತ ಹೆಚ್ಚು ಅಂಕಗಳಿಸಿದ ಸಾಮಾನ್ಯ ಅಭ್ಯರ್ಥಿಗಳು, ಶೇ 25 ಕ್ಕಿಂತ ಹೆಚ್ಚು ಅಂಕಗಳಿಸಿದ ಒಬಿಸಿ ಅಭ್ಯರ್ಥಿಗಳು ಹಾಗೂ ಶೇ 20 ಕ್ಕಿಂತ ಹೆಚ್ಚು ಅಂಕಗಳಿಸಿದ ಎಸ್‌ಸಿ ಮತ್ತು ಎಸ್‌ಟಿ ಅಭ್ಯರ್ಥಿಗಳು ಮೂರನೇ ಹಂತದ ಪರೀಕ್ಷೆಗೆ ಅರ್ಹರಾಗಿರುತ್ತಾರೆ.

ಎರಡನೇ ಹಂತದಲ್ಲಿ ಪತ್ರಿಕೆ-1 ಮತ್ತು ಪತ್ರಿಕೆ-2 ಎಲ್ಲಾ ಅಭ್ಯರ್ಥಿಗಳಿಗೂ ಕಡ್ಡಾಯ. ಕೆಲವು ನಿರ್ದಿಷ್ಟ ಹುದ್ದೆಗೆ ಆಯ್ಕೆ ಬಯಸುವ ಅಭ್ಯರ್ಥಿಗಳಿಗೆ ಮಾತ್ರ ಪತ್ರಿಕೆ-3 ಮತ್ತು 4 ಕಡ್ಡಾಯವಾಗಿರುತ್ತದೆ.

ಮೂರನೇ ಹಂತದಲ್ಲಿ 100 ಅಂಕಗಳಿಗೆ ವಿವರಣಾತ್ಮಕ ಮಾದರಿಯ ಲಿಖಿತ ಪರೀಕ್ಷೆ ಇರುತ್ತದೆ. ಅಭ್ಯರ್ಥಿಯ ಪ್ರಬಂಧ ರಚನಾ ಕೌಶಲ್ಯವನ್ನು ಪರೀಕ್ಷಿಸಲಾಗುತ್ತದೆ.

ನಾಲ್ಕನೇ ಹಂತದಲ್ಲಿ ಅಭ್ಯರ್ಥಿಯ ಗಣಕಯಂತ್ರ ಕೌಶಲವನ್ನು (ಕಂಪ್ಯೂಟರ್ ಜ್ಞಾನ) ಪರೀಕ್ಷಿಸಲಾಗುತ್ತದೆ.

ಮೊದಲ ಹಂತದ ಪರೀಕ್ಷೆ ಏಪ್ರಿಲ್‌ ತಿಂಗಳಲ್ಲಿ ನಡೆಯುವ ಸಾಧ್ಯತೆ ಇದೆ. ಮೂರು ಮತ್ತು ನಾಲ್ಕನೇ ಹಂತದ ಪರೀಕ್ಷೆಗಳ ದಿನಾಂಕವನ್ನು ಎಸ್ಎಸ್‌ಸಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ.

ಪರೀಕ್ಷಾ ಕೇಂದ್ರಗಳು

ರಾಜ್ಯದ ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ, ಕಲಬುರಗಿ, ಶಿವಮೊಗ್ಗ, ಮಂಗಳೂರು, ಮೈಸೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಅಭ್ಯರ್ಥಿಗಳು ತಮಗೆ ಅನುಕೂಲವಾಗುವ ಪರೀಕ್ಷಾ ಕೇಂದ್ರಗಳನ್ನು ಆಯ್ಕೆಮಾಡಿಕೊಳ್ಳಬಹುದು.

ಅರ್ಜಿ ಸಲ್ಲಿಸುವ ವಿಧಾನ

ಅರ್ಜಿ ಸಲ್ಲಿಕೆಯು ಎರಡು ಹಂತದ ಪ್ರಕ್ರಿಯೆಯಾಗಿದೆ. ಮೊದಲ ಹಂತದಲ್ಲಿ ಅಭ್ಯರ್ಥಿಯು https://ssc.nic.in ವೆಬ್‌ಸೈಟ್ ಮೂಲಕ ಲಾಗಿನ್ ವಿಭಾಗಕ್ಕೆ ಹೋಗಿ ‘register now’ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ನೋಂದಣಿ ಮಾಡಿಕೊಳ್ಳಬೇಕು.

ನೋಂದಣಿ ನಂತರ ಬರುವ ರಿಜಿಸ್ಟರ್‌ ನಂಬರ್ ಪಾಸ್‌ವರ್ಡ್ ಬಳಸಿ ಎಸ್.ಎಸ್.ಸಿ ವೆಬ್‌ಸೈಟ್‌ಗೆ ಲಾಗಿನ್‌ ಆಗಿ, ಅಲ್ಲಿರುವ ‘Combined graduate level examination 2021’ ಲಿಂಕ್‌ ಕ್ಲಿಕ್‌ ಮಾಡಿ. ಅದರಲ್ಲಿರುವ ಮಾರ್ಗಸೂಚಿ ಅನುಸರಿಸಿ ಅರ್ಜಿ ಸಲ್ಲಿಸಬೇಕು. ನಂತರ ಪರೀಕ್ಷಾ ಶುಲ್ಕವನ್ನು ಆನ್ ಲೈನ್ ಅಥವಾ ಚಲನ್ ಮೂಲಕ ಜ 27ರೊಳಗೆ ಪಾವತಿಸಬೇಕು.

ಈ ಪರೀಕ್ಷೆ ಕುರಿತ ಹೆಚ್ಚಿನ ಮಾಹಿತಿಗೆ www.ssc.nic.in ನೋಡಬಹುದು.

(ಮುಂದಿನವಾರ: ಪರೀಕ್ಷಾ ಸಿದ್ದತೆ, ಅಧ್ಯಯನ ಸಾಮಗ್ರಿಗಳ ಲಭ್ಯತೆ, ತರಬೇತಿ ಕೇಂದ್ರಗಳ ಕುರಿತ ಮಾಹಿತಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.