ADVERTISEMENT

ಭವಿಷ್ಯದ ಪ್ರಶ್ನೆಗಳಿಗೆ ಉತ್ತರವಾದ ಶೈಕ್ಷಣಿಕ ಮೇಳ

ಮಾರ್ಗದರ್ಶನ ನೀಡಿದ ಸಿಇಟಿ ನೋಡಲ್ ಆಫೀಸರ್ ಜಿ.ಸಿ.ನಿರಂಜನ್, ಜಿಎಂಐಟಿ ಪ್ರಾಂಶುಪಾಲ ಪ್ರೊ. ಪ್ರಕಾಶ್

​ಪ್ರಜಾವಾಣಿ ವಾರ್ತೆ
Published 19 ಮೇ 2019, 10:39 IST
Last Updated 19 ಮೇ 2019, 10:39 IST
ಜಿ.ಸಿ. ನಿರಂಜನ್‌
ಜಿ.ಸಿ. ನಿರಂಜನ್‌   

ದಾವಣಗೆರೆ: ಭವಿಷ್ಯದ ಬದುಕಿನ ಬಗ್ಗೆ ಕನಸು ಕಟ್ಟಿಕೊಂಡು ಸಿಇಟಿ, ನೀಟ್‌ ಪರೀಕ್ಷೆ ಬರೆದು ಮುಂದಿನ ಪ್ರಕ್ರಿಯೆಗಳ ಬಗ್ಗೆ ಪ್ರಶ್ನೆಗಳನ್ನು ಇಟ್ಟುಕೊಂಡು ಬಂದ ನೂರಾರು ಮಕ್ಕಳ ಮೊಗದಲ್ಲಿ ನಗು ಅರಳಿತು. ಗೊಂದಲಗಳಿಗೆ ತೆರೆ ಬಿದ್ದು, ಮನಸ್ಸುಗಳನ್ನು ನಿರುಮ್ಮಳವಾದವು. ‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್‌’ ಶುಕ್ರವಾರ ಕುವೆಂಪು ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಜ್ಞಾನದೇಗುಲ ಶೈಕ್ಷಣಿಕ ಮೇಳದ (ಎಡ್ಯುವರ್ಸ್‌) 11ನೇ ಆವೃತ್ತಿ ಕಾರ್ಯಕ್ರಮ ಇಂಥ ಬೆಳಕನ್ನು ವಿದ್ಯಾರ್ಥಿಗಳಿಗೆ ನೀಡಿತು.

ಮಕ್ಕಳ ತವಕಗಳಿಗೆ, ಹೆತ್ತವರ ಪ್ರಶ್ನೆಗಳಿಗೆ ದಾವಣಗೆರೆ ಮತ್ತು ಚಿತ್ರದುರ್ಗ ಸಿಇಟಿ ನೋಡಲ್ ಆಫೀಸರ್ ಜಿ.ಸಿ.ನಿರಂಜನ್ ಹಾಗೂ ಜಿ.ಎಂ.ಐ.ಟಿ ಪ್ರಾಂಶುಪಾಲ ಪ್ರೊ. ಪಿ. ಪ್ರಕಾಶ್‌ ಸಮರ್ಥ ಉತ್ತರಗಳನ್ನು ನೀಡಿ ಸ್ಥೈರ್ಯ ತುಂಬಿದರು. ಪಿಯುಸಿ ಮುಗಿದ ಬಳಿಕ ಏನು ಮಾಡಬೇಕು? ಕಾಲೇಜುಗಳನ್ನು ಆಯ್ಕೆ ಮಾಡುವುದು ಹೇಗೆ? ಇನ್ನಿತರ ಸುದೀರ್ಘ ಪ್ರಕ್ರಿಯೆಗಳ ಬಗ್ಗೆ ಇಬ್ಬರೂ ಅತಿಥಿಗಳು ಮನ ಮುಟ್ಟುವಂತೆ ವಿವರಿಸಿದರು.

ಪ್ರಜಾವಾಣಿ ಬ್ಯೂರೊ ಮುಖ್ಯಸ್ಥ ವಿಶಾಖ ಎನ್‌., ಪ್ರಸರಣ ವಿಭಾಗದ ಮುಖ್ಯಸ್ಥ ಎಸ್‌. ಪ್ರಕಾಶ್‌, ಪ್ರಿಂಟಿಂಗ್‌ ವಿಭಾಗದ ಮುಖ್ಯಸ್ಥ ಮುರಳೀಧರ್‌ ಉಪಸ್ಥಿತರಿದ್ದರು. ರಮ್ಯಾ ಆರಂಭಗೀತೆ ಹಾಡಿದರು.

ADVERTISEMENT

ಈಗ ಪಡೆಯುವ ಮಾರ್ಗದರ್ಶನವೇ ಮುಂದಿನ ಬದುಕಿಗೆ ಪೂರಕ: ಪ್ರೊ. ಪ್ರಕಾಶ್‌


ದಾವಣಗೆರೆ: ‘ಪಿಯು ಮುಗಿಸಿ ಬಂದಿದ್ದೀರಿ. ಈಗ ಸಿಗುವ ಮಾರ್ಗದರ್ಶನವೇ ಮುಂದಿನ ಬದುಕನ್ನು ರೂಪಿಸುತ್ತದೆ. ಇನ್ನು ನಾಲ್ಕೋ, ಐದೋ ವರ್ಷಕ್ಕೆ ಉದ್ಯೋಗ ಸಿಕ್ಕಿ ಬಿಡುತ್ತದೆ. ಹಾಗಾಗಿ ಸರಿಯಾದ ಮಾರ್ಗದರ್ಶನ ಪಡೆದುಕೊಳ್ಳಿ’ ಎಂದು ಜಿಎಂಐಟಿ ಪ್ರಾಂಶುಪಾಲ ಪ್ರೊ. ಪಿ. ಪ್ರಕಾಶ್‌ ಸಲಹೆ ನೀಡಿದರು.

ಈಗ ಪಡೆಯುವ ಮಾರ್ಗದರ್ಶನ, ಕಷ್ಟ–ಸುಖಗಳ ಅನುಭವ, ಹೆತ್ತವರು ನೋಡಿಕೊಳ್ಳುವ ವಿಧಾನಗಳೇ ಮಕ್ಕಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಎಲ್ಲ ಕಡೆಗಳಲ್ಲಿ ಮಾರ್ಗದರ್ಶನ ನೀಡುವವರು ಇರುತ್ತಾರೆ. ಒಬ್ಬರಿಗಿಂತ ಒಬ್ಬರ ಸಲಹೆಗಳು ಭಿನ್ನವಾಗಿರುತ್ತವೆ. ಹಾಗಾಗಿ ಗೊಂದಲಗಳು ಸೃಷ್ಟಿಯಾಗಿರುತ್ತವೆ. ಅದಕ್ಕಾಗಿ ಸರಿಯಾದ ಮಾಹಿತಿ ನೀಡುವುದಕ್ಕಾಗಿಯೇ ‘ಪ್ರಜಾವಾಣಿ–ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಯವರು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದು ಶ್ಲಾಘಿಸಿದರು.

ಕಾಮೆಡ್‌ ಕೆ ಮತ್ತು ಇತರ ವಿಚಾರಗಳನ್ನು ಅವರು ಪವರ್‌ಪಾಯಿಂಟ್‌ ಮೂಲಕ ತಿಳಿಸಿದರು. ಅದರ ವಿವರಗಳು ಹೀಗಿವೆ:

ಯಾವ ಕಾಲೇಜು ಉತ್ತಮ ಎಂದು ಹುಡುಕುತ್ತೀರಿ. ಅದರ ಬದಲು ಉತ್ತಮ ಕಾಲೇಜು ಸೇರಲು ಏನು ಮಾಡಬೇಕು ಎಂದು ಯೋಚಿಸಬೇಕು. ಶುಲ್ಕ ಎಷ್ಟು ಎಂದು ನೋಡುವ ಬದಲು ಕಾಲೇಜಿನವರು ಪಡೆಯುವ ಶುಲ್ಕಕ್ಕೆ ಏನು ಸೌಲಭ್ಯ ನೀಡುತ್ತಾರೆ ಎಂಬುದನ್ನು ತಿಳಿದುಕೊಳ್ಳಬೇಕು. ಅಲ್ಲಿ ಉದ್ಯೋಗದ ಆಯ್ಕೆ ಹೇಗಿದೆ ಎಂಬುದರ ಬದಲು ನಾವು ಹೇಗೆ ಉದ್ಯೋಗ ಹಿಡಿಯುವುದು ಎಂದು ಯೋಚಿಸಬೇಕು.

ಡಿಜಿಟಲ್‌ ಪ್ರಪಂಚ

ಕೃಷಿ, ರಾಜಕೀಯ, ವ್ಯವಹಾರ, ಕೈಗಾರಿಕೆ ಹೀಗೆ ಎಲ್ಲ ರಂಗಗಳು ಈಗ ಡಿಜಿಟಲ್‌ ಆಗಿವೆ. ಹಾಗಾಗಿ ಡಿಜಿಟಲ್‌ ಕೌಶಲ ಇದ್ದಾಗ ಹೆಚ್ಚು ಅವಕಾಶಗಳು ಸಿಗುತ್ತವೆ. ವೃತ್ತಿಪರ ಕೋರ್ಸ್‌ಗಳಾದ ಎಂಜಿನಿಯರಿಂಗ್‌, ವೈದ್ಯಕೀಯ, ಡೆಂಟಲ್‌, ಫಾರ್ಮಸಿ ಮುಂತಾದವುಗಳು, ವೃತ್ತಿಪರವಲ್ಲದ ಕೋರ್ಸ್‌ಗಳಾದ ಸಿವಿಲ್‌, ಮೆಕ್ಯಾನಿಕ್‌, ಎಲೆಕ್ಟ್ರಾನಿಕ್ಸ್‌, ವಿಶೇಷ ಕೋರ್ಸ್‌ಗಳಾದ ಆ್ಯರೊಟೆಕ್‌, ಬಾಹ್ಯಾಕಾಶ ಹೀಗೆ ನಾನಾ ವಿಭಾಗಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಯಾವುದೇ ಕ್ಷೇತ್ರ ಸಣ್ಣದಲ್ಲ. ಎಲ್ಲದರಲ್ಲಿಯೂ ಉದ್ಯೋಗ ಅವಕಾಶಗಳಿವೆ.

ಕೆಇಎ–ಸಿಇಟಿ, ಎಐಇಇಇ/ಜೆಇಇ, ಕಾಮೆಡ್‌–ಕೆ ಪ್ರವೇಶ ಪರೀಕ್ಷೆಗಳನ್ನು ಬರೆಯುವ ಮೂಲಕ ಕಾಲೇಜುಗಳಿಗೆ ಅಡ್ಮಿಷನ್‌ ಪಡೆಯಬಹುದು. ಜ್ಞಾನ, ಕೌಶಲ, ವ್ಯಕ್ತಿತ್ವ, ನಡವಳಿಕೆ, ವೃತ್ತಿಪರತೆಯ ಮೂಲಕ ಯಶಸ್ಸು ಪಡೆಯಲು ಸಾಧ್ಯ.

ವಿಷಯದ ಆಯ್ಕೆ ಮೊದಲು ಯೋಚಿಸಿ

ಮಕ್ಕಳಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆ ಎಂಬುದನ್ನು ಮೊದಲು ಗಮನಿಸಬೇಕು. ವಿಜ್ಞಾನ, ಗಣಿತದಲ್ಲಿ ಸಾಮಾನ್ಯ ಜ್ಞಾನ ಇದೆಯೇ ನೋಡಬೇಕು. ಉತ್ಸಾಹ ತುಂಬಬಲ್ಲ ಕೋರ್ಸ್‌ ಆಯ್ಕೆ ಮಾಡಬೇಕು. ಮಕ್ಕಳು ಈವರೆಗೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದ ಕ್ಷೇತ್ರಗಳು ಯಾವುವು ಎಂಬುದನ್ನು ಗುರುತಿಸಬೇಕು. ಆರ್ಥಿಕ ಹಿನ್ನೆಲೆ ನೋಡಿಕೊಳ್ಳಬೇಕು. ಇದೆಲ್ಲದರ ಜತೆಗೆ ಸಿಇಟಿ ರ‍್ಯಾಂಕ್‌ ಮೇಲೆ ನಿಮ್ಮ ಮುಂದಿನ ಆಯ್ಕೆ ಇರುತ್ತದೆ.

ಎಂಜಿನಿಯರಿಂಗ್ ಪದವೀಧರ ಆಗುವುದು ಬೇರೆ, ಎಂಜಿನಿಯರ್‌ ಆಗುವುದು ಬೇರೆ. ಉತ್ತೀರ್ಣರಾಗಿ ಅಂಕಪಟ್ಟಿ ಪಡೆದರೆ ಪದವೀಧರ ಆಗಿಬಿಡಬಹುದು. ಆದರೆ ಎಂಜಿನಿಯರ್‌ ಆಗಬೇಕಿದ್ದರೆ ಕಲಿತಿರುವುದನ್ನು ಅನುಷ್ಠಾನಕ್ಕೆ ತಂದು ತೋರಿಸಬೇಕು. ಅದೇ ರೀತಿ ವಿಜ್ಞಾನಿ, ಸಂಶೋಧಕ ಯಾವುದು ಆಗಬೇಕು ಎಂಬುದನ್ನು ಮೊದಲೇ ನಿರ್ಧರಿಸಬೇಕು.

ಕಾಲೇಜಿನ ಗುಣಮಟ್ಟ ಹೇಗೆಂದು ನೋಡುವುದು ಹೇಗೆ?

ಪಡೆಯುವ ಶುಲ್ಕ ಮತ್ತು ನೀಡುವ ಸೌಲಭ್ಯಗಳನ್ನು ನೋಡಬೇಕು. ಅಲ್ಲಿನ ಉದ್ಯೋಗಿಗಳು, ವಿದ್ಯಾರ್ಥಿಗಳ ಜತೆ ಮಾತನಾಡಬೇಕು. ಉದ್ಯಮ, ಸಮಾಜ, ಹಳೇವಿದ್ಯಾರ್ಥಿಗಳ ಜತೆಗೆ ಸಂಬಂಧ ಹೇಗಿದೆ ಎಂಬುದನ್ನು ಗಮನಿಸಬೇಕು. ವಿಶ್ವವಿದ್ಯಾಲಯ, ಗುಣಮಟ್ಟ ಪರಿಶೀಲನಾ ಸಮಿತಿ ನೀಡುವ ಸ್ಥಾನ ನೋಡಬೇಕು.

ವೆಬ್‌ಸೈಟ್‌ನಲ್ಲಿ ಕಾಲೇಜುಗಳನ್ನು ನೋಡಿ ಮರುಳಾಗಬೇಡಿ. ಭೇಟಿ ನೀಡಿ, ಫಲಿತಾಂಶದ ದಾಖಲೆ ನೋಡಿ. ಸಾಧನೆ, ಅಲ್ಲಿ ಕಲಿತವರಿಗೆ ಸಿಕ್ಕಿರುವ ಉದ್ಯೋಗಗಳನ್ನು ತಿಳಿದುಕೊಳ್ಳಿ.

ಹೆತ್ತವರು ಏನು ಮಾಡಬೇಕು

ಮಕ್ಕಳು ಕಾಲೇಜಿಗೆ ಸೇರಿಸಿದರೆ ಜವಾಬ್ದಾರಿ ಮುಗಿಯಿತು ಎಂದು ಹೆತ್ತವರು ತಿಳಿಯಬಾರದು. ಮಕ್ಕಳನ್ನು ಗಮನಿಸುತ್ತಿರಬೇಕು.

ಮೊಬೈಲ್‌ ಚಾಟಿಂಗ್‌ನಲ್ಲಿ ಮುಳುಗಿದ್ದಾರಾ ನೋಡಬೇಕು. ಅವರ ಸ್ನೇಹಿತರು ಯಾರು ಎಂಬುದು ನಿಗಾ ಇರಲಿ. ಸ್ನೇಹಿತರ ಜತೆಗೆ ಏನು ಚರ್ಚೆ ಮಾಡುತ್ತಾರೆ? ಕಲಿಕೆಗಾಗಿ ಗುಂಪು ಚರ್ಚೆ ಎಂದು ಹೇಳಿ ಏನು ಚರ್ಚೆ ಮಾಡುತ್ತಿದ್ದಾರೆ ಎಂಬುದರ ಕಡೆ ಗಮನವಿರಲಿ. ವಿರಾಮದ ಸಮಯದಲ್ಲಿ ಎಲ್ಲಿ ಹೋಗುತ್ತಾರೆ? ಏನು ಮಾಡುತ್ತಾರೆ ಎಂದು ತಿಳಿದುಕೊಳ್ಳಿ. ಯಾವುದನ್ನೂ ಅವರು ನೇರವಾಗಿ ಹೇಳುವುದಿಲ್ಲ. ಉಪಾಯದಿಂದ ತಿಳಿಯಬೇಕು. ಉತ್ತಮ ಆರೋಗ್ಯದ ಕಡೆಗೂ ನಿಗಾ ಇರಬೇಕು.

ಚಿಂತೆ ಬಿಡಿ, ಗೊಂದಲ ಪರಿಹರಿಸಿಕೊಳ್ಳಿ: ನಿರಂಜನ್‌

ಸಿಇಟಿ, ನೀಟ್ ಪರೀಕ್ಷೆ ಬರೆದಿದ್ದರೆ ಚಿಂತೆ ಬಿಡಿ. ಪ್ರತಿ ಜಿಲ್ಲೆಯಲ್ಲಿ ಕೆಇಎ ಸಹಾಯವಾಣಿ ಕೇಂದ್ರ (ನೋಡಲ್‌ ಕೇಂದ್ರ) ತೆರೆಯಲಾಗಿದೆ. ಗೊಂದಲವಿದ್ದರೆ ಪರಿಹರಿಸಿಕೊಳ್ಳಿ. ಆನ್‌ಲೈನ್‌ ಮೂಲಕ ಸರಿಯಾಗಿ ಮಾಹಿತಿ ತುಂಬಿ ಎಂದು ದಾವಣಗೆರೆ ಮತ್ತು ಚಿತ್ರದುರ್ಗ ಸಿಇಟಿ ವಿಭಾಗದ ಮುಖ್ಯಸ್ಥ ಜಿ.ಸಿ.ನಿರಂಜನ್ ಸಲಹೆ ನೀಡಿದರು.

ಸಿಇಟಿ, ನೀಟ್‌ ಪರೀಕ್ಷೆಗಳು ಮುಗಿದಿವೆ ಎಂದು ಮದುವೆ, ಹುಟ್ಟಿದ ಹಬ್ಬ, ಸಂಬಂಧಿಕರ ಮನೆ ಎಂದು ಸುತ್ತುವುದನ್ನು ಸ್ವಲ್ಪ ಕಡಿಮೆ ಮಾಡಿ ಪರೀಕ್ಷೆಯ ನಂತರದ ಪ್ರಕ್ರಿಯೆಗಳ ಬಗ್ಗೆ ತಯಾರಿ ನಡೆಸಿ ಎಂದು ಹೆತ್ತವರಿಗೆ ಕಿವಿಮಾತು ಹೇಳಿದರು.

ಸಿಇಟಿ ಬರೆದ ಮಕ್ಕಳಿಗೆ ನಿರಂಜನ್‌ ಸಲಹೆ ನೀಡುತ್ತಾ ಹೋದರು. ಅವುಗಳು ಹೀಗಿವೆ.

ಯಾವ ದಾಖಲಾತಿಗಳಿರಬೇಕು?

ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಿದ ಮೇಲೆ ಅಗತ್ಯ ಬಿದ್ದರೆ ಎಷ್ಟು ಬಾರಿ ಬೇಕಾದರೂ ತಿದ್ದುಪಡಿ ಮಾಡಲು ಅವಕಾಶ ಇದೆ. ಆದರೆ ಅಂತಿಮ ಮಾಹಿತಿ ತುಂಬಿದ ಬಳಿಕ ಅದರ ಕಾಪಿಯನ್ನು ಇಟ್ಟುಕೊಳ್ಳಬೇಕು.

ಶುಲ್ಕ ತುಂಬಿದ ಚಲನ್‌ನ ಪ್ರತಿ ಇರಬೇಕು.

ಎಸ್ಸೆಸ್ಸೆಲ್ಸಿ ಮೂಲ ಅಂಕಪಟ್ಟಿ ಇರಬೇಕು.

ದ್ವಿತೀಯ ಪಿಯು ಅಥವಾ ಪ್ಲಸ್‌ ಟು ಅಂಕಪಟ್ಟಿ ಇರಬೇಕು. ಇದನ್ನು ಸೈಬರ್‌ ಕೇಂದ್ರದಲ್ಲಿ ಡೌನ್‌ಲೋಡ್‌ ಮಾಡಿ ಪ್ರಾಂಶುಪಾಲರ ಸಹಿ ಮಾಡಿಸಿದರೆ ಆಗುವುದಿಲ್ಲ. ಕಾಲೇಜಿನಲ್ಲಿಯೇ ಬರೆದು ಅಥವಾ ಟೈಪ್‌ ಮಾಡಿ ಸಹಿ ಮಾಡಿರಬೇಕು. ಅಷ್ಟರ ಒಳಗೆ ಪರೀಕ್ಷಾ ಮಂಡಳಿ ಮೂಲಪ್ರತಿ ನೀಡಿದರೆ ಈ ಸಮಸ್ಯೆಗಳು ಇರುವುದಿಲ್ಲ.

ಪಿಯು ವರೆಗಿನ ಶಿಕ್ಷಣದಲ್ಲಿ ಕನಿಷ್ಠ ಏಳು ವರ್ಷ ಓದಿರುವ ಬಗ್ಗೆ ಸ್ಟಡಿ ಸರ್ಟಿಫಿಕೆಟ್‌ (ಓದು ದೃಢೀಕರಣಪತ್ರ) ಇರಬೇಕು. ಅದು ಬಿಇಒ ಅಥವಾ ಡಿಡಿಪಿಐ ಸಹಿ ಹೊಂದಿರಬೇಕು.

ಇವಿಷ್ಟು ಮೂಲ‍ದಾಖಲೆಗಳು ಮತ್ತು ಅವುಗಳ ಛಾಯಾ ಪ್ರತಿಗಳನ್ನು ಎಲ್ಲರೂ ಹೊಂದಿರಬೇಕು. ಮೂಲದಾಖಲೆಗಳು ಪರಿಶೀಲನೆಗೆ ಹಾಗೂ ಛಾಯಾ ಪ್ರತಿಗಳು ಸಲ್ಲಿಸುವುದಕ್ಕಾಗಿ ಬೇಕಾಗುತ್ತವೆ.

ಇವಲ್ಲದೇ ವಿವಿಧ ಮೀಸಲಾತಿಗಳನ್ನು ಪಡೆಯುವವರು ಅದಕ್ಕೆ ಸರಿಯಾದ ದಾಖಲೆಗಳನ್ನು ಒದಗಿಸಬೇಕು.

1ರಿಂದ 10ನೇ ತರಗತಿವರೆಗೆ ಗ್ರಾಮೀಣ ಪ್ರದೇಶದಲ್ಲಿ ಓದಿದ್ದು, ಅದನ್ನು ದಾಖಲಿಸಿದರೆ ಗ್ರಾಮೀಣ ಪ್ರಮಾಣಪತ್ರ ಒದಗಿಸಿಬೇಕು. ಕನ್ನಡ ಮಾಧ್ಯಮದಲ್ಲಿ 10ನೇ ತರಗತಿವರೆಗೆ ಓದಿದ್ದರೆ ಅದರ ಪ್ರಮಾಣಪತ್ರ ಒದಗಿಸಬೇಕು. ಇವೆರಡಕ್ಕೂ ಬಿಇಒ ಅಥವಾ ಡಿಡಿಪಿಐ ಸಹಿ ಇರಬೇಕು.

ಎಸ್‌ಸಿ, ಎಸ್‌ಟಿ ಮೀಸಲಾತಿ ಪಡೆಯಲು ಜಾತಿ ಪ್ರಮಾಣ ಪತ್ರ ಹೊಂದಿರಬೇಕು. ಜತೆಗೆ ಆದಾಯ ಪ್ರಮಾಣ ಪತ್ರವನ್ನೂ ಸಲ್ಲಿಸಬೇಕು. ಅದು ಐದು ವರ್ಷದ ಅವಧಿಯೊಳಗಿನದ್ದಾಗಿರಬೇಕು. ಹಿಂದುಳಿದ ವರ್ಗವಾಗಿದ್ದರೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಒಟ್ಟಿಗೆ ಇರುತ್ತದೆ. ಇದೂ ಐದು ವರ್ಷದೊಳಗಿದ್ದಾಗಿರಬೇಕು.

371 ‘ಜೆ’ ಕೋಟದ ಸೌಲಭ್ಯ ಪಡೆಯಬೇಕಿದ್ದರೆ ಆ್ಯನೆಕ್ಷರ್‌ ‘ಎ’ ಇರಬೇಕು. ಉಪ ವಿಭಾಗಾಧಿಕಾರಿಯೇ ಅದನ್ನು ನೀಡಿರಬೇಕು. ಆ್ಯನೆಕ್ಷರ್‌ ‘ಬಿ’ ಅನ್ನು ಕೆಲವರು ತರುತ್ತಾರೆ. ಅದು ಆಗುವುದಿಲ್ಲ.

ಇವೆಲ್ಲವುಗಳ ಮೂಲ ದಾಖಲೆ ಮತ್ತು ಛಾಯಾ ಪ್ರತಿಗಳನ್ನು ತರಬೇಕಾಗುತ್ತದೆ.

ಪರಿಶೀಲನೆಗಳು ನಡೆದ ಬಳಿಕ ಪರಿಶೀಲನಾ ಸ್ಲಿಪ್‌ ಕೊಡಲಾಗುತ್ತದೆ. ಎಲ್ಲ ದಾಖಲೆಗಳು ಸರಿ ಇವೆಯೇ ಎಂದು ನೋಡಿದ ಬಳಿಕ ವಿದ್ಯಾರ್ಥಿಯು ಆ ಸ್ಲಿಪ್‌ಗೆ ಸಹಿ ಹಾಕಿ ಅಧಿಕಾರಿಗಳಿಗೆ ಕೊಡಬೇಕು. ಅಧಿಕಾರಿಗಳು ಸಹಿ ಹಾಕಿ ವಿದ್ಯಾರ್ಥಿಗೆ ವಾಪಸ್‌ ನೀಡುತ್ತಾರೆ.

ಪರಿಶೀಲನೆಗಳು ಮುಗಿದರೆ ವಿದ್ಯಾರ್ಥಿಗೆ ಒಂದು ‘ಯುನಿಕ್‌ ಐಡಿ’ ನೀಡಲಾಗುತ್ತದೆ. ಅದಕ್ಕೆ ಪಾಸ್‌ವರ್ಡ್‌ ಇರುತ್ತದೆ. ದಯವಿಟ್ಟು ನಿಮ್ಮ ಐಡಿ ಮತ್ತು ಪಾಸ್‌ವರ್ಡ್‌ ಅನ್ನು ಯಾರಿಗೂ ಕೊಡಬೇಡಿ.

ಬಹು ರ‍್ಯಾಂಕ್‌ಗಳಿಗೆ ಅವಕಾಶ

ಎಂಜಿನಿಯರಿಂಗ್‌, ಆರ್ಕಿಟೆಕ್ಚರ್‌, ಫಾರ್ಮಾ ಸೈನ್ಸ್‌, ಫಾರ್ಮಸಿ ಕೋರ್ಸ್‌ ಹೀಗೆ ಎಲ್ಲ ನಾಲ್ಕು ವಿಷಯಗಳಲ್ಲಿ ಸಿಇಟಿ ಬರೆದಿದ್ದರೆ ಆಗ ನಾಲ್ಕು ಬೇರೆ ಬೇರೆ ರ‍್ಯಾಂಕ್‌ಗಳನ್ನು ಪಡೆದಿರುತ್ತಾರೆ. ಉತ್ತಮ ರ‍್ಯಾಂಕ್‌ ಪಡೆದಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿದ ದಾಖಲೆಗಳೇ ಉಳಿದವುಗಳಿಗೂ ಅನ್ವಯ ಆಗುತ್ತದೆ. ಅದಕ್ಕೆ ಮತ್ತೊಮ್ಮೆ ಪರಿಶೀಲನೆ ಅಗತ್ಯ ಇಲ್ಲ.

ಕಾಲೇಜುಗಳು ಯಾವುದಾಗಬಹುದು ಎಂಬ ಪಟ್ಟಿ ಕಾಣಿಸುತ್ತದೆ. ನಿಮ್ಮ ರ‍್ಯಾಂಕ್‌ಗೆ ಹೊಂದುವ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಅದರ ಕೋಡ್‌ ಸರಿಯಾಗಿ ದಾಖಲಿಸಿ. ಉದಾಹರಣೆಗೆ ಎಸ್‌ಐಟಿ ಆಯ್ಕೆ ಮಾಡಿದರೆ ಸಿದ್ದಗಂಗಾ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯೂ ಆಗಿರಬಹುದು, ಶ್ರೀದೇವಿ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯೂ ಆಗಿರಬಹುದು. ನಿಮ್ಮ ಆಯ್ಕೆಯ ಸಂಸ್ಥೆ ಯಾವುದು ಎಂಬುದನ್ನು ಸರಿಯಾಗಿ ಗುರುತು ಮಾಡದಿದ್ದರೆ ಅದಲು ಬದಲಾಗಬಹುದು.

ನಾಲ್ಕು ಆಯ್ಕೆಗಳು

ನಿಮ್ಮ ರ‍್ಯಾಂಕ್‌ಗೆ ಅನುಗುಣವಾಗಿ ನೀವು ಆಯ್ಕೆ ಮಾಡಿರುವ ವಿದ್ಯಾಸಂಸ್ಥೆಗಳಲ್ಲಿ ಒಂದನ್ನು ನೀಡಲಾಗುತ್ತದೆ. ಆಗ ಮತ್ತೆ ನಿಮಗೆ ನಾಲ್ಕು ಆಯ್ಕೆಗಳಿರುತ್ತವೆ.

ಸಿಕ್ಕಿರುವ ಸಂಸ್ಥೆಯು ನಿಮಗೆ ತೃಪ್ತಿ ತಂದಿದ್ದರೆ ಮೊದಲ ಆಯ್ಕೆಯನ್ನು ಒತ್ತಿ. ಚಲನ್‌ ಕಟ್ಟಿಬಿಡಿ. ಪ್ರವೇಶ ಪಡೆದ ಬಳಿಕ ಕೆಇಎ ವೆಬ್‌ಸೈಟ್‌ಗೆ ಹೋಗಿ ‘ಅಡ್ಮಿಷನ್‌ ಆಗಿದೆ’ ಎಂಬ ಆಯ್ಕೆಯನ್ನು ಒತ್ತಿದರೆ ಮುಗಿಯಿತು.

ಪೂರ್ತಿ ತೃಪ್ತಿ ತಂದಿಲ್ಲ ಎಂದಾದರೆ ಆಗ ಎರಡನೇ ಆಯ್ಕೆ ಒತ್ತಬೇಕು. ಬೇರೆ ಸಂಸ್ಥೆಗಳು ಸಿಗುವುದೇ ಎಂಬುದನ್ನು ನೋಡುವಿರಾದರೆ ಚಲನ್‌ ಕಟ್ಟಬೇಕು. ಆದರೆ ಪ್ರವೇಶ ಪಡೆಯುವುದಿಲ್ಲ. ಬದಲಾಗಿ ಈ ಸಂಸ್ಥೆಯನ್ನು ಇಟ್ಟುಕೊಂಡೇ ಇದಕ್ಕಿಂತ ಉತ್ತಮವಾದುದು ಸಿಗುವುದೇ ಎಂದು ಕಾದು ಹುಡುಕಬೇಕು. ಸಿಕ್ಕಿಲ್ಲ ಅಂದರೆ ಮೊದಲು ನೀಡಿದ್ದು ಕಾಯಂ ಆಗುತ್ತದೆ.

ಏನೂ ತೃಪ್ತಿ ತಂದಿಲ್ಲ ಎಂದರೆ ಅದನ್ನು ಬಿಟ್ಟುಕೊಡಬೇಕು. ಆಗ ಮತ್ತೆ ಎಲ್ಲವೂ ತೆರೆದುಕೊಳ್ಳುತ್ತವೆ. ಅದರಲ್ಲಿ ನಿಮ್ಮ ಆಯ್ಕೆಗೆ ಸರಿಯಾದುದು ಸಿಗುತ್ತದೆಯೇ ಎಂದು ಕಾಯಬೇಕು. ಇದಕ್ಕೆ ಮೂರನೇ ಆಯ್ಕೆ ಒತ್ತಬೇಕು.

ಸಿಇಟಿಯ ಸಹವಾಸವೇ ಬೇಡ ಎಂದು ಹೊರಗೆ ಹೋಗುವುದಿದ್ದರೆ ನಾಲ್ಕನೇ ಆಯ್ಕೆ ಒತ್ತಬೇಕು.

ನೀಟ್‌ ನಂತರ ಆಯ್ಕೆ ಪ್ರಕ್ರಿಯೆ ಹೇಗೆ?

ಸಿಇಟಿ ಮತ್ತು ನೀಟ್‌ ಎರಡನ್ನೂ ಬರೆದಿದ್ದರೆ ಸಿಇಟಿ ಪರಿಶೀಲನೆ ಮಾಡುವಾಗಲೇ ನೀಟ್‌ನ ರಿಜಿಸ್ಟರ್‌ ನಂಬರ್‌ ನೀಡಿದರೆ ಸಾಕು. ಮತ್ತೊಮ್ಮೆ ನೀಟ್‌ ಪರಿಶೀಲನೆ ಅಗತ್ಯ ಇರುವುದಿಲ್ಲ. ನೀಟ್‌ ಮಾತ್ರ ಬರೆದಿದ್ದರೆ ಸಿಇಟಿಯಂತೆ ಇಲ್ಲೂ ಎಲ್ಲ ಪ್ರಕ್ರಿಯೆಗಳು ನಡೆಯುತ್ತವೆ.

ನೀಟ್‌ನಲ್ಲಿ ಶೇ 15ರಷ್ಟು ಸರ್ಕಾರಿ ಕಾಲೇಜುಗಳಲ್ಲಿ ದೇಶದ ಯಾವುದೇ ಭಾಗದಲ್ಲಿ ಅವಕಾಶ ಇದೆ. ಉಳಿದ ಶೇ 85 ಸರ್ಕಾರಿ ಸೀಟುಗಳು ರಾಜ್ಯದ ಒಳಗಿನವರಿಗೇ ಮೀಸಲು.

ಖಾಸಗಿ ಕಾಲೇಜಿನಲ್ಲಿ ಸರ್ಕಾರಿ ಸೀಟುಗಳ ಶೇ 40ರಲ್ಲಿ ಅರ್ಧದಷ್ಟನ್ನು ಆಯಾ ರಾಜ್ಯಕ್ಕೆ, ಉಳಿದ ಅರ್ಧವನ್ನು ಇತರರಿಗೆ ನೀಡಲಾಗುತ್ತದೆ. ಖಾಸಗಿ ಸೀಟುಗಳನ್ನು ಆಯಾ ಮ್ಯಾನೇಜ್‌ಮೆಂಟ್‌ ನೀಡುತ್ತದೆ. ಅದರ ಶುಲ್ಕ ಬಹಳ ಹೆಚ್ಚಾಗಿರುತ್ತದೆ.

ಪ್ರವಾಸಕ್ಕೆ ಬಂದಂತೆ ಬರಬೇಡಿ

‘ದಾಖಲೆಗಳನ್ನು ಪರಿಶೀಲನೆ ನಡೆಸುವ ಸಂದರ್ಭದಲ್ಲಿ ವಿದ್ಯಾರ್ಥಿಗಳ ಜತೆಗೆ ಹೆತ್ತವರೂ ಬರುತ್ತಾರೆ. ಹೆತ್ತವರು ಬರುವಾಗ ಪ್ರವಾಸಕ್ಕೆ ಹೊರಟವರಂತೆ ನಾಲ್ಕೈದು ಬ್ಯಾಗ್‌ ಹಿಡಿದುಕೊಂಡು ಬರುತ್ತಾರೆ. ಇದರಿಂದ ವಿದ್ಯಾರ್ಥಿಗಳನ್ನು ನಿಯಂತ್ರಿಸುವುದಕ್ಕಿಂತ ಹೆತ್ತವರನ್ನು ನಿಯಂತ್ರಿಸುವುದೇ ಕಷ್ಟವಾಗಿ ಬಿಡುತ್ತದೆ. ಅದರಲ್ಲೂ ಹಿರಿಯ ನಾಗರಿಕರಿಗೆ ಹೇಳುವಂತೆಯೂ ಇಲ್ಲ, ಬಿಡುವಂತೆಯೂ ಇಲ್ಲ. ಅದಕ್ಕಾಗಿ ಪರಿಶೀಲನೆಗೆ ಬರುವಾಗ ಗಂಭೀರವಾಗಿ ಬನ್ನಿ. ವಿದ್ಯಾರ್ಥಿಗಳನ್ನು ಪರಿಶೀಲನಾ ಕೇಂದ್ರದಲ್ಲಿ ಬಿಟ್ಟು ನೀವು ಕ್ಯಾಂಪಸ್‌ನಲ್ಲಿ ಅಥವಾ ಹೊರಗೆ ಸುತ್ತಾಡಿಕೊಂಡು ಬನ್ನಿ. ದಯವಿಟ್ಟು ಪರಿಶೀಲನೆಗೆ ತೊಂದರೆಯಾಗುವಂತೆ ವರ್ತಿಸಬೇಡಿ’ ಎಂದು ಹೆತ್ತವರಲ್ಲಿ ಜಿ.ಸಿ. ನಿರಂಜನ್‌ ಕೇಳಿಕೊಂಡರು.

‘ವೆಬ್‌ಸೈಟ್‌ನಲ್ಲಿ ಹಾಕಿದ ಕಾಲೇಜುಗಳ ಫೋಟೊಗಳಲ್ಲಿ ಎಲ್ಲವೂ ಸುಂದರವಾಗಿ ಇರುತ್ತವೆ. ಕಾಲೇಜು, ಕ್ಯಾಂಪಸ್‌, ವಸತಿಗೃಹ ಎಲ್ಲವನ್ನೂ ಅದ್ಭುತ ಎಂಬಂತೆ ನೀಡಿರುತ್ತಾರೆ. ಯಾವುದಕ್ಕೂ ಒಮ್ಮೆ ಹೋಗಿ ಆಯ್ಕೆ ಮಾಡಬಯಸುವ ಕಾಲೇಜನ್ನು ನೋಡಿಕೊಂಡು ಬನ್ನಿ’ ಎಂದು ತಿಳಿಸಿದರು.

ಹಿಂದಿನ ಕಷ್ಟ ಈಗಿಲ್ಲ

ಹಿಂದೆ ಸಿಇಟಿ ರ‍್ಯಾಂಕ್‌ ಪಡೆದ ಮಕ್ಕಳ ಜತೆಗೆ ಹೆತ್ತವರು ಹಿಂದಿನ ದಿನವೇ ಹೋಗಬೇಕಿತ್ತು. ಎಲ್ಲೋ ಫುಟ್‌ಪಾತ್‌ನಲ್ಲಿ ಮಲಗಿ ಬೆಳಿಗ್ಗೆ ಕೇಂದ್ರ ಎಲ್ಲಿದೆ ಎಂದು ಹುಡುಕಬೇಕಿತ್ತು. ಆಮೇಲೆ ಯಾವುದೋ ಮೂಲೆಯಲ್ಲಿರುವ ಕಾಲೇಜಲ್ಲಿ ಸೀಟು ಸಿಗುತ್ತದೆ. ಅಲ್ಲಿಗೆ ಹೋಗಬೇಕಿತ್ತು. ಈಗ ಹಾಗಿಲ್ಲ. ದಾಖಲೆ ಪರಿಶೀಲನೆ ಹೊರತುಪಡಿಸಿ ಉಳಿದೆಲ್ಲ ಕೆಲಸಗಳನ್ನು ಮನೆಯಲ್ಲಿಯೇ ಕುಳಿತು ಆನ್‌ಲೈನ್‌ ಮೂಲಕ ಮಾಡಲಾಗುತ್ತದೆ ಎಂದು ನಿರಂಜನ್‌ ನೆನಪು ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.