ADVERTISEMENT

ಜೈವಿಕ ತಂತ್ರಜ್ಞಾನಕ್ಕೆ ಬೈಸೆಪ್ ಬಲ

ಡಾ.ಮನೋಜ ಗೋಡಬೋಲೆ
Published 12 ಮಾರ್ಚ್ 2019, 19:30 IST
Last Updated 12 ಮಾರ್ಚ್ 2019, 19:30 IST
Female Scientist Working in The Lab, Using Computer Screen
Female Scientist Working in The Lab, Using Computer Screen   

ಭಾರತದ ಜೈವಿಕ ತಂತ್ರಜ್ಞಾನ ಮಾರುಕಟ್ಟೆಯಲ್ಲಿ ಕರ್ನಾಟಕದ ಪಾಲು ಸುಮಾರು ಶೇ 35. ವರದಿಗಳ ಪ್ರಕಾರ ಜೈವಿಕ ತಂತ್ರಜ್ಞಾನ ಕ್ಷೇತ್ರವು ಪ್ರತಿ ವರ್ಷ 10–15ರಷ್ಟು ಗತಿಯಲ್ಲಿ ಬೆಳೆಯುತ್ತಿದೆ. ಇದರರ್ಥ, ಪ್ರಸ್ತುತವಿರುವ ಸುಮಾರು 50 ಸಾವಿರ ಉದ್ಯೋಗಾವಕಾಶಕ್ಕೆ ವರ್ಷಂಪ್ರತಿ ಶೇ 15–20ರಷ್ಟು ಉದ್ಯೋಗಗಳು ಹೆಚ್ಚುವರಿಯಾಗಿ ಸೇರ್ಪಡೆಗೊಳ್ಳುತ್ತಿವೆ. ಕರ್ನಾಟಕ ರಾಜ್ಯವು ಜೈವಿಕ ತಂತ್ರಜ್ಞಾನ ಕ್ಷೇತ್ರದ ರಾಜಧಾನಿ ಎನಿಸಿಕೊಂಡಿದ್ದು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ 18 ಸಾವಿರ ಜನರಿಗೆ ಉದ್ಯೋಗವನ್ನು ನೀಡಿದೆ. ರಾಜ್ಯದ ಬಹುತೇಕ ಎಲ್ಲಾ ವಿಶ್ವವಿದ್ಯಾಲಯಗಳಲ್ಲದೇ ಹಲವಾರು ಸ್ವಾಯತ್ತ ಹಾಗೂ ಖಾಸಗೀ ಶಿಕ್ಷಣ ಸಂಸ್ಥೆಗಳು ಜೈವಿಕ ತಂತ್ರಜ್ಞಾನವನ್ನು ಪದವಿ ಮತ್ತು ಸ್ನಾತಕೋತ್ತರ ಪದವಿ ತರಗತಿಗಳಲ್ಲಿ ಬೋಧಿಸುತ್ತಿವೆ. ಅಷ್ಟೇ ಅಲ್ಲದೇ ಎಂಜಿನಿಯರಿಂಗ್‌ನಲ್ಲಿಯೂ ಜೈವಿಕ ತಂತ್ರಜ್ಞಾನವನ್ನು ಬೋಧಿಸಲಾಗುತ್ತಿದೆ.

ಆದರೆ, ಬೇಡಿಕೆಗೆ ಅನುಗುಣವಾಗಿ ನುರಿತ ತಂತ್ರಜ್ಞರ ಕೊರತೆ ಬಯೋಟೆಕ್ ಕಂಪನಿಗಳನ್ನು ಕಾಡುತ್ತಿದೆ. ಬೇರೆ ವಿಷಯಗಳಿಗೆ ಹೋಲಿಸಿದರೆ ಜೈವಿಕ ತಂತ್ರಜ್ಞಾನ ಬೋಧನೆಗೆ ವೆಚ್ಚ ಅಧಿಕ. ಸರಿಯಾದ ಪ್ರಾಯೋಗಿಕ ತರಬೇತಿಯನ್ನು ನೀಡಲು ಸುಸಜ್ಜಿತ ಪ್ರಯೋಗಾಲಯದ ಸ್ಥಾಪನೆ ಅನಿವಾರ್ಯ. ಆದರೆ, ಬೆರಳೆಣಿಕೆಯ ಶಿಕ್ಷಣ ಸಂಸ್ಥೆಗಳನ್ನು ಹೊರತುಪಡಿಸಿದರೆ ಉಳಿದೆಡೆ ಸೂಕ್ತ ಪ್ರಯೋಗಾಲಯಗಳೇ ಲಭ್ಯವಿಲ್ಲ. ಹೀಗಾಗಿ ವಿದ್ಯಾರ್ಥಿಗಳಿಗೆ ತರಗತಿಯ ಬೋಧನೆ ಸರಿಯಾಗಿ ದೊರೆತರೂ ಪ್ರಾಯೋಗಿಕವಾಗಿ ಅವರು ಪಳಗಿರುವುದಿಲ್ಲ. ಉದ್ಯೋಗಗಳು ಈ ಪರಿ ಸೃಷ್ಟಿಯಾಗುತ್ತಿದ್ದರೂ ಕುಶಲ ಕೆಲಸಗಾರರ ಕೊರತೆ ಈ ಕ್ಷೇತ್ರವನ್ನು ಕಾಡುತ್ತಿದೆ.

ಇದಕ್ಕೆ ಪರಿಹಾರವೆಂದರೆ, ವಿದ್ಯಾರ್ಥಿಗಳು ಕಲಿಯುವಾಗಲೇ ಕಂಪನಿಗಳಲ್ಲಿ ಇಂಟರ್ನ್‌ಶಿಪ್ ಗಿಟ್ಟಿಸಿಕೊಳ್ಳುವುದು. ಅದೇನು ಅಂದುಕೊಂಡಷ್ಟು ಸುಲಭವಲ್ಲ. ಎಲ್ಲಾ ವಿದ್ಯಾರ್ಥಿಗಳಿಗೂ ರೆಫರೆನ್ಸ್ ಇರುವುದಿಲ್ಲ. ಇದ್ದವರಷ್ಟೇ ಕಂಪನಿಗಳೊಳಗೆ ನುಗ್ಗಬಹುದು. ಹಲವರಿಗೆ ಸಾಮರ್ಥ್ಯವಿದ್ದರೂ ಕೂಡ ಅವರು ಈ ಕಾರಣದಿಂದ ಅವಕಾಶ ವಂಚಿತರಾಗುತ್ತಿದ್ದಾರೆ. ಈ ಇಂಟರ್ನ್‌ಶಿಪ್‌ಗಳ ಲಾಭವೆಂದರೆ ಕಂಪನಿಯು ಅಭ್ಯರ್ಥಿಗಳಿಂದ ಏನನ್ನು ಬಯಸುತ್ತದೆಯೋ ಅದರ ಪರಿಚಯ ಹಾಗೂ ನೈಪುಣ್ಯತೆ ಇಂಟರ್ನಿಗಳಾಗಿ ಸೇರಿಕೊಳ್ಳುವ ವಿದ್ಯಾರ್ಥಿಗಳಿಗೆ ಸುಲಭವಾಗಿ ದೊರೆತು ಅವರು ಪಳಗುತ್ತಾರೆ. ಹಾಗೆ ಪಳಗಿದವರನ್ನು ಆಯಾ ಕಂಪನಿಗಳೇ ವಿದ್ಯಾಭ್ಯಾಸದ ನಂತರ ಸೆಳೆದುಕೊಂಡ ಅಸಂಖ್ಯ ಉದಾಹರಣೆಗಳನ್ನು ನೀಡಬಹುದು.

ADVERTISEMENT

ಒಂದೊಮ್ಮೆ ಆ ಕಂಪನಿಯಲ್ಲಿ ಉದ್ಯೋಗಾವಕಾಶ ವಿಲ್ಲದಿದ್ದರೂ ಈಗಾಗಲೇ ಪಳಗಿರುವ ವಿದ್ಯಾರ್ಥಿಗೆ ಬೇರೆ ಬೇರೆ ಕಂಪನಿಗಳಲ್ಲಿ ಅವಕಾಶಗಳ ಹೆಬ್ಬಾಗಿಲೇ ತೆರೆದುಕೊಳ್ಳುತ್ತದೆ. ಆದರೆ, ನಮ್ಮ ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯಲ್ಲಿ ಬಹುತೇಕ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್‌ಗೆ ಅವಕಾಶವೇ ಇರುವುದಿಲ್ಲ. ಅಂತಹವರು ತಮ್ಮ ವಿದ್ಯಾಭ್ಯಾಸ ಮುಗಿದ ನಂತರವಷ್ಟೇ ಇಂಟರ್ನಿಗಳಾಗಿ ಕಂಪನಿಗಳ ಕದ ತಟ್ಟಬೇಕಾಗುತ್ತದೆ. ಆಗವರಿಗೆ ಅವಕಾಶಗಳೂ ಕಮ್ಮಿ, ಮತ್ತದೇ ರೆಫರೆನ್ಸಿನ ಚಿಂತೆ.

ಸ್ನಾತಕೋತ್ತರ ಡಿಪ್ಲೊಮ ಕೋರ್ಸ್‌

ಇವುಗಳನ್ನು ತಪ್ಪಿಸುವ ಸಲುವಾಗಿಯೇ ಕರ್ನಾಟಕದ ಐಟಿ, ಬಿಟಿ ಹಾಗೂ ಎಸ್&ಟಿ ಇಲಾಖೆಯು ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆಯ ಸಹಯೋಗದೊಂದಿಗೆ ಬೈಸೆಪ್ (ಬಯೋಟೆಕ್ನಾಲಜಿ ಸ್ಕಿಲ್ ಎನ್‌ಹ್ಯಾನ್ಸ್‌ಮೆಂಟ್ ಪ್ರೋಗ್ರಾಮ್) ಎಂಬ ಪೋಸ್ಟ್ ಗ್ರ್ಯಾಜುಯೇಟ್ ಡಿಪ್ಲೊಮ ಕೋರ್ಸುಗಳನ್ನು ರಾಜ್ಯದ 18 ಶಿಕ್ಷಣ ಸಂಸ್ಥೆಗಳಲ್ಲಿ ನಡೆಸಿಕೊಂಡು ಬಂದಿದೆ. ಈ ಮೊದಲು ಜೈವಿಕ ತಂತ್ರಜ್ಞಾನ ಫಿನಿಷಿಂಗ್ ಸ್ಕೂಲ್ ಎಂದಾಗಿದ್ದ ಕೋರ್ಸ್‌ ಅನ್ನು ಜೈವಿಕ ತಂತ್ರಜ್ಞಾನ ಕೌಶಲ್ಯ ಉನ್ನತೀಕರಣ ಕಾರ್ಯಕ್ರಮ (ಬೈಸೆಪ್) ಎಂಬ ಹೆಸರಲ್ಲಿ ಮುಂದುವರೆಸಿಕೊಂಡು ಬರಲಾಗಿದೆ.

ತರಬೇತಿ

ಪ್ರತೀ ವರ್ಷ 360 ವಿದ್ಯಾರ್ಥಿಗಳಿಗೆ ಬಯೋಫಾರ್ಮಾ ಸ್ಯೂಟಿಕಲ್ ತಂತ್ರಜ್ಞಾನ, ಸಸ್ಯ ತಳಿ ತಂತ್ರಜ್ಞಾನ, ಮಲ್ಟಿಯೋಮಿಕ್ಸ್, ಬಯೋ ಇನ್ಫೋರ್ಮ್ಯಾಟಿಕ್ಸ್ ಮತ್ತು ಬಿಗ್ ಡೇಟಾ ಅನಾಲಿಸಿಸ್, ಸೆಲ್ಯುಲಾರ್ ಮತ್ತು ಮಾಲಿಕ್ಯೂಲರ್ ಡಯಾಗ್ನೋಸ್ಟಿಕ್ಸ್, ಫರ್ಮೆಂಟೇಷನ್ ಮತ್ತು ಬಯೋಪ್ರೊಸೆಸಿಂಗ್, ನ್ಯೂಟ್ರಾಸ್ಯೂಟಿಕಲ್ ಮತ್ತು ಆಹಾರ ಸಂಸ್ಕರಣೆ, ಕ್ಲಿನಿಕಲ್ ರಿಸರ್ಚ್ ಮತ್ತು ಡೇಟಾ ಮ್ಯಾನೇಜ್‌ಮೆಂಟ್ ಮತ್ತಿತರ ವಿಷಯಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಶಿಕ್ಷಣ ಸಂಸ್ಥೆಗಳ ಮೂಲ ಸೌಕರ್ಯ, ಅಲ್ಲಿಯ ಬೋಧಕರ ಕ್ಷಮತೆಗಳನ್ನು ಆಧರಿಸಿ ನಿಗದಿತ ಪಠ್ಯಕ್ರಮವನ್ನು ಆಯಾ ಸಂಸ್ಥೆಗಳಿಗೆ ನೀಡಲಾಗಿದೆ. ಉದಾಹರಣೆಗೆ, ಉಜಿರೆಯ ಎಸ್‌ಡಿಎಮ್ ಕಾಲೇಜು ಸೇರಿದಂತೆ 4 ಸಂಸ್ಥೆಗಳಲ್ಲಿ ಫರ್ಮೆಂಟೇಷನ್ ಮತ್ತು ಬಯೋಪ್ರೊಸೆಸಿಂಗ್ ವಿಷಯದಲ್ಲಿ ಡಿಪ್ಲೊಮ ಮಾಡಲು ಅವಕಾಶವಿದೆ. ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಸಸ್ಯ ತಳಿ ತಂತ್ರಜ್ಞಾನ, ತುಮಕೂರಿನ ಸಿದ್ಧಗಂಗಾ ತಂತ್ರಜ್ಞಾನ ಸಂಸ್ಥೆಯಲ್ಲಿ ಬಯೋ ಇನ್ಫೋರ್ಮ್ಯಾಟಿಕ್ಸ್ ಕುರಿತು ತರಬೇತಿ ನೀಡಲಾಗುತ್ತಿದೆ.

ಜೀವಶಾಸ್ತ್ರದ ಯಾವುದೇ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಅಥವಾ 4 ವರ್ಷದ ಪದ್ಧತಿಯಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು ದೇಶದಾದ್ಯಂತ ನಡೆಯುವ ಆನ್‌ಲೈನ್ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ನಂತರ ಕೌನ್ಸೆಲಿಂಗ್ ಪ್ರಕ್ರಿಯೆಗೆ ಒಳಪಟ್ಟು ತನ್ನಿಷ್ಟದ ಕೋರ್ಸಿಗೆ ದಾಖಲಾಗಬಹುದು. 18 ಶಿಕ್ಷಣ ಸಂಸ್ಥೆಗಳಲ್ಲೂ ತಲಾ 20 ವಿದ್ಯಾರ್ಥಿಗಳಿಗೆ ಪ್ರವೇಶಾತಿಗೆ ಅವಕಾಶವಿರುತ್ತದೆ. ಅದರಲ್ಲಿ ಶೇ. 50ರಷ್ಟು ಸೀಟು ಕರ್ನಾಟಕದವರಿಗೆ ಮೀಸಲು. ಅಷ್ಟಲ್ಲದೇ ಪ್ರತೀ ತಿಂಗಳು 10 ಸಾವಿರ ಫೆಲೋಶಿಪ್ ದೊರಕುತ್ತದೆ.

(ಲೇಖಕರು ಉಜಿರೆಯ ಎಸ್‌ಡಿಎಮ್ ಕಾಲೇಜಿನಲ್ಲಿ ಜೈವಿಕ ತಂತ್ರಜ್ಞಾನದ ಸಹಾಯಕ ಪ್ರಾಧ್ಯಾಪಕರು)

**

6 ತಿಂಗಳ ಇಂಟರ್ನ್‌ಶಿಪ್‌

ಈ ತರಬೇತಿಯ ವಿಶೇಷವೇನೆಂದರೆ 6 ತಿಂಗಳು ವಿದ್ಯಾರ್ಥಿಗಳು ತಾವು ದಾಖಲಾದ ಶಿಕ್ಷಣ ಸಂಸ್ಥೆಯಲ್ಲಿ ತತ್ಸಂಬಂಧೀ ವಿಷಯವನ್ನು ಪಾಠ-ಪ್ರಯೋಗಗಳ ಮುಖಾಂತರ ತರಬೇತಿ ಪಡೆದು ನಂತರದ 6 ತಿಂಗಳು ಶಿಕ್ಷಣ ಸಂಸ್ಥೆಗಳವರು ಒಡಂಬಡಿಕೆ ಮಾಡಿಕೊಂಡ ಹೆಸರಾಂತ ಕಂಪನಿಗಳಲ್ಲಿ ಇಂಟರ್ನಿಯಾಗಿ ಸೇರಿಕೊಳ್ಳುತ್ತಾರೆ. ವಿದ್ಯಾರ್ಥಿಗಳ ಇಂಟರ್ನ್‌ಶಿಪ್‌ನ ಜವಾಬ್ದಾರಿಯು ಆಯಾ ಶಿಕ್ಷಣ ಸಂಸ್ಥೆಗಳ ಮೇಲಿರುತ್ತದೆ. ಹಾಗಾಗಿ ದಾಖಲಾದ ಪ್ರತಿ ವಿದ್ಯಾರ್ಥಿಗೂ ಕಂಪನಿಗಳ ತರಬೇತಿ ಸಿಕ್ಕೇ ಸಿಗುತ್ತದೆ. ಇಂಟರ್ನಿಗಳಾಗಿ ದಾಖಲಾಗುವ ವಿದ್ಯಾರ್ಥಿಗಳು ಆಯಾ ಕಂಪನಿಗಳಲ್ಲಿ ಉನ್ನತವಾದ ತಂತ್ರಗಾರಿಕೆಯನ್ನು ಮುಂದಿನ 6 ತಿಂಗಳು ಕಲಿತು, ಪರಿಣತರಾಗಿ ಒಂದು ಪರೀಕ್ಷೆಯನ್ನು ಎದುರಿಸಿದರೆ ಅವರಿಗೆ ಬೈಸೆಪ್ ಸರ್ಟಿಫಿಕೇಟ್ ದೊರಕುತ್ತದೆ. ಅಷ್ಟೇ ಅಲ್ಲ, ಸೂಕ್ತವಾಗಿ ತರಬೇತಿಯನ್ನು ಪಡೆದ ಆ ವಿದ್ಯಾರ್ಥಿಗಳು ತರಬೇತಿ ಕೊಟ್ಟ ಸಂಸ್ಥೆಗಳಲ್ಲೇ ಉದ್ಯೋಗಿಗಳಾಗಿ ಮುಂದುವರೆಯಬಹುದಾದ ಎಲ್ಲಾ ಸಾಧ್ಯತೆಗಳೂ ಇವೆ.

**

ಜೈವಿಕ ತಂತ್ರಜ್ಞಾನವು ಜ್ಞಾನಾಧಾರಿತ ಉದ್ಯಮ. ಆದ್ದರಿಂದ ವಿಷಯ ಜ್ಞಾನವಷ್ಟೇ ಅಲ್ಲದೇ ಸೂಕ್ತ ಕೌಶಲವೂ ವಿದ್ಯಾರ್ಥಿಗೆ ಬೇಕಾಗುತ್ತದೆ. ಆ ಕೌಶಲವು ಕಂಪನಿಗಳು ಪ್ರಸ್ತುತ ಅವಲಂಬಿಸಿರುವ ತಂತ್ರಜ್ಞಾನಕ್ಕೆ ಹೊಂದಿಕೆಯಾಗಬೇಕಾಗುತ್ತದೆ. ಬೈಸೆಪ್ ವಿದ್ಯಾರ್ಥಿಗಳಿಗೆ ಸಹಜವಾಗಿ ಕಂಪನಿಗಳಲ್ಲಿ ಉದ್ಯೋಗ ದೊರಕುವ ಸಾಧ್ಯತೆಗಳು ಅಧಿಕ. ಹೆಚ್ಚಿನ ಮಾಹಿತಿಗಾಗಿ http://www.bisep.karnataka.gov.in/ ಜಾಲತಾಣವನ್ನು ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.