
ಸಮಾಧಾನ ಅಂಕಣ: ಮುಂದೆ ಏನು ಓದಲಿ?
ನಾನು ಪಿಯು ಎರಡನೇ ವರ್ಷದಲ್ಲಿದ್ದೇನೆ. ನನ್ನ ತಂದೆಗೆ ನಾನು ಎಂಜಿನಿಯರಿಂಗ್ ಓದಬೇಕು ಅಂತ ಆಸೆ. ನನ್ನ ಅಮ್ಮ ‘ನೀನು ಮೊದಲು ಡಾಕ್ಟರಾಗಬೇಕು’ ಅನ್ನುತ್ತಿದ್ದಾರೆ. ಜೀವನದಲ್ಲಿ ಹಣ ಗಳಿಕೆ ಮುಖ್ಯ ಎನ್ನುವುದು ಅವರ ಒತ್ತಾಸೆ. ನನಗೆ ಅವೆರಡೂ ಇಷ್ಟ ಇಲ್ಲ. ಶಿಕ್ಷಕ ಅಥವಾ ವಕೀಲ ಆಗಬೇಕು ಎನ್ನುವುದು ನನ್ನಾಸೆ. ಇದರಿಂದ ಒತ್ತಡವಾಗುತ್ತಿದೆ, ಗೊಂದಲ ಕಾಡುತ್ತಿದೆ. ಏನು ಮಾಡಲಿ ಸರ್?
ಉತ್ತರ: ನಿನ್ನ ವಯಸ್ಸಿನಲ್ಲಿ, ಮುಂದೆ ಹೀಗೆಯೇ ಬದುಕಬೇಕು ಎನ್ನುವುದರ ಬಗ್ಗೆ, ಇಂಥದ್ದನ್ನೇ ಕಲಿಯಬೇಕು ಎನ್ನುವುದರ ಬಗ್ಗೆ ತೀರಾ ಸ್ಪಷ್ಟತೆ ಇರುವುದು ಕಷ್ಟ. ಅದಕ್ಕಾಗಿಯೇ ಹಿರಿಯರ ಮಾರ್ಗದರ್ಶನದ ಅಗತ್ಯ ಇರುತ್ತದೆ. ಪಾಲಕರು ಹಾಗೂ ಶಿಕ್ಷಕರ ಪಾತ್ರ ಇಂಥ ಸಂದರ್ಭಗಳಲ್ಲಿ ಮಹತ್ವದ್ದಾಗಿರುತ್ತದೆ. ನೀನು ನಿನ್ನ ಮನಸ್ಸಿನ ತೊಳಲಾಟ, ನಿನ್ನ ಆಸೆ, ಆಲೋಚನೆಗಳ ಬಗ್ಗೆ ಮೊದಲು ನಿನ್ನ ಪಾಲಕರ ಹತ್ತಿರ, ನಂತರ ಶಿಕ್ಷಕರ ಹತ್ತಿರ ಮಾತನಾಡುವುದು ಒಳ್ಳೆಯದು. ಪಾಲಕರು ನಿನ್ನ ಮಾತನ್ನು ಕೇಳುವುದಿಲ್ಲ ಎಂದಾದಾಗ, ಮೆಚ್ಚಿನ ಶಿಕ್ಷಕರ ನೆರವನ್ನು ಪಡೆಯುವುದು ಉತ್ತಮ.
ನಿನ್ನ ಮನಸ್ಸಿನ ಮಾತುಗಳಿಗೆ ಕಿವಿಗೊಡು. ಶ್ರದ್ಧೆಯಿಂದ ನಿನ್ನ ಕೆಲಸವನ್ನು ಮಾಡು. ಜೀವನದಲ್ಲಿ ವಕೀಲನಾಗಲಿ, ಶಿಕ್ಷಕನಾಗಲಿ ಆಗುವುದು ಕಡಿಮೆಯದ್ದೇನಲ್ಲ. ಡಾಕ್ಟರಾದರೇ ಜಾಣ, ಲಾಯರಾದರೆ ಅಷ್ಟೇನೂ ಜಾಣನಲ್ಲ ಎನ್ನುವಂತಿಲ್ಲ. ಶಿಕ್ಷಕನಾದರೆ ಬಹಳ ಆಸ್ಥೆಯಿಂದ ಸಾವಿರಾರು ವಿದ್ಯಾರ್ಥಿಗಳ ಜೀವನವನ್ನು ನಿರ್ದೇಶಿಸಬಹುದು.
ಇನ್ನು, ಡಾಕ್ಟರಾದರೆ ಅಥವಾ ಎಂಜಿನಿಯರ್ ಆದರೆ ಸಾಕಷ್ಟು ಹಣ ಗಳಿಸಬಹುದು ಎನ್ನುವುದೂ ಸಂಪೂರ್ಣ ವಾದ ಸತ್ಯವಲ್ಲ. ಜೀವನದಲ್ಲಿ ಹಣವನ್ನು ಗಳಿಸುವ ಏಕಮಾತ್ರ ಉದ್ದೇಶದಿಂದ ಹೋದವರಲ್ಲಿ ಯಶಸ್ವಿಯಾದವರು ಕಡಿಮೆ. ಅದೇ, ಶ್ರದ್ಧೆಯಿಂದ ತನ್ನ ಪಾಡಿಗೆ ತನ್ನ ಕೆಲಸವನ್ನು ಮಾಡುತ್ತ ಇದ್ದವರು ಸೋತಿದ್ದನ್ನೂ ಕೇಳಲಿಲ್ಲ. ಜೀವನದಲ್ಲಿ ಶಕ್ತಿವಂತನೂ ಕರುಣಾಳುವೂ ಆಗಬೇಕು. ಅದು ಮುಖ್ಯ.
ಹಾಗಾಗಿ, ಈಗ ನೀನು ಬೇರೆ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ. ಪಿಯುವನ್ನು ಮನಸ್ಸಿಟ್ಟು ಓದು. ಪರೀಕ್ಷೆಯಲ್ಲಿ ಒಳ್ಳೆಯ ಫಲಿತಾಂಶ ಬರುತ್ತದೆ. ಆಮೇಲೆ ಮುಂದೆ ಏನನ್ನು ಓದಬೇಕು ಎನ್ನುವ ಬಗ್ಗೆ ಸಮಾಧಾನವಾಗಿ ಆಲೋಚನೆ ಮಾಡಲು ಸಮಯವಿದೆ. ಯಾರ ಆಸೆ ಈಡೇರುತ್ತದೆ ಎನ್ನುವುದನ್ನು ಆಗ ನೋಡಿದರಾಯಿತು, ಅಲ್ಲವೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.