ಭಾರತದಲ್ಲಿ ಬಹುತೇಕ ವಿದ್ಯಾರ್ಥಿಗಳ ಕನಸು ಎಂಜಿನಿಯರ್ ಆಗುವುದು, ನಂತರದ ಸ್ಥಾನ ವೈದ್ಯಕೀಯ ಕೋರ್ಸ್. ಆದರೆ ಎಂಜಿನಿಯರಿಂಗ್ ಕಾಲೇಜುಗಳಿಗೆ ನಡೆಸುವ ಪ್ರವೇಶ ಪರೀಕ್ಷೆಯನ್ನು ಪಾಸ್ ಮಾಡುವುದೇ ಹರಸಾಹಸ. ದ್ವಿತೀಯ ಪಿಯುಸಿ ತರಗತಿಗಳು ಶುರುವಾದಾಗಲೇ ಹಲವು ವಿದ್ಯಾರ್ಥಿಗಳು ಸಿಇಟಿಗೂ ಕೋಚಿಂಗ್ ಪಡೆಯುವ ಸಂಪ್ರದಾಯವಿದೆ. ಹೆಚ್ಚಿನ ಕಾಲೇಜುಗಳು ಸ್ವತಃ ಮುತುವರ್ಜಿ ವಹಿಸಿ ತಾವೇ ಕೋಚಿಂಗ್‌ಗೆ ವ್ಯವಸ್ಥೆ ಮಾಡಿಕೊಡುತ್ತವೆ.
ಎಂಜಿನಿಯರಿಂಗ್ ಕೋರ್ಸ್‌ಗೆ ಜೆಇಇ ಮೇನ್ಸ್ ಅಂಡ್ ಅಡ್ವಾನ್ಸಡ್, ಕರ್ನಾಟಕ ಸಿಇಟಿ, ಕಾಮೆಡ್–ಕೆ, ವಿಐಟಿಇಇಇ, ಕೇರಳ ಕೆಇಎಎಂ ಮೊದಲಾದ ಪ್ರವೇಶ ಪರೀಕ್ಷೆಗಳು ಮಹತ್ವ ಪಡೆದಿವೆ. ಈ ಪ್ರವೇಶ ಪರೀಕ್ಷೆಗಳು ಅಂಗೈಯಲ್ಲಿರುವ ಮಾವಿನ ಹಣ್ಣಿನಂತಲ್ಲ; ಗುರಿ ಇಟ್ಟುಕೊಂಡವರೂ ಐಐಟಿಗೆ ಪ್ರವೇಶ ಗಿಟ್ಟಿಸುವುದು ಸಾಧ್ಯವಿಲ್ಲ. ಆದರೆ ಸತತ ಪ್ರಯತ್ನ, ನಿಗದಿತ ಗುರಿ, ತಜ್ಞರಿಂದ, ಶಿಕ್ಷಕರಿಂದ ಸಲಹೆಗಳು ಇಂತಹ ಪ್ರವೇಶ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ನೆರವಾಗಬಲ್ಲವು. ಕೆಸಿಇಟಿಗೆ ಓದುವಾಗಲೂ ಇದನ್ನು ಪಾಲಿಸಬೇಕಾಗುತ್ತದೆ. ಹಾಗಿದ್ದರೆ ಮಾತ್ರ ಮೆರಿಟ್‌ನಲ್ಲಿ ಒಳ್ಳೆಯ ಎಂಜಿನಿಯರಿಂಗ್ ಕಾಲೇಜಿಗೆ ಪ್ರವೇಶ ಪಡೆಯಲು ಸಾಧ್ಯ.
ಪರೀಕ್ಷೆ ಸಮೀಪಿಸುತ್ತಿದೆ. ಓದಲು ಸಮಯ ಸಾಲುತ್ತಿಲ್ಲ ಎಂಬ ಆತಂಕ ಬಿಟ್ಟುಬಿಡಿ. ಪಿಯುಸಿ ಪರೀಕ್ಷೆಗೆ ಚೆನ್ನಾಗಿ ಓದಿದ್ದರೆ, ಆ ಪಠ್ಯದಲ್ಲಿನ ವಿಷಯಗಳು ನೆನಪಿನಲ್ಲಿರುತ್ತವೆ. ಹೀಗಾಗಿ 15– 20 ದಿನಗಳಲ್ಲಿ ಮನಸ್ಸಿಟ್ಟು ಅಭ್ಯಾಸ ಮಾಡಿದರೆ ಗುರಿ ಸಾಧಿಸಬಹುದು. ಸ್ವಲ್ಪ ಹೆಚ್ಚು ಶ್ರಮ ಹಾಕಬೇಕಾಗುತ್ತದೆ.
ವೇಳಾಪಟ್ಟಿ
ಮೊದಲು ಸಿಲೆಬಸ್‌ನಲ್ಲಿ ಏನೇನಿದೆ ಎಂಬುದನ್ನು ಗುರುತು ಹಾಕಿಕೊಳ್ಳಿ. ಅಗತ್ಯವಿರುವ ಪಠ್ಯ ಪುಸ್ತಕಗಳನ್ನು, ಇತರ ಪೂರಕ ಅಧ್ಯಯನದ ಸಲಕರಣೆಗಳನ್ನು ಸಿದ್ಧಪಡಿಸಿಕೊಳ್ಳಿ. ಪರೀಕ್ಷೆಗೆ ಓದುವ ಮೊದಲು ಟೈಂ ಟೇಬಲ್ ತಯಾರಿಸಿಕೊಳ್ಳಿ. ಟೈಂ ಟೇಬಲ್ ಮಾಡಿಕೊಳ್ಳುವುದರಿಂದ ಹೇಗೆ ಮತ್ತು ಯಾವುದನ್ನು ಓದಬೇಕು, ಅದಕ್ಕೆ ಎಷ್ಟು ಸಮಯ ಮೀಸಲಿಡಬೇಕು ಎಂಬ ಐಡಿಯಾ ನಿಮಗೆ ಸಿಗುತ್ತದೆ. ನಿತ್ಯ 6–8 ತಾಸು ಓದಿದರೆ ನಿಮ್ಮ ಕನಸಿನ ಫಲಿತಾಂಶ ದೊರಕಬಹುದು. ಮಧ್ಯೆ ನಿಯಮಿತವಾಗಿ 15–20 ನಿಮಿಷಗಳ ಬಿಡುವು ತೆಗೆದುಕೊಂಡು ಓದಿ. ಇದರಿಂದ ಏಕತಾನತೆ, ಬೇಸರವನ್ನು ಹೋಗಲಾಡಿಸಿಕೊಳ್ಳಬಹುದು. ಜೊತೆಗೆ ಓದಿದ್ದು ಕೂಡ ಮನಸ್ಸಿನಲ್ಲಿ ಉಳಿಯುತ್ತದೆ.
ಸಿಲೆಬಸ್‌ನಲ್ಲಿ ಇರುವುದನ್ನೆಲ್ಲ ತಿಳಿದುಕೊಳ್ಳುವುದು ಖಂಡಿತ ಸಾಧ್ಯವಿಲ್ಲ ಬಿಡಿ. ಪರೀಕ್ಷೆ ತಿಂಗಳಿರುವಾಗ ಎಲ್ಲವನ್ನೂ ಓದುತ್ತ ಕೂರಲೂ ಸಾಧ್ಯವಿಲ್ಲ. ಹೀಗಾಗಿ ಇಂತಹ ತೊಂದರೆ ತಪ್ಪಿಸಿಕೊಳ್ಳಲು ನಿಮ್ಮ ಶಿಕ್ಷಕರ ಅಥವಾ ಮಾರ್ಗದರ್ಶಕರ ನೆರವು ಪಡೆಯುವುದು ಒಳಿತು. ನಿಮಗೆ ಎದುರಾಗುವ ಅನುಮಾನಗಳನ್ನು ಆಗಿಂದಾಗಲೇ ಪರಿಹರಿಸಿಕೊಳ್ಳಿ ಅಥವಾ ಒಳ್ಳೆಯ ಕೋಚಿಂಗ್ ತರಗತಿಗೆ ಸೇರಿಕೊಳ್ಳಿ.
ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಗೆ ಓದುವಾಗ ಸೂತ್ರ (ಫಾರ್ಮುಲಾ) ಗಳನ್ನು ಹಾಗೂ ಕಾನ್ಸೆಪ್ಟ್‌ಗಳನ್ನು ನೆನಪಿಸಿಟ್ಟುಕೊಳ್ಳಬೇಕು, ಕೇವಲ ಉದ್ದಕ್ಕೆ ಓದುತ್ತಾ ಹೋಗುವುದರಿಂದ ಪ್ರಯೋಜನವಿಲ್ಲ. ಇವುಗಳನ್ನು ಸಣ್ಣ ಸಣ್ಣ ಚೀಟಿಯಲ್ಲಿ ಬರೆದುಕೊಂಡು ನಿಮ್ಮ ಅಧ್ಯಯನ ಕೊಠಡಿಯ ಗೋಡೆಯ ಮೆಲೆ ಅಂಟಿಸಿಕೊಂಡು ಆಗಾಗ ಗಮನಿಸುವುದು ಒಳ್ಳೆಯ ಅಭ್ಯಾಸ.
ಪುನರ್‌ಮನನ ಅಗತ್ಯ
ಪ್ರತಿಯೊಂದು ಟಾಪಿಕ್ ಓದಿ ಮುಗಿಸಿದಾಗಲೂ ಸಣ್ಣ ಟಿಪ್ಪಣಿ ಮಾಡಿಕೊಳ್ಳಿ. ಸೂತ್ರಗಳ ಪಟ್ಟಿ ಮಾಡಿಕೊಳ್ಳಿ. ನೀವು ಪುನರ್‌ಮನನ ಮಾಡುವಾಗ ಇದು ನಿಮ್ಮ ನೆರವಿಗೆ ಬರುತ್ತದೆ. ಈ ಅಭ್ಯಾಸವನ್ನು ನೀವು ನಿಯಮಿತವಾಗಿ ರೂಢಿಸಿಕೊಳ್ಳಬೇಕು. ಎಂಜಿನಿಯರಿಂಗ್ ಪದವಿಯಲ್ಲಿ ಪಿಯುಸಿಯಲ್ಲಿ ಪಿ.ಸಿ.ಎಂ.ಬಿ.ಯಲ್ಲಿ ಓದಿದ ವಿಷಯಗಳು ಮುಂದುವರೆಯುತ್ತವೆ. ಹೀಗಾಗಿ ಮೊದಲ ಹಾಗೂ ದ್ವಿತೀಯ ಪಿಯುಸಿ ಅಥವಾ 11 ಮತ್ತು 12ನೇ ತರಗತಿಗಳಲ್ಲಿ ಓದಿದ ಪಠ್ಯದ ಪ್ರಶ್ನೆಗಳು ಪ್ರವೇಶ ಪರೀಕ್ಷೆಯಲ್ಲಿ ಎದುರಾಗುತ್ತವೆ. ಈ ಕಾರಣಕ್ಕಾಗಿಯೇ ಈ ಎರಡೂ ತರಗತಿಗಳಲ್ಲಿ ನೀವು ಓದಿದ ವಿಷಯವನ್ನು ಪುನರ್‌ಮನನ ಮಾಡಬೇಕಾಗುತ್ತದೆ.
ಹಿಂದಿನ ಕೆಲವು ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಮುಂದಿಟ್ಟುಕೊಂಡು ಉತ್ತರವನ್ನು ಸಿದ್ಧಪಡಿಸಿಕೊಳ್ಳುವುದು ಕೂಡ ಬಹಳ ಮುಖ್ಯ. ಪರೀಕ್ಷಾ ಮಂಡಳಿ ಕೆಲವೊಮ್ಮೆ ಪರೀಕ್ಷಾ ಪದ್ಧತಿಯನ್ನು ಬದಲಿಸಬಹುದು. ಆದರೆ ಯಾವ ರೀತಿಯ ಪ್ರಶ್ನೆಗಳು ಎದುರಾಗುತ್ತವೆ, ಅವುಗಳಿಗೆ ಉತ್ತರಿಸಲು ಎಷ್ಟು ಸಮಯ ಹಿಡಿಯಬಹುದು ಎಂಬುದು ನಿಮಗೆ ಗೊತ್ತಾಗುತ್ತದೆ. ಹೆಸರಾಂತ ಶಿಕ್ಷಣ ಸಂಸ್ಥೆಗಳು ಹೊರ ತರುವ ಮಾದರಿ ಪ್ರಶ್ನೆಪತ್ರಿಕೆಗಳನ್ನು ಇಟ್ಟುಕೊಂಡು ಅಭ್ಯಾಸ ಮಾಡಬಹುದು.
ಅಣಕು ಪರೀಕ್ಷೆ
ಯಾವುದೇ ಪರೀಕ್ಷೆಯಿರಲಿ, ಅಣಕು ಪರೀಕ್ಷೆ ಅಥವಾ ಪೂರ್ವ ತಯಾರಿ ಪರೀಕ್ಷೆ ಮಹತ್ವದ್ದು. ವಿದ್ಯಾರ್ಥಿಯ ಸಾಮರ್ಥ್ಯವನ್ನು ಇದು ಒರೆಗೆ ಹಚ್ಚುತ್ತದೆ. ಪರೀಕ್ಷೆ ಕುರಿತು ಭಯವನ್ನು ಹೊಡೆದೋಡಿಸುತ್ತದೆ. ಅಣುಕು ಪರೀಕ್ಷೆಯಲ್ಲಿ ಎಷ್ಟು ಅಂಕಗಳು ಬಂದಿವೆ ಎಂಬುದರ ಆಧಾರದ ಮೇಲೆ ನೀವು ಸುಧಾರಣೆ ಮಾಡಿಕೊಳ್ಳಲು ಅವಕಾಶವಿರುತ್ತದೆ.
ಇದೇ ರೀತಿ ಸಮಯ ನಿರ್ವಹಣೆಯನ್ನು ನೀವು ಸುಧಾರಿಸಿಕೊಳ್ಳಬಹುದು. ನಿಗದಿತ ಸಮಯದೊಳಗೆ ಪ್ರಶ್ನೆಪತ್ರಿಕೆಯ ರೀತಿ, ಎಷ್ಟು ಪ್ರಶ್ನೆಗಳಿವೆ, ಅವುಗಳನ್ನೆಲ್ಲ ಸಮರ್ಪಕವಾಗಿ ಉತ್ತರಿಸಲು ಸಾಧ್ಯವೇ ಎಂಬುದನ್ನು ಮೊದಲೇ ಅಭ್ಯಾಸ ಮಾಡಿಕೊಳ್ಳಬೇಕು. ಇದರಿಂದ ಪರೀಕ್ಷೆಯ ದಿನ ಗೊಂದಲಕ್ಕೆ ಒಳಗಾಗುವುದು ತಪ್ಪುತ್ತದೆ.
ಪ್ರಶ್ನೆಗಳಿಗೆ ಉತ್ತರ ಬರೆಯುವಾಗ ನಿಮ್ಮದೇ ರೀತಿಯನ್ನು ರೂಢಿಸಿಕೊಳ್ಳಿ. ಕೆಲವೊಮ್ಮೆ ಪ್ರಶ್ನೆಗಳು ನಿಮ್ಮಲ್ಲಿ ಗೊಂದಲ ಹುಟ್ಟಿಸಬಹುದು. ಸಾವಧಾನದಿಂದ ಪ್ರಶ್ನೆಗಳನ್ನು ಅರ್ಥ ಮಾಡಿಕೊಂಡು ಉತ್ತರಿಸಿ. ಈ ನಿಟ್ಟಿನಲ್ಲಿ ನಿಮಗೆ ನೀವೇ ಒಂದು ಪದ್ಧತಿಯನ್ನು ರೂಢಿಸಿಕೊಳ್ಳಬೇಕಾಗುತ್ತದೆ.
**
* ಮುಖ್ಯವಾದ ಸೂತ್ರಗಳು ಮತ್ತು ವಿಷಯಗಳ ಕುರಿತು ಸಣ್ಣ ಟಿಪ್ಪಣಿ ಮಾಡಿಕೊಳ್ಳಿ.
* ಗಣಿತದಲ್ಲಿರುವ ಸಮೀಕರಣಗಳನ್ನು ಬರೆದುಕೊಂಡು ಪುನರ್‌ಮನನ ಮಾಡಿ.
* ಎಲ್ಲಾ ವಿಷಯಗಳಿಗೂ ಸಮಾನ ಮಹತ್ವ ನೀಡಿ.
* ಕಷ್ಟವೆನಿಸಿದ್ದನ್ನು ಬಿಡಬೇಡಿ; ಸುಲಭವೆಂದು ನಿರ್ಲಕ್ಷಿಸಬೇಡಿ.
* ಪ್ರತಿಯೊಂದು ಚಾಪ್ಟರ್ ಓದಿ ಮುಗಿಸಿದ ಮೆಲೆ ಪ್ರಶ್ನೆಗಳನ್ನು ಬರೆದುಕೊಂಡು, ಉತ್ತರಿಸುವುದನ್ನು ಅಭ್ಯಾಸ ಮಾಡಿ.
* ಆಬ್ಜೆಕ್ಟಿವ್ ಟೈಪ್ ಇರುವುದರಿಂದ ವೇಗವಾಗಿ ಓದಿ, ಗೊಂದಲವಿಲ್ಲದಂತೆ ಉತ್ತರ ನೀಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.