ADVERTISEMENT

ಕಾಮೆಡ್‌–ಕೆ ಯುಜಿಇಟಿ ಪ್ರವೇಶ ಪರೀಕ್ಷೆ ಜೂನ್‌ 20ಕ್ಕೆ

ದೇಶದಾದ್ಯಂತ 400 ಕೇಂದ್ರಗಳಲ್ಲಿ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2021, 12:53 IST
Last Updated 19 ಮಾರ್ಚ್ 2021, 12:53 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಖಾಸಗಿ ಕಾಲೇಜುಗಳಲ್ಲಿನ ಎಂಜಿನಿಯರಿಂಗ್ ಸೀಟುಗಳ ಭರ್ತಿಗೆ ನಡೆಸುವ ಕಾಮೆಡ್‌–ಕೆ ಯುಜಿಇಟಿ ಮತ್ತು ಯೂನಿಗೇಜ್‌ ಪ್ರವೇಶ ಪರೀಕ್ಷೆ ಜೂನ್‌ 20ರಂದು ನಡೆಯಲಿದೆ.

ಕರ್ನಾಟಕ ಪ್ರೊಫೆಷನಲ್‌ ಕಾಲೇಜುಗಳ ಫೌಂಡೇಷನ್‌ ಟ್ರಸ್ಟ್‌ ಮತ್ತು ಯೂನಿ–ಗೇಜ್‌ನಿಂದ ಮಾನ್ಯತೆ ಹೊಂದಿರುವ ಕಾಲೇಜುಗಳ ಬಿಇ/ಬಿಟೆಕ್‌ ಕೋರ್ಸ್‌ಗಳ ಪ್ರವೇಶಕ್ಕೆ ಈ ಪರೀಕ್ಷೆ ನಡೆಯಲಿದೆ. ಅರ್ಜಿ ಸಲ್ಲಿಕೆ ಮತ್ತು ಪರೀಕ್ಷಾ ಪ್ರಕ್ರಿಯೆಯು ಸಂಪೂರ್ಣ ಆನ್‌ಲೈನ್‌ನಲ್ಲಿ ನಡೆಯಲಿದೆ.

‘ದೇಶದ 150 ನಗರಗಳ 400ಕ್ಕೂ ಹೆಚ್ಚು ಕೇಂದ್ರಗಳ್ಲಿ ಪರೀಕ್ಷೆ ನಡೆಯಲಿದೆ. 80 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಳ್ಳುವ ನಿರೀಕ್ಷೆ ಇದೆ’ ಎಂದು ಕಾಮೆಡ್‌–ಕೆ ಕಾರ್ಯಕಾರಿ ಕಾರ್ಯದರ್ಶಿ ಡಾ. ಕುಮಾರ್‌ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ADVERTISEMENT

‘ಕೋವಿಡ್‌ ಕಾರಣದಿಂದ ಕಳೆದ ವರ್ಷ ಮೂರು ಬಾರಿ ಪ್ರವೇಶ ಪರೀಕ್ಷೆ ದಿನಾಂಕವನ್ನು ಮುಂದೂಡಬೇಕಾಯಿತು. ಪರೀಕ್ಷೆಗೆ ನೋಂದಾಯಿಸಿಕೊಳ್ಳುತ್ತಿದ್ದ ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಮೆಯಾಗಿದ್ದು, 63 ಸಾವಿರ ಜನ ನೋಂದಾಯಿಸಿಕೊಂಡಿದ್ದರು. ಅದರಲ್ಲಿ 44 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರೆ, 4,900 ವಿದ್ಯಾರ್ಥಿಗಳು ಕಾಮೆಡ್–ಕೆ ಮೂಲಕ ಕಾಲೇಜು ಪ್ರವೇಶ ಪಡೆದಿದ್ದರು’ ಎಂದು ಅವರು ಹೇಳಿದರು.

‘ಈ ಬಾರಿಯೂ ಸಕಲ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಪರೀಕ್ಷೆ ನಡೆಸಲಾಗುವುದು’ ಎಂದೂ ತಿಳಿಸಿದರು.

‘ವಿದ್ಯಾರ್ಥಿಗಳ ಮೇಲಿನ ಪರೀಕ್ಷಾ ಭಾರವನ್ನು ಕಡಿಮೆ ಮಾಡುವ ಉದ್ದೇಶದಿಂದ ಯುಜಿಇಟಿ-ಯೂನಿಗೇಜ್ ಪರೀಕ್ಷೆ ನಡೆಸಲಾಗುತ್ತದೆ. ಅಂದರೆ, ರಾಜ್ಯದಲ್ಲಿನ 180 ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲದೆ, ದೇಶದಾದ್ಯಂತ ಇರುವ 30 ವಿಶ್ವವಿದ್ಯಾಲಯಗಳ ಪ್ರವೇಶಕ್ಕೂ ಈ ಪರೀಕ್ಷೆಯ ರ‍್ಯಾಂಕಿಂಗ್ ಪರಿಗಣಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಮಾ.22ರಿಂದ ಮೇ 20ರವರೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆಯಲಿದೆ. www.comedk.org ಅಥವಾ www.unigauge.com ವೆಬ್‌ಸೈಟ್‌ ಮೂಲಕ ವಿದ್ಯಾರ್ಥಿಗಳು ನೋಂದಣಿ ಮಾಡಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.