ADVERTISEMENT

ಮಕ್ಕಳ ಹುಟ್ಟುಹಬ್ಬಕ್ಕೆ ಸಿಹಿ ಹಂಚುವ ಶಾಲೆ

ಕೆಂಚಿಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಸ್ನೇಹಿ ವಾತಾವರಣ

ಶಾಂತೇಶ ಬೆನಕನಕೊಪ್ಪ
Published 10 ಅಕ್ಟೋಬರ್ 2019, 20:00 IST
Last Updated 10 ಅಕ್ಟೋಬರ್ 2019, 20:00 IST
ಕಂಚಿಕೊಪ್ಪ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಆವರಣ ಸ್ವಚ್ಛತೆಯಲ್ಲಿ ತೊಡಗಿರುವುದು
ಕಂಚಿಕೊಪ್ಪ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಆವರಣ ಸ್ವಚ್ಛತೆಯಲ್ಲಿ ತೊಡಗಿರುವುದು    

ಮುಂಡಗೋಡ: ಸದಾ ಪಾಠ ಕೇಳುತ್ತಲೊ, ಬರೆಯುತ್ತಲೊ ಇರುವ ಮಕ್ಕಳ ಹುಟ್ಟುಹಬ್ಬವನ್ನು ಶಾಲೆಯೇ ಆಚರಿಸುತ್ತದೆಯೆಂದರೆ ಅದಕ್ಕಿಂತ ಖುಷಿ ಇನ್ನೇನಿದೆ. ಪ್ರತಿ ಮಕ್ಕಳ ಹುಟ್ಟನ್ನು ಹಬ್ಬವಾಗಿ ಆಚರಿಸಿ ಶಾಲೆಯೆಡೆಗೆ ಮಕ್ಕಳಲ್ಲಿ ಅನೂಹ್ಯ ಪ್ರೀತಿ ಬೆಳೆಸಲಾಗುತ್ತಿದೆ.

ಉತ್ತರ ಕನ್ನಡ ಜಿಲ್ಲೆಯ ಕೆಂಚಿಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಮಕ್ಕಳಸ್ನೇಹಿ ವಾತಾವರಣ. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗೆ ಸಮಾನಾಗಿ ಅವಕಾಶ ನೀಡಲಾಗುತ್ತಿದೆ. ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಗೆ ಸಾಣೆ ಹಿಡಿಯಲು ಶಿಕ್ಷಕರು ಉತ್ಸುಕರಾಗಿದ್ದಾರೆ. ಜತೆಗೆ ಕೈತೋಟ ನಿರ್ವಹಣೆ, ಸ್ಮಾರ್ಟ್‌ಕ್ಲಾಸ್‌ ಮೂಲಕ ಮಕ್ಕಳನ್ನು ಡಿಜಿಟಲ್‌ ಯುಗವನ್ನು ಅರ್ಥಮಾಡಿಸಲು ಪ್ರಯತ್ನಿಸಲಾಗುತ್ತಿದೆ.

‘ಆದರ್ಶ ಶಾಲೆ’ ಎಂಬ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವ ಈ ಶಾಲೆ 55 ವರ್ಷಗಳ ಹಿಂದೆ ಕಾಡಿನ ಮಧ್ಯೆ ಸ್ಥಾಪನೆಯಾಗಿತ್ತು. ನೂರಾರು ಮಕ್ಕಳು ಸಂಸ್ಕಾರಯುತ, ಮೌಲ್ಯಾಧಾರಿತ ಶಿಕ್ಷಣ ಪಡೆದು ಹೊರಬಂದಿದ್ದಾರೆ. ದೇಶ, ವಿದೇಶಗಳಲ್ಲೂ ಉನ್ನತ ಹುದ್ದೆಯಲ್ಲಿದ್ದಾರೆ.‌

ADVERTISEMENT

ಪರಿಣಾಮಕಾರಿ ಬೋಧನೆಗೆ ಸ್ಮಾರ್ಟ್‌ ಕ್ಲಾಸ್‌ ಅವಶ್ಯ.ದಾನಿಗಳ ನೆರವಿನಿಂದ ಪ್ರೊಜೆಕ್ಟರ್, ಪರದೆ ಸೇರಿ ಅಗತ್ಯ ಪರಿಕರಗಳನ್ನು ಅಳವಡಿಸಲಾಗಿದೆ.‘4–5 ಮತ್ತು 5–6ನೇ ತರಗತಿ ವಿದ್ಯಾರ್ಥಿಗಳನ್ನು ಕೂಡಿಸಿ ಒಂದೊಂದು ವಿಷಯದ ಪಾಠವನ್ನು ಪ್ರೊಜೆಕ್ಟರ್ ಮೂಲಕ ತಿಳಿಸಿ ಕೊಡಲಾಗುತ್ತದೆ. ಚಿತ್ರ, ಶಬ್ದದ ಮೂಲಕ ಕಲಿತ ಪಾಠವು ಹೆಚ್ಚು ನೆನಪಿನಲ್ಲಿರುತ್ತದೆ’ ಎನ್ನುತ್ತಾರೆ ಮುಖ್ಯ ಶಿಕ್ಷಕಿ ಗೀತಾ ಹೆಗಡೆ.

‘ಮಕ್ಕಳ ಹುಟ್ಟುಹಬ್ಬದಂದು ಶಾಲೆಯಲ್ಲಿ ಸಿಹಿ ಮಾಡಿ ನೀಡಲಾಗುತ್ತದೆ. ಗ್ರಾಮಸ್ಥರ ಸಹಕಾರದಿಂದ ಶಾಲೆಯು ಅಭಿವೃದ್ಧಿ ಹೊಂದುತ್ತಿದ್ದು, ಇಲ್ಲಿ ಕಲಿತವರು ಮುಂದೆ ಉತ್ತಮ ಪ್ರಜೆಗಳಾಗಬೇಕು. ಅದೇ ನಮ್ಮ ಗುರಿ’ ಎಂದರು.

‘2007ರಲ್ಲಿ ಅಂತರಾಷ್ಟ್ರೀಯ ಮಟ್ಟದ ವಿಜ್ಞಾನ ಪ್ರತಿಭಾನ್ವೇಷಣೆಯಲ್ಲಿ ರಾಜ್ಯಮಟ್ಟದಲ್ಲಿ ಉತ್ತಮ ಶಾಲೆ ಪ್ರಶಸ್ತಿ ಪಡೆದಿದೆ. ಚಿತ್ರದುರ್ಗದ ಸಿರಿಗನ್ನಡ ಪ್ರಕಾಶನದವರು 2016ರಲ್ಲಿ ಆದರ್ಶ ಶಾಲೆ ಪ್ರಶಸ್ತಿ ನೀಡಿದ್ದಾರೆ. ನಲಿಕಲಿ ತರಗತಿ ಸೇರಿ ಉಳಿದ ತರಗತಿಗಳಿಗೂ ದಾನಿಗಳು ಡೆಸ್ಕ್‌ಗಳನ್ನು ನೀಡಿದ್ದಾರೆ’ ಎಂದು ಶಿಕ್ಷಕ ಗಿರೀಶ ಫಾಯ್ದೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.