ADVERTISEMENT

ಪ್ಲಾಸ್ಟಿಕ್ ಉದ್ಯಮ ತರಬೇತಿಗೆ ‘ಸಿಪೆಟ್‌’ನಲ್ಲಿ ಡಿಪ್ಲೊಮಾ, ಪಿಜಿ ಡಿಪ್ಲೊಮಾ

ಪ್ಲಾಸ್ಟಿಕ್ ತಯಾರಿಕಾ ಉದ್ಯಮಕ್ಕೆ ಸಿಬ್ಬಂದಿ ರೂಪಿಸುವ ಕೋರ್ಸ್‌

ಆರ್.ಬಿ.ಗುರುಬಸವರಾಜ
Published 17 ಏಪ್ರಿಲ್ 2022, 19:30 IST
Last Updated 17 ಏಪ್ರಿಲ್ 2022, 19:30 IST
ಮೈಸೂರಿನ ಸಿಪೆಟ್ ಕೇಂದ್ರದ ಚಿತ್ರಗಳು
ಮೈಸೂರಿನ ಸಿಪೆಟ್ ಕೇಂದ್ರದ ಚಿತ್ರಗಳು   

ಪ್ಲಾಸ್ಟಿಕ್ ಬಳಕೆಗೆ ವಿರೋಧ ಎಷ್ಟಿದೆಯೋ, ಅಷ್ಟೇ ಅನಿವಾರ್ಯದ ವಸ್ತುವೂ ಆಗಿ ಬದುಕಿನಲ್ಲಿ ಸೇರಿದೆ. ಕೃಷಿ, ಕೈಗಾರಿಕೆ ಸೇರಿದಂತೆ, ಎಲ್ಲ ಕ್ಷೇತ್ರದಲ್ಲೂ ಪ್ಲಾಸ್ಟಿಕ್ ಬಳಕೆ ವ್ಯಾಪಕವಾಗಿದೆ. ಪ್ಲಾಸ್ಟಿಕ್ ತಯಾರಿಕೆ ಉದ್ಯಮ ವಿಸ್ತಾರಗೊಳ್ಳುತ್ತಿದೆ, ಈ ಉದ್ಯಮಕ್ಕೆ ಅಗತ್ಯ ಸಿಬ್ಬಂದಿ ರೂಪಿಸಲು ಕೆಲವೊಂದು ಡಿಪ್ಲೊಮಾ ಹಾಗೂ ಪಿಜಿ ಡಿಪ್ಲೊಮಾ ಕೋರ್ಸ್‌ಗಳು ಚಾಲ್ತಿಯಲ್ಲಿವೆ.

ಮೈಸೂರಿನ ಕೇಂದ್ರೀಯ ಪೆಟ್ರೊಕೆಮಿಕಲ್ಸ್‌ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಶಿಕ್ಷಣ ಸಂಸ್ಥೆ – ಸಿಪೆಟ್‌ (ಕೌಶಲ್ಯ ಮತ್ತು ತಾಂತ್ರಿಕ ತರಬೇತಿ ಕೇಂದ್ರ) ಈ ಕೋರ್ಸ್‌ಗಳನ್ನು ನಡೆಸುತ್ತಿದೆ.

‘ಸಿಪೆಟ್’ನಲ್ಲಿ ಪ್ಲಾಸ್ಟಿಕ್‌ ತಯಾರಿಕೆಗೆ ಸಂಬಂಧಿಸಿದ ವಿವಿಧ ಡಿಪ್ಲೊಮಾ ಮತ್ತು ಪಿ.ಜಿ (ಪೋಸ್ಟ್ ಗ್ರಾಜುಯೆಟ್ ಡಿಪ್ಲೊಮಾ) ಕೋರ್ಸ್‌ಗಳಿವೆ.

ADVERTISEMENT

ಇಲ್ಲಿನ ಯಾವುದೇ ಕೋರ್ಸ್‌ಗೆ ಸೇರಲು ಪ್ರವೇಶ ಪರೀಕ್ಷೆ ಬರೆಯುವುದು ಕಡ್ಡಾಯ. ಈ ಫಲಿತಾಂಶದ ಅಂಕಗಳ ಮೇಲೆ ಪ್ರವೇಶಾವಕಾಶ ಕಲ್ಪಿಸಲಾಗುತ್ತದೆ. 1 ವರ್ಷದ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್‌ಗೆ 30 ಸೀಟುಗಳು, ಡಿಪ್ಲೊಮಾ ಇನ್ ಟೆಕ್ನಾಲಜಿ ಕೋರ್ಸ್‌ಗೆ 60 ಸೀಟುಗಳು ಹಾಗೂ ಡಿಪ್ಲೊಮಾ ಇನ್ ಪ್ಲಾಸ್ಟಿಕ್ ಮೌಲ್ಡಿಂಗ್ ಕೋರ್ಸ್‌ 60 ಸೀಟುಗಳನ್ನು ನಿಗದಿಪಡಿಸಲಾಗಿದೆ.

ಕೋರ್ಸ್‌ನಲ್ಲಿ ಕಲಿಸುವುದೇನು?

ಈ ಕೋರ್ಸ್‌ಗಳಲ್ಲಿ ವೈವಿಧ್ಯಮಯ ಪ್ಲಾಸ್ಟಿಕ್ ಬಳಕೆ, ಪ್ಲಾಸ್ಟಿಕ್ ಮೌಲ್ಡಿಂಗ್,ಸಂಸ್ಕರಣೆ, ಗುಣಮಟ್ಟ ಪರಿಶೀಲನೆ, ಆಧುನಿಕ ವಿನ್ಯಾಸದಲ್ಲಿ ಪ್ಲಾಸ್ಟಿಕ್ ವಸ್ತುಗಳ ತಯಾರಿಕೆ, ಪ್ಲಾಸ್ಟಿಕ್ ಮರುಬಳಕೆಯ ವಿಧಾನ, ಪೈಪ್‌ ಸೇರಿದಂತೆ ವಿವಿಧ ವಸ್ತುಗಳ ತಯಾರಿಕೆ, ಮಾರುಕಟ್ಟೆ ಹಾಗೂ ದರ ಪರಿಷ್ಕರಣೆ ಕುರಿತು ಕಲಿಸಲಾಗುತ್ತದೆ.

ಅನುತ್ತೀರ್ಣರಿಗೂ ಉಚಿತ ತರಬೇತಿ: ಮುಖ್ಯ ಕೋರ್ಸ್‌ಗಳಲ್ಲದೇ ಅಲ್ಪಾವಧಿ ಪ್ರಾಯೋಜಿತ ತರಬೇತಿಯನ್ನೂ ನೀಡುವುದು ‘ಸಿಪೆಟ್’ನ ವಿಶೇಷ. ‌8ನೇ ತರಗತಿ/10ನೇ ತರಗತಿ/ಪಿಯುಸಿ/ಐಟಿಐ/ಜೆಒಸಿ/ಡಿಪ್ಲೊಮಾ/ಬಿ.ಇ/ ಯಾವುದೇ ಪದವಿಗಳಲ್ಲಿ ಉತ್ತೀರ್ಣ ಹಾಗೂ ಅನುತ್ತೀರ್ಣರಾದ ಯುವಕ ಯುವತಿಯರಿಗೂ ವಿವಿಧ ವೃತ್ತಿಪರ ಯೋಜನೆಯಡಿ ಸ್ಟೈಫಂಡ್‌ನೊಂದಿಗೆ 3 ಮತ್ತು 6 ತಿಂಗಳ ಅವಧಿಯ ಉಚಿತ ವೃತ್ತಿಪರ ತರಬೇತಿ ಮತ್ತು ಉದ್ಯೋಗ ಖಾತ್ರಿ ಯೋಜನೆ (ಊಟ ಮತ್ತು ವಸತಿಯೊಂದಿಗೆ) ನೀಡಲಾಗುತ್ತದೆ. ಜೊತೆಗೆ ತರಬೇತಿಯ ನಂತರ ಉದ್ಯೋಗಾವಕಾಶಕ್ಕೆ ನೆರವು ನೀಡಲಾಗುತ್ತದೆ.

ಉದ್ಯೋಗಾವಕಾಶಗಳು

ಈ ಕೋರ್ಸ್ ಪೂರೈಸಿದವರಿಗೆ ಪಂಚಾಯತ್ ರಾಜ್‌ ಇಲಾಖೆ, ಗೃಹ ಮಂಡಳಿ, ಆಟೊಮೊಬೈಲ್ಸ್, ವಾಹನದ ಬಿಡಿ ಭಾಗಗಳ ತಯಾರಿಕೆ, ಪಿ.ವಿ.ಸಿ ಪೈಪ್ ತಯಾರಿಕಾ ಕಂಪನಿಗಳಲ್ಲಿ, ಪ್ಲಾಸ್ಟಿಕ್ ವಸ್ತು ಉತ್ಪಾದನಾ ಕಂಪನಿಗಳಲ್ಲಿ, ಕರ್ನಾಟಕ ಒಳಚರಂಡಿ ಮತ್ತು ನೈರ್ಮಲ್ಯ ಇಲಾಖೆ, ಅರಣ್ಯ ಇಲಾಖೆ, ಪೊಲೀಸ್‌ ಇಲಾಖೆ, ಹಾಲು ಉತ್ಪಾದಕರ ಮಂಡಳಿಗಳು, ಆಹಾರೋದ್ಯಮ, ಆಗ್ರೊ ಕೆಮಿಕಲ್ಸ್ ಅಂಡ್ ಫರ್ಟಿಲೈಸರ್‌ಗಳಲ್ಲಿ ಉದ್ಯೋಗಾವಕಾಶಗಳಿವೆ.

ಕೋರ್ಸ್‌ ಕುರಿತ ಹೆಚ್ಚಿನ ವಿವರಗಳಿಗೆ
www.cipet.gov.in ಗೆ ಭೇಟಿಕೊಡಬಹುದು. ಕಚೇರಿ ಸಂಖ್ಯೆ 0821–2510618 ಅಥವಾ ನಿರ್ದೇಶಕರು 9466146001 ಸಂಖ್ಯೆಗೆ ಸಂಪರ್ಕಿಸಬಹುದು.

***

ನಮ್ಮಲ್ಲಿ ಕಡಿಮೆ ಖರ್ಚಿನಲ್ಲಿ ಕೋರ್ಸ್‌ ಕಲಿಯಬಹುದು. ಜೊತೆಗೆ, ಉದ್ಯೋಗದ ಭರವಸೆಯೂ ಇದೆ. ಪ್ರತಿವರ್ಷ ಕಂಪನಿಗಳು ನಡೆಸುವ ಕ್ಯಾಂಪಸ್ ಸೆಲೆಕ್ಷನ್‌ನಲ್ಲಿ ನಮ್ಮ ಸಂಸ್ಥೆಯ ಹಲವು ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳು ದೊರೆತಿವೆ.

-ಆರ್.ಟಿ. ನಾಗರಹಳ್ಳಿ, ನಿರ್ದೇಶಕರು, ಸಿಪೆಟ್ ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.