ADVERTISEMENT

ಸರ್ಕಾರಿ ತರಬೇತಿ ಸಂಸ್ಥೆ: ‘ಫುಡ್‌ ಕ್ರಾಫ್ಟ್‌’ ನಲ್ಲಿ ಡಿಪ್ಲೊಮಾ ಕೋರ್ಸ್‌

ಮೈಸೂರಿನಲ್ಲಿ ಸರ್ಕಾರಿ ತರಬೇತಿ ಸಂಸ್ಥೆ

ಬೇಂದ್ರೆ ಮಂಜುನಾಥ್‌ ಕೆ.ಟಿ.ಹಳ್ಳಿ
Published 24 ಜುಲೈ 2022, 19:30 IST
Last Updated 24 ಜುಲೈ 2022, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ದೇಶದಲ್ಲಿನ ಪ್ರವಾಸೋದ್ಯಮದ ಯಶಸ್ಸಿಗೆ ಅಲ್ಲಿನ ಹೋಟೆಲ್ ಮತ್ತು ಆತಿಥ್ಯ ವ್ಯವಸ್ಥೆಯೂ ಕಾರಣ ವಾಗಿದೆ. ಈ ಕಾರಣದಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಹೋಟೆಲ್ ಆಡಳಿತ ನಿರ್ವಹಣೆ ವಿಷಯದಲ್ಲಿ ಡಿಪ್ಲೊಮಾ, ಪದವಿ ಮತ್ತು ಎಂಬಿಎ ಕೋರ್ಸ್‌ಗಳ ಅಧ್ಯಯನಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವಿರುವ ಕಡೆ ಸ್ಥಳೀಯ ಯುವಜನರಿಗೆ ಆಹಾರ ತಯಾರಿಕೆ, ಆತಿಥ್ಯ ವಿಷಯಗಳಲ್ಲಿ ಕೌಶಲ ತರಬೇತಿ ನೀಡಿ ಉದ್ಯೋಗ ಅವಕಾಶಕಲ್ಪಿಸುವ ಉದ್ದೇಶದಿಂದ ಸರ್ಕಾರ ಫುಡ್‌ಕ್ರಾಫ್ಟ್ ಸಂಸ್ಥೆಗಳನ್ನು ಆರಂಭಿಸಿದೆ.

ಅಂಥದ್ದೊಂದು ಸರ್ಕಾರಿ ‘ಫುಡ್‌ಕ್ರಾಫ್ಟ್‌ ಇನ್‌ಸ್ಟಿಟ್ಯೂಟ್‌’ ಮೈಸೂರು ನಗರದ ವಸ್ತುಪ್ರದರ್ಶನ ಮೈದಾನದಲ್ಲಿದೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರವಾಸೋದ್ಯಮ ಇಲಾಖೆಗಳ ವ್ಯಾಪ್ತಿಯಲ್ಲಿರುವ ಸ್ವಾಯತ್ತ ಸಂಸ್ಥೆ. ಇಲ್ಲಿ ಆಹಾರ ತಯಾರಿಕೆ, ಬೇಕರಿ ಮತ್ತು ಕನ್‌ಫೆಕ್ಷನರಿ, ಆಹಾರ ಮತ್ತು ಪಾನೀಯ, ಸ್ವಾಗತ ಮತ್ತು ಕಚೇರಿ ನಿರ್ವಹಣೆ (ಫ್ರಂಟ್ ಆಫೀಸ್), ಹೌಸ್‌ಕೀಪಿಂಗ್ ವಿಷಯಗಳಲ್ಲಿ ಡಿಪ್ಲೊಮಾ ಕೋರ್ಸ್‌ಗಳನ್ನು ನಡೆಸಲಾಗುತ್ತಿದೆ.

ADVERTISEMENT

ಒಂದು ವರ್ಷದ ಡಿಪ್ಲೊಮಾ ಜೊತೆಗೆ, ಕೋರ್ಸ್‌ ಮುಗಿದ ನಂತರ 6 ತಿಂಗಳ ಕಾಲ ಪ್ರತಿಷ್ಠಿತ ಹೋಟೆಲ್, ರೆಸ್ಟೊರೆಂಟ್, ರೆಸಾರ್ಟ್, ಕೇಟರಿಂಗ್, ಪ್ರವಾಸೋದ್ಯಮ ಮತ್ತು ಆತಿಥ್ಯ ಉದ್ಯಮಗಳಲ್ಲಿ ಪ್ರಾಯೋಗಿಕ ತರಬೇತಿ ಮತ್ತು ಶಿಷ್ಯವೃತ್ತಿಯ ಜೊತೆ ಸ್ಟೈಪೆಂಡ್ ಕೂಡ ನೀಡಲಾಗುತ್ತಿದೆ.

ವಿದ್ಯಾರ್ಹತೆ

ದ್ವಿತೀಯ ಪಿಯುಸಿ/ಐಟಿಐ/ ಡಿಪ್ಲೊಮಾ ತೇರ್ಗಡೆಯಾಗಿರುವ 18 ರಿಂದ 25 ವರ್ಷ ವಯೋಮಿತಿಯಲ್ಲಿರುವ ಅಭ್ಯರ್ಥಿಗಳು ಈ ಕೋರ್ಸ್‌ಗೆ ಸೇರಲು ಅರ್ಹರಾಗಿರುತ್ತಾರೆ. ಯಶಸ್ವಿಯಾಗಿ ಕೋರ್ಸ್‌ ಪೂರ್ಣಗೊಳಿಸಿದವರಿಗೆ ಉದ್ಯೋಗಾವಕಾಶ ಬಹು ತೇಕ ಖಚಿತ. ಮಾತ್ರವಲ್ಲ, ಸ್ವಯಂ ಉದ್ಯೋಗ ಆರಂಭಿಸಲೂ ಈ ತರಬೇತಿಗಳು ಪೂರಕವಾಗಿವೆ.

ಡಿಪ್ಲೊಮಾ ಕೋರ್ಸ್ ರೀತಿಯಲ್ಲಿಯೇ ಆಹಾರ ತಯಾರಿಕೆ ಮತ್ತು ಆಹಾರ ಮತ್ತು ಪಾನೀಯ ಕ್ರಾಫ್ಟ್ಸ್‌ಮನ್ ಸರ್ಟಿಫಿಕೆಟ್ ಕೋರ್ಸ್‌ಗಳನ್ನೂ ಇಲ್ಲಿ ನಡೆಸಲಾಗುತ್ತಿದೆ. ಎಸ್ಸೆಸ್ಸೆಲ್ಸಿ ಪಾಸಾದವರು ಈ ಕೋರ್ಸ್‌ಗೆ ಅರ್ಜಿ ಸಲ್ಲಿಸಬಹುದು.

ಅಲ್ಪಾವಧಿ ತರಬೇತಿ

ಇದರ ಜೊತೆಗೆ ರಾಷ್ಟ್ರೀಯ ವೃತ್ತಿ ತರಬೇತಿ ಪರಿಷತ್‌ (NCVT) ಆಗಾಗ್ಗೆ ತರಬೇತಿಗಳನ್ನು ನಡೆಸುತ್ತದೆ. ಇದರಲ್ಲಿ ಆಹಾರ ತಯಾರಿಕೆ, ಬೇಕರಿ ಮತ್ತು ಕನ್‌ಫೆಕ್ಷನರಿ, ಆಹಾರ ಮತ್ತು ಪಾನೀಯ, ಸ್ವಾಗತ ಮತ್ತು ಕಚೇರಿ ನಿರ್ವಹಣೆ (ಫ್ರಂಟ್ ಆಫೀಸ್), ಹೌಸ್‌ಕೀಪಿಂಗ್ ವಿಷಯಗಳಲ್ಲಿನ ಅಲ್ಪಾವಧಿಯ ಕೌಶಲ ತರಬೇತಿಗಳೂ (ಕ್ರ್ಯಾಷ್‌ಕೋರ್ಸ್) ಇವೆ. ಈ ತರಬೇತಿಗಳಿಗೆ ವೃತ್ತಿ ನಿರತ ಕಾರ್ಮಿಕರು, ಬೀದಿಬದಿ ಗಾಡಿಗಳಲ್ಲಿ ಕಾಫಿ, ಟೀ, ತಿಂಡಿ, ಊಟದ ಹೋಟೆಲ್ ನಡೆಸುವವರು, ಚಿಕ್ಕಪುಟ್ಟ ಕ್ಯಾಂಟಿನ್, ಹೋಟೆಲ್ ನಿರ್ವಹಿಸುವವರು ಮತ್ತು ಕಾರ್ಮಿಕರು ಹಾಗೂ ಆಸಕ್ತ ಯುವಜನರು ಸೇರಬಹುದು.

ಹಾಗೆಯೇ ಯುವಕ ಸಂಘ, ಯುವತಿ ಮಂಡಳಿ, ಸ್ವಸಹಾಯ ಸಂಘಗಳ ಆಸಕ್ತ ಯುವಜನರು ಕನಿಷ್ಠ 30 ಸಂಖ್ಯೆಯಲ್ಲಿ ಒಟ್ಟು ಸೇರಿ ಆಹಾರ ತಯಾರಿಕೆ ಕ್ಷೇತ್ರಕ್ಕೆ ಸಂಬಂಧಿಸಿದ ತಮ್ಮ ಆಯ್ಕೆಯ ವಿಷಯದಲ್ಲಿ ತರಬೇತಿ ನೀಡಬೇಕೆಂದು ಬೇಡಿಕೆ ಸಲ್ಲಿಸಿದಲ್ಲಿ ಅಂತಹವರಿಗಾಗಿಯೇ ವಿಶೇಷ ಕ್ರ್ಯಾಷ್‌ಕೋರ್ಸ್‌ಗಳನ್ನು ಕೂಡ ಆಯೋಜಿಸಲಾಗುತ್ತಿದೆ. ತರಬೇತಿ ಅವಧಿಯಲ್ಲಿ ಸ್ಟೈಪೆಂಡ್ ಹಾಗೂ ದೂರದಿಂದ ಬರುವವರಿಗೆ ಪ್ರಯಾಣ ಭತ್ಯೆ ನೀಡಲಾಗುತ್ತಿದೆ. ವಯಸ್ಸಿನ ಬೇಧವಿಲ್ಲದೇ ಈ ತರಬೇತಿಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.

ಹೆಚ್ಚಿನ ವಿವರಗಳಿಗೆ ಈ ಜಾಲತಾಣಕ್ಕೆ ಭೇಟಿ ನೀಡಿ: http://fcimysuru.com. ಸಂಪರ್ಕಕ್ಕೆ ದೂರವಾಣಿ ಸಂಖ್ಯೆಗಳು‌:‌ 0821-2974388 / 2445388 ಮೊಬೈಲ್‌: 6362018821

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.