ಸಮಾಧಾನ ಅಂಕಣ
ನನಗೆ 23 ವರ್ಷ. ಪದವೀಧರ. ನಾನು ಸರ್ಕಾರಿ ನೌಕರಿ ಸೇರಬೇಕೆಂಬುದು ನನ್ನ ಹಾಗೂ ನನ್ನ ಪಾಲಕರ ಆಸೆ. ಆದರೆ ಎಷ್ಟೇ ಪ್ರಯತ್ನಪಟ್ಟರೂ ನನಗೆ ಸರ್ಕಾರಿ ನೌಕರಿ ಸಿಗುತ್ತಿಲ್ಲ. ಬೇರೆಡೆ ಕೆಲಸಕ್ಕೆ ಸೇರಿದರೆ ಏನೇನೋ ಕಿರಿಕಿರಿ. ಆರು ತಿಂಗಳಲ್ಲಿ ನಾಲ್ಕು ಕಡೆ ಕೆಲಸ ಬಿಟ್ಟಿದ್ದೇನೆ. ನಾವೇನೂ
ಸ್ಥಿತಿವಂತರಲ್ಲ. ಇತ್ತೀಚೆಗೆ ಜ್ಯೋತಿಷಿಯೊಬ್ಬರ ಬಳಿ ಭವಿಷ್ಯ ನೋಡಿಸಿದೆ. ಮೂವತ್ತೈದರವರೆಗೂ ನನಗೆ ಸರ್ಕಾರಿ ನೌಕರಿ ಸಿಗುವುದು ಕಷ್ಟವಂತೆ. ನನಗೆ ನಾಗಶಾಪವಿದೆಯಂತೆ. ಹಾಗಾಗಿ, ನನ್ನ ಮನಸ್ಸು ಚಂಚಲವಂತೆ, ಯಾವುದೂ ಕೈಸೇರುವುದಿಲ್ಲವಂತೆ. ನಾನು ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಲು ಆಗುವುದಿಲ್ಲ ವಂತೆ. ನಲವತ್ತರ ನಂತರ ಬದುಕು ಸಮಾಧಾನದ ಹಂತಕ್ಕೆ ಬರುತ್ತದೆಯಂತೆ. ಅವರ ಮಾತಿನಿಂದ ಭಯವಾಗಿದೆ. ನನ್ನ ಹುಡುಗಿಯನ್ನು ಬಿಟ್ಟು ಬದುಕಲಾರೆ. ಏನು ಮಾಡಬೇಕು ತಿಳಿಯದಾಗಿದೆ.
⇒ಸುರೇಶ ಬೈತಕೋಲ್, ರಾಯಭಾಗ
ಮಿತ್ರ, ಜ್ಯೋತಿಷಿ ಹೇಳಿದಂತೆ ನಿನ್ನ ಜೀವನ ನಡೆಯುತ್ತದೆ ಎನ್ನುವುದನ್ನು ನಂಬಬೇಕಾಗಿಲ್ಲ. ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಾರೆ. ಬೇಕಾದರೆ ಇನ್ನೂ ಕೆಲವು ಜ್ಯೋತಿಷಿಗಳನ್ನು ಕೇಳು. ಅವರಲ್ಲಿ ಒಬ್ಬಿಬ್ಬರಾದರೂ ನಿನಗೆ ಸಾಂತ್ವನವಾಗುವ ಹಾಗೆ ಹೇಳುತ್ತಾರೆ. ಜ್ಯೋತಿಷಿ ಮಾತು ಕೇಳಿ ತನ್ನ ಅಂಗೈಯಲ್ಲಿ ಕತ್ತಿಯಿಂದ ಗೆರೆಯನ್ನು ಮಾಡಿಕೊಂಡ ಮಹಾಯೋಧ ಅಲೆಕ್ಸಾಂಡರ್ ಬಗ್ಗೆ ಓದು. ನಿನ್ನ ಜೀವನವನ್ನು ನಿನಗೆ ಬೇಕಾದಂತೆ ರೂಪಿಸಿಕೊಳ್ಳುವ ಅವಕಾಶ ಹಾಗೂ ಶಕ್ತಿ ನಿನಗೆ ಇದೆ. ನಿನ್ನ ಏಳ್ಗೆಗೆ ನೀನೇ ಶಿಲ್ಪಿ.
ನಿನಗೆ ಸರ್ಕಾರಿ ನೌಕರಿ ಸಿಗಲಾರದ ವಯಸ್ಸಲ್ಲ. ಇನ್ನು, ಪರಸ್ಪರರಿಗೆ ಪರಸ್ಪರರ ಮೇಲಿರುವ ಪ್ರೀತಿಯ ಆಳ ಹಾಗೂ ನಂಬಿಕೆಯ ಮಟ್ಟದ ಮೇಲೆ ನಿಮ್ಮಿಬ್ಬರ ಪ್ರೀತಿಯ ಸಾರ್ಥಕತೆ ಅವಲಂಬಿ ಸಿರುತ್ತದೆ. ‘ನಾಗಶಾಪ’ದ ಮಾತಿನಿಂದ ನಿನಗೆ ಭಯವಾಗಿ, ಮನಸ್ಸು ಚಂಚಲವಾಗಿದೆ. ಮನುಷ್ಯನ ಜೀವನದಲ್ಲಿ ಬಹಳಷ್ಟು ಏರುಪೇರುಗಳು, ಸೋಲು– ಗೆಲುವು ಸಹಜ. ಬಂದದ್ದನ್ನು ಬಂದಂತೆಯೇ ಅನುಭವಿಸುತ್ತ ಮುಂದೆ ಸಾಗುತ್ತಿರಬೇಕು. ಯಾವುದಕ್ಕೂ ಹೆಚ್ಚು ತಲೆಕೆಡಿಸಿಕೊಳ್ಳಬಾರದು. ಅದ್ಯಾವುದೋ ಕಾರಣದಿಂದ ನಿನ್ನ ಪ್ರೀತಿಯ ಹುಡುಗಿ ಬೇರೆಯವರನ್ನು ಮದುವೆಯಾದರೂ ನೀನು ಎದೆಗುಂದಬೇಕಾಗಿಲ್ಲ. ಜೀವನದಲ್ಲಿ ಏನೇ ಆದರೂ ಒಳ್ಳೆಯದಕ್ಕೇ ಆಗುತ್ತದೆ ಎನ್ನುವುದನ್ನು ನಂಬಿಕೊಂಡು ಮುಂದುವರಿಯಬೇಕು.
ನೀನು ಕೆಲಸ ಬಿಟ್ಟಿದ್ದಕ್ಕೆ ನಿನಗೆ ತಾಳ್ಮೆ ಕಡಿಮೆ, ನಿರೀಕ್ಷೆ ಜಾಸ್ತಿ, ನಿನ್ನ ಯೋಗ್ಯತೆಗೆ ತಕ್ಕ ಕೆಲಸವಲ್ಲ ಎನ್ನುವ ಮೇಲರಿಮೆಯಂತಹ ಕಾರಣಗಳಿರಬ ಹುದು. ನೀನು ನಿನ್ನ ಬಗ್ಗೆ ಕೀಳರಿಮೆಯನ್ನಾಗಲೀ ಹಿರಿಮೆಯನ್ನಾಗಲೀ ಬೆಳೆಸಿಕೊಳ್ಳಬಾರದು. ಎಲ್ಲರಂತೆ ನೀನೂ ಒಬ್ಬ, ಎಲ್ಲರಿಗೆ ಇರುವಂತೆ ನಿನಗೂ ಬದುಕುವ ಅವಕಾಶವಿದೆ ಎಂಬುದನ್ನು ಮನಗಾಣಬೇಕು. ಇನ್ನು, ಒಂದು ಕೆಲಸಕ್ಕೆ ಸೇರು. ಎಷ್ಟೇ ಕಷ್ಟವಾದರೂ ತಾಳ್ಮೆಗೆಡದೆ ಆರು ತಿಂಗಳವ ರೆಗಾದರೂ ಚೆನ್ನಾಗಿ ಕೆಲಸ ಮಾಡು. ನಿನಗೆ ಕೆಲಸ ಕೊಟ್ಟವರು ನಿನ್ನನ್ನು ಇಷ್ಟಪಡುವ ಹಾಗೆ,
ಇಷ್ಟಪಡುವವರೆಗೆ ಅದೇ ಕೆಲಸ ಮಾಡು. ಅಲ್ಲಿಯೇ ನಿನಗೆ ಭವಿಷ್ಯದ ಬಗ್ಗೆ ಶುಭ ಸೂಚನೆ ಸಿಗುತ್ತದೆ.
23ರಿಂದ 30ರ ವಯಸ್ಸು ಬಹುತೇಕ ಪ್ರತಿ ಗಂಡಸಿಗೂ ಪರೀಕ್ಷೆಯ ಕಾಲ. ಭಯದಿಂದ ನಿರ್ಧಾರ ಮಾಡಬಾರದು. ತಾಳ್ಮೆಯಿಂದ ಸಾವಕಾಶ ವಾಗಿ ಎಲ್ಲವನ್ನೂ ನಿಭಾಯಿಸಬೇಕು. ಮನಸ್ಸು ಸಮಾಧಾನಗೊಂಡರೆ ಎಲ್ಲವೂ ನಿರಾಳವಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.