ADVERTISEMENT

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಎಂಬಿಎ ಕೋರ್ಸ್‌ಗೆ ತಯಾರಿ ಹೇಗೆ?

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2022, 19:30 IST
Last Updated 10 ಏಪ್ರಿಲ್ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

1. ನಾನು ಎರಡನೇ ವರ್ಷದ ಬಿಕಾಂ ವಿದ್ಯಾರ್ಥಿ. ಮುಂದೆ ಎಂಬಿಎ ಮಾಡಬೇಕೆಂಬ ಆಸೆ ಇದೆ. ಯಾವ ರೀತಿ ತಯಾರಿ ನಡೆಸಬೇಕು?

-ಪ್ರತ್ಯೂಷ, ಮೈಸೂರು.

ಬಿಕಾಂ ನಂತರ ಎಂಬಿಎ ಮಾಡುವುದು ಉತ್ತಮ ಆಯ್ಕೆ. ಎಂಬಿಎ ಕೋರ್ಸ್ ಅನ್ನು ಮಾರ್ಕೆಟಿಂಗ್, ಎಚ್‌ಆರ್, ಪ್ರೊಡಕ್ಷನ್, ಫೈನಾನ್ಸ್, ಲಾಜಿಸ್ಟಿಕ್ಸ್ ಇತ್ಯಾದಿ ವಿಭಾಗಗಳಲ್ಲಿ ಮಾಡಬಹುದು. ನಿಮ್ಮ ಆಸಕ್ತಿ, ಅಭಿರುಚಿಯಂತೆ ಯಾವ ವಿಭಾಗದಲ್ಲಿ ಎಂಬಿಎ ಮಾಡಬೇಕು ಎಂದು ನಿರ್ಧರಿಸಿ, ಅದರಂತೆ ದೀರ್ಘಾವಧಿ ವೃತ್ತಿ ಜೀವನದ ಯೋಜನೆಯನ್ನು ಮಾಡಬೇಕು.

ADVERTISEMENT

ಎಲ್ಲಾ ಎಂಬಿಎ ಕಾಲೇಜು/ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪರೀಕ್ಷೆಯಿರುತ್ತದೆ; ಉದಾಹರಣೆಗೆ ಕಾಮನ್ ಅಡ್ಮಿಷನ್ ಟೆಸ್ಟ್ (ಕ್ಯಾಟ್), ಮ್ಯಾನೇಜ್‌ಮೆಂಟ್ ಅಡ್ಮಿಷನ್ ಟೆಸ್ಟ್ (ಮ್ಯಾಟ್), ಗ್ರಾಜುಯೇಟ್ ಮ್ಯಾನೇಜ್‌ಮೆಂಟ್ ಅಡ್ಮಿಷನ್ ಟೆಸ್ಟ್ (ಜಿಮ್ಯಾಟ್), ಬಿಸಿನೆಸ್‌ ಅನಲಿಟಿಕ್ಸ್ ಆಪ್ಟಿಟ್ಯೂಡ್ ಟೆಸ್ಟ್ (ಬ್ಯಾಟ್), ಪಿಜಿಸಿಇಟಿ, ಕೆಲವು ಪ್ರತಿಷ್ಟಿತ ಸಂಸ್ಥೆಗಳಲ್ಲಿ ಎಂಬಿಎ ಪ್ರವೇಶದ ಅರ್ಹತೆಯನ್ನು ನಿರ್ಧರಿಸುವ ಪರೀಕ್ಷೆಗಳು. ಈ ಪರೀಕ್ಷೆಗಳ ಪ್ರಾಮುಖ್ಯ, ಕಠಿಣತೆಯ ಮಟ್ಟ, ನಿಮ್ಮ ಧ್ಯೇಯ ಮತ್ತು ಸಾಮರ್ಥ್ಯದ ಆಧಾರದ ಮೇಲೆ ಸೂಕ್ತ ಕಾರ್ಯ ತಂತ್ರವನ್ನು ರೂಪಿಸಿ, ನಿಮ್ಮ ಆದ್ಯತೆಯಂತೆ ಪ್ರವೇಶ ಪರೀಕ್ಷೆಗಳ ಮೂಲಕ ಎಂಬಿಎ ಕೋರ್ಸ್‌ಗೆ ಸೇರಬಹುದು. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಗಮನಿಸಿ: https://collegedunia.com/mba/karnataka-colleges

2. ಎಷ್ಟು ಓದಿದರೂ ಎಲ್ಲವೂ ಮರೆತುಹೋಗುತ್ತದೆ. ನೆನಪಿನಲ್ಲಿ ಉಳಿಯುವಂತೆಓದುವುದಕ್ಕೆ ಏನಾದರೂ ವಿಧಾನವಿದೆಯೇ ?

-ಹೆಸರು, ಊರು ತಿಳಿಸಿಲ್ಲ.

ಓದಿದ ವಿಷಯ ಮರೆತುಹೋಗುವುದು ಒಂದು ಸಾಮಾನ್ಯ ಹಾಗೂ ಗಂಭೀರವಾದ ಸಮಸ್ಯೆ. ಓದುವಿಕೆಯಲ್ಲಿ ಪರಿಣಾಮಕಾರಿ ಕಾರ್ಯತಂತ್ರಗಳನ್ನು ಅಳವಡಿಸದಿರುವುದರಿಂದ ಓದಿದ ವಿಷಯಗಳು ನಿಮ್ಮ ಅಲ್ಪಾವಧಿ ಸ್ಮರಣೆಯಲ್ಲಿ ಮಾತ್ರ ಇರುತ್ತದೆ. ಹಾಗಾಗಿ, ಪರೀಕ್ಷೆ/ಟೆಸ್ಟ್‌ಗಳಲ್ಲಿ ಓದಿದ ವಿಷಯ ಜ್ಞಾಪಕಕ್ಕೆ ಬರುವುದಿಲ್ಲ. ಓದಿದ ವಿಷಯಗಳು ದೀರ್ಘಾವಧಿ ಸ್ಮರಣೆಯಲ್ಲಿರಬೇಕಾದರೆ, ಓದುವಿಕೆ ಪರಿಣಾಮಕಾರಿಯಾಗಿರಬೇಕು. ಓದುವ ಪ್ರಕ್ರಿಯೆಯ ಜೊತೆ ಸಮೀಕ್ಷೆ, ಪ್ರಶ್ನಿಸುವಿಕೆ, ಪುನರುಚ್ಛಾರಣೆ ಮತ್ತು ಪುನರಾವರ್ತನೆ ಇರಬೇಕು. ಇದಲ್ಲದೆ ತರಗತಿಗಳಲ್ಲಿ, ನೀಡುವ ಉಪನ್ಯಾಸದ ಟಿಪ್ಪಣಿಯನ್ನು(ನೋಟ್ಸ್‌) ಸರಿಯಾದ ಕ್ರಮದಲ್ಲಿ, ಓದುವಿಕೆಗೆ ಪೂರಕವಾಗುವಂತೆ ಬರೆದಿಟ್ಟುಕೊಳ್ಳಬೇಕು. ಆದರೆ, ಹೆಚ್ಚಿನ ಶಾಲಾ/ಕಾಲೇಜುಗಳಲ್ಲಿ ಪರಿಣಾಮಕಾರಿ ಓದುವಿಕೆಯ ಈ ಕಾರ್ಯತಂತ್ರಗಳ ಕುರಿತು ತರಬೇತಿ ನೀಡಿರುವುದಿಲ್ಲ. ಈ ಕಾರ್ಯತಂತ್ರಗಳು ಮತ್ತು ನೋಟ್ಸ್ ಬರೆಯುವ ಕ್ರಮ.. ಇತ್ಯಾದಿ ವಿಷಯಗಳ ಕುರಿತ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ https://www.youtube.com/c/EducationalExpertManagementCareerConsultant

3. ನನ್ನ ತಂದೆ, ತಾಯಿ ಹೆಸರುಗಳು, ಅವರ ಮತ್ತು ನನ್ನ ದಾಖಲೆಗಳಲ್ಲಿ ವ್ಯತ್ಯಾಸವಾಗಿದೆ. ಇದನ್ನು ಸರಿಪಡಿಸುವುದು ಹೇಗೆ?

-ಸಂದೀಪ್, ಹೊಸದುರ್ಗ.

ನಿಮ್ಮ ದಾಖಲೆಗಳಲ್ಲಿ ತಿದ್ದುಪಡಿ ಮಾಡಬೇಕೆಂದರೆ ಸಂಬಂಧಿಸಿದ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಿಗೆ ನಿಗದಿತ ಅರ್ಜಿಯ ಪ್ರಕಾರ, ಸೂಕ್ತ ದಾಖಲೆಗಳೊಂದಿಗೆ ಪ್ರಮಾಣಪತ್ರ ಸಲ್ಲಿಸಬೇಕು. ನ್ಯಾಯಾಧೀಶರ ಅನುಮೋದನೆಯ ನಂತರ ಪ್ರಮಾಣಪತ್ರ ಮತ್ತು ಇನ್ನಿತರ ದಾಖಲೆಗಳೊಂದಿಗೆ ನಿಮ್ಮ ಶಾಲೆಯ/ಕಾಲೇಜಿನ ಮೂಲಕ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ/ವಿಶ್ವವಿದ್ಯಾಲಯಕ್ಕೆ ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಿ.

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ

ವಿದ್ಯಾರ್ಥಿಗಳೇ, ನಿಮ್ಮ ಮುಂದಿನ ಕೋರ್ಸ್‌ ಮತ್ತು ಸೂಕ್ತವಾದ ವೃತ್ತಿಯ ಆಯ್ಕೆ ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳುವ ಬಗ್ಗೆ ಗೊಂದಲಗಳಿವೆಯೇ? ಹಾಗಿದ್ದರೆ ನಮಗೆ ಬರೆಯಿರಿ. ನಿಮ್ಮ ಪ್ರಶ್ನೆಗಳಿಗೆ ಶಿಕ್ಷಣ ತಜ್ಞ ಮತ್ತು ವೃತ್ತಿ ಸಲಹೆಗಾರ ವಿ. ಪ್ರದೀಪ್ ಕುಮಾರ್ ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು shikshana@prajavani.co.in ಗೆ ಕಳಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.