ADVERTISEMENT

Technology in Teaching | ತಂತ್ರಜ್ಞಾನದ ಮೋಹ: ಆಧುನಿಕ ಮೂಢನಂಬಿಕೆ?!

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 23:30 IST
Last Updated 13 ಜುಲೈ 2025, 23:30 IST
   

ಜ್ಞಾನ, ತಂತ್ರಜ್ಞಾನ ಮತ್ತು ಕಲಿಕೆ- ಈ ಮೂರೂ ಪದಗಳು ನೀತಿ ನಿರೂಪಕರು, ಶಿಕ್ಷಣ ತಜ್ಞರು ಹಾಗೂ ಬೋಧಕರಲ್ಲಷ್ಟೇ ಅಲ್ಲದೆ ವಿದ್ಯಾರ್ಥಿಗಳಲ್ಲೂ ದ್ವಂದ್ವ, ಗೊಂದಲವನ್ನು ಹುಟ್ಟಿಸುತ್ತಲೇ ಇವೆ. ವೃತ್ತಿಪರ ಮತ್ತು ವ್ಯಕ್ತಿಗತ ಬದುಕನ್ನು ಸಮೃದ್ಧಗೊಳಿಸಿಕೊಳ್ಳುವ ಶ್ರೇಷ್ಠ ಮಾರ್ಗವಾಗಿರುವ ಶಿಕ್ಷಣವು ತಂತ್ರಜ್ಞಾನದ ಕಡೆಗೇ ಹೆಚ್ಚು ವಾಲಿದಾಗ ಇಂಥದ್ದೊಂದು ಪರಿಸ್ಥಿತಿ ಸೃಷ್ಟಿಯಾಗುತ್ತದೆ. ಆಗ ವಿದ್ಯಾರ್ಥಿಗಳನ್ನು ಮಾನವ ಸಂಪನ್ಮೂಲವನ್ನಾಗಿ ಪರಿವರ್ತಿಸುವುದಕ್ಕೆ ಸಾಧ್ಯವಾಗುವುದಿಲ್ಲ.

ಶೈಕ್ಷಣಿಕ ಕಲಿಕಾ ಕ್ರಮಗಳು ಈಚಿನ ವರ್ಷಗಳಲ್ಲಿ ಆಮೂಲಾಗ್ರವಾಗಿ ಬದಲಾಗಿವೆ. ಸಾಂಪ್ರದಾಯಿಕ ತರಗತಿ ಬೋಧನೆಯ ಬದಲು ಸ್ಮಾರ್ಟ್ ಬೋರ್ಡ್, ಪವರ್ ಪಾಯಿಂಟ್ ಪ್ರೆಸೆಂಟೇಷನ್, ಲರ್ನಿಂಗ್ ನೋಟ್ಸ್, ಸೆಲ್ಫ್‌ ಲರ್ನಿಂಗ್ ಸಿಸ್ಟಮ್‌ನಂತಹ ಹಲವು ವಿಧಾನಗಳನ್ನು ಶಾಲಾ–ಕಾಲೇಜುಗಳು ಅನುಸರಿಸುತ್ತಿವೆ. ಆದರೆ, ಈ ಹಿಂದಿನ ಸಾಂಪ್ರದಾಯಿಕ ಬೋಧನೆಯ ವಿಧಾನದಲ್ಲಿ ಇದ್ದ ಅಂತಃಸತ್ವವನ್ನು ವಿಸ್ತರಿಸುವ ಪ್ರಯತ್ನಗಳು ಮಾತ್ರ ಕಾಣುವುದಿಲ್ಲ. ಯಾಂತ್ರಿಕತೆಯ ಅತಿಯಾದ ಅವಲಂಬನೆಯಿಂದ, ಹೊಸದಾಗಿ ಯೋಚಿಸುವ ಸಾಮರ್ಥ್ಯವನ್ನು ಸೃಜಿಸುವ ತರಗತಿ ಬೋಧನೆಯ ಶಕ್ತಿ ಕುಂದುತ್ತಿದೆ.

ತರಗತಿಯ ಬೋರ್ಡ್ ಸ್ಮಾರ್ಟ್ ಆಗಿ ಬದಲಾದಾಗ ಅಲ್ಲಿ ಮೂಡುವ ಅಕ್ಷರಗಳು, ಪರದೆಯ ಮುಖಾಂತರ ಅನಾವರಣಗೊಳ್ಳುವ ದೃಶ್ಯಗಳು, ಪೂರಕ ಟಿಪ್ಪಣಿಗಳ ಉಲ್ಲೇಖ ಎಲ್ಲವೂ ವಿಶೇಷ ಅನುಭವ ನೀಡುವುದಂತೂ ನಿಜ. ಪ್ರಾಥಮಿಕ ಶಾಲಾ ಹಂತದಲ್ಲಿ ಜಿಲ್ಲಾ ಪ್ರಾಥಮಿಕ ಶಿಕ್ಷಣ ಕಾರ್ಯಕ್ರಮ (ಡಿಪಿಇಪಿ) ಅನುಷ್ಠಾನಕ್ಕೆ ಬಂದಿದ್ದು ಈ ದೃಷ್ಟಿಯಿಂದಲೇ. ಕಲಿ-ನಲಿ ಪರಿಕಲ್ಪನೆಗೆ ಅನುಗುಣವಾಗಿ ತರಗತಿಗಳನ್ನು ಆಸಕ್ತಿದಾಯಕವಾಗಿಸುವ ಉದ್ದೇಶ ಈ ಯೋಜನೆಯ ಹಿಂದಿತ್ತು. ಆದರೆ ಈ ಕಾರಣಕ್ಕೆ ರಂಜನೀಯ ಅಂಶಗಳಿಗೇ ಹೆಚ್ಚು ಆದ್ಯತೆ ನೀಡುತ್ತಾ ಹೋದರೆ ಕಲಿಕೆ ಜಾಳುಜಾಳಾಗುತ್ತದೆ. ಎಲ್ಲವನ್ನೂ ದೃಶ್ಯದ ಮೂಲಕವೇ ನೆನಪಿಸಿಕೊಳ್ಳುವ ಮತ್ತು ಕಲಿಕಾ ಸಲಕರಣೆಗಳ ಮೂಲಕ ಅರ್ಥಕ್ಕೆ ದಕ್ಕಿಸಿಕೊಳ್ಳುವ ಉತ್ಸಾಹವು ಜ್ಞಾನಾರ್ಜನೆಯ ಹಾದಿಯನ್ನು ಸುಲಭವಾಗಿಸಬಹುದು. ಆದರೆ ಕಲಿಕೆಯ ಶಕ್ತಿಯನ್ನು ವೃದ್ಧಿಸುವುದಿಲ್ಲ. ರಚನಾತ್ಮಕ ಚಿಂತನೆಯ ಸಾಮರ್ಥ್ಯವನ್ನು ರೂಢಿಸುವುದಿಲ್ಲ.

ADVERTISEMENT

ಸ್ಮಾರ್ಟ್ ಬೋರ್ಡ್ ಮೂಲಕ ಅನಾವರಣಗೊಳ್ಳುವ ಒಂದು ಸ್ಲೈಡ್, ತರಗತಿಯ ಚರ್ಚೆಯ ಮುಖ್ಯ ವಿಷಯದ ಪ್ರಾಥಮಿಕ ಮತ್ತು ಅನ್ವಯಿಕ ಆಲೋಚನೆಗಳನ್ನು ದಾಟಿಸುವ ಸಂಕ್ಷಿಪ್ತ ಪದಗಳನ್ನು ಒಳಗೊಂಡಿರಬೇಕು. ಇದಕ್ಕೆ ಅನುಗುಣವಾಗಿ ಸ್ಲೈಡ್ ಪರದೆಯ ವಿನ್ಯಾಸವಿದ್ದರೆ ವಿದ್ಯಾರ್ಥಿಯ ಗ್ರಹಿಕೆಯ ಶಕ್ತಿ ವಿಸ್ತರಿಸುವುದಕ್ಕೆ ಸಹಾಯಕವಾಗುತ್ತದೆ. ಆಗ ಮಾತ್ರ ಸ್ಮಾರ್ಟ್ ಬೋರ್ಡ್ ಜೊತೆಗಿನ ಬೋಧನೆ ವಿಶೇಷ ಅನುಭವವನ್ನು ನೀಡುವಲ್ಲಿ ಯಶಸ್ವಿಯಾಗುತ್ತದೆ.  ಇಲ್ಲದಿದ್ದರೆ ಜ್ಞಾನಾರ್ಜನೆಯ ಯಾನವು ಯಾಂತ್ರಿಕ ಅವಲಂಬನೆಯ ಮಿತಿಯೊಂದಿಗೆ ಮೊಟಕುಗೊಳ್ಳುತ್ತದೆ.

ಈ ಸೂಕ್ಷ್ಮವನ್ನು ಅರಿಯದೇ ಬೋಧನೆಯ ಕ್ರಮಗಳನ್ನು ಅನುಸರಿಸಿದರೆ, ವಿದ್ಯಾರ್ಥಿಗಳು ಪರೀಕ್ಷೆ ಹತ್ತಿರವಾದಾಗ ಪವರ್ ಪಾಯಿಂಟ್ ಪ್ರೆಸೆಂಟೇಷನ್‍ನ ಸ್ಲೈಡ್‍ಗಳಲ್ಲಿರುವ ಬುಲೆಟ್ ಪಾಯಿಂಟ್‍ಗಳನ್ನಷ್ಟೇ ಉರು ಹೊಡೆದು ಯಾಂತ್ರಿಕವಾಗಿ ಉತ್ತರ ಬರೆಯುತ್ತಾರೆ. ಇದು ಸಂತೆಯ ಹೊತ್ತಿಗೆ ಮೂರು ಮೊಳ ನೇಯುವ ಕೆಲಸದಂತೆ ಆಗುತ್ತದೆ. ಈ ಉತ್ತರಪತ್ರಿಕೆಯಲ್ಲಿ ಗಂಧಗಾಳಿಯೇ ಇಲ್ಲ, ಬರೆದದ್ದೆಲ್ಲಾ ಟೊಳ್ಳು ಎಂದು ಮೌಲ್ಯಮಾಪಕರು ಗೊಣಗುವುದು ಇದೇ ಕಾರಣಕ್ಕೆ. ಸ್ಮಾರ್ಟ್ ಬೋರ್ಡ್, ವಿಡಿಯೊಗಳ ರೆಫರೆನ್ಸ್, ಚಿತ್ರವಿನ್ಯಾಸಗಳ ಬಳಕೆ, ನಿಜಜೀವನದ ವಿವರಗಳ ಉಲ್ಲೇಖ ಸೇರಿದಂತೆ ತಾಂತ್ರಿಕತೆಯನ್ನು ಕೇಂದ್ರೀಕರಿಸಿಕೊಂಡ ಹೊಸ ಪ್ರಯೋಗಗಳನ್ನು ನಡೆಸಿದ ಮೇಲೂ ಎಷ್ಟೋ ವಿದ್ಯಾರ್ಥಿಗಳ ಉತ್ತರ ಟೊಳ್ಳಾಗೇ ಇರುವುದು ಯಾಕೆಂದರೆ, ಅವರು ಪರೀಕ್ಷಾ ಕೊಠಡಿಗೆ ಬಂದ ನಂತರ ಯೋಚಿಸಲು ಆರಂಭಿಸಿರುತ್ತಾರೆ. ಅದಕ್ಕಿಂತ ಮುಂಚೆ ಪಾಯಿಂಟ್‌ಗಳನ್ನು ಉರು ಹೊಡೆದಿರುತ್ತಾರೆ ಅಷ್ಟೆ. ಅವುಗಳ ಬಗ್ಗೆ ಯೋಚಿಸಿರುವುದೇ ಇಲ್ಲ.

ವಿದ್ಯಾರ್ಥಿಗಳಲ್ಲಿ ಪಠ್ಯವಿಷಯದ ಪರಿಕಲ್ಪನೆಯನ್ನು ಬಹು ಆಯಾಮಗಳಲ್ಲಿ ಗಮನಿಸುವ ಒತ್ತಾಸೆಯನ್ನು ಮೂಡಿಸಬೇಕು. ಅದಕ್ಕೆ ಅನುಗುಣವಾಗಿ ತಾಂತ್ರಿಕ ಸಲಕರಣೆಗಳನ್ನು ಪೂರಕವಾಗಿಸಿಕೊಂಡು ತರಗತಿಯ ಚರ್ಚೆಯನ್ನು ಭಿನ್ನವಾಗಿಸಬೇಕು. ಇದರಿಂದ ತರಗತಿಯು ಆಸಕ್ತಿದಾಯಕವೂ ಆಗುತ್ತದೆ, ಹೊಸ ಚರ್ಚೆಗಳ ಹುಟ್ಟಿಗೂ ಕಾರಣವಾಗುತ್ತದೆ, ವಿದ್ಯಾರ್ಥಿಗಳ ಅರಿವಿನ ಸಾಮರ್ಥ್ಯವನ್ನೂ ವಿಸ್ತರಿಸುತ್ತದೆ.

ತಿರುಗುಬಾಣವಾಗುತ್ತಿದೆ ಸ್ಮಾರ್ಟ್‌ ಬೋರ್ಡ್‌!
ಈಗಂತೂ ಸ್ಮಾರ್ಟ್ ಬೋರ್ಡನ್ನು ಯಾರು ಹೆಚ್ಚು ಉಪಯೋಗಿಸುತ್ತಾರೋ ಅವರಿಗೇ ಹೆಚ್ಚು ಆದ್ಯತೆ ಇದೆ. ಬೋಧಕರಿಗೆ ವಿದ್ಯಾರ್ಥಿಗಳು ಅಂಕ ನೀಡುವಾಗ ಈ ನಿಯಮವನ್ನು ಆಧರಿಸಿದ ಒಂದು ಪ್ರಶ್ನೆಯನ್ನು ವಿದ್ಯಾರ್ಥಿಗಳಿಗೆ ಕೇಳಲಾಗುತ್ತದೆ. ತರಗತಿಯನ್ನು ಆಸಕ್ತಿದಾಯಕ ಆಗಿಸುವುದಕ್ಕೆ ಶಿಕ್ಷಕರು ತಾಂತ್ರಿಕತೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿರುವುದನ್ನು ದೃಢೀಕರಿಸುವ ಸಲುವಾಗಿ ಈ ನಿಯಮವನ್ನು ರೂಪಿಸಲಾಗಿದೆ. ಆದರೆ ಇದು ಬಹುತೇಕ ಬೋಧಕರು ಮತ್ತು ವಿದ್ಯಾರ್ಥಿಗಳಿಗೆ ತಿರುಗುಬಾಣವಾಗುತ್ತಿದೆ. ಕಲಿಕೆಯ ಕುರಿತು ಗಂಭೀರವಾಗಿರುವ, ತಿಳಿದುಕೊಳ್ಳುವ ಹಂಬಲವುಳ್ಳ ವಿದ್ಯಾರ್ಥಿಗಳು ಮಾತ್ರ ತರಗತಿಯಲ್ಲಿ ಚರ್ಚೆಗೆ ಒಳಪಡುವ ವಿಷಯಗಳ ಆಧಾರದ ಮೇಲೆ ಹೊಸದಾಗಿ ಯೋಚಿಸುವ ಪ್ರಯತ್ನ ಮಾಡುತ್ತಾರೆ. ಹಾಗಾಗಿಯೇ ಒಂದು ತರಗತಿಯ ಕೆಲವೇ ಕೆಲವು ವಿದ್ಯಾರ್ಥಿಗಳ ಉತ್ತರಪತ್ರಿಕೆಗಳು ಭಿನ್ನವಾಗಿ ಇರುತ್ತವೆ. ಇನ್ನುಳಿದವರ ಅರಿವು, ಯಾಂತ್ರಿಕ ಅವಲಂಬನೆಯ ಮಿತಿಯೊಂದಿಗೆ ಮೊಟಕುಗೊಳ್ಳುತ್ತದೆ.
ಪ್ರಶ್ನೆ ಹುಟ್ಟಲಿ
ತಂತ್ರಜ್ಞಾನವನ್ನು ಬಳಸಿ ತರಗತಿಯನ್ನು ನಿರ್ವಹಿಸುವಾಗ ಬೋಧಕರಿಗೆ ಇರುವಷ್ಟೇ ಎಚ್ಚರದ ಪ್ರಜ್ಞೆ ವಿದ್ಯಾರ್ಥಿಗಳಲ್ಲೂ ಇರಬೇಕು. ಹಾಗಿದ್ದಾಗ ಪ್ರಶ್ನೆಗಳು ಹುಟ್ಟುತ್ತವೆ. ಪ್ರಶ್ನೆಗಳನ್ನು ಕೇಳುತ್ತಾ ರಚನಾತ್ಮಕ ಚಿಂತನೆಯ ಶಕ್ತಿಯನ್ನು ರೂಪಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳಬೇಕು ಎಂಬ ‘ಶೈಕ್ಷಣಿಕ ಹಸಿವು’ ಶಿಕ್ಷಕರಲ್ಲೂ ಇರಬೇಕು. ಆಗ ಮಾತ್ರ ತಂತ್ರಜ್ಞಾನ ಆಧಾರಿತ ತರಗತಿಗಳು ಅತಿಹೆಚ್ಚು ಪರಿಣಾಮಕಾರಿ ಆಗಲು ಸಾಧ್ಯ.

ಲೇಖಕ: ಸಹಾಯಕ ಪ್ರಾಧ್ಯಾಪಕ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್‌ಡಿಎಂ ಸ್ನಾತಕೋತ್ತರ ಕೇಂದ್ರ, ಉಜಿರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.