ADVERTISEMENT

ಶಿಕ್ಷಣ: summer vacation– ಬೇಸಿಗೆ ರಜಾ ಉಳಿಯಲಿ ಮಜಾ..

ಲಲಿತಾ ಕೆ ಹೊಸಪ್ಯಾಟಿ.
Published 19 ಮೇ 2025, 1:30 IST
Last Updated 19 ಮೇ 2025, 1:30 IST
<div class="paragraphs"><p>ಶಿಕ್ಷಣ: summer vacation– ಬೇಸಿಗೆ ರಜಾ ಉಳಿಯಲಿ ಮಜಾ..</p></div>

ಶಿಕ್ಷಣ: summer vacation– ಬೇಸಿಗೆ ರಜಾ ಉಳಿಯಲಿ ಮಜಾ..

   

ಬೆಂಗಳೂರಿನಲ್ಲಿ ಓದುತ್ತಿರುವ ಸ್ವರಾ ಮತ್ತು ಆಕೆಯ ತಮ್ಮ ಶ್ಲೋಕ್ ಇಬ್ಬರೂ ಬೇಸಿಗೆ ರಜೆ ಬಂದರೆ ಕುಣಿದಾಡುತ್ತಾರೆ. ತೋಟದ ಮನೆಗೆ ಹೋಗೋಣ ಎಂದು ತಾಯಿಯನ್ನು ಪೀಡಿಸುತ್ತಲೇ ಇರುತ್ತಾರೆ. ಮಕ್ಕಳು ಬೇಸಿಗೆ ರಜೆಯಲ್ಲಿ ಯಾವುದಾದರೂ ಬೇಸಿಗೆ ಶಿಬಿರಕ್ಕೆ ಸೇರಬಹುದಾಗಿತ್ತು. ಆದರೆ ಶಿಬಿರಕ್ಕೆ ಹೋಗುವುದಕ್ಕಿಂತ ತೋಟದ ಗುಡಿಸಲಿನ ಮನೆಗೆ ಹೋಗಲು ಇಷ್ಟ ಪಡುತ್ತಾರೆ. ಅವರಿಗೆ ಆ ಪ್ರಕೃತಿ ಪರಿಸರದಲ್ಲಿ ಇಡೀ ದಿನ ಓಡಾಡುವುದೇ ಖುಶಿ. ದೊಡ್ಡ ಬೇವಿನ ಮರಕ್ಕೆ ಜೋಕಾಲಿ ಕಟ್ಟಿ ಇಡೀ ದಿನ ಜೀಕಿದರೂ ತೃಪ್ತಿ ಇಲ್ಲ. ಚಕ್ಕಡಿ ಹೊಡೆಯುವರಿಲ್ಲದೇ ಕಳಚಿದ ಒಂಟಿ ಗಾಲಿಯೊಂದನ್ನು ಅವರ ತಂದೆ ಗಿಡಕ್ಕೆ ವರೆಗಿಸಿಟ್ಟಿದ್ದಾರೆ. ಬಂಡಿಗೆ ಹಚ್ಚಲು ಪೇಂಟ್ ತಂದಿದ್ದಾರೆ. ಮಕ್ಕಳು ಗಾಲಿಗೆ ಬಣ್ಣ ಹಚ್ಚಿ ಅದಕ್ಕೊಂದು ಹೊಸ ರೂಪ ಕೊಟ್ಟಿದ್ದಾರೆ. ಅಲ್ಲಿರುವ ನೇಗಿಲಿಗೆ, ಹಳೆಯ ವಾಟರ್ ಟ್ಯಾಂಕ್ ಕಂಬಕ್ಕೆ ಬಣ್ಣ ಹಚ್ಚುವ  ಕಲಿಕೆ ಮನೆಯಿಂದಲೇ ಸಾಧ್ಯವಾಗಿದೆ.

ಮೊದಲಿದ್ದ ಫೊಟೋ ಬಣ್ಣ ಹಚ್ಚಿದ ಫೋಟೋ ಎರಡನ್ನೂ ಕ್ಲಿಕ್ಕಿಸಿ, ಎರಡರ ವ್ಯತ್ಯಾಸ ಕಂಡು ಅಂದ ಹೆಚ್ಚಾಗಿದ್ದಕ್ಕೆ ಖುಶಿ ಪಡುತ್ತಾರೆ. ಹೊಸ ಕೆಲಸ ಮಾಡಿದ್ದಕ್ಕೆ ಅವರ ಕಣ್ಣಲ್ಲಿ ಹೊಳಪಿದೆ. ಬಣ್ಣ ಹಚ್ಚುವ ಅಕ್ಕ ತಮ್ಮಂದಿರಲ್ಲಿಯೇ ಸ್ಪರ್ಧಾ ಮನೋಭಾವ. ಯಾರು ಮೊದಲು ಮುಗಿಸುವರೋ ಅವರಿಗೊಂದು ಪುಟ್ಟ ಬಹುಮಾನವನ್ನೂ ಅವರಮ್ಮ ಇಟ್ಟಿದ್ದಳು.

ADVERTISEMENT

ಪಂಕಜಾ ಮೊದಲೆಲ್ಲಾ ತನ್ನ ಮಕ್ಕಳನ್ನು ಬೇಸಿಗೆ ಬಂದರೆ  ಬೇಸಿಗೆ ಶಿಬಿರಕ್ಕಾಗಿ ಹುಡುಕುತ್ತಿದ್ದಳು. ಯಾವ ಶಿಬಿರ ಎಲ್ಲಿ ನಡೆಯುತ್ತದೆ. ಶುಲ್ಕ ಎಷ್ಟು ನಿಗದಿ ಪಡಿಸಿದ್ದಾರೆ. ದಿನಕ್ಕೆ ಎಷ್ಟು ಗಂಟೆ ಶಿಬಿರ ನಡೆಯುವುದು. ಎಂದೆಲ್ಲ ವಿಷಯ ತಿಳಿದು, ಅಟೋಗೆ ₹ 300 ಕೊಟ್ಟು, ಶಿಬಿರಕ್ಕೆ ದೊಡ್ಡ ಮೊತ್ತದ ಶುಲ್ಕವನ್ನೂ ಪಾವತಿಸಿ ಕಳಿಸುತ್ತಿದ್ದಳು. ದಿನಾ ಏಕಾವರ್ತಿಯಾದಾಗ ಮಕ್ಕಳಿಗೂ ನಿರಾಸಕ್ತಿ ಮೂಡಿತು.

ಪಂಕಜಾ ಮನೆಯಲ್ಲಿಯೇ ಮಕ್ಕಳು ಬೇಸಿಗೆ ರಜೆಯನ್ನು ಲವಲವಿಕೆಯಿಂದ ಕಳೆಯಲು ತಾನೇ ಒಂದು ಯೋಜನೆ ಸಿದ್ಧಪಡಿಸಿಕೊಂಡಳು. ತಾನು ಕಲಿತ ರಂಗ ಗೀತೆಗಳನ್ನು ಮನೆಯಲ್ಲಿಯೇ ಅಭ್ಯಾಸ ಮಾಡಿಸಿದಳು. ಮಕ್ಕಳ ಸ್ನೇಹಿತರೂ ಜೊತೆಯಾದರು. ಅವರೆಲ್ಲರಿಗೂ ಒಂದು ನಾಟಕವನ್ನು ಕಲಿತು ಪ್ರದರ್ಶಿಸಿದರು. ಪಂಕಜಾ ಮನೆಯಲ್ಲಿಯೇ ಬೇಸಿಗೆ ರಜೆಯನ್ನು ಸದುಪಯೋಗ ಪಡಿಕೊಂಡ ಪರಿ ಇದು.

ಬೀದರಿನಲ್ಲಿರುವ ಸ್ನೇಹಿತೆ ಭಾರತಿ ತಮ್ಮ ಮೊಮ್ಮಕ್ಕಳನ್ನು ಬೇಸಿಗೆ ಶಿಬಿರಕ್ಕೆ ಕಳಿಸಿಲ್ಲ. ಬೇಸಿಗೆ ರಜೆಯನ್ನು ಅಜ್ಜನೊಂದಿಗೆ ಕಳೆಯುವಂತೆ ಮಾಡುವಲ್ಲಿ ಯಶಸ್ಸು ಕಂಡಿದ್ದಾರೆ. ಅನಾರೋಗ್ಯದಲ್ಲಿರುವ ಅಜ್ಜನೊಂದಿಗೆ ಮಕ್ಕಳು ಮಾತಾನಾಡಿಸುವುದು, ಅವರೊಂದಿಗೆ ಅವರ ಬಾಲ್ಯದ ಸಂಗತಿಗಳನ್ನು ಕೇಳುವುದು. ಪ್ರವಾಸಿ ತಾಣಗಳ ಪರಿಚಯ ಮಾಡಿಕೊಳ್ಳುವುದು. ತಮ್ಮ ಹಿರಿಯರ ಕುರಿತು ಪುಟ್ಟ ಟಿಪ್ಪಣೆ ಮಾಡುವುದು, ಕಥಾ ಪುಸ್ತಕವನ್ನು ಜೋರಾಗಿ ಓದಿ ಇತರರೂ ಆಲಿಸುವಂತೆ ಮಾಡುವುದು. ವಿವಿಧ ಛದ್ಮ ವೇಷ ಧರಿಸುವುದು. ನಾಟಕಗಳ ಡೈಲಾಗ್ ಹೇಳುವುದು, ತಮಗೆ ಬೇಕಾದ ಹೊಸ ತಿಂಡಿ ತಿನಿಸಿಗಳನ್ನು ಮಾಡಲು ಅಜ್ಜಿಗೂ ತಾಯಿಗೂ ಅಡುಗೆ ಮನೆಯಲ್ಲಿ ಸಹಕರಿಸುವುದು. ಹಣ್ಣುಗಳನ್ನು ತರಕಾರಿಗಳನ್ನು ತೊಳೆಯುವುದು ಮಾಡಿ, ತಿಂಡಿಯನ್ನು ಊಟವನ್ನು ಒಂದೇ ಪಂಕ್ತಿಯಲ್ಲಿ ಸೇವಿಸುತ್ತಾ, ಪರಸ್ಪರ ನಕ್ಕು ನಲಿಯುತ್ತಿದ್ದಾರೆ. ಸಹಕಾರ, ಸಭ್ಯತೆ, ಸಂಬಂಧಗಳಲ್ಲಿಯ ವಿಶ್ವಾಸ, ಪ್ರೀತಿ, ಪ್ರೇಮ, ಹಿರಿಯರನ್ನು ಗೌರವಿಸುವ ಗುಣಗಳನ್ನು ಕಲಿಯುವ ಜೊತೆಗೆ ಆತ್ಮವಿಶ್ವಾಸ, ಆತ್ಮಗೌರವಗಳನ್ನು ಸಂಪಾದಿಸಿಕೊಳ್ಳುತ್ತಾರೆ. ಮಕ್ಕಳೆಲ್ಲ ಒಂದು ಕಡೆ ಇದ್ದು ಕೂಡಿ ಆಡುವುದನ್ನು, ನಕ್ಕು ನಗಿಸುವುದನ್ನು ಕಾಣುವ ಕುಟುಂಬದ ಸದಸ್ಯರಿಗೂ ಸಂತೋಷ ತಾನೇ ತಾನಾಗಿ ಇಮ್ಮಡಿಸಿದೆ.

ಮಕ್ಕಳದು ಸದಾ ಜಾಗೃತ ಮನಸ್ಸು ಎಂಬುದು ಒಪ್ಪಿತವಾದರೂ, ಒತ್ತಡವನ್ನ ಹೇರಿದಲ್ಲಿ ಮಗು ಆಸಕ್ತಿ ಕಳೆದುಕೊಳ್ಳುವಂತಾಗುತ್ತದೆ. ಎಂಟು ವರ್ಷದವರೆಗಿನ ಕಲಿಕಾ ಶಿಕ್ಷಣದಲ್ಲಿ ಶಾಲಾ ಶಿಕ್ಷಣದ ಜೊತೆಗೆ ಕುಟುಂಬ ಸಮುದಾಯ ಹಾಗೂ ಸಮಾಜದಿಂದ ದೊರೆಯುವ ಅನೌಪಚಾರಿಕ ಶಿಕ್ಷಣವೂ ಅಷ್ಟೇ ಮುಖ್ಯವಾಗಿರುತ್ತದೆ.

ಮೌಲ್ಯ ಶಿಕ್ಷಣವನ್ನು ಕೊಡುವಲ್ಲಿ ಶಾಲಾ ಶಿಕ್ಷಣದ ಪಾತ್ರ ಎಷ್ಟು ಮುಖ್ಯವೋ ಅಷ್ಟೇ ಜವಾಬ್ದಾರಿ ಕುಟುಂಬ, ಸಮಾಜ ಮತ್ತು ಸಮುದಾಯದ ಮೇಲಿದೆ. ಹಿಂಸೆ, ಅಶಿಸ್ತು ಮತ್ತು ಅವಿಧೇಯತೆ, ದುರ್ವರ್ತನೆ, ಮತ್ತು ಅನೈತಿಕ ಚಟುವಟಿಕೆಗಳಿಂದ ಮಕ್ಕಳು ದೂರವಿರಬೇಕು. ಹೀಗಾಗಿ ಪಾಲಕರು ಮನೆಯ ಹಿರಿಯರು ಸದಾ ಅವರನ್ನು ನೂರು ಕಣ್ಣೆಚ್ಚರಿಕೆಯಲ್ಲಿ ನೋಡಬೇಕಾಗುತ್ತದೆ.

ಈ ವೈಜ್ಞಾನಿಕ ಯುಗದಲ್ಲಿ ತಾರೆಗಳನ್ನು ಸುತ್ತಿ, ಚಂದ್ರಲೋಕಕ್ಕೂ ಪಯಣಿಸುವ ಅವಕಾಶಗಳು ಲಭ್ಯವಾಗಬಹುದು. ಆದರೆ, ಮಕ್ಕಳಿಗೆ ತನ್ನ ಅಜ್ಜ, ಅಜ್ಜಿ, ಮುತ್ತಜ್ಜ ಮುತ್ತಜ್ಜಿ, ದೊಡ್ಡಪ್ಪ, ದೊಡ್ಡಮ್ಮ ,ಮಾವ, ಅತ್ತಿಗೆ ,ಚಿಕ್ಕಪ್ಪ ಹೀಗೆ ಸಂಬಂಧಗಳೇ ಗೊತ್ತಿಲ್ಲ. ಅಜ್ಜನ ಎದುರಿಗೆ ಅವರ ಮೊಮ್ಮಗ ನಿಮ್ಮ ಅಜ್ಜನ ಹೆಸರೇನು ಎಂದು ಕೇಳಿದ್ದಕ್ಕೆ ಅವನೆದ್ದು ಒಳಗಿರುವ ತಾಯಿಯನ್ನು ತನ್ನ ಅಜ್ಜನ ಹೆಸರೇನು? ಎಂದು ಕೇಳಿಕೊಂಡು ಬಂದು ಉತ್ತರ ಹೇಳಿದನಂತೆ. ಅವನಿಗೆ ಇದೂ ಸಹಿತ ಉತ್ತರ ಗೊತ್ತಿಲ್ಲದ ಪ್ರಶ್ನೆ. 


ಮಗುವೊಂದು ಬೆಳೆದು ದೊಡ್ಡವನಾಗುವವರೆಗೂ ಅಪ್ಪ ಅಮ್ಮ ಮತ್ತು ಕುಟುಂಬದೊಂದಿಗೆ ಕಾಲ ಕಳೆಯುವುದು ಮುಖ್ಯ. ಪರೀಕ್ಷೆ ನಂತರ ಮಕ್ಕಳಿಗೆ ಒಂದಿಷ್ಟು ವಿರಾಮ ಸಿಗಲು ಬೇಸಿಗೆ ರಜೆ ಸದವಕಾಶ. ಹೀಗಾಗಿ ಪಾಲಕರು ಈ ಅವಕಾಶವನ್ನು ಸಂಪೂರ್ಣ ಉಪಯೋಗಿಸಿಕೊಳ್ಳಬೇಕು. ತಮ್ಮ ಸ್ವಂತದ ಊರುಗಳಿಗೆ ಕರೆದುಕೊಂಡು ಹೋಗುವುದು. ಅಲ್ಲಿರುವ ಐತಿಹಾಸಿಕ ತಾಣಗಳನ್ನು ಪರಿಚಯಿಸುವುದು, ಮಕ್ಕಳೊಂದಿಗೆ ಕೂತು ಹರಟೆ ಹೊಡೆಯುವುದು. ಹಳೆಯ ಅಲ್ಬಮಗಳನ್ನು ತೋರಿಸಿ ಪರಿಚಯಿಸುವುದು. ಇಷ್ಟದ ಆಟಗಳನ್ನು ಮನೆಯೊಳಗೆ ಅಡಿಸುವುದು. ಸಣ್ಣ ಮಕ್ಕಳಿದ್ದರೆ ಗಿಡಗಳಿಗೆ ನೀರು ಹಾಕಿಸುವುದು, ಹೂವುಗಳನ್ನು ಕೊಯ್ದು ಇಡುವಂತೆ ಮಾಡುವುದು. ಬಟ್ಟೆಗಳನ್ನು ನೀಟಾಗಿ ಮಡಿಚಿ ಇಡಲು ಕಲಿಸುವುದು. ಅಷ್ಟೇ ಅಲ್ಲದೆ ತಾವೇ ಬಿಡುವು ಮಾಡಿಕೊಂಡು ಕಥೆಗಳನ್ನು ಮಕ್ಕಳಿಗೆ ಓದಿ ಹೇಳುವುದು ಮಾಡಬೇಕು.

ಜಾನ್ ಡ್ಯೂಯಿ ಎಂಬವರ ಪ್ರಕಾರ ಶಿಕ್ಷಣ ಎಂದರೆ ಪ್ರಕ್ರಿಯೆ. ಈ ಪ್ರಕ್ರಿಯೆ ಅಂಶಗಳ ಉದ್ದೇಶವೇ ಪರಸ್ರರ ಪರಿಚಯಿಸುವುದು. ಒಡನಾಟ ಹೊಂದುವುದು. ಹೊಂದಾಣಿಕೆಯನ್ನು ಕಲಿಯುವುದು. ಕೃಷಿ ಕೆಲಸದಲ್ಲಿರುವ ಅಜ್ಜ ಅಜ್ಜಿ ಇದ್ದರೆ ಮನೆಯಲ್ಲಿಯೇ ಇರುವ ದವಸ, ಧಾನ್ಯ, ಕೃಷಿ ಉಪಕರಣಗಳು, ಮತ್ತು ಗಿಡಗಳ ಹೆಸರು ಮತ್ತು ಕೆರೆಕಟ್ಟೆ ನದಿ ಹಳ್ಳಗಳ ಪರಿಚಯ ಮಾಡಿಕೊಡುವುದೂ ಕಲಿಕೆಯೆ. ರೊಟ್ಟಿ ತಿನ್ನುವ ಮಗುವೊಂದು ಜೋಳವನ್ನೇ ನೋಡದ ಕಾರಣ. ಪಾಕೇಟ್‌ನಲ್ಲಿಟ್ಟ ದವಸ ಧಾನ್ಯಗಳ ಪರಿಚಯ ಮಾಡುವಲ್ಲಿ ಹಿಂಜರಿಯುವಂತಾಗುತ್ತದೆ.


ಮಕ್ಕಳಲ್ಲಿರುವ ಅಂತಃಶಕ್ತಿಯನ್ನು ವಿಕಸನಗೊಳಿಸುವಲ್ಲಿ ಕುಟುಂಬವೂ ಬಹು ಮುಖ್ಯ. ಶಿಕ್ಷಣ ಚಿಂತಕರು ಹೇಳಿದಂತೆ ಪಂಚಶೀಲ ಗುಣಗಳಾದ , ಸ್ವಚ್ಛತೆ, ಪ್ರಾಮಾಣಿಕತೆ, ಸಮತೆ, ಸಹಕಾರ, ದುಡಿಮೆ ಈ ಗುಣಗಳನ್ನು ಬೋಧನೆಯಿಂದ ಕಲಿಯುವುದಕ್ಕಿಂತ ಅನುಭವಜನ್ಯವಾಗಿ ಕಲಿಯಲು ಬೇಸಿಗೆ ರಜೆ ಒಂದು ದೊಡ್ಡ ಅವಕಾಶ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.