ADVERTISEMENT

ಮಕ್ಕಳು ಕಲಿಕೆಯಲ್ಲಿ ನಿಧಾನವೇ?: ಪರಿಹಾರಗಳು ಇಂತಿವೆ..

ಆರ್.ಶ್ರೀನಾಗೇಶ್
Published 1 ಡಿಸೆಂಬರ್ 2024, 23:30 IST
Last Updated 1 ಡಿಸೆಂಬರ್ 2024, 23:30 IST
   

ಪ್ರತಿ ತಂದೆ-ತಾಯಿಗೆ ತನ್ನ ಮಗು ಕಲಿಕೆಯಲ್ಲಿ, ನಡವಳಿಕೆಯಲ್ಲಿ ಎಲ್ಲರಿಂದ ಮೆಚ್ಚುಗೆ ಗಳಿಸಬೇಕು ಎಂಬ ತುಡಿತ ಇರುತ್ತದೆ. ಇದಕ್ಕಾಗಿ ಅವರು ತಮ್ಮದೇ ಆದ ಮಾನದಂಡವನ್ನು ಇಟ್ಟುಕೊಂಡು ಮಗುವನ್ನು ಮಾಪನ ಮಾಡುತ್ತಿರುತ್ತಾರೆ.

ಶಿಕ್ಷಕರು ತರಗತಿಗಳಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕಾಗಿರುವುದರಿಂದ ಬೋಧನೆ ಎಲ್ಲರಿಗೂ ಒಂದೇ ರೀತಿಯದ್ದೇ ಆಗಿರುತ್ತದೆ. ಅವರ ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ಪಡೆಯದ ಮಕ್ಕಳನ್ನು ದಡ್ಡರ ಗುಂಪಿಗೆ ಸೇರಿಸಲಾಗುತ್ತದೆ. ಆ ಮಕ್ಕಳ ನಡವಳಿಕೆ ತರಗತಿಯ ಶಿಸ್ತಿಗೆ ಒಳಪಡದಿದ್ದರೆ ಅವರನ್ನು ತರಲೆಗಳು ಎಂದು ಹಣೆಪಟ್ಟಿ ಕಟ್ಟಲಾಗುತ್ತದೆ. 

ಇಂಥ ಹಣೆಪಟ್ಟಿ ಮಕ್ಕಳ ಮನಸ್ಸಿನ ಮೇಲೆ ಎಂಥ ಪರಿಣಾಮ ಬೀರಬಲ್ಲದು ಎಂಬುದರ ಸಣ್ಣ ಸುಳಿವು ಹಲವು ಪೋಷಕರು ಹಾಗೂ ಶಿಕ್ಷಕರಿಗೆ ಇರುವುದಿಲ್ಲ. ಮಾನದಂಡಕ್ಕೆ ಸರಿಯಾಗಿ ಮಗು ಫಲಿತಾಂಶ ಪಡೆಯದೇ ಇದ್ದಾಗ ಮಾನದಂಡವನ್ನು ಬದಲಾಯಿಸಬೇಕು ಎಂದು ಹೊಳೆಯುವುದಿಲ್ಲ. 

ADVERTISEMENT

ಕಲಿಕೆಯಲ್ಲಿ ಹಿಂದುಳಿದವರು ಎಂದು ಪರಿಗಣಿಸಿ, ಈ ಮಕ್ಕಳನ್ನು ಹೊರಗೆ ಕಳುಹಿಸುವುದು ಶಾಲೆಗೆ ಒಂದು ಉಪಾಯವಾದರೆ, ಅವಮಾನಕ್ಕೆ ಕಾರಣವಾದ ಇಂಥ ಮಕ್ಕಳು ನಿಷ್ಪ್ರಯೋಜಕ ಎಂದು ಪೋಷಕರು ಯೋಚಿಸುವ ಸಾಧ್ಯತೆ ಇರುತ್ತದೆ. 

ಮಗುವಿನ ಸಾಮರ್ಥ್ಯ ಹಾಗೂ ದೌರ್ಬಲ್ಯಗಳ ಹಿನ್ನೆಲೆಯ ಬಗ್ಗೆ ಶಿಕ್ಷಕರು ಯೋಚಿಸಬೇಕು. ಮಕ್ಕಳ ಬೆಳವಣಿಗೆಯ ಹಂತಗಳನ್ನು ಅರ್ಥ ಮಾಡಿಕೊಂಡು ಆಯಾ ಹಂತದಲ್ಲಿ ಏನು ನೀಡಬೇಕು ಎಂಬುದರ ಬಗ್ಗೆ ಪೋಷಕರಿಗೆ ಗೊತ್ತಿರಬೇಕು.  

ಮಗುವಿಗೆ ಅಗತ್ಯವಿರುವ ಭಾವಾನಾತ್ಮಕ ಬೆಂಬಲ ಒದಗಿಸುವುದು ಮುಖ್ಯ. ಅದರ ಆಸಕ್ತಿಯೇನು, ಆಸಕ್ತಿ ಹೊಂದಲು ಏನು ಮಾಡಬೇಕು ಎಂಬುದರ ಬಗ್ಗೆ ಪೋಷಕರು ಹಾಗೂ ಶಿಕ್ಷಕರಿಗೆ ಸ್ಪಷ್ಟತೆ ಇರಬೇಕು. ಕೌಶಲವಿಲ್ಲದ ಮಕ್ಕಳನ್ನು ಕೌಶಲವಿರುವ ಮಕ್ಕಳೊಂದಿಗೆ ಹೋಲಿಸಿ, ಹಂಗಿಸಬೇಡಿ. 

ಕಲಿಕೆಯಲ್ಲಿ ಹಿಂದುಳಿಯಲು ಆನುವಂಶಿಕ ಕಾರಣಗಳಿರಬಹುದು. ಮನೆಯ ವಾತಾವರಣವೂ ಇರಬಹುದು. ಮೌಖಿಕ ಹಾಗೂ ದೈಹಿಕ ಹಿಂಸೆಯ ವಾತಾವರಣ ಮನೆಯಲ್ಲಿದ್ದರೆ ಮಗು ಭಯಭೀತಗೊಳ್ಳುವ ಸಾಧ್ಯತೆ ಹೆಚ್ಚು. ಕುಟುಂಬದ ಸದಸ್ಯರು ಪರಸ್ಪರ ಕದನದಲ್ಲಿಯೇ ನಿರತರಾಗಿದ್ದರೆ ಅದು ಮಗುವಿನ ಬೆಳವಣಿಗೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಮಗು ಕಲಿಯಬೇಕಾದ ಸಮಯದಲ್ಲಿ  ‘ಮುಂದೆ ಕಲಿಯತ್ತೆ ಬಿಡು’ ಎಂದು ಕಲಿಸುವ ಪ್ರಯತ್ನಕ್ಕೆ ಅಡ್ಡಿಯಾದರೆ, ವಯೋಮಾನಕ್ಕೆ ತಕ್ಕ ಕೌಶಲ ಮಗುವಿನಲ್ಲಿ ಕಾಣದಿರಬಹುದು. ಅಸಮರ್ಪಕ ನಡವಳಿಕೆಯನ್ನು ಪ್ರಾರಂಭದಲ್ಲಿಯೇ ತಿದ್ದದಿದ್ದರೆ, ಆ ನಡವಳಿಕೆಯೇ ಸಮರ್ಪಕ ನಡವಳಿಕೆ ಎಂದು ಮಗುವಿಗೆ ಎನಿಸಿಬಿಡಬಹುದು.

ಮಗು ಏನೆಲ್ಲ ಕಲಿಯಬೇಕು, ಅದರ ನಡವಳಿಕೆ ಯಾವ ರೀತಿ ಇರಬೇಕು, ಅದಕ್ಕೆ ಸರಿ-ತಪ್ಪುಗಳನ್ನು ಮನದಟ್ಟು ಮಾಡಲು ಏನು ಮಾಡಬೇಕು ಎನ್ನುವ ಬಗ್ಗೆ ಪೋಷಕರು ಒಮ್ಮತದ ತೀರ್ಮಾನಕ್ಕೆ ಬರಬೇಕು. ಭಿನ್ನಾಭಿಪ್ರಾಯವಿದ್ದರೆ, ಅದನ್ನು ಮಗುವಿನ ಉಪಸ್ಥಿತಿಯಲ್ಲಿ ಹೊರಹಾಕದೆ, ಅದು ಇಲ್ಲದಿದ್ದಾಗ ಮಾತನಾಡಿ ಬಗೆಹರಿಸಿಕೊಳ್ಳಬೇಕು.

ಬಾಲ್ಯದಲ್ಲಿ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿದ್ದರೆ, ಕಲಿಕೆಗೆ ಪೂರಕ ವಾತಾವರಣ ಇಲ್ಲದೇ ಇದ್ದರೆ, ಪೋಷಕರಲ್ಲಿ ಕೇಳಿಸಿಕೊಳ್ಳುವ ವ್ಯವಧಾನ ಇಲ್ಲದರೆ ಇದ್ದರೆ, ಹಿಂಸೆಯನ್ನು ಕಂಡಿದ್ದರೆ, ಸ್ವತಃ ಅನುಭವಿಸಿದ್ದರೆ, ಕಾಯಿಲೆಯಿಂದ ನರಳುತ್ತಿದ್ದರೆ, ಅಂಥ ಮಕ್ಕಳ ಸ್ವಭಾವ ಮಂದವಾಗಿರುವ ಸಾಧ್ಯತೆ ಇರುತ್ತದೆ. 

ಕೆಲವು ವಿಷಯಗಳಲ್ಲಿ ನಿಧಾನ ಕಲಿಕೆ ತೋರಿದರೆ ಮತ್ತೆ ಕೆಲವುದರಲ್ಲಿ ಚುರಕಾಗಿರಬಹುದು. ಮಕ್ಕಳಲ್ಲಿ ವಿಶಿಷ್ಟ ಕೌಶಲಗಳಿರಬಹುದು. ಆಟೋಟದಲ್ಲಿ ಉತ್ತಮ ಸಾಧನೆ ಮಾಡಬಹುದು. ಕೆಲವರು ಸಂಗೀತದಲ್ಲಿ, ಕೆಲವರು ನೃತ್ಯ ಪ್ರಕಾರದಲ್ಲಿ, ಮತ್ತೆ ಕೆಲವರು ಚಿತ್ರ ಬಿಡಿಸುವುದರಲ್ಲಿ ಅತ್ಯಂತ ಕುಶಲಿಗಳಿರಬಹುದು. ಇದನ್ನು ಗೌರವಿಸದೆ, ಅದಕ್ಕೆ ಮನ್ನಣೆ ನೀಡದೆ, ಕೇವಲ ಓದು, ಪರೀಕ್ಷೆಯಲ್ಲಿ ತೆಗೆಯುವ ಅಂಕಗಳಿಂದ ಮಾಪನ ಮಾಡಿದಾಗ ಅವರ ಕೌಶಲ ಹುದುಗಿ ಹೋಗುತ್ತದೆ. ಆತ್ಮವಿಶ್ವಾಸ ಕುಗ್ಗಿ ಹೋಗಬಹುದು. ಪ್ರತಿಭೆ ಹಾಗೂ ಓದು ಎರಡರ ನಡುವೆ ಸಮತೋಲನ ಕಾಯ್ದುಕೊಳ್ಳುವಂತೆ ಪೋಷಕರು ಮತ್ತು ಶಿಕ್ಷಕರು ಪ್ರೋತ್ಸಾಹ ನೀಡಬೇಕು. 

ಪೋಷಕರು ಗಮನಿಸಬೇಕಾದ ಕೆಲವು ನಡವಳಿಕೆಗಳು

  • ದೃಷ್ಟಿ, ಶ್ರವಣ ಶಕ್ತಿ ಸಮರ್ಪಕವಾಗಿದೆಯೇ?, ಭಾಷೆ ಕಲಿಕೆ ಮಗುವಿನ ವಯೋಮಾನಕ್ಕೆ ಸರಿಯಾಗಿದೆಯೇ?

  • ತನ್ನ ವಸ್ತುಗಳನ್ನು ಗುರುತಿಸುವ, ತೆಗೆದಿಟ್ಟುಕೊಳ್ಳುವ ಕೌಶಲವಿದೆಯೇ?

  • ಮೂರು ನಾಲ್ಕು ಆಯಾಮಗಳ ಕೆಲಸಗಳನ್ನು ಹೇಳಿದರೆ, ಮಗು ಎಷ್ಟರ ಮಟ್ಟಿಗೆ ಎಲ್ಲವನ್ನೂ ಮಾಡಬಲ್ಲದು?

  • ಪ್ರಶ್ನೆ ಕೇಳಿದರೆ, ಸ್ವತಂತ್ರವಾಗಿ ಪದಗಳನ್ನು ಜೋಡಿಸಿಕೊಂಡು ಉತ್ತರ ಹೇಳಬಲ್ಲದೇ?

  • ಮಗುವಿನ ಮನಸ್ಸಿನಲ್ಲಿ ಯಾವ ಹೆದರಿಕೆಗಳಿರಬಹುದು? ಬಾಲ್ಯದಲ್ಲಿ ಪೋಷಕರೇ ತುಂಬಿಸಿದ ಹೆದರಿಕೆಗಳ ಜತೆಗೆ ತನ್ನದೇ ಆದ ಹೆದರಿಕೆಗಳೇನಿರಬಹುದು ಎಂದು ಅದರ ಮಾತುಗಳಿಂದ ವ್ಯಕ್ತವಾಗುತ್ತದೆ. ಈ ಎಲ್ಲಾ ಹೆದರಿಕೆಗಳನ್ನೂ ಹೋಗಲಾಡಿಸುವ ಪ್ರಯತ್ನಕ್ಕೆ ಆದ್ಯತೆ ಕೊಡಬೇಕು.

  • ಅದಕ್ಕೆ ಹಲವು ಆಟಿಕೆಗಳನ್ನು ಕೊಟ್ಟಾಗ ಯಾವ ರೀತಿಯ ಆಟವಾಡುತ್ತದೆ? ಇತರ ಮಕ್ಕಳ ಜೊತೆ ಆಟದಲ್ಲಿ ಎಷ್ಟರ ಮಟ್ಟಿಗೆ ಬೆರೆಯುತ್ತದೆ?


ಇವುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಮಗುವಿನ ಕೌಶಲದ ಕುರಿತು ಅಂದಾಜು ಸಿಗುತ್ತದೆ.

ಶಿಕ್ಷಕರು ಗಮನಿಸಬೇಕಾದ ಅಂಶಗಳು

  • ಮಗು ಒಂದೆಡೆ ಕೂರಲಾಗದೆ ಚಡಪಡಿಸುತ್ತಿರುವುದೇ?

  • ಸದಾ ಮಾತು/ಕೀಟಲೆಯಲ್ಲಿ ತೊಡಗಿರುವುದೇ?

  • ಅನ್ಯಮನಸ್ಕನಾಗಿ ಕುಳಿತಿರುವುದೇ?

  • ತನ್ನ ಸರದಿಗೆ ಕಾಯುವ ತಾಳ್ಮೆ ಇಲ್ಲವೇ?

  • ಓದಲು/ಬರೆಯಲು ಮಗುವಿಗೆ ನೆರವಿನ ಅಗತ್ಯವಿದೆಯೇ?

  • ತನ್ನ ಪುಸ್ತಕಗಳನ್ನು, ಊಟದ ಡಬ್ಬಿಯನ್ನು ಅಚ್ಚುಕಟ್ಟಾಗಿ ಜೋಡಿಸಿಕೊಳ್ಳಬಲ್ಲದೇ?

  • ಸಹಪಾಠಿಗಳೊಂದಿಗೆ ಹೇಗೆ ನಡೆದುಕೊಳ್ಳುತ್ತದೆ?

  • ಹಿಂಸಾ ಸ್ವರೂಪದ ಲಕ್ಷಣಗಳೇನಾದರೂ ಇವೆಯೇ?

ಕಲಿಕೆಯಲ್ಲಿ ಹಿಂದುಳಿದಿದ್ದಾರೆ ಎಂದಾಕ್ಷಣ ಅವರನ್ನು ದಂಡಿಸುವ ಅಥವಾ ಹಣೆಪಟ್ಟಿ ಹಚ್ಚುವ ಬದಲಿಗೆ ಸಮಸ್ಯೆಗೆ ಪರಿಹಾರ ಹುಡುಕಿಕೊಳ್ಳುವುದು ಮುಖ್ಯ. 

ದಡ್ಡ ಮಕ್ಕಳಿರಲ್ಲ. ಸರಿಯಾದ ಸಮಯಕ್ಕೆ ಅವರಲ್ಲಿರಬಹುದಾದ ಕೌಶಲಗಳನ್ನು ಗುರುತಿಸಿ, ಪ್ರೋತ್ಸಾಹಿಸಬೇಕಷ್ಟೆ.

ಪರಿಹಾರಗಳು

  • ಬಹಳ ಮುಖ್ಯವಾಗಿ ತಾಳ್ಮೆ. ಎರಡನೆಯದಾಗಿ, ಮಕ್ಕಳಲ್ಲಿರುವ ಕೌಶಲದ ಕುರಿತು ಹೊಗಳಿಕೆ, ಪ್ರೋತ್ಸಾಹಕ ನುಡಿಗಳು. ಅವರ ಗಮನವನ್ನು ಬೇರೆಡೆ ಸೆಳೆಯುವ ಅಂಶಗಳನ್ನು ಕಡಿಮೆ ಮಾಡುವುದು, ತುಂಬ ಚಡಪಡಿಸುತ್ತಿದ್ದರೆ, ದೈಹಿಕ ಶಕ್ತಿಗೆ ಒಂದು ಕೆಲಸ ಕೊಡುವುದು. ಪ್ರಶ್ನೆಗಳನ್ನು ಕೇಳುತ್ತ, ಉತ್ತರವನ್ನು ಕೊಡುವಾಗ ಪ್ರೋತ್ಸಾಹಿಸಬೇಕು.

  •  ಕೆಲವು ಮಕ್ಕಳಿಗೆ ವಿಶಿಷ್ಟ ತರಬೇತಿ ಬೇಕಾಗಬಹುದು. ಶಾಲೆಗೆ ಮೊದಲು ಅಥವಾ ಅನಂತರ ಒಂದು ತಾಸು ಈ ಉದ್ದೇಶಕ್ಕೆ ವಿನಿಯೋಗಿಸಿ, ಅದಕ್ಕೆ ಪಠ್ಯೇತರ ವಿಷಯಗಳಲ್ಲಿ ಚಟುವಟಿಕೆಗಳನ್ನು ಮಾಡಿಸಬೇಕು. ಅದಕ್ಕೆ ಗೊತ್ತಿರುವ ಪದಗಳನ್ನು ಅರ್ಥದ ಪ್ರಕಾರವೋ, ಶಬ್ದದ ಪ್ರಕಾರವೋ ಹೇಳಿಸುವುದು, ಸಂಖ್ಯೆಗಳನ್ನು ಉಲ್ಟಾ ಹೇಳಿಸುವುದು, ನಾಲಿಗೆ ಕ್ಲಿಷ್ಟವಾಗುವ ವಾಕ್ಯಗಳನ್ನು ಹೇಳಿಸುವುದು ಇಂಥ ಉಪಾಯಗಳಿಂದ ಆ ಮಕ್ಕಳ ಕಲಿಕೆಗೆ ಒಂದು ಸಕಾರಾತ್ಮಕ ದಾರಿಯನ್ನು ತೋರಿಸಬಹುದು. ಶಿಕ್ಷಕರ ಈ ಪ್ರಯೋಗಗಳಿಗೆ ಕುಟುಂಬದ ಸದಸ್ಯರು ಪ್ರೋತ್ಸಾಹಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.