ADVERTISEMENT

ರೊಟ್ಟಿ ತಟ್ಟಿ ಶಾಲೆ ನಡೆಸುವ ನಾಗವೇಣಿ! 2 ಶಾಲೆ ಸುಪರ್ದಿಗೆ ಪಡೆದ ಮಹಾಪೋಷಕಿ

ಮುಚ್ಚುತ್ತಿದ್ದ ಶಾಲೆ

ಚಂದ್ರಕಾಂತ ಮಸಾನಿ
Published 9 ಫೆಬ್ರುವರಿ 2019, 20:00 IST
Last Updated 9 ಫೆಬ್ರುವರಿ 2019, 20:00 IST
ಶಾಲೆಯ ತರಗತಿಯೊಂದರಲ್ಲಿ ನಾಗವೇಣಿ
ಶಾಲೆಯ ತರಗತಿಯೊಂದರಲ್ಲಿ ನಾಗವೇಣಿ   

ಬೀದರ್: ಖಾನಾವಳಿಯಲ್ಲಿ ರೊಟ್ಟಿ ಮಾಡಿ ಜೀವನ ನಿರ್ವಹಿಸುತ್ತಿರುವ ಬೀದರ್ ತಾಲ್ಲೂಕಿನ ಕೊಳಾರ (ಕೆ) ಗ್ರಾಮದ ನಾಗವೇಣಿ ತಮ್ಮ ಕುಟುಂಬಕ್ಕೆ ಅಷ್ಟೇ ಅಲ್ಲ; ಎರಡು ಶಾಲೆಗಳಿಗೂ ಪೋಷಕರಾಗಿದ್ದಾರೆ.

ಕೊಳಾರದ ಬಸವ ಚೇತನ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಘಾಳೆಪ್ಪ ಕೋಟೆ ಪ್ರೌಢಶಾಲೆ ಬಾಗಿಲು ಮುಚ್ಚುವ ಹಂತಕ್ಕೆ ಬಂದಿದ್ದವು. ಈ ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ನಾಗವೇಣಿ ಅವರ ಪತಿ ಶಂಕರ ಅವರೂ ಇದ್ದರು. ಆರ್ಥಿಕ ಸಮಸ್ಯೆಯಿಂದ ಒಬ್ಬೊಬ್ಬರೇ ಶಿಕ್ಷಕರು ಕೆಲಸ ಬಿಟ್ಟು ಹೋಗುತ್ತಿದ್ದರು. ಶಾಲೆಗೆ ಸ್ವಂತ ಕಟ್ಟಡ ಸಹ ಇರಲಿಲ್ಲ.

ಶಿಕ್ಷಣ ಸಂಸ್ಥೆಯೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದ ನಾಗವೇಣಿ, ಖಾನಾವಳಿ ಆದಾಯದ ಬಹುಭಾಗವನ್ನು ಸಂಸ್ಥೆಯವರಿಗೆ ಕೊಟ್ಟು ಅದನ್ನು ಸುಪರ್ದಿಗೆ ಪಡೆದರು.

ADVERTISEMENT

ಈಗ ಇಲ್ಲಿ ತಾಲ್ಲೂಕಿನ ಮೂರು ಗ್ರಾಮಗಳ ಒಟ್ಟು 325 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಇಲ್ಲಿ ಡೊನೇಷನ್‌ ಪಡೆಯುವುದಿಲ್ಲ.

14 ವರ್ಷಗಳಿಂದ ಶಾಲೆಯ ಫಲಿತಾಂಶ ಶೇಕಡ 70 ರಷ್ಟು ಇದೆ.

ಬೀದರ್‌ನ ಖಾನಾವಳಿಯಲ್ಲಿ ರೊಟ್ಟಿ ಮಾಡುತ್ತಿರುವ ನಾಗವೇಣಿ ಶಂಕರ

ಕೊಳಾರ(ಕೆ)ದಲ್ಲಿ ಪ್ರಾಥಮಿಕ ಹಾಗೂ ನಿಜಾಮಪುರದಲ್ಲಿ ಪ್ರೌಢಶಾಲಾ ಕೊಠಡಿಗಳನ್ನು ನಿರ್ಮಿಸಿದ್ದಾರೆ. ಇದೀಗ ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸಿದೆ. ಆದರೂ ರೊಟ್ಟಿ ಬಡಿಯುವ ಕಾಯಕ ನಿಲ್ಲಿಸಿಲ್ಲ.

ಮಗ ಎಂಜಿನಿಯರ್‌: ನಾಗವೇಣಿಯ ಮಗ ಬಿಇ ಮೆಕಾನಿಕಲ್‌ ಪದವಿ ಮುಗಿಸಿ, ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಪಡೆಯುತ್ತಿದ್ದಾರೆ. ಹಿರಿಯ ಮಗಳು ಬೀದರ್‌ನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಹಾಗೂ ಕಿರಿಯ ಮಗಳು ಅಮ್ಮನ ಶಾಲೆಯಲ್ಲೇ 10ನೇ ತರಗತಿಯಲ್ಲಿ ಓದುತ್ತಿದ್ದಾರೆ.

ನಾಗವೇಣಿ ಯಾರು?

ನಾಗವೇಣಿ ಶಾಲೆಯ ಮೆಟ್ಟಿಲು ಏರಲಿಲ್ಲ. ತಂದೆ 16ನೇ ವಯಸ್ಸಿನಲ್ಲೇ ಮದುವೆ ಮಾಡಿಕೊಟ್ಟರು. ಪತಿ ಶಂಕರ ರಾತ್ರಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿ ಹಗಲು ಕಾಲೇಜಿಗೆ ಹೋಗುತ್ತಿದ್ದರು. ನಾಗವೇಣಿ ಬೀದರ್‌ಗೆ ಬಂದು ರೊಟ್ಟಿ ಬಡಿಯುವ ಕೆಲಸ ಶುರು ಮಾಡಿದರು. ದಿನಕ್ಕೆ₹ 300 ಸಂಪಾದಿಸಿ ಪತಿಯನ್ನು ಓದಿಸಿದರು.

ಪತಿಯಿಂದ ಅಕ್ಷರ ಜ್ಞಾನ ಪಡೆದು, ಅಫಿಡವಿಟ್ ಸಲ್ಲಿಸಿ ಬಾಹ್ಯ ಅಭ್ಯರ್ಥಿಯಾಗಿ ಎಸ್ಸೆಸ್ಸೆಲ್ಸಿಯಲ್ಲಿ ಉತ್ತೀರ್ಣರಾದರು. ನಂತರ ಜಿಲ್ಲಾ ಕೈಗಾರಿಕೆ ತರಬೇತಿ ಕೇಂದ್ರದ ನೆರವಿನಿಂದ ಆಹಾರ ಸಂಸ್ಕರಣಾ ತರಬೇತಿಯನ್ನೂ ಪಡೆದರು.

ಬೀದರ್‌ ತಾಲ್ಲೂಕಿನ ನಿಜಾಮಪುರ ಗ್ರಾಮದ ಘಾಳೆಪ್ಪ ಕೋಟೆ ಪ್ರೌಢ ಶಾಲೆಯ ಆವರಣದಲ್ಲಿ ಸಸಿ ನೆಟ್ಟು ನೀರು ಹಾಕುತ್ತಿರುವ ನಾಗವೇಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.