ಸೈಬರ್ ಸೆಕ್ಯೂರಿಟಿ ಕ್ಷೇತ್ರದಲ್ಲಿರುವ ಅವಕಾಶಗಳ ಬಗ್ಗೆ ತಿಳಿಸಿ.
–ಹೆಸರು, ಊರು ತಿಳಿಸಿಲ್ಲ
ಇಂದಿನ ಡಿಜಿಟಲ್ ಜಗತ್ತಿನಲ್ಲಿ, ಸೈಬರ್ ಸೆಕ್ಯೂರಿಟಿ ಕ್ಷೇತ್ರದ ವೃತ್ತಿಪರರಿಗೆ ಹೆಚ್ಚಿನ ಬೇಡಿಕೆಯಿದೆ. ಈ ಕ್ಷೇತ್ರದಲ್ಲಿ, ಯಶಸ್ಸಿಗೆ ಎಂಜಿನಿಯರಿಂಗ್ (ಸೈಬರ್ ಸೆಕ್ಯೂರಿಟಿ, ಕಂಪ್ಯೂಟರ್ ಸೈನ್ಸ್ ಇತ್ಯಾದಿ) ಪದವಿ ಅಥವಾ ಇನ್ನಿತರ ಐಟಿ ಪದವಿಯ ಜೊತೆಗೆ ಸೈಬರ್ ಸೆಕ್ಯೂರಿಟಿ ಕ್ಷೇತ್ರದ ಉನ್ನತ ಮಟ್ಟದ ಡಿಪ್ಲೊಮಾ/ಸರ್ಟಿಫಿಕೆಟ್ ಕೋರ್ಸ್ ಮಾಡಿರಬೇಕು. ತಾಂತ್ರಿಕ ಜ್ಞಾನ ಹಾಗೂ ಈ ಕ್ಷೇತ್ರಕ್ಕೆ ಸಂಬಂಧಿಸಿದ ಕೌಶಲಗಳಾದ ಎಥಿಕಲ್ ಹ್ಯಾಕಿಂಗ್, ಕ್ಲೌಡ್ ಸೆಕ್ಯೂರಿಟಿ, ನೆಟ್‌ವರ್ಕ್ ಸೆಕ್ಯೂರಿಟಿ, ರಿಸ್ಕ್ ಮ್ಯಾನೇಜ್‌ಮೆಂಟ್, ಆಪರೇಟಿಂಗ್ ಸಿಸ್ಟಮ್ಸ್, ಕೋಡಿಂಗ್, ವಿಶ್ಲೇಷಣಾತ್ಮಕ ಕೌಶಲ, ಸಮಸ್ಯೆಗಳನ್ನು ಬಗೆಹರಿಸುವ ಕೌಶಲ, ಸಂವಹನ ಮುಂತಾದ ಕೌಶಲಗಳಿರಬೇಕು.
ಈ ಕ್ಷೇತ್ರದ ವೃತ್ತಿಪರರಿಗೆ ಬ್ಯಾಂಕಿಂಗ್, ಹಣಕಾಸು, ಬಂಡವಾಳ ಹೂಡಿಕೆ, ರಕ್ಷಣೆ, ಇ-ಕಾಮರ್ಸ್, ಮಾಹಿತಿ ತಂತ್ರಜ್ಞಾನ, ಶಿಕ್ಷಣ, ಉತ್ಪಾದನೆ, ಆರೋಗ್ಯ ಸೇರಿ ಅರ್ಥವ್ಯವಸ್ಥೆಯ ಎಲ್ಲಾ ಕ್ಷೇತ್ರಗಳಲ್ಲಿ ಸೈಬರ್ ಸೆಕ್ಯೂರಿಟಿ ಅನಲಿಸ್ಟ್, ಸೆಕ್ಯೂರಿಟಿ ಆರ್ಕಿಟೆಕ್ಟ್, ಸೈಬರ್ ಸೆಕ್ಯೂರಿಟಿ ಎಂಜಿನಿಯರ್, ಕ್ಲೌಡ್ ಸೆಕ್ಯೂರಿಟಿ ಎಂಜಿನಿಯರ್, ಸೆಕ್ಯೂರಿಟಿ ಆಡಿಟರ್, ಎಥಿಕಲ್ ಹ್ಯಾಕರ್ ಮುಂತಾದ ಹುದ್ದೆಗಳನ್ನು ಪಡೆದುಕೊಳ್ಳಬಹುದು.
ವಿದೇಶದಲ್ಲಿ ಯಾವ ಕೋರ್ಸ್ ಮಾಡಿದರೆ ಹೆಚ್ಚು ಸೂಕ್ತ?
ಹೆಸರು, ಊರು ತಿಳಿಸಿಲ್ಲ
ಇಂದು ಭಾರತದಲ್ಲೇ ಅನೇಕ ಜಗದ್ವಿಖ್ಯಾತ ಕಾಲೇಜುಗಳೂ, ವಿಶ್ವವಿದ್ಯಾಲಯಗಳೂ ಇವೆ. ವಿದೇಶದಲ್ಲಿ ವ್ಯಾಸಂಗ ಮಾಡಲು ಬಯಸುವಿರಾದರೆ, ಈ ನಿರ್ಣಯದ ಹಿಂದಿರುವ ಪ್ರೇರಣೆ, ನಿಮ್ಮ ಆಸಕ್ತಿ, ಒಲವು, ಸಾಮರ್ಥ್ಯ, ದೌರ್ಬಲ್ಯಗಳ ಅರಿವು ಮತ್ತು ಸ್ಪಷ್ಟವಾದ ವೃತ್ತಿ ಯೋಜನೆಯಿರಬೇಕು. ಸಾಮಾನ್ಯವಾಗಿ ಎಂಜಿನಿಯರಿಂಗ್, ಮೆಡಿಕಲ್, ಹಣಕಾಸು, ಹೋಟೆಲ್ ಮತ್ತು ಬಿಸಿನೆಸ್ ಮ್ಯಾನೇಜ್‌ಮೆಂಟ್, ಪ್ರವಾಸೋದ್ಯಮ, ಪರಿಸರ ವಿಜ್ಞಾನ, ನೈಸರ್ಗಿಕ ಮತ್ತು ಅನ್ವಯಿಕ ವಿಜ್ಞಾನ, ಕಾನೂನು ಮುಂತಾದ ಕ್ಷೇತ್ರಗಳ ಸ್ನಾತಕೋತ್ತರ ಕೋರ್ಸ್‌ಗಳನ್ನು ವಿದೇಶದಲ್ಲಿ ಮಾಡಲು ಪರಿಗಣಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.