ADVERTISEMENT

ಮಕ್ಕಳ ವಿಸ್ತೃತ ಓದಿಗೆಮನೆ ಗ್ರಂಥಾಲಯ

ಆರ್.ಬಿ.ಗುರುಬಸವರಾಜ
Published 19 ನವೆಂಬರ್ 2019, 19:30 IST
Last Updated 19 ನವೆಂಬರ್ 2019, 19:30 IST
Girl with stack of books reading
Girl with stack of books reading   

ಮಕ್ಕಳಿಗೆ ಬೇರೆ ಬೇರೆ ಮೂಲಗಳಿಂದ ಜ್ಞಾನ ಸಿಗುತ್ತದೆ ನಿಜ. ಆದರೆ ಪುಸ್ತಕಗಳಿಂದ ದೊರೆಯುವ ಜ್ಞಾನ ಮಾತ್ರ ಶಾಶ್ವತ ಎಂಬುದು ಶಿಕ್ಷಣ ತಜ್ಞರ ಹಾಗೂ ಶೈಕ್ಷಣಿಕ ಮನೋವಿಜ್ಞಾನಿಗಳ ಅಭಿಮತ. ಎಲ್ಲಾ ವಯಸ್ಸಿನ ಮಕ್ಕಳ ಕಲಿಕೆ, ಭಾಷಾ ಬೆಳವಣಿಗೆ, ಬರವಣಿಗೆಯ ಮೂಲಭೂತ ತಿಳಿವಳಿಕೆಯ ಕೀಲಿಯೆಂದರೆ ಪುಸ್ತಕ. ನಗರ ಪ್ರದೇಶಗಳಲ್ಲಿ ದೊಡ್ಡ ದೊಡ್ಡ ಗ್ರಂಥಾಲಯಗಳಿದ್ದು, ಅಲ್ಲಿ ಮಕ್ಕಳಿಗೆ ಸಾಕಷ್ಟು ಪುಸ್ತಕಗಳು ಓದಲು ಸಿಗುತ್ತವೆ. ಆದರೆ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗ್ರಂಥಾಲಯ ಸೌಲಭ್ಯ ಕೆಲವು ಕಡೆ ಇದ್ದರೂ ಮಕ್ಕಳು ಓದುವ ಪುಸ್ತಕಗಳು ದೊರೆಯುವುದು ವಿರಳ. ಅಲ್ಲದೇ ಡಿಜಿಟಲ್‌ ಸಾಧನಗಳಾದ ಮೊಬೈಲ್, ಟಿ.ವಿ, ಕಂಪ್ಯೂಟರ್‌ಗಳಿಂದ ಮಕ್ಕಳನ್ನು ದೂರವಿಟ್ಟು ಓದಿನ ಓಘವನ್ನು ವಿಸ್ತರಿಸಲು ಮನೆ ಗ್ರಂಥಾಲಯ ಇಂದಿನ ಅಗತ್ಯವಾಗಿದೆ.

ಏನಿದು ಮನೆ ಗ್ರಂಥಾಲಯ?

ಇದೇನು ಹೊಸ ಪರಿಕಲ್ಪನೆಯಲ್ಲ. ಪ್ರತಿ ಮನೆಯಲ್ಲೂ ಓದಲು ಅಗತ್ಯವಾದ ಪುಸ್ತಕಗಳನ್ನು ಹೊಂದುವುದೇ ಮನೆ ಗ್ರಂಥಾಲಯದ ಪರಿಕಲ್ಪನೆ. ಅದರಲ್ಲೂ ವಿಶೇಷವಾಗಿ ಮಕ್ಕಳ ಕಲಿಕೆಗೆ ಅಗತ್ಯವಾದ ಪುಸ್ತಕಗಳನ್ನು ವ್ಯವಸ್ಥೆಗೊಳಿಸುವುದು ಮೊದಲ ಆದ್ಯತೆಯಾಗಬೇಕಿದೆ. ಮಕ್ಕಳ ಮಾನಸಿಕ ಹಾಗೂ ಬೌದ್ಧಿಕ ವಯಸ್ಸಿಗೆ ಅನುಗುಣವಾದ ಪುಸ್ತಕಗಳು ಹೆಚ್ಚು ಪ್ರಸ್ತುತ ಎನಿಸುತ್ತವೆ. ಕಥೆ, ಕಾಮಿಕ್ಸ್, ಕವನ, ಕಾದಂಬರಿ, ನಾಟಕ, ಜೀವನಚರಿತ್ರೆಗಳಂತಹ ಒಂದಿಷ್ಟು ಪುಸ್ತಕಗಳು ಖಂಡಿತವಾಗಿಯೂ ಮಕ್ಕಳ ಮನೋವಿಕಾಸಕ್ಕೆ ಪೂರಕ ಸಾಮಗ್ರಿಗಳಾಗುತ್ತವೆ.

ADVERTISEMENT

ಮಕ್ಕಳ ಜ್ಞಾನಾರ್ಜನೆಯಲ್ಲಿ ಪುಸ್ತಕಗಳು ಹೆಚ್ಚು ಮಹತ್ವ ಪಡೆದಿವೆ ಎಂದು ಅಮೆರಿಕಾದ ಸರ್ಕಾರೇತರ ಸಂಸ್ಥೆಯೊಂದು ನಡೆಸಿದ ಸಂಶೋಧನೆಯು ಸಾಬೀತುಪಡಿಸಿದೆ. ದಿನಕ್ಕೆ 20 ನಿಮಿಷ ಪಠ್ಯೇತರ ಪುಸ್ತಕ ಓದಿದ ಮಕ್ಕಳು, ಓದದ ಮಕ್ಕಳಿಗಿಂತ ಶೇಕಡಾ 90ರಷ್ಟು ಉತ್ತಮ ಕಲಿಕೆಯಲ್ಲಿರುವುದು ತಿಳಿದುಬಂದಿದೆ. 20 ನಿಮಿಷ ಓದಿದರೆ ಒಂದು ವರ್ಷಕ್ಕೆ 1.8 ಕೋಟಿ ಪದಗಳನ್ನು, ದಿನಕ್ಕೆ 5 ನಿಮಿಷ ಓದಿದರೆ ವರ್ಷಕ್ಕೆ 2.8 ಲಕ್ಷ ಪದಗಳನ್ನು ಮತ್ತು ದಿನಕ್ಕೆ ಒಂದು ನಿಮಿಷಕ್ಕಿಂತ ಕಡಿಮೆ ಓದುವ ಮಕ್ಕಳು 8000 ಪದಗಳನ್ನು ಗ್ರಹಿಸಬಲ್ಲರು ಎನ್ನುತ್ತದೆ ಸಂಶೋಧನೆ.

ಗ್ರಂಥಾಲಯ ನಿರ್ಮಾಣ ಬಹು ಸುಲಭ

ಮಕ್ಕಳಿಗೆ ಅಗತ್ಯವಾದ ಗ್ರಂಥಾಲಯ ನಿರ್ಮಾಣಕ್ಕೆ ಅಂತಹ ದೊಡ್ಡ ಮೊತ್ತವೇನೂ ಬೇಕಾಗಿಲ್ಲ. ಕೇವಲ ಮಗುವಿನ ಒಂದು ವರ್ಷದ ಟ್ಯೂಷನ್ ಮೊತ್ತದಲ್ಲಿ ಒಂದು ಸುಂದರವಾದ ಹಾಗೂ ಮೌಲಿಕವಾದ ಗ್ರಂಥಾಲಯ ನಿರ್ಮಿಸಬಹುದು. ಸಾಮಾನ್ಯವಾಗಿ ಪ್ರತಿವರ್ಷ ಅದ್ಧೂರಿಯಾಗಿ ಮಕ್ಕಳ ಹುಟ್ಟುಹಬ್ಬ ಆಚರಿಸುತ್ತೇವೆ. ಇದಕ್ಕಾಗಿ ಸಾವಿರಾರು ರೂಪಾಯಿ ಖರ್ಚು ಮಾಡುತ್ತೇವೆ. ಅದ್ಧೂರಿಯ ಬದಲಾಗಿ ಸರಳವಾಗಿ ಹುಟ್ಟುಹಬ್ಬ ಆಚರಿಸಿ ಒಂದಿಷ್ಟು ಹಣ ಉಳಿಸಬಹುದು. ಉಳಿದ ಮೊತ್ತದಲ್ಲಿ ಮಕ್ಕಳಿಗೆ ಇಷ್ಟವಾದ ಪುಸ್ತಕಗಳನ್ನು ಖರೀದಿಸಿ ಗ್ರಂಥಾಲಯವನ್ನು ಅಭಿವೃದ್ಧಿಪಡಿಸಬಹುದು.

ಅಂತೆಯೇ ಪ್ರತಿವರ್ಷ ಹಬ್ಬ, ಉತ್ಸವಗಳಿಗೆಂದು ಮಕ್ಕಳಿಗೆ ತರುವ ಬಟ್ಟೆ, ಸಿಹಿತಿಂಡಿಗಳಲ್ಲಿಯೂ ಒಂದಿಷ್ಟು ಹಣ ಉಳಿಸಿ, ಅದರಲ್ಲಿ ಪುಸ್ತಕ ಕೊಡಿಸಬಹುದು. ಅಲ್ಲದೇ ಬೇರೆ ಊರಿನಿಂದ ಮನೆಗೆ ಹಿಂತಿರುಗುವಾಗ ಮಕ್ಕಳಿಗೆ ಆಟದ ಸಾಮಾನು, ತಿಂಡಿ ತಿನಿಸುಗಳನ್ನು ಖರೀದಿಸಿ ತರುವುದು ಸಹಜ. ಇದರಲ್ಲಿ ಒಂದಿಷ್ಟು ಕಡಿತಗೊಳಿಸಿ ಪುಸ್ತಕಗಳನ್ನು ಖರೀದಿಸಬಹುದು. ಹೀಗೆ ವಿಭಿನ್ನ ಪ್ರಯತ್ನದಿಂದ ನಮ್ಮ ಬಜೆಟ್‌ಗೆ ಅನುಗುಣವಾದ ಪುಸ್ತಕಗಳನ್ನು ಖರೀದಿಸುತ್ತಾ ಗ್ರಂಥಾಲಯ ಅಭಿವೃದ್ಧಿಪಡಿಸಲು ಸಾಕಷ್ಟು ಅವಕಾಶಗಳಿವೆ. ಪ್ರತಿವರ್ಷ ಕನಿಷ್ಠ 10– 20 ಪುಸ್ತಕಗಳನ್ನಾದರೂ ಮಕ್ಕಳ ಗ್ರಂಥಾಲಯಕ್ಕೆ ಸೇರಿಸುತ್ತಾ ಹೋದರೆ ಹತ್ತು ವರ್ಷಗಳಲ್ಲಿ 200 ಪುಸ್ತಕಗಳಾಗುತ್ತವೆ. ಆ ಮಕ್ಕಳು ಪಿ.ಯು.ಸಿ. ಅಥವಾ ಪದವಿ ಪೂರ್ಣಗೊಳಿಸುವ ವೇಳೆಗೆ ಕನಿಷ್ಠ 300– 500 ಪುಸ್ತಕಗಳಾದರೂ ಗ್ರಂಥಾಲಯ ಸೇರುತ್ತವೆ. ಪ್ರಾರಂಭದಲ್ಲಿ ಪುಸ್ತಕಗಳನ್ನು ಇಡಲು ರ‍್ಯಾಕ್‌ಗಳೇ ಬೇಕಾಗಿಲ್ಲ. ರಟ್ಟಿನ ಬಾಕ್ಸ್‌ ಅನ್ನು ರ‍್ಯಾಕ್‌ನಂತೆ ಬಳಸಬಹುದು.

ಪಾಲಕರ ಜವಾಬ್ದಾರಿ

ಕೇವಲ ಮಗುವಿಗೆ ಪುಸ್ತಕಗಳನ್ನು ಕೊಡಿಸಿದರೆ ಸಾಲದು. ಮಗು ಪುಸ್ತಕಗಳನ್ನು ಓದುವಂತೆ ಪ್ರೇರೇಪಿಸುವುದು ತುಂಬಾ ಮುಖ್ಯ. ಅದಕ್ಕಾಗಿ ಪಾಲಕರಾದ ನಾವು ನಿತ್ಯ ಕನಿಷ್ಠ ಅರ್ಧ ಗಂಟೆ ಮಗುವಿನ ಜೊತೆ ಕೂತು ಓದುತ್ತಾ ಮಗುವನ್ನು ಓದಲು ಹಚ್ಚಬೇಕು. ನಾವು ಓದಿದ ಪುಸ್ತಕದಲ್ಲಿನ ಉತ್ತಮ ಅಂಶವನ್ನು ಮಗುವಿಗೆ ಹೇಳುತ್ತಾ ಓದಲು ಆಸಕ್ತಿ ಹುಟ್ಟುವಂತೆ ಮಾಡಬೇಕು. ಮಗುವಿನ ಮಾನಸಿಕ ಹಾಗೂ ಬೌದ್ಧಿಕ ವಯಸ್ಸು ಬೆಳೆದಂತೆಲ್ಲಾ ಮಗು ತಾನು ಓದಿದ ಪುಸ್ತಕದ ಕುರಿತ ಅಭಿಪ್ರಾಯವನ್ನು ಬರೆಯಲು ಹೇಳಬೇಕು. ಇದರಿಂದ ಮಗುವಿನಲ್ಲಿ ಬರಹ ಕೌಶಲ ಬೆಳೆಯುವ ಜೊತೆಗೆ ವಿಮರ್ಶಾತ್ಮಕ ದೃಷ್ಟಿಕೋನ ಹೆಚ್ಚುತ್ತದೆ.

ಚಿಕ್ಕ ಮಕ್ಕಳು ಪುಸ್ತಕಗಳನ್ನು ಹರಿದುಹಾಕುತ್ತಾರೆ ಎಂಬ ಒಂದೇ ಕಾರಣಕ್ಕೆ ಬಹುತೇಕ ಪಾಲಕರು ಪುಸ್ತಕಗಳು ಮಕ್ಕಳ ಕೈಗೆ ಸಿಗದಂತೆ ಇಡುವುದು ಸಾಮಾನ್ಯ. ಆದರೆ ಪುಸ್ತಕಗಳು ಮಗುವಿನ ಕೈಗೆ ಸಿಗುವಂತೆ ಇಡಬೇಕು. ನಿತ್ಯ ನೋಡಲು ಸಿಗುವುದರಿಂದ ಕ್ರಮೇಣ ಓದುವ ಆಸಕ್ತಿ ಬೆಳೆಯುತ್ತದೆ. ಡಿಜಿಟಲ್ ತಂತ್ರಜ್ಞಾನದ ಫಲವಾಗಿ ಇಂದು ಬಹುತೇಕ ಪುಸ್ತಕಗಳು ವರ್ಣಮಯವಾಗಿ ಮಕ್ಕಳಿಗೆ ಆಕರ್ಷಕವಾಗಿರುತ್ತವೆ.

ಯಾವ ಯಾವ ಪುಸ್ತಕಗಳಿರಬೇಕು?

ಮಕ್ಕಳ ವಯೋಮಾನ ಹಾಗೂ ಬೌದ್ಧಿಕ ಮಟ್ಟಕ್ಕೆ ಅನುಗುಣವಾದ ಸಣ್ಣ ಸಣ್ಣ ಪುಸ್ತಕಗಳಾದರೆ ಸಾಕು. ಅದರಲ್ಲಿ ಮಗು ಕಲಿಯುವ ಬೇರೆ ಬೇರೆ ಭಾಷೆಗಳ ನಿಘಂಟು ಕಡ್ಡಾಯವಾಗಿ ಇರಲೇಬೇಕು. ಪುಸ್ತಕ ಖರೀದಿಸುವಾಗ ಮಗುವಿನ ಇಷ್ಟಕ್ಕೆ ಅನುಗುಣವಾದ ಪುಸ್ತಕ ಖರೀದಿಸಿದರೆ ಉತ್ತಮ. ಸಾಧ್ಯವಾದರೆ ಪುಸ್ತಕ ಮಳಿಗೆಗೆ ಮಕ್ಕಳನ್ನು ಕರೆದೊಯ್ಯಿರಿ. ಮಗು ತನಗೆ ಬೇಕಾದ ಪುಸ್ತಕಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಿ. ಓದಿನ ಪುಸ್ತಕಗಳ ಜೊತೆಗೆ ಚಿತ್ರ ರಚನೆಯ, ಮಗು ಸೃಜನಾತ್ಮಕ ಕ್ರಿಯೆಗಳಲ್ಲಿ ತೊಡಗುವಂತಹ ಅಭ್ಯಾಸ ಪುಸ್ತಕಗಳನ್ನೂ ಖರೀದಿಸಿ ಗ್ರಂಥಾಲಯಕ್ಕೆ ಸೇರಿಸಬಹುದು. ಮಕ್ಕಳ ಬೌದ್ಧಿಕ ಬೆಳವಣಿಗೆ ಹೆಚ್ಚಿದಂತೆ ವೈಚಾರಿಕ ಕಥೆಗಳು, ವಿಮರ್ಶೆಗಳು, ಜೀವನಚರಿತ್ರೆಗಳು, ವಿವಿಧ ದೇಶಗಳ ಜನಪದ ಕಥೆಗಳು, ಪ್ರವಾಸ ಕಥನಗಳು, ಮಕ್ಕಳ ಕಾದಂಬರಿಗಳು, ಸಾಹಸಭರಿತ ರೋಚಕ ಕಥಾಗುಚ್ಛಗಳು, ಪರಿಸರ ಪ್ರಜ್ಞೆ ಮೂಡಿಸುವ ಪುಸ್ತಕಗಳು, ಜನಜಾಗೃತಿ ಕಥನಗಳು ಅಲ್ಲಿ ಸ್ಥಾನ ಪಡೆಯಲಿ. ಹೀಗೆ ವೈವಿಧ್ಯಮಯ ಓದಿನ ರುಚಿಯನ್ನು ನೀಡಿದರೆ ಮಗು ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳಲು ಸಹಾಯ
ವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.