ADVERTISEMENT

ಕೊಟ್ಟೂರು ಇಂದು ಕಾಲೇಜಿಗೆ ಸತತ ಐದು ಬಾರಿ ಪ್ರಥಮ ರ‍್ಯಾಂಕ್!

ಈ ಕಾಲೇಜಿನಲ್ಲಿ ಇಂಗ್ಲಿಷ್‌ ಭಾಷೆ ಕಲಿಕೆ ಇಲ್ಲ

ಕೆ.ನರಸಿಂಹ ಮೂರ್ತಿ
Published 15 ಏಪ್ರಿಲ್ 2019, 20:41 IST
Last Updated 15 ಏಪ್ರಿಲ್ 2019, 20:41 IST
   

ಬಳ್ಳಾರಿ: ಜಿಲ್ಲೆಯ ಕೊಟ್ಟೂರು ತಾಲ್ಲೂಕಿನ ಇಂದು ಕಾಲೇಜು ಸತತ ಐದು ವರ್ಷಗಳಿಂದ ಕಲಾ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಗಳಿಸುತ್ತಾ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ.

ವಿಶೇಷ ಎಂದರೆ, ಈ ಹಿಂದಿನ ವರ್ಷಗಳಲ್ಲಿ ಮತ್ತು ಈ ವರ್ಷ ರ‍್ಯಾಂಕ್ ಪಡೆದಿರುವವರೆಲ್ಲರೂ 18 ಭಾಷೆಗಳ ಪೈಕಿ ಕನ್ನಡ ಮತ್ತು ಸಂಸ್ಕೃತವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಸಂಸ್ಕೃತ ಪ್ರಶ್ನೆಪತ್ರಿಕೆಗೆ ಕೆಲವರು ಸಂಸ್ಕೃತದಲ್ಲೇ ಉತ್ತರಿಸಿದ್ದರೆ, ಇನ್ನೂ ಕೆಲವರು ಕನ್ನಡ ಮತ್ತು ಸಂಸ್ಕೃತದಲ್ಲಿ ಉತ್ತರಿಸಿದ್ದಾರೆ.

ಕಲಾ ವಿಭಾಗದಲ್ಲಿರುವ ಒಟ್ಟು 55 ವಿಷಯ ಸಂಯೋಜನೆಗಳ ಪೈಕಿ ಈ ಕಾಲೇಜಿನಲ್ಲಿ ಇತಿಹಾಸ, ರಾಜಕೀಯ ಶಾಸ್ತ್ರ, ಐಚ್ಛಿಕ ಕನ್ನಡ ಮತ್ತು ಶಿಕ್ಷಣ, (ಎಚ್‌ಪಿಕೆಇ) ಹಾಗೂ ಇತಿಹಾಸ, ಸಮಾಜಶಾಸ್ತ್ರ, ಐಚ್ಛಿಕ ಕನ್ನಡ ಮತ್ತು ಶಿಕ್ಷಣ (ಎಚ್‌ಎಸ್‌ಕೆಇ) ಸಂಯೋಜನೆ ಮಾತ್ರ ಇದೆ.

ADVERTISEMENT

ಭಾಷೆಗಳ ಪೈಕಿ ಇಂಗ್ಲಿಷ್‌ ಬದಲು ಸಂಸ್ಕೃತವನ್ನು ಆಯ್ಕೆ ಮಾಡಿಕೊಂಡಿದ್ದರಿಂದ, ರ‍್ಯಾಂಕ್ ವಿದ್ಯಾರ್ಥಿಗಳಿಗೆ ಐಚ್ಛಿಕ ವಿಷಯಗಳ ಕಡೆಗೆ ಹೆಚ್ಚಿನ ಗಮನ ಕೊಡಲು ಸಾಧ್ಯವಾಗಿದೆ. ಇಂಗ್ಲಿಷ್‌ ಆಯ್ಕೆ ಮಾಡಿಕೊಂಡಿದ್ದರೆ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ರ‍್ಯಾಂಕ್ ಪಡೆಯುವುದು ಕಷ್ಟವಾಗುತ್ತಿತ್ತು’ ಎಂಬ ಅಭಿಪ್ರಾಯವೂ ಈ ಸಂದರ್ಭದಲ್ಲಿ ಕೇಳಿ ಬಂದಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕಾಲೇಜಿನ ಪ್ರಾಂಶುಪಾಲ ವೀರಭದ್ರಪ್ಪ, ‘ಸಂಸ್ಕೃತವನ್ನು ಭಾಷೆಯಾಗಿ ಆಯ್ಕೆ ಮಾಡಿಕೊಂಡಿರುವುದೂ ರ್‌್ಯಾಂಕ್ ಬರಲು ಕಾರಣ ಎಂಬ ಹೇಳಿಕೆ ಸರಿಯಲ್ಲ. ಸಂಸ್ಕೃತ ಪ್ರಶ್ನೆಪತ್ರಿಕೆಗೆ ನಮ್ಮ ವಿದ್ಯಾರ್ಥಿಗಳು ಕನ್ನಡ, ಇಂಗ್ಲಿಷ್‌ ಹಾಗೂ ಸಂಸ್ಕೃತದಲ್ಲಿ ಉತ್ತರಿಸಿದ್ದಾರೆ. ಇಡೀ ವರ್ಷ 10 ಪೂರ್ವಸಿದ್ಧತಾ ಪರೀಕ್ಷೆ ನಡೆಸಿದ್ದೇವೆ. ಮಾರ್ಚ್‌ನಿಂದ ಡಿಸೆಂಬರ್‌ವರೆಗೂ ತರಗತಿಗಳನ್ನು ನಡೆಸಿದ್ದೇವೆ. ನಿರಂತರ ಎಲ್ಲರ ಪರಿಶ್ರಮದಿಂದಾಗಿ ರ‍್ಯಾಂಕ್ ಗಳಿಸಿದ್ದೇವೆ’ ಎಂದರು.

ಕುಸಿದ ಸ್ಥಾನ: ಜಿಲ್ಲೆಯು 2018: ಶೇ 59.23 ಫಲಿತಾಂಶದೊಂದಿಗೆ 10ನೇ ಸ್ಥಾನದಲ್ಲಿತ್ತು. ಈ ಬಾರಿ ಫಲಿತಾಂಶ ಶೇ 64.87 ಕ್ಕೆ ಏರಿದ್ದರೂ ಜಿಲ್ಲಾವಾರು ಪಟ್ಟಿಯಲ್ಲಿ 19ನೇ ಸ್ಥಾನಕ್ಕೆ ಕುಸಿದಿದೆ.

ರ‍್ಯಾಂಕ್ ವಿಜೇತರೆಲ್ಲರೂ ಈಗ ಗ್ರಾಮ ಲೆಕ್ಕಿಗರು!

2015ರಿಂದ 2018ರವರೆಗೆ ಕಲಾ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಗಳಿಸಿದವರೆಲ್ಲರೂ ಈಗ ಗ್ರಾಮ ಲೆಕ್ಕಿಗರಾಗಿದ್ದಾರೆ. 2015ರಲ್ಲಿ ನೇತ್ರಾವತಿ, 2016ರಲ್ಲಿ ಅನಿತಾ, 2017ರಲ್ಲಿ ಚೈತ್ರಾ ಮತ್ತು 2018ರಲ್ಲಿ ಸ್ವಾತಿ ಪ್ರಥಮ ರ‍್ಯಾಂಕ್ ಗಳಿಸಿದ್ದರು. ‘ಅವರೆಲ್ಲರೂ ಗ್ರಾಮಲೆಕ್ಕಿಗರಾಗಿ ವಿವಿಧೆಡೆ ಕಾರ್ಯನಿರ್ವಹಿಸುತ್ತಿದ್ದಾರೆ. ದೂರಶಿಕ್ಷಣದಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಅವರೆಲ್ಲರೂ ಬಡ ಕುಟುಂಬದ ಹಿನ್ನೆಲೆಯವರು’ ಎಂದು ಪ್ರಾಂಶುಪಾಲ ವೀರಭದ್ರಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.