ADVERTISEMENT

ಸ್ನೇಹದಿಂದ ಸೇವೆಯತ್ತ ಹೆಜ್ಜೆಹಾಕಿದ ಮಲೆನಾಡಿನ ‘ಯುವ‘

ರೇಷ್ಮಾ ಶೆಟ್ಟಿ
Published 14 ಆಗಸ್ಟ್ 2019, 19:30 IST
Last Updated 14 ಆಗಸ್ಟ್ 2019, 19:30 IST
ಶಿಕ್ಷಣ ಸ್ನೇಹಿ
ಶಿಕ್ಷಣ ಸ್ನೇಹಿ   

‘ಬದುಕಲು ನೆಲೆ ಕೊಟ್ಟ ಊರಿಗೆ, ಬದುಕು ಕಟ್ಟಿಕೊಳ್ಳಲು ಅಕ್ಷರ ನೀಡಿದ ಶಾಲೆಗೆ, ಕಿಂಚಿತ್ತಾದರೂ ಸೇವೆ ಸಲ್ಲಿಸಬೇಕು’- ಇಂಥ ತುಡಿತವುಳ್ಳ ಮಲೆನಾಡಿನ ಸಮಾನ ಮನಸ್ಕ ಗೆಳೆಯರು ಸೇರಿ ಕಟ್ಟಿದ ತಂಡವೇ ‘ಶಿಕ್ಷಣ ಸ್ನೇಹಿ ಟ್ರಸ್ಟ್’. ಈ ಹಂಬಲವನ್ನು ಕಾರ್ಯರೂಪಕ್ಕೆ ತರಲು ಅವರು ಆಯ್ದುಕೊಂಡಿದ್ದು ತಮ್ಮೂರಿನ ಸರ್ಕಾರಿ ಶಾಲೆಗಳನ್ನು.

ಈ ಸ್ನೇಹಿತರ ತಂಡ ಹದಿನೈದು ವರ್ಷಗಳಿಂದ ಮಲೆನಾಡಿನ ಶೃಂಗೇರಿ, ಕೊಪ್ಪ, ಎನ್. ಆರ್.ಪುರ, ತೀರ್ಥಹಳ್ಳಿ ಮತ್ತು ಚಿಕ್ಕಮಗಳೂರು ಭಾಗದ ಸರ್ಕಾರಿ ಶಾಲೆಗಳ ಮಕ್ಕಳಿಗೆ ಪ್ರತಿ ವರ್ಷ ಉಚಿತವಾಗಿ ನೋಟ್ ಪುಸ್ತಕಗಳನ್ನು ವಿತರಿಸುತ್ತಿದ್ದಾರೆ. ಅಷ್ಟೇ ಅಲ್ಲ, ಮಕ್ಕಳಿಗೆ ಉಚಿತ ಬಸ್ ಪಾಸ್ ಮಾಡಿಸಿಕೊಡುವುದು, ಜತೆಗೆ ಅನೇಕ ಮಕ್ಕಳ ಓದಿಗೆ ನೆರವಾಗುವ ಕೆಲಸ ಮಾಡುತ್ತಿದ್ದಾರೆ.

2004ರಿಂದ ನಿರಂತರ..

ADVERTISEMENT

ಕಾಲೇಜು ದಿನಗಳಿಂದಲೂ ಸಂಘ ಸಂಸ್ಥೆಗಳ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸಾಮಾಜಿಕ ಕಳಕಳಿ ತೋರುತ್ತಿದ್ದ ಅನಿಲ್ ಹೊಸಕೊಪ್ಪ, ‘ಶಿಕ್ಷಣ ಸ್ನೇಹಿ’ ತಂಡದ ರೂವಾರಿ.

ಅದು 2004ನೇ ವರ್ಷ. ತಾನು ಓದಿದ ಶೃಂಗೇರಿ ತಾಲ್ಲೂಕಿನ ಕುಂಚೇಬೈಲು ಸರ್ಕಾರಿ ಶಾಲೆಗೆ ಭೇಟಿ ನೀಡಿದ್ದರು. ಆ ಶಾಲೆಯ ಮಕ್ಕಳಿಗೆ ಶಿಕ್ಷಣ ಪರಿಕರಗಳ ಅಗತ್ಯದ ಬಗ್ಗೆ ಅರಿತುಕೊಂಡರು. ವಿದ್ಯೆ ಕೊಟ್ಟ ಶಾಲೆಗೆ ಹೇಗಾದರೂ ನೆರವಾಗಬೇಕೆಂದು ನಿರ್ಧರಿಸಿದರು. ಆ ವರ್ಷವೇ ಶಾಲೆಯಲ್ಲಿದ್ದ 170 ಮಕ್ಕಳಿಗೆ ಜಾಮಿಟ್ರಿ ಬಾಕ್ಸ್, ಪ್ರತಿ ವಿದ್ಯಾರ್ಥಿಗೆ 3 ನೋಟ್ ಪುಸ್ತಕಗಳನ್ನು ಕೊಡಿಸಿದರು. ನೋಟ್ ಪುಸ್ತಕ, ಜಾಮಿಟ್ರಿ ಬಾಕ್ಸ್ ಪಡೆದ ಮಕ್ಕಳ ಕಣ್ಣಲ್ಲಿ ಸಂತಸದ ಕ್ಷಣ ತುಂಬಾ ಖುಷಿಕೊಟ್ಟಿತು. ಈ ಘಟನೆಯೇ ‘ಶಿಕ್ಷಣ ಸೇವೆ’ಯ ಆರಂಭಕ್ಕೆ ಬುನಾದಿಯಾಯಿತು.

ಇದಾದ ನಂತರ ತಮ್ಮೂರಿನ ವ್ಯಾಪ್ತಿಯಲ್ಲಿರುವ ಸರ್ಕಾರಿ ಶಾಲೆಗಳಿಗೆ ಮೂರು ವರ್ಷಗಳ ಕಾಲ ತಾವೊಬ್ಬರೇ ಈ ಪುಸ್ತಕ, ಪರಿಕರಗಳನ್ನು ವಿತರಿಸುತ್ತಾ ಹೊರಟರು. ನಾಲ್ಕನೇ ವರ್ಷದಲ್ಲಿ ತನ್ನೊಂದಿಗೆ ಓದಿದ ಶಾಲೆಯ ಹಿರಿಯ, ಕಿರಿಯ ಹಾಗೂ ಸಹಪಾಠಿಗಳನ್ನು ಸೇರಿಸಿಕೊಂಡು ಶಿಕ್ಷಣಸ್ನೇಹಿ ಟ್ರಸ್ಟ್‌ ಸ್ಥಾಪಿಸಿದರು. ಅಂದು ಏಕಾಂಗಿಯಾಗಿದ್ದ ಅನಿಲ್ ತಂಡದಲ್ಲಿ ಈಗ ಸುಮಾರು 25 ಮಂದಿ ಸದಸ್ಯರಿದ್ದಾರೆ. ಪ್ರತಿ ವರ್ಷವೂ 7000 ಮಕ್ಕಳಿಗೆ ನೋಟ್ ಪುಸ್ತಕಗಳನ್ನು ಉಚಿತವಾಗಿ ನೀಡುವ ಕೆಲಸ ಮಾಡುತ್ತಿದೆ ಈ ಸಂಸ್ಥೆ.

ಬಾಲ್ಯದ ‘ಅನುಭವ’ ಪಾಠ

ಹಳ್ಳಿಯ ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳು ನೋಟ್ ಪುಸ್ತಕ ಖರೀದಿಗೆ ಪರದಾಡುವುದನ್ನು ಗಮನಿಸಿದ್ದೆ. ಬಾಲ್ಯದಲ್ಲೇ ಈ ಅನುಭವವಾಗಿತ್ತು. ಹೊಸ ನೋಟ್ ಪುಸ್ತಕ ಕೊಂಡಾಗ, ಮಕ್ಕಳಲ್ಲಿ ಉಂಟಾಗುತ್ತಿದ್ದ ಖುಷಿಯನ್ನು ಕಂಡಿದ್ದೆ. ಸರ್ಕಾರ, ಪಠ್ಯ ಪುಸ್ತಕ ಸೇರಿದಂತೆ ಹಲವು ಸೌಲಭ್ಯಗಳನ್ನು ಕೊಡುತ್ತಿದೆ. ಆದರೆ, ಉಚಿತವಾಗಿ ನೋಟ್ ಪುಸ್ತಕ ವಿತರಿಸುತ್ತಿರಲಿಲ್ಲ. ಈ ಎಲ್ಲ ಕಾರಣಗಳಿಂದಲೇ ಟ್ರಸ್ಟ್ ಮೂಲಕ ಉಚಿತ ನೋಟ್ ಪುಸ್ತಕ ವಿತರಿಸುತ್ತಿದ್ದೇವೆ’ ಎಂದು ಅಭಿಯಾನದ ಹಿಂದಿನ ಉದ್ದೇಶ ವಿವರಿಸಿದರು ಅನಿಲ್. ಈ ಕಾರ್ಯಕ್ಕಾಗಿ ವರ್ಷ ವರ್ಷ 35 ರಿಂದ 40 ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆ ಶಾಲೆಗಳ ಶಿಕ್ಷಕರೊಂದಿಗೆ ಮಾತನಾಡಿ, ಮಕ್ಕಳಿಗೆ ಬೇಕಾದ ಸೌಲಭ್ಯಗಳನ್ನು ಪಟ್ಟಿ ಮಾಡಿಕೊಳ್ಳುತ್ತಾರೆ. ಯಾವುದನ್ನೆಲ್ಲ ಪೂರೈಸಲು ಸಾಧ್ಯ ಎಂಬುದನ್ನು ಚರ್ಚೆ ಮಾಡುತ್ತಾರೆ. ಹೀಗೆ ಯೋಜನಾಬದ್ಧವಾಗಿ ನಡೆಯುತ್ತಿರುವ ಈ ಟ್ರಸ್ಟ್, ಹದಿನೈದು ವರ್ಷಗಳಲ್ಲಿ ಸುಮಾರು ಒಂದೂಕಾಲು ಲಕ್ಷಕ್ಕೂ ಅಧಿಕ ಪುಸ್ತಕಗಳನ್ನು ಮಕ್ಕಳಿಗೆ ಪೂರೈಸಿದೆ.

ವೈವಿಧ್ಯಮಯ ತಂಡ

ಶಿಕ್ಷಣ ಸ್ನೇಹಿ ತಂಡದಲ್ಲಿ ಎಂಜಿನಿಯರ್‌ಗಳು, ಕನ್ಸ್ಟ್ರಕ್ಷನ್ ಕಂಪನಿಯಲ್ಲಿ ಕೆಲಸ ಮಾಡುವವರು, ಗಾರ್ಮೆಂಟ್‌ನಲ್ಲಿ ಸೂಪರ್ ವೈಸರ್ ಆಗಿರುವವರು, ಬ್ಯಾಂಕ್ ಉದ್ಯೋಗಿಗಳು, ವ್ಯಾಪಾರಸ್ಥರು.. ಹೀಗೆ ಎಲ್ಲಾ ವರ್ಗದವರು ಇದ್ದಾರೆ. ಇವರೆಲ್ಲರೂ ಪ್ರತಿ ವರ್ಷ ಏಪ್ರಿಲ್, ಮೇ ತಿಂಗಳಲ್ಲಿ ಒಂದೆಡೆ ಸೇರುತ್ತಾರೆ. ಯಾವ ಶಾಲೆಗಳಿಗೆ ಪುಸ್ತಕಗಳನ್ನು ಪೂರೈಸಬೇಕು ಎಂಬ ವಿಷಯವನ್ನೂ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತಾರೆ. ಜೂನ್‌ ತಿಂಗಳು ಶಾಲೆಗಳು ಆರಂಭವಾಗುತ್ತಿದ್ದಂತೆ ಪುಸ್ತಕಗಳನ್ನು ವಿತರಿಸುತ್ತಾರೆ.

ತಮ್ಮ ತಂಡ ಮಾಡುವ ಈ ಸೇವೆ ಜತೆಗೆ, ಇನ್ಫೋಸಿಸ್ ಪ್ರತಿಪ್ಠಾನದ ಸಹಯೋಗದೊಂದಿಗೆ ಶೃಂಗೇರಿ ಹಾಗೂ ಕೊಪ್ಪ ತಾಲ್ಲೂಕಿನ ಶಾಲೆಗಳಿಗೆ 360 ಕಂಪ್ಯೂಟರ್‌ಗಳ ವ್ಯವಸ್ಥೆ ಮಾಡಿದ್ದಾರೆ.

ಐಎಎಸ್‌ ಕೇಂದ್ರದ ಕನಸು

ಮಲೆನಾಡಿನ ಭಾಗದಲ್ಲಿ ಐಎಎಸ್‌ ಹಾಗೂ ಐಪಿಎಸ್ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸೇರುವವರ ಸಂಖ್ಯೆ ವಿರಳ. ಅದಕ್ಕೆ ಕಾರಣ, ಈ ಭಾಗದಲ್ಲಿ ಆ ಪರೀಕ್ಷೆಗಳಿಗೆ ಬೇಕಾದ ತರಬೇತಿ ಕೇಂದ್ರದ ಕೊರತೆ. ಮಾತ್ರವಲ್ಲ, ಅಂಥ ಯುವ ಪ್ರತಿಭೆಗಳಿಗೆ ಸರಿಯಾದ ಮಾರ್ಗದರ್ಶನ ನೀಡುವವರೂ ಇಲ್ಲ. ಈ ಬಗ್ಗೆ ಚಿಂತನೆ ನಡೆಸಿರುವ ತಂಡದವರು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಾದ ತರಬೇತಿ ಕೇಂದ್ರ ಸ್ಥಾಪನೆ ಜತೆಗೆ, ಸುಸಜ್ಜಿತ ಗ್ರಂಥಾಲಯ ಆರಂಭಿಸುವ ಕನಸು ಕಂಡಿದ್ದಾರೆ.

**

ಮಿತ್ರವೃಂದದೊಂದಿಗೆ ಹೆಜ್ಜೆ

13 ವರ್ಷಗಳ ಹಿಂದೆ ಮಲೆನಾಡು ಮಿತ್ರವೃಂದ ಸಂಸ್ಥೆ ಆರಂಭವಾಯಿತು. ಅದನ್ನು ಆರಂಭಿಸಿದ್ದು ಅನಿಲ್ ಅವರೇ. ಮಲೆನಾಡಿನ ಶ್ರಮಿಕ ವರ್ಗಕ್ಕಾಗಿ ಈ ಸಂಸ್ಥೆ ಕಟ್ಟಿದ್ದರು. ಇದರಲ್ಲಿ ಸುಮಾರು 5000 ಮಂದಿ ಮಲೆನಾಡಿನ ಸದಸ್ಯರಿದ್ದಾರೆ. ಮಲೆನಾಡ ಕ್ರೀಡಾಕೂಟ ಹಾಗೂ ಸಾಧಕರಿಗೆ ಸನ್ಮಾನ ಎಂಬ ಕಾರ್ಯಕ್ರಮ ಮಾಡುವುದು ಮಿತ್ರವೃಂದದ ವರ್ಷದ ಕಾಯಕ. ಆ ಕಾರ್ಯಕ್ರಮದ ವಿಶೇಷವೆಂದರೆ ಮಲೆನಾಡಿನ ಭಾಗದಲ್ಲಿ ತೋಟಗಾರಿಕೆ, ಗಾರೆ ಕೆಲಸ, ಹೈನುಗಾರಿಕೆ ಹೀಗೆ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿಶೇಷ ವ್ಯಕ್ತಿಗಳಿಗೆ ಬೆಂಗಳೂರಿನಲ್ಲಿ ಸನ್ಮಾನ ಮಾಡುತ್ತಾರೆ. ಐದು ವರ್ಷದಿಂದ ಏಪ್ರಿಲ್ 15 ರಿಂದು ಮಲೆನಾಡ ದಿನ (ಮಲೆನಾಡ್ ಡೇ) ಎಂಬ ಕಾರ್ಯಕ್ರಮ ಆಯೋಜಿಸಿಕೊಂಡು ಬಂದಿದ್ದಾರೆ. ಮೂರು ವರ್ಷಗಳಿಂದ ಸಂಘದ ಸದಸ್ಯರೊಬ್ಬರ ಮನೆ ಅಂಗಳದಲ್ಲೇ ಈ ಕಾರ್ಯಕ್ರಮ ಮಾಡುತ್ತಿದ್ದಾರೆ. ಹಿಂದಿನ ಮಲೆನಾಡಿನ ಜೀವನಶೈಲಿಯನ್ನು ಪರಿಚಯಿಸುವುದು ಈ ಕಾರ್ಯಕ್ರಮ ಉದ್ದೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.