ADVERTISEMENT

ಕಲಿಸುವ ವಿದ್ಯಾರ್ಥಿನಿ: ಇದು ಇಶಾನಿ ಕಹಾನಿ 

ವಿಶಾಖ ಎನ್.
Published 16 ನವೆಂಬರ್ 2025, 23:30 IST
Last Updated 16 ನವೆಂಬರ್ 2025, 23:30 IST
   

ಜೆನ್ ಝೀ ತಲೆಮಾರಿನ ಧಾವಂತ, ನಿರ್ಭಾವುಕ ಮನಃಸ್ಥಿತಿ, ಅತಿ ಆತ್ಮವಿಶ್ವಾಸದಂತಹ ಧೋರಣೆಗಳ ಬಗ್ಗೆ ಹಿರಿತಲೆಗಳು ಟೀಕಿಸುವುದನ್ನು ಕೇಳುತ್ತಾ ಬಂದಿದ್ದೇವೆ. ಆದರೆ, ಹೀಗೆ ಯಾವುದೇ ಆರೋಪವನ್ನು ಸಾಮಾನ್ಯೀಕರಣಗೊಳಿಸಕೂಡದು ಎನ್ನುವುದನ್ನು ಹೊಸ ತಲೆಮಾರಿನ ಸಾಧಕರು ಪದೇಪದೇ ರುಜುವಾತುಪಡಿಸುತ್ತಲೇ ಇದ್ದಾರೆ. ಅಂತಹವರ ಸಾಲಿಗೆ ಸೇರುತ್ತಾರೆ ದೆಹಲಿಯ ತರುಣಿ ಇಶಾನಿ ಶರ್ಮಾ.

ವಾರದ ಹಿಂದೆ ಇಶಾನಿ ಶರ್ಮಾ ಹಾಕಿದ್ದ ಲಿಂಕ್ಡ್ ಇನ್ ಪೋಸ್ಟ್ ಒಂದು ಸಾಕಷ್ಟು ಚರ್ಚೆಗೆ ಇಂಬುಗೊಟ್ಟಿತು. ಅದು ಬಹಳ ಸರಳವೂ ಸುಂದರವೂ ಪ್ರೇರಕವೂ ಆದ ವಿಷಯ. ಇಶಾನಿ ಹಾಗೇ ಸುಮ್ಮನೆ ಎನ್ನುವಂತೆ ಶುರುಮಾಡಿದ್ದ ಯೂಟ್ಯೂಬ್ ಚಾನೆಲ್‌ನಿಂದ ಬಂದ ಗಳಿಕೆಯಿಂದ ಆಕೆಯ ಮೊದಲ ವರ್ಷದ ಕಾಲೇಜು ಶುಲ್ಕವನ್ನು ಸಂಪೂರ್ಣವಾಗಿ ಭರಿಸಲು ಸಾಧ್ಯವಾಯಿತು ಎನ್ನುವುದೇ ಆ ಸಂಗತಿ. ಅದನ್ನು ಬಹಳ ಹೆಮ್ಮೆಯಿಂದ ಆಕೆ ಬರೆದುಕೊಂಡರು.

ದೆಹಲಿಯ ಕಿರೋಢಿ ಮಲ್ ಕಾಲೇಜಿನಲ್ಲಿ ಮೊದಲ ವರ್ಷದ ಬಿ.ಕಾಂ. ಪದವಿ ಓದುತ್ತಿರುವ ಹುಡುಗಿ ಇಶಾನಿ. ಅವರು ಹತ್ತನೇ ತರಗತಿಯಲ್ಲಿ ಓದುತ್ತಿದ್ದಾಗಲೇ, ಸಹಪಾಠಿಗಳಿಗೆ ‘ಪರೀಕ್ಷೆ ಎದುರಿಸುವುದು ಹೇಗೆ?’ ಎನ್ನುವುದನ್ನು ಸರಳವಾಗಿ ಹೇಳುತ್ತಿದ್ದರು. ಅವರ ಸಲಹೆ ಕೇಳಿದ ಎಷ್ಟೋ ಮಕ್ಕಳಿಗೆ ಅನು ಕೂಲ ಆಗಿತ್ತು. ಹೀಗೆ ಸಂವಾದ ನಡೆಸುವಾಗ ಅವರಿಗೆ ತಾವು ನೀಡುವ ಸಲಹೆಗಳನ್ನೇ ಒಳಗೊಂಡ ಒಂದು ವಿಡಿಯೊ ಮಾಡಿದರೆ ಹೇಗೆ ಎನ್ನುವ ಯೋಚನೆ ಬಂತು. ಅದನ್ನು ಬಹಳ ಮುಗ್ಧವಾಗಿ ಮಾಡಿದರು. ಹೀಗೆಯೇ ವಿಡಿಯೊ ಚಿತ್ರೀಕರಿಸಬೇಕು, ಅದನ್ನು ಸಂಕಲನ ಮಾಡುವ ಕ್ರಮ ಇಂತು ಎಂಬ ಹೋಂವರ್ಕ್ ಇಲ್ಲದೇ ಮಾಡಿದ ವಿಡಿಯೊ ಅದು. ಅದನ್ನು ಅಪ್‌ಲೋಡ್‌ ಮಾಡಿದ ಮೇಲೆ ಕೆಲವು ವಿದ್ಯಾರ್ಥಿಗಳು ನೋಡಿದರಷ್ಟೆ. ಕೆಲವರು ಮೆಚ್ಚಿ ಕಾಮೆಂಟ್ ಹಾಕಿದರು. ಸಹಪಾಠಿಗಳಿಗೆ ಏನೋ ಒಂದಿಷ್ಟು ಅನುಕೂಲ ಆಯಿತಲ್ಲ ಎಂದು ಇಶಾನಿ ಸಮಾಧಾನಪಟ್ಟರು.

ADVERTISEMENT

ಪ್ರೀ ಬೋರ್ಡ್ ಪರೀಕ್ಷೆಗೆ ಮುಂಚೆ ಹಾಕಿದ್ದ ಆ ವಿಡಿಯೊ ಶೈಕ್ಷಣಿಕವಾಗಿ ಬಹಳ ಮಹತ್ವದ್ದಾಗಿತ್ತು ಎನ್ನುವುದು ಅವರಿಗೆ ಆಗ ಗೊತ್ತಿರಲಿಲ್ಲ. ಕ್ರಮೇಣ ಅವರು ಹಾಗೆ ಹಾಕುವ ವಿಡಿಯೊಗಳ ಸಂಖ್ಯೆಯನ್ನು ಹೆಚ್ಚಿಸಿದರು. ಪಿಯು ಹಂತ ದಾಟಿ, ಪದವಿಗೆ ಬರುವ ಹೊತ್ತಿಗೆ ಅವರ ಯೂಟ್ಯೂಬ್ ಚಾನೆಲ್ ಒಂದಿಷ್ಟು ಆದಾಯ ತಂದುಕೊಡುವಷ್ಟು ವೀಕ್ಷಕರನ್ನು ಪಡೆದುಕೊಂಡಿತ್ತು. ಹಾಗೆ ಬಂದ ಹಣದಲ್ಲೇ ಅವರು ಕಾಲೇಜು ಶುಲ್ಕ ಕಟ್ಟಿದ್ದು.

‘ನಾನು ಓದುತ್ತಿರುವುದು ಸರ್ಕಾರಿ ಕಾಲೇಜಿನಲ್ಲಿ. ಅದಕ್ಕೆ ದೊಡ್ಡ ಶುಲ್ಕವೇನೂ ಇಲ್ಲ. ಆದರೂ ನನ್ನ ಶುಲ್ಕವನ್ನು ನಾನೇ ಒಳ್ಳೆಯ ಕಂಟೆಂಟ್ ಹಾಕಿ ಹುಟ್ಟಿಸಿಕೊಂಡೆ ಎನ್ನುವುದು ಹೆಮ್ಮೆಯ ಸಂಗತಿ. ನಾವು ಯಾವುದನ್ನು ಇಷ್ಟಪಡುತ್ತೇವೋ ಅದನ್ನು ಅಚ್ಚುಕಟ್ಟಾಗಿ ಮಾಡಿದರೆ ಫಲ ಸಿಕ್ಕೇ ಸಿಗುತ್ತದೆ ಎನ್ನುವುದಕ್ಕೆ ನಾನೇ ಉದಾಹರಣೆ’ ಎಂದು ಇಶಾನಿ ವಿನಯದಿಂದ ಹೇಳುತ್ತಾರೆ. ಈ ಸಾಧಕಿಯ ಯೂಟ್ಯೂಬ್ ಚಾನೆಲ್ ಹೆಸರು Ishani Sharma ಎಂದೇ ಇದೆ. ಅದರಲ್ಲಿನ ವಿಡಿಯೊಗಳ ಶೀರ್ಷಿಕೆ ಕೂಡ ನೇರ, ಸರಳ: ‘ನಾನು ಅಕೌಂಟೆನ್ಸಿ ಪರೀಕ್ಷೆಯಲ್ಲಿ ಶೇ 98 ಅಂಕ ತೆಗೆದದ್ದು ಹೇಗೆ?’, ‘ಹತ್ತನೇ ತರಗತಿಯ ಮಕ್ಕಳು ಓದಲು ಹೇಗೆ ಟೈಮ್ ಟೇಬಲ್ ಹಾಕಿಕೊಳ್ಳಬೇಕು?’, ‘ವಿಜ್ಞಾನ ವಿಷಯದಲ್ಲಿ ಒಂದೂ ಅಂಕ ಕಳೆದುಕೊಳ್ಳದಂತೆ ಸ್ಕೋರ್ ಮಾಡಲು ಓದಬೇಕಾದ ಕ್ರಮ ಯಾವುದು?’... ಇಂಥವು.

ಸ್ವಂತ ಅನುಭವ ಪ್ರಣೀತ ವಿಡಿಯೊಗಳನ್ನು ಕನಿಷ್ಠ 40 ಸಾವಿರ ಮಂದಿ ವೀಕ್ಷಿಸಿದ್ದಾರೆ. ಯಾರೇ ಆಗಲಿ, ಯಾವುದರಲ್ಲಿ ಉತ್ಕಟತೆ ಇದೆಯೋ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಪಡಿಸಲು ಹಿಂದೇಟು ಹಾಕಬಾರದು, ಮೊದಲ ಅಳುಕನ್ನು ಮೀರಿದರೆ ಮುಂದೆ ಒಳ್ಳೆಯ ದಿನ ಬಂದೇ ಬರುತ್ತದೆ ಎನ್ನುವುದಕ್ಕೆ ತಾನೇ ಉದಾಹರಣೆ ಎಂದು ಇಶಾನಿ ನಗುತ್ತಾರೆ. ಅದು ವಿದ್ಯಾರ್ಥಿನಿಯೊಬ್ಬಳ ಹೆಮ್ಮೆಯ ನಗು ಎನ್ನುವುದನ್ನು ನಾವು ಗಮನಿಸಬೇಕು ಅಷ್ಟೇ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.