ADVERTISEMENT

PV Web Exclusive: ಎಸ್ಸೆಸ್ಸೆಲ್ಸಿ ಅಂಕಪಟ್ಟಿ ಮತ್ತೊಂದು ಪ್ರತಿ ಪಡೆಯುವುದೀಗ ಸರಳ

ಎಸ್‌.ಸಂಪತ್‌
Published 27 ಅಕ್ಟೋಬರ್ 2020, 5:57 IST
Last Updated 27 ಅಕ್ಟೋಬರ್ 2020, 5:57 IST
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ -ಪ್ರಜಾವಾಣಿ ಚಿತ್ರ
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ -ಪ್ರಜಾವಾಣಿ ಚಿತ್ರ   

ಬೆಂಗಳೂರು: ಹೆಸರು ನಟರಾಜ್‌, ಊರು ಮೈಸೂರು. ಕಳೆದು ಹೋದ ಎಸ್ಸೆಸ್ಸೆಲ್ಸಿ ಅಂಕಪಟ್ಟಿ (ಮಾರ್ಕ್ಸ್‌ಕಾರ್ಡ್‌) ಪಡೆಯಲು ಅವರು ಪಟ್ಟ ಪರಿಪಾಟಲು ಅಷ್ಟಿಷ್ಟಲ್ಲ. ಬಾಡಿಗೆ ಮನೆ ಬದಲಿಸಿದಾಗ ಅವರ ಎಸ್ಸೆಸ್ಸೆಲ್ಸಿ ಅಂಕಪಟ್ಟಿ ಕಳೆದು ಹೋಯಿತು. ಇನ್ನೊಂದು ಅಂಕಪಟ್ಟಿಯ ಪ್ರತಿ ಪಡೆಯಲು ಮುಂದಾದರು.

ಅದಕ್ಕಾಗಿ ಅರ್ಜಿ, ಪೊಲೀಸ್‌ ಠಾಣೆಯಲ್ಲಿ ದಾಖಲಿಸಿದ ದೂರಿನ ಸ್ವೀಕೃತಿ ಪ್ರತಿ, ಅಫಿಡವಿಟ್ ಹಿಡಿದು ತಾನು ಓದಿದ ಶಾಲೆ, ಬಿಇಒ ಕಚೇರಿ, ಡಿಡಿಪಿಐ ಕಚೇರಿ, ಪರೀಕ್ಷಾ ಮಂಡಳಿಯ ವಿಭಾಗೀಯ ಕಚೇರಿಗಳಿಗೆ ಅಲೆದಾಡಿದರು. ಬೆಂಗಳೂರಿನಲ್ಲಿರುವ ಮಂಡಳಿಯ ಕೇಂದ್ರ ಕಚೇರಿಗೂ ಒಮ್ಮೆ ಬಂದು ಹೋಗಿದ್ದರು. ಅವರಿಗೆ ಎಸ್ಸೆಸ್ಸೆಲ್ಸಿಯ ಅಂಕಪಟ್ಟಿಯ 2ನೇ ಪ್ರತಿ ತಲುಪಲು ನಾಲ್ಕು ತಿಂಗಳೇ ಹಿಡಿಯಿತು!

ಬಸ್‌ಗಳಲ್ಲಿ ಸಂಚರಿಸುವಾಗ ಕೆಲವರು ಅಂಕಪಟ್ಟಿ ಕಳೆದುಕೊಂಡಿದ್ದರೆ, ಇನ್ನು ಕೆಲವರಿಗೆ ಅವರ ಉದ್ಯೋಗದಾತ ಸಂಸ್ಥೆಗಳು ಮೂಲ ಪ್ರತಿಗಳನ್ನು ಹಿಂದಿರುಗಿಸದೆ ಸತಾಯಿಸುತ್ತಿರುತ್ತವೆ. ಅಲ್ಲದೆ ವಿಪರೀತ ಮಳೆ ಬಂದಾಗ ಮನೆಯೊಳಗೆ ನೀರು ನುಗ್ಗಿ ಕೆಲವರ ಅಂಕಪಟ್ಟಿಗಳು ಹಾಳಾಗಿರುವ ನಿದರ್ಶನಗಳಿವೆ. ಮತ್ತೆ ಕೆಲವರ ಅಂಕಪಟ್ಟಿಗಳು ಬೆಂಕಿ ಅವಘಡಗಳಲ್ಲಿ ಸುಟ್ಟು ಹೋಗಿರುತ್ತವೆ–ಹೀಗೆ ಭಿನ್ನ ಕಾರಣಗಳಿಂದ ಮೂಲ ಅಂಕಪಟ್ಟಿ ಕಳೆದುಕೊಂಡಿರುವವರು ಮತ್ತೊಂದು ಪ್ರತಿ ಪಡೆದುಕೊಳ್ಳಲು ನಾನಾ ರೀತಿ ಪರದಾಡುವುದನ್ನು ಕೇಳಿದ್ದೇವೆ, ನೋಡಿದ್ದೇವೆ.

ADVERTISEMENT

ಸಮಯಕ್ಕೆ ಸರಿಯಾಗಿ ಅಂಕಪಟ್ಟಿಯ ಮತ್ತೊಂದು ಪ್ರತಿ ದೊರೆಯದ ಕಾರಣ ಕೆಲವರು ಸಾಕಷ್ಟು ಅವಕಾಶಗಳಿಂದಲೂ ವಂಚಿತರಾಗಿದ್ದಾರೆ. ಕರ್ನಾಟಕ ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಗೆ ವರ್ಷಕ್ಕೆ ಅಂದಾಜು 1,200 ಜನರು ಅಂಕಪಟ್ಟಿಯ ಮತ್ತೊಂದು ಮೂಲ ಪ್ರತಿಗಾಗಿ ಅರ್ಜಿ ಸಲ್ಲಿಸುತ್ತಾರೆ ಎಂದು ಮಂಡಳಿ ಅಧಿಕಾರಿಗಳೇ ಹೇಳುತ್ತಾರೆ. ಅವರ ಪ್ರಕಾರ ಪ್ರತಿ ಅರ್ಜಿ ವಿಲೇವಾರಿಗೆ ಮೂರರಿಂದ ನಾಲ್ಕು ತಿಂಗಳು ಹಿಡಿಯುತ್ತದೆ.

ಬಂದಿದೆ ಹೊಸ ವಿಧಾನ:ಅಂಕಪಟ್ಟಿಗಳನ್ನು ಕಳೆದುಕೊಂಡವರ ನೋವನ್ನು ಎಸ್ಸೆಸ್ಸೆಲ್ಸಿ ಬೋರ್ಡ್‌ ಇದೀಗ ಅರ್ಥ ಮಾಡಿಕೊಂಡಿದೆ. ಈ ಸಮಸ್ಯೆ ಪರಿಹಾರಕ್ಕಾಗಿಯೇ ಹೊಸ ತಂತ್ರಾಂಶ ಅಳವಡಿಸಿಕೊಂಡು, ಅಂಕಪಟ್ಟಿಯ ಮತ್ತೊಂದು ಪ್ರತಿ ಅಗತ್ಯವಿರುವರಿಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ. ಈ ಮೂಲಕ ಗರಿಷ್ಠ 30 ದಿನಗಳೊಳಗೆ ಅರ್ಜಿದಾರರಿಗೆ ಅಂಕಪಟ್ಟಿ ದೊರೆಯುವಂತೆ ವ್ಯವಸ್ಥೆ ಮಾಡಿದೆ. ಅಲ್ಲದೆ ಅರ್ಜಿದಾರರಿಗೆ ತುರ್ತಾಗಿ ಅಂಕಪಟ್ಟಿ ಒದಗಿಸುವ ತತ್ಕಾಲ್‌ ಸೇವೆಗೂ ಮಂಡಳಿ ಚಾಲನೆ ನೀಡಿದೆ. ಇದರಡಿ, ಕೇವಲ 5 ದಿನಗಳಲ್ಲಿ ಅಂಕಪಟ್ಟಿ ಸಿಗಲಿದೆ.

ಮೂಲ ಪ್ರತಿ ಕಳೆದುಕೊಂಡವರು, ಎರಡನೇ/ ಮೂರನೇ/ ನಾಲ್ಕನೇ ಪ್ರತಿ ಪಡೆಯಲೂ ಅವಕಾಶ ಕಲ್ಪಿಸಲಾಗಿದೆ. ಜತೆಗೆ, ಎಸ್ಸೆಸ್ಸೆಲ್ಸಿಯಲ್ಲಿ ಅನುತ್ತೀರ್ಣರಾಗಿರುವವರು ತಮ್ಮ ಅನುತ್ತೀರ್ಣದ ಅಂಕಪಟ್ಟಿಯನ್ನೂ ಈ ವಿಧಾನದ ಮೂಲಕ ಶೀಘ್ರವೇ ಪಡೆಯಬಹುದು. ಕಚೇರಿಯಿಂದ ಕಚೇರಿಗೆ ಓಡಾಟ, ಅನಗತ್ಯ ವಿಳಂಬ, ಖರ್ಚು ವೆಚ್ಚಕ್ಕೆ ಈ ವಿಧಾನ ಕಡಿವಾಣ ಹಾಕುತ್ತದೆ ಎನ್ನುತ್ತಾರೆ ಮಂಡಳಿಯ ಅಧಿಕಾರಿಗಳು.

ಏನು ಮಾಡಬೇಕು?:ಅಂಕಪಟ್ಟಿಯ ಮತ್ತೊಂದು ಪ್ರತಿ ಬೇಕಿರುವವರು ಮೊದಲಿಗೆ http://www.kseeb.kar.nic.in ಮೂಲಕ ಅರ್ಜಿ ಸಲ್ಲಿಸಬೇಕು. ಮೂಲ ಅಂಕಪಟ್ಟಿ ಕಳೆದು ಹೋಗಿರುವ ಕುರಿತು ಅಫಿಡವಿಟ್‌ ಮತ್ತು ಅಂಕಪಟ್ಟಿಯ ಜೆರಾಕ್ಸ್‌ ಪ್ರತಿಯನ್ನು ಅಟ್ಯಾಚ್‌ ಮಾಡಿ ಅರ್ಜಿ ಸಲ್ಲಿಸಬೇಕು. ಆನ್‌ಲೈನ್‌ ಅಥವಾ ಆಫ್‌ಲೈನ್‌ ಮೂಲಕ ನಿಗದಿತ ಶುಲ್ಕ ಪಾವತಿಗೆ ಅವಕಾಶವಿದೆ. ಒಂದು ವೇಳೆ ಅಂಕಪಟ್ಟಿಯ ಜೆರಾಕ್ಸ್‌ ಪ್ರತಿ ಲಭ್ಯವಿಲ್ಲದಿದ್ದರೆ ಶಾಲೆಯ ವಿಳಾಸ ಮತ್ತು ವ್ಯಾಸಂಗ ಮಾಡಿದ ವರ್ಷದ ಮಾಹಿತಿಯನ್ನು ನಮೂದಿಸಬೇಕು.

ಪ್ರಕ್ರಿಯೆ ಹೇಗೆ ನಡೆಯುತ್ತದೆ:ಆನ್‌ಲೈನ್‌ ಮೂಲಕ ಸಲ್ಲಿಕೆಯಾದ ಅರ್ಜಿಯು ಸಂಬಂಧಿತ ಶಾಲೆಯ ಮುಖ್ಯ ಶಿಕ್ಷಕರ ಲಾಗಿನ್‌ಗೆ ಹೋಗುತ್ತದೆ. ಈ ಕುರಿತು ಅರ್ಜಿದಾರರು ಮತ್ತು ಮುಖ್ಯ ಶಿಕ್ಷಕರ ಮೊಬೈಲ್‌ಗೆ ಕೂಡಲೇ ಸಂದೇಶವೂ ರವಾನೆಯಾಗುತ್ತದೆ.
ಬಳಿಕ ಮುಖ್ಯ ಶಿಕ್ಷಕರು, ಅರ್ಜಿದಾರರು ಸಲ್ಲಿರುವ ಅರ್ಜಿಗಳನ್ನು ಶಾಲಾ ದಾಖಲೆಗಳ ಮೂಲಕ ಪರಿಶೀಲಿಸುತ್ತಾರೆ. ನಂತರ ಅದನ್ನು ಮಂಡಳಿಯ ವಿಭಾಗೀಯ ಕಚೇರಿಗೆ ಫಾರ್ವರ್ಡ್‌ ಮಾಡುತ್ತಾರೆ. ವಿಭಾಗೀಯ ಕಚೇರಿಯು ಈ ಪ್ರಸ್ತಾವನೆ ಪರಿಶೀಲಿಸಿ, ತುರ್ತು ಸೇವೆಯಾಗಿದ್ದರೆ ಐದು ದಿನಗಳಲ್ಲಿ, ಸಾಮಾನ್ಯ ಸೇವೆಯಾಗಿದ್ದರೆ 30 ದಿನಗಳೊಳಗೆ ಅಂಕಪಟ್ಟಿಯನ್ನು ಸಂಬಂಧಿಸಿದ ಶಾಲೆಗೆ ರವಾನಿಸುತ್ತದೆ.

ಈ ಎಲ್ಲ ಹಂತದ ಪ್ರಕ್ರಿಯೆಗಳ ಕುರಿತು ಅರ್ಜಿದಾರರ ಮೊಬೈಲ್‌ಗೆ ಸಂದೇಶಗಳು ರವಾನೆಯಾಗುತ್ತಿರುತ್ತವೆ. ಕೊನೆಗೆ ಅರ್ಜಿದಾರರು ಸಂಬಂಧಿಸಿದ ಶಾಲೆಗೆ ಹೋಗಿ ಅಂಕಪಟ್ಟಿಯನ್ನು ಪಡೆದುಕೊಳ್ಳಬಹುದಾಗಿದೆ.
ಒಂದು ವೇಳೆ ಅಭ್ಯರ್ಥಿಯು ಓದಿದ ಶಾಲೆ ಮುಚ್ಚಿ ಹೋಗಿದ್ದಲ್ಲಿ, ಆ ಶಾಲೆಯನ್ನು ಸಮೀಪದ ಮತ್ತೊಂದು ಶಾಲೆಯೊಂದಿಗೆ ‘ಟ್ಯಾಗನ್‌‘ ಮಾಡಲಾಗಿರುತ್ತದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಭ್ಯರ್ಥಿಯ ಅರ್ಜಿಯನ್ನು ‘ಟ್ಯಾಗನ್‌’ ಮಾಡಿದ ಶಾಲೆಗೆ ರವಾನಿಸುತ್ತಾರೆ. ಈ ಕುರಿತು ಪರಿಶೀಲಿಸಿ ಮಾಹಿತಿಯನ್ನು ಆ ಶಾಲಾ ಮುಖ್ಯ ಶಿಕ್ಷಕರು ನೀಡುತ್ತಾರೆ.

ಅನಗತ್ಯ ವಿಳಂಬ, ಕಿರಿಕಿರಿ ಇನ್ನಿಲ್ಲ:‘ಅಂಕಪಟ್ಟಿಯ 2ನೇ ಅಥವಾ ಇತರ ಪ್ರತಿಗಳನ್ನು ಅರ್ಜಿದಾರರು ಸುಲಭ ಮತ್ತು ಶೀಘ್ರವಾಗಿ ಪಡೆಯುವಂತೆ ಮಾಡಲು ಆನ್‌ಲೈನ್‌ ವಿಧಾನವನ್ನು ಅಳವಡಿಸಿಕೊಂಡಿದ್ದೇವೆ. ಈ ವಿಧಾನಕ್ಕೆ ಅಕ್ಟೋಬರ್‌ 15ರಂದು ಚಾಲನೆ ನೀಡಲಾಗಿದೆ. ಅರ್ಜಿದಾರರಿಗೆ ಆಗುತ್ತಿದ್ದ ಅನಗತ್ಯ ವಿಳಂಬ ಮತ್ತು ಕಿರಿಕಿರಿಯನ್ನು ಈ ಮೂಲಕ ನಿವಾರಿಸಲಾಗಿದೆ. ಹೊಸ ವಿಧಾನದ ಜತೆಗೆ ಒಂದು ತಿಂಗಳವರೆಗೆ ಹಳೆ ವಿಧಾನವೂ (ಭೌತಿಕವಾಗಿ ಅರ್ಜಿ ಸಲ್ಲಿಸುವುದು) ಮುಂದುವರಿಯಲಿದೆ. ಆನಂತರ ಸಂಪೂರ್ಣವಾಗಿ ಈ ಸೇವೆ ಆನ್‌ಲೈನ್‌ ಆಗಲಿದೆ’ ಎಂದು ಮಂಡಳಿಯ ನಿರ್ದೇಶಕಿ ವಿ. ಸುಮಂಗಲ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.