ADVERTISEMENT

ಇದೇ 21ಕ್ಕೆ ಆಗಮ ಶಿಕ್ಷಣ ಪ್ರಮಾಣ ಪತ್ರ ವಿತರಣೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2025, 15:30 IST
Last Updated 18 ಫೆಬ್ರುವರಿ 2025, 15:30 IST
<div class="paragraphs"><p>ಪರೀಕ್ಷೆ</p></div>

ಪರೀಕ್ಷೆ

   

ಬೆಂಗಳೂರು: ಧಾರ್ಮಿಕ ದತ್ತಿ ಇಲಾಖೆಯ ಆಗಮ ಶಿಕ್ಷಣ ಮತ್ತು ಪರೀಕ್ಷಾ ಸಮಿತಿ ವತಿಯಿಂದ ಏಳು ಆಗಮಗಳಿಗೆ ಸಂಬಂಧಿಸಿದಂತೆ ನಡೆಸಿದ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಫೆಬ್ರುವರಿ 21ರಂದು ಮೈಸೂರಿನ ಜಗನ್ಮೋಹನ ಅರಮನೆಯ ಸಭಾಂಗಣದಲ್ಲಿ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ನಡೆಯಲಿದೆ.

ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯ ದೇವಸ್ಥಾನಗಳಲ್ಲಿ ನಿತ್ಯ ಪೂಜೆ ಸಲ್ಲಿಸುವ ಅರ್ಚಕ ವೃತ್ತಿಗೆ ಆಗಮ ಶಾಸ್ತ್ರ ರೀತಿಯ ಪೂಜಾ ವಿಧಾನಗಳನ್ನು ನಡೆಸಲು ಆಗಮ ಪಾಠಶಾಲೆಗಳಲ್ಲಿ ತರಗತಿಗಳನ್ನು ನಡೆಸಲಾಗುತ್ತದೆ. ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಆಗಮ ಪ್ರಸಿದ್ಧ ಪರೀಕ್ಷೆಗಳನ್ನು ನಡೆಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಗುತ್ತದೆ.

ADVERTISEMENT

2019–20, 2020–21, 2021–22ನೇ ಸಾಲಿನ ಆಗಮ ಪರೀಕ್ಷೆಗಳನ್ನು 2022ನೇ ಸಾಲಿನಲ್ಲಿ ನಡೆಸಲಾಯಿತು. ಸರ್ವಾಗಮ ಪ್ರವರ ಪ್ರಸಿದ್ಧ ಪರೀಕ್ಷೆಗೆ 2,258 ವಿದ್ಯಾರ್ಥಿಗಳು ಹಾಜರಾಗಿದ್ದರು. ಇದರಲ್ಲಿ 936 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸರ್ವಾಗಮ ಪ್ರವೀಣ ಪ್ರಸಿದ್ಧ ಪರೀಕ್ಷೆಗೆ 593 ವಿದ್ಯಾರ್ಥಿಗಳು ಹಾಜರಾಗಿದ್ದು, 348 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

2022–23, 2023–24ನೇ ಸಾಲಿನ ಸರ್ವಾಗಮ ಪ್ರಸಿದ್ಧ ಪರೀಕ್ಷೆಯನ್ನು 2024ನೇ ಸಾಲಿನಲ್ಲಿ ನಡೆಸಲಾಯಿತು. ಸರ್ವಾಗಮ ಪ್ರವರ ಪ್ರಸಿದ್ಧ ಪರೀಕ್ಷೆಗೆ 1,245 ವಿದ್ಯಾರ್ಥಿಗಳು ಹಾಜರಾಗಿದ್ದು, 419 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸರ್ವಾಗಮ ಪ್ರವೀಣ ಪ್ರಸಿದ್ಧ ಪರೀಕ್ಷೆಗೆ 462 ಜನ ಹಾಜರಾಗಿದ್ದು, 216 ಜನ ಉತ್ತೀರ್ಣರಾಗಿದ್ದಾರೆ. ಈ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಎಲ್ಲರಿಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಅವರು ಪ್ರಮಾಣ ಪತ್ರ ವಿತರಿಸಲಿದ್ದಾರೆ. ವಿದ್ವಾಂಸ ಭಾಷ್ಯಂ ಸ್ವಾಮೀಜಿ ಅವರು ಭಾಷಣ ಮಾಡಲಿದ್ದಾರೆ ಎಂದು ಮುಜರಾಯಿ ಇಲಾಖೆಯ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.