ADVERTISEMENT

ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಈ ವರ್ಷವೂ ಇಲ್ಲ ಎಂ.ಎ. ಇತಿಹಾಸ

ಪ್ರವಾಸೋದ್ಯಮ ಪಿ.ಜಿ ಕೋರ್ಸ್‌ಗೂ ಬೇಡಿಕೆ; ಕಾಡುತ್ತಿದೆ ಸಿಬ್ಬಂದಿ ಕೊರತೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 16 ಡಿಸೆಂಬರ್ 2022, 22:00 IST
Last Updated 16 ಡಿಸೆಂಬರ್ 2022, 22:00 IST
ಹಂಪಿ ಕನ್ನಡ ವಿಶ್ವವಿದ್ಯಾಲಯ
ಹಂಪಿ ಕನ್ನಡ ವಿಶ್ವವಿದ್ಯಾಲಯ   

ಹೊಸಪೇಟೆ (ವಿಜಯನಗರ): ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ 2022–23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲೂ ಎಂ.ಎ. ಇತಿಹಾಸ ವಿಷಯ ಕಲಿಕೆಗೆ ಅವಕಾಶ ಇಲ್ಲ.

ವಿವಿಧ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಾತಿಗೆ ವಿಶ್ವವಿದ್ಯಾಲಯವು ಅರ್ಜಿಗಳನ್ನು ಆಹ್ವಾನಿಸಿದೆ. ಈ ಕುರಿತು ಡಿ. 15ರಂದು ಅಧ್ಯಯನಾಂಗದ ನಿರ್ದೇಶಕರು ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದ ಮಾಹಿತಿ ಪ್ರಕಟಿಸಿದ್ದಾರೆ. ಎಂ.ಎ ಕನ್ನಡ ಸಾಹಿತ್ಯ, ಎಂ.ಎ ಮಹಿಳಾ ಅಧ್ಯಯನ ವಿಭಾಗ, ಎಂ.ಎ ಗ್ರಾಮೀಣಾಭಿವೃದ್ಧಿ ಸೇರಿದಂತೆ ಇತರೆ ಕೋರ್ಸ್‌ಗಳಿಗೆ ಅರ್ಜಿ ಕರೆಯಲಾಗಿದೆ. ಆದರೆ, ಅತಿ ಹೆಚ್ಚು ಬೇಡಿಕೆ ಇರುವ ಇತಿಹಾಸ ವಿಷಯವನ್ನೇ ಕೈಬಿಡಲಾಗಿದೆ. ಹೋದ ವರ್ಷವೂ ಎಂ.ಎ. ಇತಿಹಾಸದ ಪ್ರವೇಶ ಪ್ರಕ್ರಿಯೆ ನಡೆದಿರಲಿಲ್ಲ. ಈ ವರ್ಷವಾದರೂ ಎಂ.ಎ. ಇತಿಹಾಸ ಆರಂಭಿಸಬಹುದು ಎಂಬ ಪದವೀಧರರ ನಿರೀಕ್ಷೆ ಹುಸಿಯಾಗಿದೆ.

ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದಲ್ಲಿ ಎಂ.ಎ.ಪಿಎಚ್‌.ಡಿ ಇತಿಹಾಸ ಸಂಯೋಜಿತ ಕೋರ್ಸ್‌ ಇದೆ. ಆದರೆ, ಅದು ಸುದೀರ್ಘವಾಗಿರುವುದರಿಂದ ಹೆಚ್ಚಿನವರು ಅದನ್ನು ಆಯ್ಕೆ ಮಾಡುತ್ತಿಲ್ಲ. ಪಿಎಚ್‌.ಡಿ ಮಾಡಿಯೇ ತೀರಬೇಕೆನ್ನುವವರು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಮೇಲಿಂದ ಇತಿಹಾಸ ಮತ್ತು ಪುರಾತತ್ವ ಎರಡೂ ವಿಷಯ ಒಳಗೊಂಡಿರುವುದರಿಂದ ಹೆಚ್ಚಿನವರು ಆಸಕ್ತಿ ತೋರಿಸುತ್ತಿಲ್ಲ. ಇತಿಹಾಸವೊಂದೆ ಪ್ರತ್ಯೇಕವಾಗಿರಿಸಬೇಕು ಎನ್ನುವುದು ವಿದ್ಯಾರ್ಥಿಗಳ ಆಗ್ರಹ.

ADVERTISEMENT

ಇನ್ನು, ಡಿಪ್ಲೊಮಾ ಪ್ರವಾಸೋದ್ಯಮ ಕೋರ್ಸ್‌ ಕೂಡ ಆರಂಭಿಸಲಾಗಿದೆ. ಆದರೆ, ಪಿ.ಜಿ. ಕೋರ್ಸ್‌ ಆರಂಭಿಸಬೇಕೆಂಬ ಬೇಡಿಕೆಗೂ ಮನ್ನಣೆ ಸಿಕ್ಕಿಲ್ಲ. ವಿಶ್ವವಿದ್ಯಾಲಯದ ಸನಿಹದಲ್ಲೇ ವಿಶ್ವಪ್ರಸಿದ್ಧ ಹಂಪಿ ಇದೆ. ಸಾಂಸ್ಕೃತಿಕ, ಐತಿಹಾಸಿಕ ಹಾಗೂ ಪ್ರವಾಸೋದ್ಯಮ ದೃಷ್ಟಿಯಿಂದ ಮಹತ್ವದ್ದಾಗಿದೆ. ಇತಿಹಾಸ ಹಾಗೂ ಪ್ರವಾಸೋದ್ಯಮ ಕೋರ್ಸ್‌ಗಳನ್ನು ಆರಂಭಿಸಿದರೆ ಅನುಕೂಲ ಎನ್ನುವುದು ಪದವೀಧರರ ಅಭಿಪ್ರಾಯ.

‘ಕನ್ನಡ ವಿಶ್ವವಿದ್ಯಾಲಯದಲ್ಲಿ ಎಂ. ಎ ಚರಿತ್ರೆ ಇಲ್ಲದಿರುವುದು ಹಾಸ್ಯಾಸ್ಪದ. ಅವಳಿ ಜಿಲ್ಲೆಗಳಲ್ಲಿ ಹೆಚ್ಚಿನ ಪದವೀಧರರಿದ್ದಾರೆ. ಇತಿಹಾಸ, ಪ್ರವಾಸೋದ್ಯಮ ಕೋರ್ಸ್‌ಗಳಿಗೆ ಬೇಡಿಕೆ ಇದ್ದು, ಅವುಗಳನ್ನು ಆರಂಭಿಸಬೇಕು. ಡಾ. ಬಿ.ಆರ್. ಅಂಬೇಡ್ಕರ್ ಅವರು ಹೇಳಿರುವಂತೆ ಇತಿಹಾಸವನ್ನು ಮರೆತವರು ಇತಿಹಾಸ ಸೃಷ್ಟಿಸಲಾರರು. ಪ್ರತಿಯೊಬ್ಬರಿಗೂ ಇತಿಹಾಸ ತಿಳಿವಳಿಕೆ ಅಗತ್ಯ’ ಎಂದು ಹಂಪಿ ಗೈಡ್‌ ವಿರೂಪಾಕ್ಷಿ ವಿ. ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.