ADVERTISEMENT

ಇಂದು ರಾಷ್ಟ್ರೀಯ ವಿಜ್ಞಾನ ದಿನ: ಮನೆಯೂ ಆಗಲಿ ವಿಜ್ಞಾನ ಪ್ರಯೋಗಶಾಲೆ

ಆರ್.ಬಿ.ಗುರುಬಸವರಾಜ
Published 27 ಫೆಬ್ರುವರಿ 2022, 19:30 IST
Last Updated 27 ಫೆಬ್ರುವರಿ 2022, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಆರ್ಕಿಮಿಡಿಸ್‌, ಮನೆಯ ನೀರಿನ ತೊಟ್ಟಿಯಲ್ಲಿಳಿದು ಅಲ್ಲಿಂದ ನೀರು ಹೊರ ಚೆಲ್ಲಿದ ಮೇಲೆ ‘ತೇಲು ತತ್ವ’ ಪ್ರತಿಪಾದನೆ ಮಾಡಿದ್ದು. ಅಡುಗೆ ಮನೆಯಲ್ಲಿ ಬಿಸಿ ಪಾತ್ರೆಯ ಮೇಲಿನ ಮುಚ್ಚಳ ಕುಣಿಯುತ್ತಿದ್ದನ್ನು ನೋಡಿದ ಜೇಮ್ಸ್‌ ವ್ಯಾಟ್‌ ‘ಹಬೆ ಯಂತ್ರ’ ಕಂಡು ಹಿಡಿಯಲು ಸಾಧ್ಯವಾಯಿತು. ಇಂಥ ಹಲವು ಖ್ಯಾತ ವಿಜ್ಞಾನಿಗಳು, ಮನೆಯಲ್ಲಿನ ವಿದ್ಯಮಾನಗಳಿಂದಲೇ ‘ವಿಜ್ಞಾನ’ ಕಲಿತು ವಿಶ್ವಪ್ರಸಿದ್ಧರಾದರು.

ವಿಜ್ಞಾನ ಎನ್ನುವುದು ಪ್ರಯೋಗಾಲಯಗಳಿಂದಷ್ಟೇ ಕಲಿಯುವುದಲ್ಲ. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ, ಅಷ್ಟೇ ಏಕೆ, ಮನೆಯಲ್ಲಿ ನಡೆಯುವ ಚಟುವಟಿಕೆಗಳಲ್ಲೂ ‘ವಿಜ್ಞಾನ’ವಿದೆ. ಪೋಷಕರು ಅದನ್ನು ಗುರುತಿಸಿ, ತಾವೂ ಕಲಿತು ಮಕ್ಕಳಿಗೆ ಕಲಿಸುವ ಮೂಲಕ ಮನೆಯಿಂದಲೇ ವಿಜ್ಞಾನ ಕಲಿಯಲು ಪ್ರೋತ್ಸಾಹಿಸಬೇಕಿದೆ.

ವಿಜ್ಞಾನ ಕಲಿಕೆ ಏಕೆ ಮುಖ್ಯ?

ADVERTISEMENT

ವಿಜ್ಞಾನ ಕಲಿಯುವುದರಿಂದ, ಮಗುವಿಗೆ ಉತ್ತಮ ಸಂವಹನ ಕೌಶಲದ ಜೊತೆಗೆ, ವೈಚಾರಿಕ ಪ್ರಜ್ಞೆ ಬೆಳೆಯುತ್ತದೆ. ಇದರಿಂದ ಚಿಂತನೆಗಳು ವಿಸ್ತಾರಗೊಳ್ಳುತ್ತವೆ. ಮಗುವಿನಲ್ಲಿರುವ ಸೃಜನಶಕ್ತಿಯನ್ನು ಉತ್ತೇಜಿಸುತ್ತದೆ. ಮಕ್ಕಳು ವಿಶ್ಲೇಷಣಾತ್ಮಕ ಚಿಂತನೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಕೌಶಲವನ್ನು ಕಲಿಯುತ್ತಾರೆ. ಇದಕ್ಕಾಗಿ ವಿಜ್ಞಾನ ಕಲಿಯುವುದು ಅವಶ್ಯವಾಗಿದೆ. ಇಂಥ ವಿಜ್ಞಾನವನ್ನು ಮಕ್ಕಳಿಗೆ ಮನೆಯಿಂದಲೇ ವಿವಿಧ ಚಟುವಟಿಕೆಗಳ ಮೂಲಕ ಕಲಿಸಬಹುದು. ಆ ಪೂರಕ ಚಟುವಟಿಕೆಗಳ ಕುರಿತ ಮಾಹಿತಿ ಇಲ್ಲಿದೆ;

ಕೈತೋಟದಲ್ಲಿ ಕಲಿಕೆ

ಮನೆಯ ಅಂಗಳದಲ್ಲೋ, ತಾರಸಿಯಲ್ಲೋ ಕೈತೋಟ ಮಾಡಿ. ಜಾಗವಿಲ್ಲದಿದ್ದರೆ, ಕುಂಡಗಳಲ್ಲಾದರೂ ಗಿಡಗಳನ್ನು ಬೆಳೆಸಿ. ಆ ಗಿಡಗಳಲ್ಲಿರುವ ಎಲೆಗಳ ರಚನೆ, ಬೇರಿನ ಕಾರ್ಯಗಳು, ಮೊಗ್ಗು ಹೂವಾಗುವಿಕೆ, ಕಾಯಿ ಹಣ್ಣಾಗುವಿಕೆಯ ಹಂತಗಳನ್ನು ಮಕ್ಕಳಿಗೆ ವಿವರಿಸಿ. ಜತೆಗೆ, ಮನೆಯ ತ್ಯಾಜ್ಯದಿಂದ ಗೊಬ್ಬರ ತಯಾರಿಸುವುದು, ಸಸ್ಯಗಳ ವೈಜ್ಞಾನಿಕ ಹೆಸರಿನ ಪರಿಚಯ, ಅವುಗಳಿಗೆ ತಗಲುವ ರೋಗ, ಕೀಟಗಳ ಬಗ್ಗೆ ತಿಳಿಸಿ. ‘ಸಸ್ಯ ವಿಜ್ಞಾನ’ವನ್ನು ಮಕ್ಕಳಿಗೆ ಸುಲಭವಾಗಿ ಅರ್ಥ ಮಾಡಿಸಲು ಕೈತೋಟ ಒಂದು ಸೂಕ್ತ ತಾಣ.

ಪ್ರಯೋಗ ಮಾಡಿ ನೋಡಿ

ನೀರಿನಲ್ಲಿ ತೇಲುವ-ಮುಳುಗುವ, ಕರಗುವ-ಕರಗದ ವಸ್ತುಗಳ ಬಗ್ಗೆ ಬಾಯಿ ಮಾತಿನಲ್ಲಿ ಹೇಳುವ ಬದಲು ಪ್ರಯೋಗದ ಮೂಲಕ ಕಲಿಸಬಹುದು. ನೀರು ಮಂಜುಗಡ್ಡೆಯಾಗುವ, ಐಸ್‌ಕ್ರೀಮ್ ಕರಗುವ ಹಾಗೂ ನೀರು ಬಿಸಿಯಾದಾಗ ಆವಿಯಾಗುವ ಪ್ರಯೋಗಗಳನ್ನು ಮಕ್ಕಳು ಮನೆಯಲ್ಲಿ ಮಾಡಿ ಕಲಿಯಬಹುದು. ವಸ್ತುಗಳ ಸ್ಥಿತಿ ಬದಲಾವಣೆ ಕುರಿತ ಕಲಿಕೆಗೆ ಬಲ ನೀಡಬಹುದು.

ಅಡುಗೆ ಮನೆಯಲ್ಲಿ ವಿಜ್ಞಾನ

ಅಡುಗೆ ಮನೆ ರಸಾಯನಶಾಸ್ತ್ರ, ಜೀವಶಾಸ್ತ್ರಗಳ ಸಂಗಮ ತಾಣ. ಇಲ್ಲಿ ಅಡುಗೆಗೆ ಬಳಸುವ ಅರಿಸಿನ, ಉಪ್ಪು, ಸಕ್ಕರೆ, ಸೋಡಾ, ನೀರಿನಲ್ಲಿರುವ ರಾಸಾಯನಿಕ ಅಂಶಗಳನ್ನು ಪರಿಯಚಯಿಸಬಹುದು. ‘ಹಾಲು ಕಾಯಿಸಿದಾಗ ಉಕ್ಕುತ್ತದೆ ಮತ್ತು ನೀರು ಕಾಯಿಸಿದಾಗ ಉಕ್ಕುವುದಿಲ್ಲ’ ಏಕೆ– ಇಂಥ ಪ್ರಶ್ನೆಗಳನ್ನು ಪ್ರಯೋಗದ ಮೂಲಕ ತಿಳಿಸಲು ಉತ್ತಮ ವೇದಿಕೆ. ತರಕಾರಿ, ಹಣ್ಣುಗಳು, ಧಾನ್ಯಗಳ ಸಾಮಾನ್ಯ ಹೆಸರು ಮತ್ತು ವೈಜ್ಞಾನಿಕ ಹೆಸರಿನ ಪರಿಚಯವೂ ಮಕ್ಕಳ ಕಲಿಕೆಗೆ ಪೂರಕವಾದದ್ದು.

ಸಂವಾದ, ಚರ್ಚೆ

ಮನೆಯ ನೆರೆ–ಹೊರೆಯಲ್ಲಿರುವ ಸಮಾನ ಮನಸ್ಕ ಮಕ್ಕಳನ್ನು ಒಂದೆಡೆ ಸೇರಿಸಿ, ವಿಜ್ಞಾನದ ವಿಷಯಗಳ ಮೇಲೆ ಚರ್ಚೆ ಸಂವಾದ ಏರ್ಪಡಿಸಿ. ಇದರಿಂದ ಮಕ್ಕಳಲ್ಲಿ ಸಂವಹನ ಕೌಶಲ ಬೆಳೆಯುತ್ತದೆ. ಮಕ್ಕಳು ಮೊದ ಮೊದಲು ಕೈಗೊಳ್ಳುವ ವಿಜ್ಞಾನದ ಚಟುವಟಿಕೆಗಳನ್ನು ಪ್ರೋತ್ಸಾಹಿಸಿ, ಬೆನ್ನುತಟ್ಟಿ. ತಪ್ಪಾಗಿದ್ದರೆ, ತಿದ್ದಿ ವಿವರಿಸಿ. ಇದರಿಂದ ಅವರು ಇನ್ನಷ್ಟು ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಉತ್ಸುಕರಾಗುತ್ತಾರೆ.

ಸಿನಿಮಾ ವೀಕ್ಷಣೆ

ವಾರಾಂತ್ಯದಲ್ಲಿ ಮಕ್ಕಳಿಗೆ ವಿಜ್ಞಾನ ಆಧಾರಿತ ಸಿನಿಮಾ ತೋರಿಸಿ. ಬಾಹ್ಯಾಕಾಶ, ಕೃಷಿ, ತಂತ್ರಜ್ಞಾನ ಸೇರಿದಂತೆ ವೈವಿಧ್ಯಮಯ ವಿಷಯಗಳ ಆಧಾರಿತ ಸಿನಿಮಾಗಳು ಮಕ್ಕಳಲ್ಲಿ ವಿಜ್ಞಾನದ ಬಗೆಗಿನ ಕುತೂಹಲ ಮತ್ತು ಆಸಕ್ತಿಯನ್ನು ವಿಸ್ತರಿಸುತ್ತವೆ.

ಇಷ್ಟೇ ಅಲ್ಲ; ಮನೆಯಿಂದಲೇ ವಿಜ್ಞಾನ ಕಲಿಯು ವುದಕ್ಕೆ ಇನ್ನೂ ಭಿನ್ನವಾದ ಚಟುವಟಿಕೆಗಳು ನಿಮ್ಮ ಮನೆ ಹಾಗೂ ಆಸುಪಾಸಿನಲ್ಲಿರಬಹದು. ಇಂದಿನಿಂ ದಲೇ ಅಂಥ ಚಟುವಟಿಕೆಗಳನ್ನು ಪತ್ತೆ ಮಾಡಿ, ಕಲಿಕೆ ಆರಂಭಿಸಿ . ಆ ಮೂಲಕ ‘ರಾಷ್ಟ್ರೀಯ ವಿಜ್ಞಾನ ದಿನ’ (ಫೆಬ್ರುವರಿ 28)ವನ್ನು ಅರ್ಥಪೂರ್ಣವಾಗಿ ಆಚರಿಸಿ.

ಮನೆಯಲ್ಲೇ ತಾರಾ ಮಂಡಲ

ಮನೆಯ ತಾರಸಿ, ಮನೆಯ ಅಂಗಳ ತಾರಾಮಂಡಲ ವೀಕ್ಷಣೆಗೆ ಸೂಕ್ತ ತಾಣ. ಮೋಡಗಳಿಲ್ಲದ ರಾತ್ರಿಯಲ್ಲಿ ಮಕ್ಕಳಿಗೆ ಆಕಾಶ ತೋರಿಸಿ. ಅಲ್ಲಿರುವ ಗ್ರಹ, ತಾರೆಗಳನ್ನು ಪರಿಚಯಿಸಿ. ಆದರೆ, ಇದಕ್ಕೆ ಒಂದಿಷ್ಟು ಪೂರ್ವ ತಯಾರಿ ಬೇಕು. ಕೆಲವು ವೇಳೆ ಶುಕ್ರ, ಗುರು, ಶನಿ ಗ್ರಹಗಳನ್ನು ಬರಿಗಣ್ಣಿನಿಂದ ನೋಡಬಹುದು. ಆಗಾಗ್ಗೆ ಸಂಭವಿಸುವ ಉಲ್ಕಾಪಾತ, ಧೂಮಕೇತುವಿನಂತಹ ಖಗೋಳ ಕೌತುಕವನ್ನು ಮಕ್ಕಳಿಗೆ ಪರಿಚಯಿಸಬಹುದು. ಸಾಧ್ಯವಾದರೆ ಒಂದು ಟೆಲಿಸ್ಕೋಪ್ ಖರೀದಿಸಿ, ತಾರೆಗಳ ವೀಕ್ಷಣೆಗೆ ಪ್ರೋತ್ಸಾಹಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.