ADVERTISEMENT

ಮಕ್ಕಳಲ್ಲಿ ಗಣಿತದ ಆತಂಕ ನಿವಾರಿಸಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2021, 19:30 IST
Last Updated 24 ಜನವರಿ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗಣಿತದ ಬಗ್ಗೆ ಎಷ್ಟು ಕುತೂಹಲಕಾರಿ ಸಂಗತಿಗಳು ಇವೆಯೋ ಅಷ್ಟೇ ಹೆದರಿಕೆಯನ್ನೂ ಮಕ್ಕಳಲ್ಲಿ ಹುಟ್ಟಿಸಿರುವುದು ವಿಪರ್ಯಾಸದ ಸಂಗತಿ. ತಮ್ಮ ಮಕ್ಕಳು ಗಣಿತದಲ್ಲಿ ಪಂಡಿತರಾಗಲಿ ಎಂಬುದು ಬಹುತೇಕ ಪೋಷಕರ ಬಯಕೆ. ಆದರೆ ಅದರ ಜೊತೆಗೆ ಗಣಿತ ಎಲ್ಲರಿಗೂ ಸುಲಭವಾಗಿ ಒಲಿಯುವಂಥದ್ದಲ್ಲ ಎಂದೂ ಹೇಳುವ ಮೂಲಕ ಮಕ್ಕಳ ಉತ್ಸಾಹ ಕುಗ್ಗಿಸಲಾಗುತ್ತದೆ. ನಿಜವಾಗಿ ಹೇಳುವುದಾದರೆ ಚಿಕ್ಕ ಮಕ್ಕಳಿಗೆ ಗಣಿತವೆಂದರೆ ಭಯವೇನಿಲ್ಲ. ಇದನ್ನು ಪೋಷಕರು ಹಾಗೂ ಶಿಕ್ಷಕರು ಅರ್ಥ ಮಾಡಿಕೊಳ್ಳಬೇಕು.

ಹಾಗಾದರೆ ಮಕ್ಕಳು ತಮ್ಮ ಗಣಿತ ಕುರಿತಾದ ಆತಂಕವನ್ನು ಹೋಗಲಾಡಿಸಿಕೊಳ್ಳಲು ಸಹಾಯ ಮಾಡುವ ಸುಲಭ ವಿಧಾನಗಳ ಬಗ್ಗೆ ನೋಡೋಣ.

ಗಣಿತದ ಬಗ್ಗೆ ಸಕಾರಾತ್ಮಕ ಭಾವನೆ ಬೆಳೆಸಿ: ಗಣಿತ ಎನ್ನುವುದು ತಕ್ಷಣ ರೂಢಿಸಿಕೊಳ್ಳಬಹುದಾದ ಕೌಶಲವಲ್ಲ. ಅದನ್ನು ಪ್ರಯತ್ನದ ಮೂಲಕ ದಕ್ಕಿಸಿಕೊಳ್ಳಬಹುದು ಎಂದು ಮಕ್ಕಳು ಅರ್ಥ ಮಾಡಿಕೊಳ್ಳುವ ರೀತಿಯಲ್ಲಿ ಪೋಷಕರು ಹಾಗೂ ಶಿಕ್ಷಕರು ಜೊತೆಗೂಡಿ ಕೆಲಸ ಮಾಡಬೇಕು. ಯಾವುದೇ ಗಣಿತದ ಸಮಸ್ಯೆಗೆ ಒಂದು ವಿಧದ ಪರಿಹಾರ ಮಾತ್ರ ಇದೆ ಎಂದು ತಿಳಿಯುವುದು ಮತ್ತು ಮಕ್ಕಳು ತಪ್ಪು ಮಾಡಿದಾಗ ಗಣಿತದ ಸಮಸ್ಯೆ ಪರಿಹರಿಸಲು ಹೇಳುವಂಥ ಅಭ್ಯಾಸಗಳು, ಮಕ್ಕಳಲ್ಲಿ ಗಣಿತದ ಬಗ್ಗೆ ನಕಾರಾತ್ಮಕ ಭಾವನೆ ತಳೆಯಲು ಕಾರಣವಾಗುತ್ತವೆ.

ADVERTISEMENT

ವೈಫಲ್ಯಕ್ಕೆ ಬೈಯದೆ ಕಠಿಣ ಪರಿಶ್ರಮವನ್ನು ಹೊಗಳಿ: ಸಾಮಾನ್ಯವಾಗಿ ಮಕ್ಕಳಿಗೆ ಗಣಿತದ ಬಗ್ಗೆ ಒಂದು ತಪ್ಪು ಅಭಿಪ್ರಾಯವಿರುತ್ತದೆ. ತಾವು ಎಷ್ಟೇ ಅಭ್ಯಾಸ ಮಾಡಿದರೂ ಅದು ತಮಗೆ ಅರ್ಥವಾಗುವುದಿಲ್ಲ ಎಂದೇ ನಂಬಿರುತ್ತಾರೆ. ಹೀಗಾಗಿ ತಾವು ತಪ್ಪು ಮಾಡಿದರೆ ಅಥವಾ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಗಳಿಸದಿದ್ದರೆ, ತಮಗೆ ಗಣಿತದ ಸಮಸ್ಯೆಗಳನ್ನು ಬಿಡಿಸಲು ಆಗುವುದಿಲ್ಲ ಎಂದೇ ನಂಬುತ್ತಾರೆ. ಆದರೆ ಮಕ್ಕಳು ಈ ರೀತಿ ತಪ್ಪು ಮಾಡಿದಾಗ, ಅವರನ್ನು ಬೈಯದೆ, ಇನ್ನಷ್ಟು ಪರಿಶ್ರಮ ಹಾಕುವಂತೆ ಪೋಷಕರು ಹಾಗೂ ಶಿಕ್ಷಕರು ಉತ್ತೇಜಿಸಬೇಕಾಗುತ್ತದೆ.

ತಂತ್ರಜ್ಞಾನವನ್ನು ಸಾಧನವನ್ನಾಗಿ ಬಳಸಿ: ಇತ್ತೀಚೆಗೆ ಆನ್‌ಲೈನ್ ವೇದಿಕೆಗಳು ಹೆಚ್ಚಾಗುತ್ತಿರುವ ಸನ್ನಿವೇಶದಲ್ಲಿ, ಮಕ್ಕಳು ಗಣಿತವನ್ನು ತಮಗೆ ಅನುಕೂಲವಾದ ವೇಗದಲ್ಲಿ, ಮನೆಯಲ್ಲೇ ಕುಳಿತು ಹಿರಿಯರ ಒತ್ತಡವಿಲ್ಲದೆ ಕಲಿಯುವ ಅವಕಾಶಗಳಿವೆ. ತಮ್ಮ ಗಣಿತದ ತರಗತಿಗಳು ವಿದ್ಯಾರ್ಥಿಗಳಿಗೆ ಅಪಾರ ಕಲಿಕಾ ಅನುಭವ ನೀಡಲು ಮತ್ತು ಆಸಕ್ತಿ ಮೂಡಿಸಲು ಶಿಕ್ಷಕರು ಸಹ ವಿವಿಧ ತಂತ್ರಜ್ಞಾನ ಸಾಧನಗಳನ್ನು ಬಳಸಬೇಕು. ಇದರಿಂದ ಮಕ್ಕಳು ಪರಿಕಲ್ಪನೆಗಳನ್ನು ಸುಲಭವಾಗಿ ಅರ್ಥವಾಗುವಂತೆ ತರಗತಿ ರೂಪಿಸಿಕೊಳ್ಳಬಹುದು. ತನ್ಮೂಲಕ ವಿದ್ಯಾರ್ಥಿಗಳಲ್ಲಿ ಸಮಸ್ಯೆಗೆ ಪರಿಹಾರ ಹುಡುಕುವ ಕೌಶಲಗಳನ್ನು ಬೆಳೆಸಬಹುದು.

ದಿನನಿತ್ಯದ ಚಟುವಟಿಕೆಗಳಲ್ಲಿ ಗಣಿತ: ಕೋವಿಡ್‌ ಆರಂಭವಾದಾಗಿನಿಂದ ಶಾಲೆಗಳು ತಾತ್ಕಾಲಿಕವಾಗಿ ದೀರ್ಘಕಾಲದ ರಜೆಗೆ ಮೊರೆ ಹೋಗಿರುವ ಹಿನ್ನೆಲೆಯಲ್ಲಿ ಪೋಷಕರು ಈಗ ತಮ್ಮ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುವಂತಾಗಿದೆ. ಈ ಅವಕಾಶವನ್ನು ಬಳಸಿಕೊಂಡು ಪೋಷಕರು ತಮ್ಮ ಮಕ್ಕಳನ್ನು ಅನೇಕ ಸರಳ ಚಟುವಟಿಕೆಗಳಲ್ಲಿ ತೊಡಗಿಸಬಹುದು. ಉದಾ: ಆಟದ ಸಮಯದಲ್ಲಿ ಲೆಗೋಸ್ ಎಣಿಸುವುದು, ಅಡುಗೆಮನೆಯಲ್ಲಿ ತರಕಾರಿ ಕತ್ತರಿಸುವಾಗ ಭಾಗಾಂಶದ ಬಗ್ಗೆ ವಿವರಿಸುವುದು, ತಮ್ಮ ಬಿಲ್‌ಗಳಲ್ಲಿನ ಮೊತ್ತ ಕೂಡುವುದು ಮತ್ತು ಬಟ್ಟೆ ಇತರ ವಸ್ತುಗಳನ್ನು ಅಳೆಸುವುದು. ಇಂತಹ ಸರಳ ಚಟುವಟಿಕೆಗಳಲ್ಲಿ ಮಕ್ಕಳು ಉತ್ಸಾಹದಿಂದ ಭಾಗಿಯಾಗುತ್ತಾರೆ ಮತ್ತು ಗಣಿತದ ಬಗ್ಗೆ ಆಸಕ್ತಿ ತಳೆಯುತ್ತಾರೆ. ತನ್ಮೂಲಕ ಗಣಿತದ ಭಯ ಹೋಗಿ, ಅದು ತಮ್ಮ ಜೀವನದಲ್ಲಿ ವಹಿಸುವ ಪಾತ್ರವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.

(ಲೇಖಕಿ: ಶಿಕ್ಷಕರು ಹಾಗೂ ಸಹ ಸಂಸ್ಥಾಪಕಿ, ಬೈಜುಸ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.