1. ನಾನು ಬಿ.ಎಸ್ಸಿ ಪದವಿ ಮುಗಿಸಿ ಎಂ.ಎಸ್ಸಿ ಅಪರಾಧ ಶಾಸ್ತ್ರ ಮತ್ತು ವಿಧಿ ವಿಜ್ಞಾನ ಓದುತ್ತಿದ್ದೇನೆ. ಈ ವಿಷಯಗಳ ಕುರಿತ ಅವಕಾಶಗಳ ಬಗ್ಗೆ ತಿಳಿಸಿ.
- ಊರು, ಹೆಸರು ತಿಳಿಸಿಲ್ಲ.
ಅಪರಾಧ ಶಾಸ್ತ್ರಮತ್ತು ವಿಧಿ ವಿಜ್ಞಾನ (ಫೊರೆನ್ಸಿಕ್ ಸೈನ್ಸ್), ಬೇಡಿಕೆಯಲ್ಲಿರುವ ಕ್ಷೇತ್ರ. ಈ ಕ್ಷೇತ್ರದಲ್ಲಿ ವೃತ್ತಿಯ ಯಶಸ್ಸಿಗೆ ಬೇಕಾಗುವ ಕೌಶಲಗಳೆಂದರೆ ತಾರ್ಕಿಕ ಯೋಚನಾ ಶಕ್ತಿ, ವಿಶ್ಲೇಷಣಾ ಮತ್ತು ಸಂಶೋಧನಾ ಕೌಶಲ, ವಿವರಗಳ ಕಡೆ ಗಮನ, ಒತ್ತಡದಲ್ಲಿ ಕೆಲಸ ಮಾಡುವ ಸಾಮರ್ಥ್ಯ, ಸಮಯದ ನಿರ್ವಹಣೆ ಇತ್ಯಾದಿ.
ವಿದ್ಯಾಭ್ಯಾಸದ ನಂತರ ಸಂಶೋಧನಾ ಸಂಸ್ಥೆಗಳು, ಖಾಸಗಿ ಮತ್ತು ಸರ್ಕಾರಿ ಪತ್ತೇದಾರಿ ಸಂಸ್ಥೆಗಳು, ಪೊಲೀಸ್ ಇಲಾಖೆ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ಕಾಲೇಜುಗಳಲ್ಲಿ ವೃತ್ತಿಯನ್ನು ಅರಸಬಹುದು.
2. ನಾನು ಬಿಎ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿ. ಮುಂದೆ ಎಂಬಿಎ ಮತ್ತು ಎಂಎ ಕೋರ್ಸ್‌ಗಳಲ್ಲಿ ಯಾವುದನ್ನು ಆಯ್ಕೆ ಮಾಡಬೇಕು ಎಂದು ಗೊತ್ತಾಗುತ್ತಿಲ್ಲ. ಸಲಹೆ ನೀಡಿ.
- ಊರು, ಹೆಸರು ತಿಳಿಸಿಲ್ಲ.
ಎಂಬಿಎ ಮತ್ತು ಎಂಎ ಕೋರ್ಸ್ ನಂತರದ ಉದ್ಯೋಗಾವಕಾಶಗಳ ಸ್ವರೂಪ ಸಂಪೂರ್ಣವಾಗಿ ವಿಭಿನ್ನ. ನಿಮ್ಮ ವಿದ್ಯಾಭ್ಯಾಸದ ನಂತರ ಯಾವ ವೃತ್ತಿಯನ್ನು ಅನುಸರಿಸಬೇಕು ಎನ್ನುವುದನ್ನು ಗುರುತಿಸಿ, ಅದಕ್ಕೆ ಅನುಗುಣವಾಗಿ ಕೋರ್ಸ್ ಆಯ್ಕೆ ಇರಲಿ.
ಎಂಎ ಮಾಡುವುದಕ್ಕೆ ಸೂಕ್ತವಾದ ಕಾರಣಗಳಿಲ್ಲದಿದ್ದರೆ ಹೆಚ್ಚಿನ ಉದ್ಯೋಗಾವಕಾಶಗಳಿರುವ ಎಂಬಿಎ ಕೋರ್ಸ್ ಮಾಡುವುದು ಉತ್ತಮ. ಎಂಬಿಎ ಕೋರ್ಸ್‌ನಲ್ಲಿ ಕಲಿಸುವ ತತ್ವಗಳು, ಸೂತ್ರಗಳು ವೈಯಕ್ತಿಕ ಜೀವನದಲ್ಲೂ ಉಪಯುಕ್ತ.
ಎಂಬಿಎ ನಂತರ ಆಕರ್ಷಕ ಅವಕಾಶಗಳಿವೆ. ಐಟಿ, ಬ್ಯಾಂಕಿಂಗ್, ಫೈನಾನ್ಸ್, ಇನ್ವೆಸ್ಟ್‌ಮೆಂಟ್, ಇನ್‌ಶ್ಯೂರೆನ್ಸ್, ರೀಟೇಲ್, ಮಾರ್ಕೆಟಿಂಗ್, ಎಫ್‌ಎಂಜಿಸಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ನೀವು ವೃತ್ತಿಯನ್ನು ಅರಸಬಹುದು ಅಥವಾ ಸ್ವಂತ ಉದ್ಯಮವನ್ನು ಆರಂಭಿಸಬಹುದು. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೊ ವೀಕ್ಷಿಸಿ:
https://www.youtube.com/c/EducationalExpertManagementCareerConsultant
3. ನಮ್ಮ ಸಂಬಂಧಿಕರ ಮಗಳು ಮಹಾರಾಷ್ಟ್ರದಲ್ಲಿ ಪಿಯುಸಿ ಮಾಡುತ್ತಿದ್ದು ಮುಂದಿನ ವ್ಯಾಸಂಗವನ್ನು ಕರ್ನಾಟಕದಲ್ಲಿ ಮಾಡುವ ಇಚ್ಛೆ ಇದೆ. ಅವಳು ಕರ್ನಾಟಕದ ಕಾಲೇಜುಗಳಲ್ಲಿ ಹೇಗೆ ಪ್ರವೇಶ ಪಡೆಯಬಹುದು? ಹಾಗೂ ಮುಂದೆ ಕರ್ನಾಟಕದಲ್ಲಿ ಉದ್ಯೋಗ ಪಡೆಯಬಹುದೇ?
- ಮಲ್ಲಿಕಾರ್ಜುನ್ ಬಿಜ್ಜರಗಿ, ಅಥಣಿ.
ಪಿಯುಸಿ ನಂತರ ಯಾವ ಕೋರ್ಸ್ ಮಾಡಬೇಕು ಎನ್ನುವ ಮಾಹಿತಿಯನ್ನು ನೀವು ತಿಳಿಸಿಲ್ಲ. ಏಕೆಂದರೆ, ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶದ ನಿಯಮಾವಳಿಗಳಲ್ಲಿ ವ್ಯತ್ಯಾಸಗಳಿವೆ. ಉದಾಹರಣೆಗೆ, ಎಂಬಿಬಿಎಸ್ ಕೋರ್ಸ್ ಮಾಡಲು ಕರ್ನಾಟಕದ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಕರ್ನಾಟಕದ ನಿವಾಸಿಗಳಿಗಿರುವ ಕೋಟಾದ (ಶೇ 85) ಆಡಿಯಲ್ಲಿ ಪ್ರವೇಶ ಸಿಗುವ ಸಾಧ್ಯತೆಯಿಲ್ಲ. ಹಾಗಾಗಿ, ಅಖಿಲ ಭಾರತ ಕೋಟಾದ (ಶೇ 15) ಅಡಿಯಲ್ಲಿ ಅರ್ಜಿ ಸಲ್ಲಿಸಿ, ಕರ್ನಾಟಕದಲ್ಲಿ ಎಂಬಿಬಿಎಸ್ ಮಾಡಬಹುದು. ಆದರೆ, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ (ವೈದ್ಯಕೀಯ ಅಥವಾ ಎಂಜಿನಿಯರಿಂಗ್) ಪ್ರವೇಶ ಪಡೆಯಬಹುದು.
ಪ್ರಮುಖವಾಗಿ, ಸ್ವಾಭಾವಿಕ ಪ್ರತಿಭೆ ಮತ್ತು ಆಸಕ್ತಿಯ ಅನುಸಾರ ವೃತ್ತಿ ಯೋಜನೆಯನ್ನು ಮಾಡಿ ಅದರ ಅನುಸಾರ ಕೋರ್ಸ್ ಆಯ್ಕೆ ಮಾಡಿದರೆ, ಮುಂದಿನ ಹಾದಿ ಸ್ಪಷ್ಟವಾಗುತ್ತದೆ. ವಿದ್ಯಾಭ್ಯಾಸವನ್ನು ಎಲ್ಲಿ ಮುಗಿಸಿದರೂ ಸಹ, ಕರ್ನಾಟಕ ಸೇರಿದಂತೆ ಯಾವ ರಾಜ್ಯದಲ್ಲಿ ಬೇಕಾದರೂ ಉದ್ಯೋಗವನ್ನು ಅರಸಬಹುದು.
4. ನಾನು 2015ರಲ್ಲಿ ಮಾನಸಗಂಗೋತ್ರಿಯ ಪತ್ರಿಕೋದ್ಯಮ ವಿಭಾಗಕ್ಕೆ ಪ್ರವೇಶ ಪಡೆದೆ. ಕಾರಣಾಂತರಗಳಿಂದ ಯಾವುದೇ ತರಗತಿ, ಪರೀಕ್ಷೆಗಳಿಗೆ ಹಾಜರಾಗಲಿಲ್ಲ. ಈಗ ಮೂಲ ದಾಖಲಾತಿಗಳನ್ನು ಕೇಳಲು ಹೋದರೆ ₹17,000 ಹಣ ಪಾವತಿಸಲು ಹೇಳುತ್ತಿದ್ದಾರೆ. ಏಕೆ ಎಂದು ಕೇಳಿದರೆ, ಪ್ರವೇಶ ಶುಲ್ಕ, ಪರೀಕ್ಷಾ ಶುಲ್ಕ ಎನ್ನುತ್ತಿದ್ದಾರೆ. ಇದಕ್ಕೆ ಪರಿಹಾರವೇನು ತಿಳಿಸಿ?
- ಸುರೇಶ್, ಅತ್ತಿಗೋಡು.
ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) 2018 ರ ಸುತ್ತೋಲೆಯ ಪ್ರಕಾರ ವಿಶ್ವವಿದ್ಯಾಲಯಗಳು ಪ್ರವೇಶ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳ ಮೂಲ ದಾಖಲಾತಿಗಳನ್ನು ಪರಿಶೀಲಿಸಿ, ಸ್ವಯಂ-ದೃಢೀಕೃತ ಪ್ರತಿಗಳನ್ನು ಮಾತ್ರ ಪಡೆಯಬೇಕು. ಜೊತೆಗೆ, ಪ್ರವೇಶ ಹಿಂಪಡೆದ ವಿದ್ಯಾರ್ಥಿಗಳು ಕಟ್ಟಿದ ಶುಲ್ಕಗಳನ್ನು ಕೆಲವು ನಿಯಮಾವಳಿಗಳ ಅನುಸಾರ ಮರುಪಾವತಿ ಮಾಡಬೇಕು. ಈ ವಿಚಾರವಾಗಿ, ವಿಶ್ವವಿದ್ಯಾಲಯಗಳು ಯುಜಿಸಿಯ ಸೂಚನೆಗಳನ್ನು ಪಾಲಿಸದಿದ್ದಲ್ಲಿ, ವಿದ್ಯಾರ್ಥಿಗಳು ಯುಜಿಸಿಗೆ ದೂರನ್ನು ಸಲ್ಲಿಸುವ ಅವಕಾಶವಿದೆ. ಆದ್ದರಿಂದ, ಈ ಸುತ್ತೋಲೆಯನ್ನು ಪರಾಮರ್ಶಿಸಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಿ. https://www.ugc.ac.in/ugc_notices.aspx?id=MjE3Ng==
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.