ADVERTISEMENT

ಇದು ಬರೀ ಶಾಲೆಯಲ್ಲ, ಕಲಾಂಗಣ

ವರ್ಲಿ ಕಲೆಯಿಂದ ಕಂಗೊಳಿಸುತ್ತಿರುವ ಶಿವಮೊಗ್ಗ ಜಿಲ್ಲೆಯ ಲಕ್ಕವಳ್ಳಿ ಸರ್ಕಾರಿ ಶಾಲೆ

ರವಿ.ಆರ್ ತಿಮ್ಮಾಪುರ
Published 29 ಸೆಪ್ಟೆಂಬರ್ 2019, 19:45 IST
Last Updated 29 ಸೆಪ್ಟೆಂಬರ್ 2019, 19:45 IST
ಆನವಟ್ಟಿ ಸಮೀಪದ ಲಕ್ಕವಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಆನವಟ್ಟಿ ಸಮೀಪದ ಲಕ್ಕವಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ   

ಆನವಟ್ಟಿ: ಲಕ್ಕವಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೋಡೆಗಳು ದೇಸಿ ವರ್ಲಿ ಕಲೆಯಿಂದ ಕಂಗೊಳಿಸುತ್ತಿವೆ. ಬ್ಯಾಗ್‌ ಹೊರೆ ಹೊತ್ತ ಮಕ್ಕಳು ಶಾಲೆಯ ಅಂಗಳಕ್ಕೆ ಕಾಲಿಡುತ್ತಿದ್ದಂತೆ ಈ ಕಲಾಕೃತಿಗಳನ್ನು ಕಂಡು ಮುಖವರಳಿಸಿದರೆ ಆಶ್ಚರ್ಯವಿಲ್ಲ.

ಪಠ್ಯಕ್ಕೆ ಸಂಬಂಧಿಸಿದ ಪ್ರಾಣಿ, ಪಕ್ಷಿ, ಹೂ, ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳು, ಮಹಾನ್ ಸಾಧಕರು, ವಿಶ್ವ ವಿಖ್ಯಾತ ಕಟ್ಟಡಗಳ ಸುಂದರ ಚಿತ್ರಗಳುಶಾಲೆಯ ಕಾಂಪೌಂಡ್‌, ಗೋಡೆಯ ಮೇಲೆ ಅನಾವರಣಗೊಂಡಿವೆ. ಶಿಕ್ಷಕರು ಗೋಡೆಗಳ ಮೇಲೆ ಬಿಡಿಸಿಕೊಟ್ಟ ಚಿತ್ರಗಳ ಮೇಲೆ ಮಕ್ಕಳು ಬಣ್ಣ ತುಂಬಿ ಅಂದಗೊಳಿಸಿದ್ದಾರೆ. ಹಸೆ ಚಿತ್ರಗಳನ್ನು ಕಂಡು ಊರಿನವರು ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.

ಈ ಬಗ್ಗೆ ಎಸ್‌ಡಿಎಂಸಿ ಅಧ್ಯಕ್ಷ ಕೆ.ಎಚ್‌.ಮಾಲತೇಶ ಅವರು ಹೇಳುವುದು ಹೀಗೆ, ‘ಎರಡು ಎಕರೆ ವಿಸ್ತೀರ್ಣದಲ್ಲಿ 1942ರಲ್ಲಿ ಶಾಲೆ ಆರಂಭವಾಯಿತು. ಆಗ ಸೌಲಭ್ಯಗಳ ಕೊರತೆಯಿತ್ತು. 2010ರಲ್ಲಿ ಮುಖ್ಯ ಶಿಕ್ಷಕರಾಗಿ ಬಂದ ನಾಗರಾಜ ಕಾತವಳ್ಳಿ ಅವರು ಸಹ ಶಿಕ್ಷಕರ, ಅಧಿಕಾರಿಗಳ, ಗ್ರಾಮಸ್ಥರ, ಎಸ್‌ಡಿಎಂಸಿ ಸದಸ್ಯರು, ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಜನಪ್ರತಿನಿಧಿಗಳ ಸಹಕಾರ ಪಡೆದು ತಗ್ಗುದಿಣ್ಣೆಗಳಿಂದ ಕೂಡಿದ ಶಾಲೆಯ ಆವರಣವನ್ನು ಜೆಸಿಬಿ ಯಂತ್ರದ ಸಹಾಯದಿಂದ ಸಮತಟ್ಟು ಮಾಡಿಸಿದರು. ಅಂದಚಂದವಾದ ಪರಿಸರ ನಿರ್ಮಾಣ ಮಾಡಲು ಶ್ರಮಿಸಿದರು’ ಎಂದರು.

ADVERTISEMENT

ತೆಂಗು, ಬಾದಾಮಿ, ಪೇರಲ, ಮಾವು ಹಾಗೂ ವಿವಿಧ ಗಿಡಗಳ ಜೊತೆಗೆ ಮಲ್ಲಿಗೆ, ಗುಲಾಬಿ, ದಾಸವಾಳ ‌ಸಸ್ಯಗಳಿಂದ ಶಾಲೆಯ ಆವರಣದಲ್ಲಿನ ಕೈತೋಟ ನಳನಳಿಸುತ್ತಿದೆ. ಶಾಲೆಗೆ ಬೇಗ ಬರುವ ಮಕ್ಕಳು ಆವರಣದ ಸುತ್ತ ಕಸಕಡ್ಡಿ ತೆಗೆದು, ಗಿಡಗಳ ಬುಡಕ್ಕೆ ಹಾಕುತ್ತಾರೆ. ಇದರಿಂದ ಕಸ–ಕಡ್ಡಿ ಅಲ್ಲೇ ಕೊಳೆತು ಗೊಬ್ಬರವಾಗಿ ಗಿಡಗಳು ಚೆನ್ನಾಗಿ ಬೆಳೆಯಲು ಸಹಕಾರಿಯಾಗುತ್ತದೆ ಎನ್ನುತ್ತಾರೆ ಮುಖ್ಯಶಿಕ್ಷಕ ನಾಗರಾಜ.

ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಕ್ಕಳಿಗೆ ಆಸಕ್ತಿ ಇರುವುದರಿಂದ ಹಲವು ಬಾರಿ ಜಿಲ್ಲಾಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ವಿಶಾಲವಾದ ಬಯಲು ರಂಗಮಂದಿರವಿದೆ. ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಮಕ್ಕಳಿಗೆ ಪ್ರಾರ್ಥನೆ ಮಾಡಲು ಹಾಗೂ ಮಧ್ಯಾಹ್ನದ ಬಿಸಿಯೂಟಕ್ಕಾಗಿ ವಿಶಾಲವಾದ ತಗಡಿನ ಶೆಡ್‌ ನಿರ್ಮಿಸಲಾಗಿದೆ. ಊಟದ ನಂತರ ಕೈತೊಳೆಯಲು ಶಾಲೆಯ ಹಿಂಭಾಗದಲ್ಲಿ ಕೈಬಚ್ಚಲು ನಿರ್ಮಾಣ ಮಾಡಿ ನಲ್ಲಿಗಳನ್ನು ಆಳವಡಿಸಲಾಗಿದೆ. ಶಾಲೆಯಲ್ಲಿ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿದೆ.

ಪ್ರಾಮಾಣಿಕ ಕೆಲಸದಿಂದ ಯಶಸ್ಸು ಸಾಧ್ಯ: ಮಕ್ಕಳಿಗೆ ಲವಲವಿಕೆಯಿಂದ ಕಲಿಸಲಾಗುತ್ತದೆ. ಎಸ್‌ಡಿಎಂಸಿ ಅಧ್ಯಕ್ಷ ಹಗೂ ಸದಸ್ಯರ ಪರಿಶ್ರಮವೇ ಅಭಿವೃದ್ಧಿಗೆ ಕಾರಣ ಎನ್ನುತ್ತಾರೆ ಮುಖ್ಯ ಶಿಕ್ಷಕ ನಾಗರಾಜ ಕಾತುವಳ್ಳಿ.

ಸರ್ಕಾರಿ ಶಾಲೆಯಲ್ಲಿ ಪರಿಸರ ಪ್ರೇಮದ ಜತೆಗೆ ಕಲಾಸಕ್ತಿ ಮೂಡಿಸಲಾಗುತ್ತಿದೆ.ಈಚೆಗೆ ಸರ್ಕಾರಿ ಶಾಲೆಯ ಮಕ್ಕಳೇ ಅಂಕ ಗಳಿಕೆಯಲ್ಲೂ ಮುಂದೆ ಇದ್ದಾರೆ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.