ADVERTISEMENT

ಎಸ್‌ಎ–2 ಪಠ್ಯಕ್ಕೆ ಮಾತ್ರ ಎಸ್ಸೆಸ್ಸೆಲ್ಸಿ ಮಾದರಿ

8, 9ನೇ ತರಗತಿಗೆ ಪರೀಕ್ಷೆ: ಶಿಕ್ಷಣ ಇಲಾಖೆ ನಿರ್ದೇಶಕರಿಂದ ಸುತ್ತೋಲೆ ಪ್ರಕಟ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2020, 19:45 IST
Last Updated 7 ಫೆಬ್ರುವರಿ 2020, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಎಸ್ಸೆಸ್ಸೆಲ್ಸಿಯಲ್ಲಿ ಪರೀಕ್ಷೆಯ ಪ್ರಶ್ನೆಪತ್ರಿಕೆಮಾದರಿಯಲ್ಲಿಯೇ 8 ಮತ್ತು 9ನೇ ತರಗತಿಗಳ ಪ್ರಶ್ನೆಪತ್ರಿಕೆಗಳೂ ಇರಬೇಕು ಎಂಬ ವಿಷಯದಲ್ಲಿ ಇದ್ದ ಗೊಂದಲ ಬಗೆಹರಿಸಲು ಪ್ರೌಢ ಶಿಕ್ಷಣ ಇಲಾಖೆ ಮುಂದಾಗಿದ್ದು, ಸಂಕಲನಾತ್ಮಕ ಮೌಲ್ಯಮಾಪನ 2 (ಎಸ್‌ಎ–2) ಪಠ್ಯಭಾಗಕ್ಕೆ ಮಾತ್ರ ಇದು ಅನ್ವಯವಾಗುತ್ತದೆ ಎಂದು ಹೇಳಿದೆ.

ಈ ಸಂಬಂಧ ಪ್ರೌಢ ಶಿಕ್ಷಣ ಇಲಾಖೆಯ ನಿರ್ದೇಶಕಕೃಷ್ಣಾಜಿ ಎಸ್‌.ಕರಿಚೆನ್ನಾವರ ಅವರು ಶುಕ್ರವಾರ ಸುತ್ತೋಲೆ ಹೊರಡಿಸಿದ್ದು, 8ನೇ ತರತಗಿಗೆ 40 ಅಂಕಗಳಿಗೆ ಲಿಖಿತ ಪರೀಕ್ಷೆ ಹಾಗೂ 10 ಅಂಕಗಳಿಗೆ ಮೌಖಿಕ ಪರೀಕ್ಷೆ ನಡೆಸಬೇಕು ಎಂದು ತಿಳಿಸಿದ್ದಾರೆ.

‘8ನೇ ತರಗತಿಯಲ್ಲಿಎಸ್‌ಎ–1 ರಲ್ಲಿ ಈಗಾಗಲೇ 70 ಅಂಕಗಳನ್ನು ಗ್ರೇಡ್‌ಗಳಿಗೆ ಪರಿವರ್ತಿಸಿ ನೀಡಲಾಗಿದೆ. ಹೀಗಾಗಿ ಎಸ್‌ಎ–2 ನಲ್ಲಿ 50 ಅಂಕದ ಪರೀಕ್ಷೆಯನ್ನು 30 ಅಂಕಗಳಿಗೆ ಪರಿವರ್ತಿಸಿಕೊಂಡು ಗ್ರೇಡ್‌ ದಾಖಲಿಸಬೇಕು. 9ನೇ ತರಗತಿಗೆ ನಾಲ್ಕು ರೂಪಣಾತ್ಮಕ ಮೌಲ್ಯಮಾಪನದ ಮಕ್ಕಳ ಸಾಧನ ಮಟ್ಟದ 40 ಅಂಕಗಳಿಗೆ ದಾಖಲಿಸಲಾಗಿದೆ.’

ADVERTISEMENT

‘ಈಗ 80 ಅಂಕಗಳಿಗೆ (ದ್ವಿತೀಯ ಭಾಷೆ, ತೃತೀಯ ಭಾಷೆ, ಕೋರ್‌ ವಿಷಯಗಳು) ಹಾಗೂ 100 ಅಂಕಗಳಿಗೆ (ಪ್ರಥಮ ಭಾಷೆ) ಪರೀಕ್ಷೆ ನಡೆಸಿ 60 ಅಂಕಗಳಿಗೆ ಪರಿವರ್ತಿಸಿಕೊಂಡುಗ್ರೇಡ್ ದಾಖಲಿಸಬೇಕು’ ಎಂದು ವಿವರಿಸಿದ್ದಾರೆ.

ಮುಂದಿನ ಶೈಕ್ಷಣಿಕ ಸಾಲಿನಿಂದ 8, 9 ಮತ್ತು 10ನೇ ತರಗತಿಗಳಿಗೆ ಏಕರೂಪದ ಪ್ರಶ್ನೆಪತ್ರಿಕೆ ಮತ್ತು ಮೌಲ್ಯಮಾಪನ ಪದ್ಧತಿ ಜಾರಿಗೆ ತರುವ ಬಗ್ಗೆ ಮುಂದಿನ ದಿನಗಳಲ್ಲಿ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ತಿಳಿಸಲಾಗಿದೆ.

‘ಪ್ರಶ್ನೆಪತ್ರಿಕೆ ಮಾದರಿ ಬದಲಿಸಿದ್ದು ವಿದ್ಯಾರ್ಥಿಗಳ ದೃಷ್ಟಿಯಿಂದ ಬಹಳ ಉತ್ತಮ. ಪರೀಕ್ಷೆಗೆ ಇನ್ನೂ ಒಂದೂವರೆ ತಿಂಗಳು ಇದೆ. ಹೀಗಾಗಿ ತಯಾರಿಗೆ ಸಮಯ ಇದ್ದೇ ಇದೆ, ರಾಜ್ಯದ ಎಲ್ಲೆಡೆ ವಿದ್ಯಾರ್ಥಿಗಳಿಂದಾಗಲೀ, ಶಿಕ್ಷಕರಿಂದಾಗಲೀ ಆಕ್ಷೇಪ ಕೇಳಿಬಂದಿಲ್ಲ’ ಎಂದು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್‌.ಕೆ.ಮಂಜುನಾಥ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.