ADVERTISEMENT

KPSC | ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ಸಂದರ್ಶನ ಅಂಕ 25ಕ್ಕೆ ಇಳಿಕೆ

ಸಚಿವ ಸಂಪುಟ ಸಭೆ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2022, 8:13 IST
Last Updated 22 ಫೆಬ್ರುವರಿ 2022, 8:13 IST
ಕರ್ನಾಟಕ ಲೋಕಸೇವಾ ಆಯೋಗ ಕಚೇರಿ
ಕರ್ನಾಟಕ ಲೋಕಸೇವಾ ಆಯೋಗ ಕಚೇರಿ   

ಬೆಂಗಳೂರು: ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ( ಕೆಎಎಸ್‌, ಗ್ರೂಪ್‌ ‘ಎ’ ಮತ್ತು ‘ಬಿ’) ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸುವ ವ್ಯಕ್ತಿತ್ವ ಪರೀಕ್ಷೆ (ಸಂದರ್ಶನ) ಅಂಕಗಳನ್ನು 50 ರಿಂದ 25 ಕ್ಕೆ ಇಳಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.

200 ಅಂಕಗಳಿಗೆ ನಡೆಯುತ್ತಿದ್ದ ವ್ಯಕ್ತಿತ್ವ ಪರೀಕ್ಷೆಯನ್ನು ಈ ಹಿಂದೆ 50 ಅಂಕಗಳಿಗೂ ಮತ್ತು ಮುಖ್ಯ ಪರೀಕ್ಷೆಯ ಅಂಕಗಳನ್ನು 1,250 ಕ್ಕೆ ಇಳಿಸಲಾಗಿತ್ತು. ಇದೀಗ ಸಚಿವ ಸಂಪುಟದ ನಿರ್ಧಾರದಿಂದ ಸಂದರ್ಶನದ ಅಂಕ 25 ಕ್ಕೆ ನಿಗದಿಯಾಗಲಿದೆ.

ವ್ಯಕ್ತಿತ್ವ ಪರೀಕ್ಷೆಯಲ್ಲಿ ಅಭ್ಯರ್ಥಿ ಗಳಿಸಿದ ಅಂಕ ಶೇಕಡ 80 ದಾಟಿದರೆ ಅಥವಾ ಶೇ 40 ಕ್ಕಿಂತ ಕಡಿಮೆಯಾದರೆ ಸಂದರ್ಶನ ಮಂಡಳಿ ಸದಸ್ಯರು ಕಾರಣಗಳನ್ನು ದಾಖಲಿಸಬೇಕು ಎಂದೂ ನಿಯಮಕ್ಕೆ ಈ ಹಿಂದೆ ತಿದ್ದುಪಡಿ ತರಲಾಗಿತ್ತು.

ADVERTISEMENT

ಹಿಂದೆ ಎರಡು ಐಚ್ಛಿಕ ವಿಷಯಗಳೂ (ಪತ್ರಿಕೆ 6 ಮತ್ತು 7) ಸೇರಿ ಏಳು ವಿಷಯಗಳಲ್ಲಿ ಮುಖ್ಯ ಪರೀಕ್ಷೆ ನಡೆಯುತ್ತಿತ್ತು. ಆ ಬಳಿಕ ಐದು ವಿಷಯಗಳಿಗೆ ಪರೀಕ್ಷೆ ನಡೆಸಲಾಗುತ್ತಿತ್ತು. ಐಚ್ಛಿಕ ವಿಷಯಗಳನ್ನು (ತಲಾ 250 ಅಂಕಗಳ 2 ಪತ್ರಿಕೆ) ಕೈಬಿಡಲು ನಿರ್ಧರಿಸಲಾಯಿತು. ಹೀಗಾಗಿ ಒಟ್ಟು 1,750 ಅಂಕಗಳಿಗೆ ನಡೆಯುತ್ತಿದ್ದ ಮುಖ್ಯ ಪರೀಕ್ಷೆಯಲ್ಲಿ 500 ಅಂಕಗಳು ಕಡಿತಗೊಂಡಂತಾಗಿದೆ.

ಯುಪಿಎಸ್‌ಸಿ ಮಾದರಿಯಲ್ಲಿ ಕೆಪಿಎಸ್‌ಸಿಯಲ್ಲಿ ಸುಧಾರಣೆಗಳನ್ನು ತರಲು ರಾಜ್ಯ ಸರ್ಕಾರ ನೇಮಿಸಿದ್ದ ಪಿ.ಸಿ.ಹೋಟಾ ಸಮಿತಿಯು ತನ್ನ ವರದಿಯಲ್ಲಿ ಹಲವು ಶಿಫಾರಸುಗಳನ್ನುಮಾಡಿತ್ತು. ಆ ಶಿಫಾರಸ್ಸಿನ ಅನ್ವಯ ಮುಖ್ಯ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಅಂಕಗಳನ್ನು ಕಡಿಮೆ ಮಾಡಲಾಗಿದೆ. ಸಂದರ್ಶನಕ್ಕೆ ಮಾರ್ಗಸೂಚಿಯನ್ನು ರೂಪಿಸಲೂ ಸೂಚಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.