
ಶ್ರೀಮಂತರ ಮಕ್ಕಳು, ವೈದ್ಯ ವೃತ್ತಿಯಲ್ಲಿ ಇರುವವರ ಮಕ್ಕಳು ಮಾತ್ರ ವೈದ್ಯಕೀಯ ಶಿಕ್ಷಣ ಪಡೆಯಲು ಸಾಧ್ಯ; ಆರ್ಥಿಕವಾಗಿ ಹಿಂದುಳಿದವರು, ಗ್ರಾಮೀಣ ಪ್ರದೇಶದ ಮಕ್ಕಳು ವೈದ್ಯರಾಗುವುದು ಗಗನಕುಸುಮ ಎನ್ನುವಂತಹ ವಾತಾವರಣ ಕೆಲ ವರ್ಷಗಳ ಹಿಂದೆ ಇತ್ತು. ಸರ್ಕಾರಿ ವೈದ್ಯಕೀಯ ಕಾಲೇಜುಗಳ ಕೊರತೆ, ಖಾಸಗಿ ಕಾಲೇಜುಗಳ ದುಬಾರಿ ಶುಲ್ಕದಂತಹ ಕಾರಣಗಳಿಂದ, ಇಂಟರ್ನ್‌ಷಿಪ್ ಸೇರಿ ಐದೂವರೆ ವರ್ಷಗಳ ದುಬಾರಿ ಕೋರ್ಸ್ ಇದು ಎಂಬ ಭಾವನೆ ಸಹಜವಾಗಿಯೇ ಸಮಾಜದಲ್ಲಿ ಮನೆಮಾಡಿತ್ತು.
ಆದರೆ ಪರಿಸ್ಥಿತಿ ಈಗ ಭಿನ್ನವಾಗಿದೆ. ಕೇಂದ್ರ ಸರ್ಕಾರವು ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯನ್ನು (ನೀಟ್) ಪರಿಚಯಿಸಿದ ನಂತರ ಬಡ, ಮಧ್ಯಮ ವರ್ಗದ ಪ್ರತಿಭಾವಂತ ಮಕ್ಕಳು ಸಹ ವೈದ್ಯಕೀಯ ಶಿಕ್ಷಣ ಪಡೆಯುವಂತಾಗಿದೆ. ಇನ್ನೊಂದೆಡೆ, ಜಿಲ್ಲೆಗೊಂದರಂತೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡಲಾಗುತ್ತಿದೆ. ಮೂರ್‍ನಾಲ್ಕು ಸಾವಿರದಷ್ಟಿದ್ದ ರಾಜ್ಯದ ವೈದ್ಯಕೀಯ ಸೀಟುಗಳ ಸಂಖ್ಯೆ 2026–27ನೇ ಸಾಲಿಗೆ 10 ಸಾವಿರ ದಾಟಿದೆ. ಖಾಸಗಿ ಕಾಲೇಜುಗಳೂ ಸೇರಿ ಸರ್ಕಾರಿ ಕೋಟಾದ ಸೀಟುಗಳ ಸಂಖ್ಯೆ 6 ಸಾವಿರದಷ್ಟಿದೆ.
ಪರಿಸ್ಥಿತಿ ಹೀಗಿರುವಾಗ, ವೈದ್ಯಕೀಯ ಪದವಿ ಪಡೆದವರೂ ಈಚೆಗೆ ಉದ್ಯೋಗ ಪಡೆಯಲು ಹಲವು ಸವಾಲುಗಳನ್ನು ಎದುರಿಸುವಂತಾಗಿದೆ. ಇಂತಹ ಸಮಯದಲ್ಲಿ ಕರ್ನಾಟಕದ ವಿದ್ಯಾರ್ಥಿಗಳನ್ನು ಅಂತರರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿ ಸಜ್ಜಾಗಿಸಲು, ವಿದೇಶಗಳಲ್ಲಿ ಉತ್ತಮ ಸಂಭಾವನೆಯ ಅವಕಾಶಗಳನ್ನು ಪಡೆಯುವಂತಾಗಲು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಬ್ರಿಟನ್‌ನ ಸಹಕಾರ ಪಡೆಯುತ್ತಿದೆ. ಇಂಗ್ಲೆಂಡ್‌ನ ರೈಟಿಂಗ್ಟನ್, ವಿಗಾನ್ ಮತ್ತು ಲೀ ಟೀಚಿಂಗ್ ಹಾಸ್ಪಿಟಲ್ಸ್‌ನ ಜಾಗತಿಕ ತರಬೇತಿ ಮತ್ತು ಶಿಕ್ಷಣ ಕೇಂದ್ರ ‘ಜಿಟೆಕ್’ ಜತೆಗೆ ಒಪ್ಪಂದ ಮಾಡಿಕೊಂಡಿದೆ.
ಗುಣಮಟ್ಟದ ಚಿಕಿತ್ಸೆ, ಆರೈಕೆ, ವೈದ್ಯಕೀಯ ಪ್ರಯೋಗಗಳಿಗೆ ಬ್ರಿಟನ್‌ನ ರಾಷ್ಟ್ರೀಯ ಆರೋಗ್ಯ ಸೇವೆ (ಎನ್‌ಎಚ್‌ಎಸ್) ವಿಶ್ವದಲ್ಲೇ ಪ್ರಸಿದ್ಧಿ ಪಡೆದಿದೆ. ಅಲ್ಲಿನ ಜನರಿಗೆ ಆರೋಗ್ಯ ಸೇವೆ ಸಂಪೂರ್ಣ ಉಚಿತವಾಗಿದೆ. ದೇಶ–ವಿದೇಶಗಳ ವೈದ್ಯರು ಬ್ರಿಟನ್‌ನ ಆರೋಗ್ಯ ಕ್ಷೇತ್ರದಲ್ಲಿ ಉದ್ಯೋಗ ಪಡೆಯುವ ಕನಸು ಕಾಣುತ್ತಾರೆ. ಭಾರತ ಸೇರಿದಂತೆ ವಿವಿಧ ದೇಶಗಳ ಬಹಳಷ್ಟು ವೈದ್ಯರು ಅಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಹೊಸ ಒಪ್ಪಂದದ ಫಲವಾಗಿ ಕರ್ನಾಟಕದ ಆರೋಗ್ಯ ಶಿಕ್ಷಣ, ತರಬೇತಿ, ಸಂಶೋಧನೆ ಮತ್ತು ವೃತ್ತಿಪರ ಅಭಿವೃದ್ಧಿಗೆ ಜಾಗತಿಕ ವೇದಿಕೆ ನಿರ್ಮಾಣವಾಗುತ್ತಿದ್ದು, ಪರಸ್ಪರ ಸಹಕಾರ ಸಿಗಲಿದೆ. ‘ಕಲಿಕೆ, ಗಳಿಕೆ, ಮರಳಿಸುವಿಕೆ, ಶ್ರೇಷ್ಠತೆ’ ಆಧಾರದಲ್ಲಿ ಯೋಜನೆ ರೂಪಿಸಲಾಗಿದೆ. ರಾಜ್ಯದ ವೈದ್ಯಕೀಯ ವಿದ್ಯಾರ್ಥಿಗಳು ವರ್ಷದಲ್ಲಿ ಎರಡರಿಂದ ಆರು ವಾರ ಬ್ರಿಟನ್‌ಗೆ ತೆರಳಿ ಅಲ್ಲಿನ ರಾಷ್ಟ್ರೀಯ ಆರೋಗ್ಯ ಸೇವೆಯ ಭಾಗವಾಗಿ ಅಧ್ಯಯನ ನಡೆಸಲಿದ್ದಾರೆ, ಸೂಕ್ತ ತರಬೇತಿ ಪಡೆಯಲಿದ್ದಾರೆ. ಆನ್‌ಲೈನ್ ಮೂಲಕವೂ 18 ತಿಂಗಳು ಮಾಹಿತಿ ವಿನಿಮಯ ನಡೆಯಲಿದೆ.
ಜಾಗತಿಕ ಮಟ್ಟದ ಆರೋಗ್ಯ ವೃತ್ತಿಪರರನ್ನು ಬೆಳೆಸಲು ಹೊಸ ಒಪ್ಪಂದ ಮಹತ್ವದ ಹೆಜ್ಜೆಯಾಗಿದೆ. ಇಂತಹ ಅಂತರರಾಷ್ಟ್ರೀಯ ಸಹಭಾಗಿತ್ವಗಳು ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುತ್ತವೆ. ವಿಶ್ವದಾದ್ಯಂತ ಆರೋಗ್ಯ ಸೇವೆಯ ಗುಣಮಟ್ಟವನ್ನು ಸುಧಾರಿಸಲು ಸಹಕಾರಿಯಾಗುತ್ತವೆ.ಡಾ. ಎಚ್.ಎಸ್.ಭಗವಾನ್ ಕುಲಪತಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ
ಬ್ರಿಟನ್–ಕರ್ನಾಟಕ ಆರೋಗ್ಯ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ವೈದ್ಯಕೀಯ ವಿದ್ಯಾರ್ಥಿಗಳು ಸಂಶೋಧಕರು ಅಧ್ಯಾಪಕರಿಗೆ ಜಾಗತಿಕ ಕಲಿಕಾ ಅವಕಾಶಗಳು ಉದ್ಯೋಗ ಒದಗಿಸಲು ಈ ಒಪ್ಪಂದ ಮುನ್ನುಡಿ ಬರೆದಿದೆ.ಪ್ರೊ. ಮಾದಾಪುರ ಶಶಿಧರ, ಜಾಗತಿಕ ಕಾರ್ಯಕ್ರಮಗಳ ಮುಖ್ಯಸ್ಥ ಟೀಚಿಂಗ್ ಹಾಸ್ಪಿಟಲ್ಸ್ ಎನ್‌ಎಚ್‌ಎಸ್ ಫೌಂಡೇಶನ್ ಬ್ರಿಟನ್
ಒಪ್ಪಂದದ ಪ್ರಯೋಜನ
* ವೈದ್ಯಕೀಯ ವಿದ್ಯಾರ್ಥಿಗಳು, ವೈದ್ಯರು ಮತ್ತು ಆರೋಗ್ಯ ವೃತ್ತಿಪರರು ಬ್ರಿಟನ್ ಆರೋಗ್ಯ ಕ್ಷೇತ್ರದ ವೃತ್ತಿಪರ ಅನುಭವ ಪಡೆಯುವುದು
* ಇಂತಹ ಅನುಭವವು ಕರ್ನಾಟಕ ಆರೋಗ್ಯ ವ್ಯವಸ್ಥೆಯ ಕ್ರಾಂತಿಕಾರಕ ಸುಧಾರಣೆಗೆ ದಾರಿ ಮಾಡಿಕೊಡುವ ನಿರೀಕ್ಷೆ ಇದೆ
* ವೈದ್ಯಕೀಯ, ನರ್ಸಿಂಗ್ ಮತ್ತು ಸಮಗ್ರ ಆರೋಗ್ಯ ವಿಜ್ಞಾನಗಳು ಸೇರಿದಂತೆ ಆರೋಗ್ಯ ಕ್ಷೇತ್ರದ ವಿವಿಧ ವಲಯಗಳ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಹಾಗೂ ಆರೋಗ್ಯ ವೃತ್ತಿಪರರ ನಡುವೆ ಮಾಹಿತಿ ವಿನಿಮಯ ಕಾರ್ಯಕ್ರಮ
* ಎರಡು ದೇಶಗಳ ನಡುವಿನ ಕ್ಷಮತೆ ಅಭಿವೃದ್ಧಿ, ಸಂಶೋಧನಾ ಸಹಕಾರ ಮತ್ತು ತಂತ್ರಜ್ಞಾನ ಆಧಾರಿತ ಶಿಕ್ಷಣವನ್ನು ಬಲಪಡಿಸುವುದು
* ನಿರಂತರ ವೈದ್ಯಕೀಯ ಶಿಕ್ಷಣ (ಸಿಎಂಇ) ಮತ್ತು ಜೀವನ-ಬೆಂಬಲ ತರಬೇತಿ ಕಾರ್ಯಕ್ರಮಗಳನ್ನು ಇಂಗ್ಲೆಂಡ್ ಪ್ರಾಧ್ಯಾಪಕರೊಂದಿಗೆ ಸೇರಿ ಅಭಿವೃದ್ಧಿಗೊಳಿಸುವುದು
* ಅಂತರರಾಷ್ಟ್ರೀಯ ಫೆಲೋಷಿಪ್ ಪ್ರೋಗ್ರ್ಯಾಂನಲ್ಲಿ ಸಂದರ್ಶನದ ಅವಕಾಶಗಳನ್ನು ಖಚಿತಪಡಿಸುವುದು
* ಜಾಗತಿಕ ಕ್ಲಿನಿಕಲ್ ಅನುಭವ ಮತ್ತು ವೃತ್ತಿ ಅಭಿವೃದ್ಧಿಗೆ ಹೊಸ ದಾರಿ ಕಂಡುಕೊಳ್ಳುವುದು
ಬಾಲ್ಯದ ಗೆಳೆಯರ ಜಾಗತಿಕ ಬೆಸುಗೆ
ಬ್ರಿಟನ್–ಕರ್ನಾಟಕ ಆರೋಗ್ಯ ಸೇವಾ ಅಧ್ಯಯನದಂತಹ ಮಹತ್ವದ ಒಪ್ಪಂದಕ್ಕೆ ಕಾರಣರಾದವರು ಇಬ್ಬರು ಬಾಲ್ಯ ಗೆಳೆಯರು ಎನ್ನುವುದು ವಿಶೇಷ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ಸಿ.ಭಗವಾನ್ ಹಾಗೂ ಟೀಚಿಂಗ್ ಹಾಸ್ಪಿಟಲ್ಸ್ ರಾಷ್ಟ್ರೀಯ ಆರೋಗ್ಯ ಸೇವೆ ಫೌಂಡೇಶನ್ ಸಂಸ್ಥೆಯ ಜಾಗತಿಕ ಕಾರ್ಯಕ್ರಮಗಳ ಮುಖ್ಯಸ್ಥ ಪ್ರೊ. ಮಾದಾಪುರ ಶಶಿಧರ ಅವರು ಮೂಲತಃ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದವರು. ಅಲ್ಲಿನ ನರ್ಸರಿ ಶಾಲೆಯಲ್ಲಿ ಒಟ್ಟಿಗೆ ಓದಿದ್ದ ಅವರು ಆಯ್ದುಕೊಂಡಿದ್ದು ವೈದ್ಯಕೀಯ ಕೋರ್ಸ್. ಪ್ರಸ್ತುತ ಭಿನ್ನ ದೇಶಗಳ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇಬ್ಬರೂ ತಮ್ಮ ಸ್ಥಾನದ ಪ್ರಭಾವ ಬಳಸಿಕೊಂಡು ಎರಡೂ ದೇಶಗಳ ಮಧ್ಯೆ ಆರೋಗ್ಯ ಶಿಕ್ಷಣ ಮತ್ತು ವೃತ್ತಿಪರ ಅಭಿವೃದ್ಧಿಗೆ ಜಾಗತಿಕ ವೇದಿಕೆ ನಿರ್ಮಿಸಲು ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಮತ್ತು ಇಂಗ್ಲೆಂಡ್‌ನ ಜಿಟೆಕ್ ನಡುವೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ತಮ್ಮ ಗೆಳೆತನದ ಲಾಭವನ್ನು ವೈದ್ಯಕೀಯ ಕ್ಷೇತ್ರಕ್ಕೆ ಹಂಚಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.