
ವೈದ್ಯಕೀಯ ಶಿಕ್ಷಣ ನೀಡುವಲ್ಲಿ ಕರ್ನಾಟಕವು ಇಡೀ ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ಇದನ್ನು ಪ್ರತಿಷ್ಠಿತ ಸಂಸ್ಥೆಗಳು ನಡೆಸಿದ ಸಮೀಕ್ಷೆ ಬಹಿರಂಗಪಡಿಸಿದೆ. ಇದಕ್ಕೆ ಕಾರಣ, ವೈದ್ಯಕೀಯ ಕಾಲೇಜುಗಳಲ್ಲಿ ನೀಡುತ್ತಿರುವ ಗುಣಮಟ್ಟದ ಶಿಕ್ಷಣ, ತರಬೇತಿ, ಸಂಶೋಧನೆ, ಆಧುನಿಕ ಸೌಲಭ್ಯ, ಅತ್ಯಾಧುನಿಕ ಮೂಲಸೌಕರ್ಯ.
2024-25ರಲ್ಲಿ ನಡೆದ ಸಮೀಕ್ಷೆಯೊಂದರ ಪ್ರಕಾರ, ರಾಜ್ಯದಲ್ಲಿರುವ ವೈದ್ಯಕೀಯ ಕಾಲೇಜುಗಳ ಪೈಕಿ, ಮಣಿಪಾಲದ ಕಸ್ತೂರಬಾ ಕಾಲೇಜು, ಬೆಂಗಳೂರು ಮೆಡಿಕಲ್ ಕಾಲೇಜು, ಬೆಂಗಳೂರಿನ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು, ಮಂಗಳೂರಿನ ಕಸ್ತೂರಬಾ ಮೆಡಿಕಲ್ ಕಾಲೇಜು, ಬೆಳಗಾವಿ ಮೆಡಿಕಲ್ ಕಾಲೇಜು, ಧಾರವಾಡದಲ್ಲಿರುವ ಎಸ್‌ಡಿಎಂ ಕಾಲೇಜು, ಮಂಗಳೂರಿನ ಕೆ.ಎಸ್. ಹೆಗಡೆ ಮೆಡಿಕಲ್ ಅಕಾಡೆಮಿ, ಬೆಳಗಾವಿಯ ಜವಾಹರಲಾಲ್ ನೆಹರೂ ಮೆಡಿಕಲ್ ಕಾಲೇಜು, ವಿಜಯಪುರದ ಬಿ.ಎಂ. ಪಾಟೀಲ್ ಮೆಡಿಕಲ್ ಕಾಲೇಜು, ಕಲಬುರಗಿಯ ಚಲ್ಮಡ ಆನಂದ ರಾವ್ ಮೆಡಿಕಲ್ ಕಾಲೇಜು ಮುಂಚೂಣಿಯಲ್ಲಿವೆ.
ಭಾರತದಲ್ಲಿ ತರಬೇತಿ ಪಡೆಯುವ ವೈದ್ಯರು ವಿದೇಶದಲ್ಲಿಯೂ ಹೆಚ್ಚು ಮನ್ನಣೆ ಗಳಿಸುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಸುಮಾರು 3 ಕೋಟಿ ವೈದ್ಯರ ಕೊರತೆ ಇದೆ. ಗಟ್ಟಿಯಾದ ಶೈಕ್ಷಣಿಕ ಅಡಿಪಾಯ ಮತ್ತು ಇಂಗ್ಲಿಷ್ ಪ್ರಾವೀಣ್ಯ ಹೊಂದಿರುವ ಭಾರತೀಯ ವೈದ್ಯರು ವಿಶ್ವಮಟ್ಟದಲ್ಲಿ ಮನ್ನಣೆ ಗಳಿಸಿದ್ದಾರೆ. ಆದರೆ, ವೈದ್ಯಕೀಯ ವೃತ್ತಿಪರರ ಸಂಖ್ಯೆ ಕಡಿಮೆಯಿದೆ.
ವೈದ್ಯಕೀಯ ಶಿಕ್ಷಣ ಆಕಾಂಕ್ಷಿಗಳ ಸಂಖ್ಯೆ ಮತ್ತು ಲಭ್ಯವಿರುವ ವೈದ್ಯಕೀಯ ಸೀಟುಗಳ ನಡುವಿನ ಅಂತರ ಹೆಚ್ಚುತ್ತಿದೆ. ವೈದ್ಯಕೀಯ ಕೋರ್ಸ್ ಪ್ರವೇಶ ಪಡೆಯಲು ಪ್ರತಿವರ್ಷ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ದೇಶದಾದ್ಯಂತ ನಡೆಯುವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಗೆ (ನೀಟ್) ಹಾಜರಾಗುತ್ತಾರೆ. ಆದರೆ, ಇದಕ್ಕೆ ಪ್ರತಿಯಾಗಿ 1.18 ಲಕ್ಷ ವೈದ್ಯಕೀಯ ಸೀಟುಗಳು ಮಾತ್ರ ಲಭ್ಯವಿವೆ.
ವೈದ್ಯಕೀಯ ಸೀಟುಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸುವಂತೆ ಹಲವು ವರ್ಷಗಳಿಂದ ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ (ಎನ್‌ಎಂಸಿ) ರಾಜ್ಯ ಸರ್ಕಾರ ಪ್ರಸ್ತಾವ ಸಲ್ಲಿಸುತ್ತಲೇ ಬಂದಿದೆ. ವೈದ್ಯರಾಗಬೇಕೆಂಬ ಕನಸು ಹೊತ್ತು ನೀಟ್ ಬರೆದಿರುವ ವಿದ್ಯಾರ್ಥಿಗಳ ಆಗ್ರಹ ಮತ್ತು ಅದಕ್ಕೆ ಪೂರಕವಾಗಿ ರಾಜ್ಯ ಸರ್ಕಾರದ ಈ ಮನವಿಗೆ ಎನ್‌ಎಂಸಿ ಈ ಬಾರಿ ಸ್ಪಂದಿಸಿದೆ. ಕರ್ನಾಟಕವೂ ಸೇರಿದಂತೆ ದೇಶದಾದ್ಯಂತ ವಿವಿಧ ರಾಜ್ಯಗಳಲ್ಲಿರುವ ಸರ್ಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಹೆಚ್ಚುವರಿಯಾಗಿ ವೈದ್ಯಕೀಯ ಪದವಿ (ಎಂಬಿಬಿಎಸ್) ಮತ್ತು ಸ್ನಾತಕೋತ್ತರ ವೈದ್ಯಕೀಯ ಪದವಿ (ಪಿ.ಜಿ) ಸೀಟುಗಳನ್ನು ಮಂಜೂರು ಮಾಡಿದೆ.
2025–26ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಅನ್ವಯವಾಗುವಂತೆ ರಾಜ್ಯದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 422 ಪಿ.ಜಿ ಸೀಟುಗಳು ಹೆಚ್ಚಳ ಆಗಿವೆ. ಈ ಬಾರಿ ಪಿ.ಜಿ ಹಂತದಲ್ಲಿ ವಿವಿಧ ವಿಷಯಗಳ ಒಟ್ಟು 572 ಸೀಟುಗಳನ್ನು ಮಂಜೂರು ಮಾಡುವಂತೆ ಎನ್‌ಎಂಸಿಗೆ ವೈದ್ಯಕೀಯ ಶಿಕ್ಷಣ ಇಲಾಖೆ ಮನವಿ ಸಲ್ಲಿಸಿತ್ತು. ಪ್ರಸಕ್ತ ವರ್ಷಕ್ಕೆ ಆರಂಭದಲ್ಲಿ ಒಟ್ಟು 1,694 ಪಿ.ಜಿ ಸೀಟುಗಳು ರಾಜ್ಯದಲ್ಲಿ ಲಭ್ಯ ಇದ್ದವು. ಈಗ ಹೆಚ್ಚುವರಿ ಸೀಟುಗಳೂ ಸೇರಿ ಮುಂದಿನ ಶೈಕ್ಷಣಿಕ ವರ್ಷಕ್ಕೆ ಒಟ್ಟು 2,116 ಸೀಟುಗಳು ಲಭ್ಯವಿರಲಿವೆ. ಪ್ರಿ–ಕ್ಲಿನಿಕಲ್, ಪ್ಯಾರಾ–ಕ್ಲಿನಿಕಲ್ ಮತ್ತು ಕ್ಲಿನಿಕಲ್ ವಿಭಾಗಗಳಲ್ಲಿ ಈ ಹೆಚ್ಚುವರಿ ಸೀಟುಗಳು ಹಂಚಿಕೆಯಾಗಿವೆ. ಪೀಡಿಯಾಟ್ರಿಕ್ಸ್, ಅನಸ್ತೇಷಿಯಾ, ಫೊರೆನ್ಸಿಕ್ ಮೆಡಿಸಿನ್, ಮೈಕ್ರೊ ಬಯಾಲಜಿ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ವಿಭಾಗಗಳಲ್ಲಿ ಹೆಚ್ಚುವರಿ ಸೀಟುಗಳನ್ನು ಎನ್‌ಎಂಸಿ ಮಂಜೂರು ಮಾಡಿದೆ.
ಪ್ರಸಕ್ತ ಸಾಲಿಗೆ (2025–26) ಕರ್ನಾಟಕದ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಹೆಚ್ಚುವರಿಯಾಗಿ 450 ಎಂಬಿಬಿಎಸ್, ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಹೆಚ್ಚುವರಿಯಾಗಿ 1,100 ಸೀಟುಗಳು ಮಂಜೂರಾಗಿವೆ. ನೀಟ್ ಫಲಿತಾಂಶದ ನಂತರ ಪ್ರಕಟಿಸಿದ್ದ ಮೊದಲ ಸುತ್ತಿನ ಸೀಟು ಹಂಚಿಕೆಯಲ್ಲಿ 9,263 ಸೀಟುಗಳು ಲಭ್ಯವಿದ್ದವು. ಹೆಚ್ಚುವರಿ ಸೀಟುಗಳ ಕಾರಣದಿಂದ, ರಾಜ್ಯದಲ್ಲಿ ಲಭ್ಯವಿರುವ ವೈದ್ಯಕೀಯ ಸೀಟುಗಳ ಒಟ್ಟು ಸಂಖ್ಯೆಯೂ ಏರಿಕೆ ಆಗಿದೆ.
ಪ್ರಸಕ್ತ ಸಾಲಿನಲ್ಲಿ ಆರಂಭಗೊಂಡ ಫಾರೂಕ್ ಅಕಾಡೆಮಿ ಆಫ್ ಮೆಡಿಕಲ್ ಎಜುಕೇಷನ್ ಹಾಸ್ಪಿಟಲ್ ಆ್ಯಂಡ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ಗೆ 100 ವೈದ್ಯಕೀಯ ಸೀಟುಗಳನ್ನು ಎನ್‌ಎಂಸಿ ಮಂಜೂರು ಮಾಡಿದೆ. ಅಲ್ಲದೆ, ಬಿಜಿಎಸ್ ವೈದ್ಯಕೀಯ ಕಾಲೇಜು (ನಗರೂರು), ದೇವನಹಳ್ಳಿಯಲ್ಲಿರುವ ಆಕಾಶ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆ್ಯಂಡ್ ರಿಸರ್ಚ್ ಸೆಂಟರ್, ತುಮಕೂರಿನಲ್ಲಿರುವ ಶ್ರೀದೇವಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆ್ಯಂಡ್ ರಿಸರ್ಚ್ ಸೆಂಟರ್ ತಲಾ 100 ಹಾಗೂ ಡಾ. ಚಂದ್ರಮ್ಮ ದಯಾನಂದ ಸಾಗರ್, ಈಸ್ಟ್ ಪಾಯಿಂಟ್, ಜೆಜಿಎಂಎಂಎಂಸಿ (ಹುಬ್ಬಳ್ಳಿ), ಪಿಇಎಸ್, ಬಿ.ಎಂ. ಪಾಟೀಲ (ವಿಜಯಪುರ), ಶ್ರೀದೇವಿ ಮತ್ತು ಸಿದ್ಧಗಂಗಾ (ತುಮಕೂರು) ಹೀಗೆ ಒಟ್ಟು 14 ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ತಲಾ 50 ಸೀಟುಗಳು ಹೆಚ್ಚುವರಿಯಾಗಿ ಮಂಜೂರಾಗಿವೆ.
ಇನ್ನಷ್ಟು ಕಾಲೇಜು ಆರಂಭಕ್ಕೆ ಸಿದ್ಧತೆ
‘ರಾಜ್ಯದಲ್ಲಿ ಕಾರ್ಮಿಕರ ರಾಜ್ಯ ವಿಮಾ ನಿಗಮದ (ಇಎಸ್‌ಐಸಿ) ಎರಡು ಹಾಗೂ ಸರ್ಕಾರಿ ಸ್ವಾಮ್ಯದ 24 ವೈದ್ಯಕೀಯ ಕಾಲೇಜುಗಳಿವೆ. ಬಾಗಲಕೋಟೆ ರಾಮನಗರ ಮತ್ತು ಕನಕಪುರದಲ್ಲಿ ಹೊಸದಾಗಿ ವೈದ್ಯಕೀಯ ಕಾಲೇಜುಗಳು ಆರಂಭವಾಗಲಿವೆ. ವೈದ್ಯಕೀಯ ಕಾಲೇಜುಗಳಿಲ್ಲದ ಜಿಲ್ಲೆಗಳಲ್ಲಿ ಶೀಘ್ರದಲ್ಲೇ ಸಂಪೂರ್ಣ ಸುಸಜ್ಜಿತ ಸಂಸ್ಥೆಗಳನ್ನು ಆರಂಭಿಸುವ ಮೂಲಕ ಆರ್ಥಿಕ ದುರ್ಬಲ ವರ್ಗಗಳ ಅರ್ಹ ವಿದ್ಯಾರ್ಥಿಗಳಿಗೆ ಸರ್ಕಾರಿ ವೈದ್ಯಕೀಯ ಸೀಟು ನೀಡುವುದು ಹಾಗೂ ಬಡ ರೋಗಿಗಳಿಗೆ ಉಚಿತ ಆರೋಗ್ಯ ಸೇವೆಯನ್ನು ನೀಡುವ ಉದ್ದೇಶದಿಂದ ಇನ್ನಷ್ಟು ಹೊಸ ವೈದ್ಯಕೀಯ ಕಾಲೇಜುಗಳ ಆರಂಭಕ್ಕೆ ಸಿದ್ಧತೆ ನಡೆದಿದೆ.ಡಾ. ಶರಣಪ್ರಕಾಶ ಪಾಟೀಲ ವೈದ್ಯಕೀಯ ಶಿಕ್ಷಣ ಸಚಿವ
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ವತಿಯಿಂದ ವೈದ್ಯಕೀಯ ಸೀಟುಗಳ ಹಂಚಿಕೆ ಕ್ರಮಬದ್ಧವಾಗಿ ನಡೆಯುತ್ತದೆ. ಪ್ರಸಕ್ತ ಸಾಲಿನ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಿಸಿದಂತೆ 4007 ಸೀಟುಗಳು ಹಂಚಿಕೆಗೆ ಲಭ್ಯವಾಗಿವೆ. ಬೆಂಗಳೂರಿನ ಎಂವಿಜೆ ಕಲಬುರಗಿಯ ಮಹದೇವಪ್ಪ ರಾಂಪುರೆ ದಕ್ಷಿಣ ಕನ್ನಡ ಜಿಲ್ಲೆಯ ಕೆ. ವೆಂಕಟರಮಣ ಗೌಡ ಮತ್ತು ಮಂಗಳೂರಿನ ಶ್ರೀನಿವಾಸ ವೈದ್ಯಕೀಯ ಕಾಲೇಜುಗಳಿಗೆ ತಲಾ 50 ಸೀಟುಗಳನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ ಹೆಚ್ಚುವರಿಯಾಗಿ ಮಂಜೂರು ಮಾಡಿದೆ. ಮೂರನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಆರಂಭವಾದ ನಂತರ ಒಟ್ಟು ಒಂಬತ್ತು ಕಾಲೇಜುಗಳ 450 ಸೀಟುಗಳು ಹೆಚ್ಚುವರಿಯಾಗಿ ಲಭ್ಯವಾಗಿವೆ.ಎಚ್.ಪ್ರಸನ್ನ ಕಾರ್ಯನಿರ್ವಾಹಕ ನಿರ್ದೇಶಕ ಕೆಇಎ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.