ಸಮಾಧಾನ | ಚುರುಕಾಗಿದ್ದ ಮಗಳು ಮಂಕಾಗಿದ್ದು ಏಕೆ?
ನನ್ನ ತಂದೆ– ತಾಯಿ ಇಬ್ಬರೂ ವೈದ್ಯರು. ನಾನು, ನನ್ನ ಹೆಂಡ್ತಿ ಮತ್ತು ತಂಗಿ ಎಲ್ಲರೂ ವೈದ್ಯರು. ನಮ್ಮದು ವೈದ್ಯಕೀಯ ವೃತ್ತಿಗೆ ಸೇರಿದ ಕುಟುಂಬ. ನನ್ನ ದೊಡ್ಡ ಮಗನೂ ವೈದ್ಯಕೀಯ ಕಲಿಯುತ್ತಿದ್ದಾನೆ. ಮಗಳು ಮಾತ್ರ ದ್ವಿತೀಯ ಪಿಯುಸಿ ಪಾಸಾಗುತ್ತಿಲ್ಲ. ಎಸ್ಸೆಸ್ಸೆಲ್ಸಿಯಲ್ಲಿ ಶೇ 98, ಮೊದಲ ವರ್ಷದಲ್ಲಿ ಶೇ 96ರಷ್ಟು ಅಂಕಗಳನ್ನು ಪಡೆದಿದ್ದಾಳೆ. ಈಗ ಏನಾಗಿದೆ ಎಂದು ಅರಿಯುವುದು ಹೇಗೆ? ಅವಳು ಮತ್ತೆ ಓದಿನಲ್ಲಿ ಮುಂದೆ ಬರಲು ಏನು ಮಾಡಬೇಕು?
ನಿಮ್ಮದು ಸುಶಿಕ್ಷಿತ ಕುಟುಂಬ. ಜೀವನದಲ್ಲಿ ಎಲ್ಲರೂ ಯಶಸ್ವಿಯಾಗಿದ್ದೀರಿ. ಉಳಿದವರಿಗೆ ಉದಾಹರಣೆಯಾಗಿದ್ದೀರಿ. ಕೆಲವರಿಗೆ ಪ್ರೇರಣೆಯಾಗಿದ್ದೀರಿ. ವೈದ್ಯಕೀಯ ವೃತ್ತಿಯು ಜನರ ಜೀವವನ್ನು ಉಳಿಸುವ ಪವಿತ್ರವಾದ ಕೆಲಸ. ಮೊದಲಿಗೆ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು.
ಇನ್ನು ಮಗಳ ವಿಷಯದ ಬಗ್ಗೆ ಚಿಂತಿತರಾಗಿದ್ದೀರಿ. ಪಾಲಕರಾಗಿ ಅದು ಸಹಜ. ಮಗಳು ನಿಜಕ್ಕೂ ಜಾಣೆ. ಅವಳು ನಿಮ್ಮೆಲ್ಲರ ಹಾಗೆಯೇ ವೈದ್ಯಳಾಗಲಿ ಎನ್ನುವುದು ನಿಮ್ಮೆಲ್ಲರ ಆಸೆ. ಅದೂ ಸಹಜವೇ.
ನೀವು ತಿಳಿಸಿದಂತೆ, ನಿಮ್ಮ ಮಗಳು ಚೆನ್ನಾಗಿ ಓದಿದ್ದಾಳೆ. ಸಾಕಷ್ಟು ಅಂಕ ಪಡೆದಿದ್ದಾಳೆ. ವೈದ್ಯಕೀಯ ಕೋರ್ಸ್‌ಗೆ ಸೇರುವಷ್ಟು ಅಂಕಗಳನ್ನು ಪಡೆಯಬಲ್ಲ ಸಮರ್ಥೆ. ಹೀಗಿದ್ದೂ ಪಿಯು ಎರಡನೆಯ ವರ್ಷದಲ್ಲಿ ಕಷ್ಟಪಡುತ್ತಿದ್ದಾಳೆ.
ಆಕೆ ವೈದ್ಯಕೀಯವನ್ನೇ ಓದಬೇಕು ಎನ್ನುವ ವಿಷಯದಲ್ಲಿ ಒಂದಿಷ್ಟು ತೊಂದರೆ ಇರುವ ಹಾಗಿದೆ. ಆ ಬಗ್ಗೆ ಆಲೋಚನೆ ಮಾಡಿದ್ದೀರಾ?. ಆಕೆಗೆ ಬೇರೆ ಯಾವುದಾದರೂ ವಿಷಯದ ಬಗ್ಗೆ ಆಸಕ್ತಿ ಇದೆಯಾ? ಬೇರೆ ವಿಷಯವನ್ನು ಓದುತ್ತೇನೆ ಎಂದು ಕೇಳಿದ್ದು ನೆನಪಿದೆಯೇ?. ಆಕೆಗೆ ವೈದ್ಯಕೀಯದ ಬಗ್ಗೆ ನಿಜಕ್ಕೂ ಆಸಕ್ತಿ, ಗೌರವ ಇದೆಯಾ? ಅಥವಾ ನಿಮ್ಮೆಲ್ಲರ ಆಸೆಯಂತೆ ಆಕೆಗೆ ವೈದ್ಯಕೀಯವನ್ನು ಕಲಿಯಲು ಒತ್ತಾಯಿಸಲಾಗಿದೆಯಾ?.
ಮನೆಯಲ್ಲಿ ಎಲ್ಲರೂ ವೈದ್ಯರು. ತಾನು ವೈದ್ಯಳಾದರೆ ಮಾತ್ರ ಗೌರವ. ಮನೆಯವರ ಪ್ರೀತಿ ಸಿಗುತ್ತದೆ. ಇಲ್ಲವಾದರೆ ಇಲ್ಲ ಅಂತೇನಾದರೂ ಆಕೆಗೆ ಅನ್ನಿಸಿರಬಹುದು. ಇಂಥ ಒತ್ತಡಗಳಿದ್ದಾಗಲೂ ಆಕೆಯ ವರ್ತನೆಯಲ್ಲಿ ಬದಲಾವಣೆಯಾಗುತ್ತದೆ. ತಾತ್ಕಾಲಿಕ ದಡ್ಡತನ ಬರುವ ಸಾಧ್ಯತೆಯೂ ಇರುತ್ತದೆ. ಇದರಿಂದ ಪರೀಕ್ಷೆಯಲ್ಲಿ ಸರಿಯಾದ ಉತ್ತರಗಳನ್ನು ಬರೆಯಲು ಸಾಧ್ಯವಾಗುವುದಿಲ್ಲ. ಇವೆಲ್ಲವೂ ಆಕೆಯ ಸುಪ್ತ ಮನಸ್ಸಿನ ಪ್ರಭಾವವಾಗಿರಬಹುದು. ಅಥವಾ ವೈದ್ಯಕೀಯವನ್ನು ಕಲಿಯುವ ಬಗ್ಗೆ ಅವಳಿಗಿರುವ ನಿರಾಸಕ್ತಿಯನ್ನು ವ್ಯಕ್ತಪಡಿಸುವ ರೀತಿಯಾಗಿರಬಹುದು. ಒಟ್ಟಿನಲ್ಲಿ ಇದು ಆಕೆಯ ಮೌನಪ್ರತಿಭಟನೆಯೂ ಇರಬಹುದು. ಅವಳಿಗೆ ಡಾಕ್ಟರಾಗುವುದಕ್ಕಿಂತಲೂ ಬೇರೆ ಯಾವುದಾದರೂ ವೃತ್ತಿಯ ಬಗ್ಗೆ ಆಸಕ್ತಿ ಇರಲೂಬಹುದು. ಅದನ್ನು ಆಕೆ ತನ್ನ ಗೆಳಯರಲ್ಲಾಗಲೀ, ಪಾಲಕರಲ್ಲಾಗಲೀ ಆಗಾಗ ಹೇಳಿಕೊಂಡಿರಬಹುದು. ಅವನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿರಿ. ಸ್ವಲ್ಪ ಪತ್ತೇದಾರಿಕೆ ಮಾಡಿ.
ಇನ್ನು ಪಠ್ಯೇತರ ಚಟುವಟಿಕೆಗಳಲ್ಲಿ ಅವಳ ಆಸಕ್ತಿ ಹೇಗಿದೆ? ಇವುಗಳ ಬಗ್ಗೆ ಪಾಲಕರಾಗಿ ತಾವು ಅವಳೊಟ್ಟಿಗೆ ಮಾತನಾಡಿದ್ದೀರಾ? ಪಾಲಕರ ಒತ್ತಾಯಕ್ಕೆ ಕಟ್ಟುಬಿದ್ದು ಯಾವುದೇ ವಿಷಯವನ್ನು ಓದಿದವರು ಮುಂದೆ ಜೀವನದಲ್ಲಿ ಯಶಸ್ವಿಯಾಗಿದ್ದಾಗಲೀ, ಸಂತೋಷದಿಂದ ಬದುಕಿದ್ದಾಗಲೀ ಕಡಿಮೆ.
ಇವತ್ತಿನ ಜಗತ್ತಿನಲ್ಲಿ ವ್ಯಕ್ತಿಯು ಸುಖವಾಗಿ, ಸಮೃದ್ಧವಾಗಿ ಬದುಕನ್ನು ಕಟ್ಟಿಕೊಳ್ಳುವ ಅವಕಾಶಗಳು ಹೇರಳವಾಗಿವೆ. ವೈದ್ಯರು, ವಕೀಲರು ಸಿನಿಮಾ ಕ್ಷೇತ್ರದಲ್ಲಿ ಗೆದ್ದವರಿದ್ದಾರೆ. ಉದ್ಯಮ ಮಾಡಿದ್ದಾರೆ. ಓದಿದ್ದು ಯಾವುದೋ ಆಗಿದ್ದು, ಬೇರೆ ಯಾವುದೋ ಕ್ಷೇತ್ರದಲ್ಲಿ ಯಶಸ್ಸು ಗಳಿಸಿದವರು ಅನೇಕರಿದ್ದಾರೆ. ಹಾಗಾಗಿ ನೀವು ಆಕೆಯ ಬಗ್ಗೆ ನಕಾರಾತ್ಮಕವಾಗಿ ಆಲೋಚನೆಯನ್ನು ಮಾಡಬೇಕಾಗಿಲ್ಲ. ಆಕೆಯ ಮನೋಬಲವು ಕುಗ್ಗುವಂತೆ ನಡೆದುಕೊಳ್ಳಬೇಕಾಗಿಲ್ಲ.
ನನಗನ್ನಿಸುವ ಪ್ರಕಾರ ಆಕೆಗೆ ಬೇರೆ ಯಾವುದೋ ವಿಷಯದಲ್ಲಿ ತೀವ್ರವಾದ ಆಸಕ್ತಿ ಇದೆ. ನೀವು ಅದನ್ನು ಪತ್ತೆ ಮಾಡಬೇಕು. ಆ ದಿಸೆಯಲ್ಲಿ ಆಕೆ ಮುಂದುವರಿಯುವಂತೆ ಮನಸ್ಪೂರ್ವಕವಾಗಿ ಪ್ರೋತ್ಸಾಹಿಸಬೇಕು. ಆಗ ಆಕೆ ಸಂತೋಷದಿಂದ ಜೀವನದಲ್ಲಿ ಗೆಲುವಿನ ಮಾರ್ಗದಲ್ಲಿ ಮುಂದುವರಿಯುತ್ತಾಳೆ. ಯಾವುದೇ ಕ್ಷೇತ್ರದಲ್ಲಿ ಇದ್ದರೂ ಯಶಸ್ವಿಯಾಗುತ್ತಾಳೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.