
ಪರೀಕ್ಷೆ
ನಾನು ಕಾಲೇಜಿನಲ್ಲಿ ಎಲ್ಲರಿಗಿಂತ ಭಿನ್ನ. ನಾನು ತಪ್ಪು ಮಾಡುವುದಿಲ್ಲ. ಯಾರಿಗೂ ತೊಂದರೆ ಕೊಡುವುದಿಲ್ಲ. ನನ್ನ ಸಹಪಾಠಿಗಳು ಇರುವ ಹಾಗೆ ನಾನು ಇರುವುದಿಲ್ಲ. ಅವರೊಂದಿಗೆ ಸೇರುವುದಿಲ್ಲ. ಕೆಟ್ಟ ಕೆಲಸ ಮಾಡುವವರನ್ನು ಕಂಡರೆ ನನಗೆ ಇಷ್ಟವಿಲ್ಲ. ಅವರನ್ನು ತಿದ್ದಲು ಪ್ರಯತ್ನಿಸುತ್ತೇನೆ. ಅವರೆಲ್ಲರ ತಪ್ಪು ಹಾಗೂ ಉಡಾಳತನದಿಂದ ನನಗೆ ತಡೆಯಲಾಗದಷ್ಟು ಕೋಪ ಬರುತ್ತದೆ. ಇದು ಎನ್‌ಸಿಸಿಯಲ್ಲಿ ಕಲಿತ ಶಿಸ್ತು. ಇದರಿಂದ ಅವರು ನನ್ನನ್ನು ಆಡಿಕೊಳ್ಳುತ್ತಾರೆ. ನಾನು ಅವರೊಂದಿಗೆ ಹೋರಾಡುವುದು ಸರಿಯೇ? ನನಗೆ ಅವರೆಲ್ಲರ ವರ್ತನೆಯಿಂದ ನೋವಾಗುತ್ತದೆ. ಸಮಾಜದಲ್ಲಿ ಎಲ್ಲರೂ ನೆಮ್ಮದಿಯಿಂದ ಬದುಕುವಂತೆ ಹೇಗೆ ಮಾಡುವುದು ಎಂದು ನನಗೆ ಚಿಂತೆಯಾಗುತ್ತದೆ. ಕೆಲವು ಸಲ ದುಃಖವಾಗುತ್ತದೆ. ನಾನೇನು ಮಾಡಬೇಕು?
–ಮಾಲತೇಶ ಬಸವಪುರ, ದಾವಣಗೆರೆ
ನಿಮಗಿರುವ ಶಿಸ್ತು, ನಿಷ್ಠೆ ಹಾಗೂ ಸಮಾಜದ ಬಗೆಗಿನ ಕಾಳಜಿ ನಿಮ್ಮ ಮಾತಿನಲ್ಲಿ ಕಾಣಿಸುತ್ತದೆ. ನಿಮ್ಮ ಉದಾತ್ತ ಮನಸ್ಸಿಗೆ ಹಾಗೂ ಒಳ್ಳೆಯ ಕೆಲಸಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಇಂದಿನ ಸಮಾಜದಲ್ಲಿ ನಿಮ್ಮಂಥವರು ತೀರಾ ಅಪರೂಪ. ಎಲ್ಲ ಕಡೆಯೂ ನಿಮ್ಮಂಥವರು ಇರಬೇಕು. ಅವರ ಸಂಖ್ಯೆ ಹೆಚ್ಚಾಗಬೇಕು. ಅದರಿಂದ ಎಲ್ಲರಿಗೂ ಒಳಿತಾಗುತ್ತದೆ.
ನಿಮ್ಮ ವಿಚಾರ, ಆಚಾರ ಹಾಗೂ ಜೀವನ ಮೌಲ್ಯಗಳು ಸರಿಯಾಗಿವೆ. ‘ವ್ಯಕ್ತಿ ವೀರಭದ್ರನಾದರೆ, ಸಮಾಜ ಸುಭದ್ರ’ ಎನ್ನುವ ಮಾತಿಗೆ ನೀವು ಒಂದು ಉದಾಹರಣೆಯಾಗುವ ಅವಕಾಶವಿದೆ. ನೀವು ತಪ್ಪು ಮಾಡುವುದಿಲ್ಲ ಎನ್ನುವುದು ಸರಿ. ಅದರಿಂದ ಖಂಡಿತವಾಗಿಯೂ ನಿಮ್ಮ ಆತ್ಮಸ್ಥೈರ್ಯ ಹೆಚ್ಚಾಗುತ್ತದೆ. ಆ ಮೂಲಕ ನಿಮಗೆ ಸಾಕಷ್ಟು ಒಳ್ಳೆಯ ದಾಗುತ್ತದೆ. ಇದೇ ಸಂದರ್ಭದಲ್ಲಿ, ಉಳಿದವರು ಮಾಡುವ ತಪ್ಪಿಗಾಗಿ ವ್ಯಥೆಪಡುವುದು, ಅವರನ್ನು ತಿದ್ದುವುದಕ್ಕೆ ಶ್ರಮಿಸುವುದು ಅಷ್ಟು ಸರಿಯಲ್ಲ. ಅದು ನಿಮ್ಮ ಕೆಲಸವಲ್ಲ. ನಿಮ್ಮ ಬದುಕನ್ನು ನಿಮ್ಮ ಇಷ್ಟದಂತೆ, ಸತ್ಯ ಹಾಗೂ ನಿಷ್ಠೆಯ ಮಾರ್ಗದಲ್ಲಿ ಸಶಕ್ತವಾಗಿ ಮುನ್ನಡೆಸುವುದಕ್ಕೆ ಏನೇನು ಮಾಡಬೇಕೋ ಅದನ್ನು ಮಾಡುವುದು ಮಾತ್ರ ನಿಮ್ಮ ಕೆಲಸ.
ಈ ಜಗತ್ತು ವೈವಿಧ್ಯಗಳ ಆಗರ. ನಮ್ಮ ಅನುಭವದ ಹಿನ್ನೆಲೆಯಲ್ಲಿ ನಾವು ಸರಿ ಹಾಗೂ ತಪ್ಪುಗಳನ್ನು ನಿರ್ಧರಿಸುತ್ತೇವೆ. ಅವು ನಮ್ಮ ಪ್ರಕಾರ ಸರಿ, ಅಷ್ಟೇ!
ಎಲ್ಲರ ಹುಟ್ಟು ಹಾಗೂ ಬೆಳವಣಿಗೆ ಬೇರೆ ಬೇರೆ ಪರಿಸ್ಥಿತಿಯಲ್ಲಿ ಹಾಗೂ ಪರಿಸರಗಳಲ್ಲಿ ಆಗಿರುತ್ತವೆ. ಹಾಗಾಗಿ, ಅವರವರ ಬದುಕಿನ ರೀತಿ, ನೀತಿಗಳೂ ಬೇರೆ ಬೇರೆಯಾಗಿರುತ್ತವೆ. ಅಷ್ಟು ಮಾತ್ರಕ್ಕೇ ಅವರ ಆಚಾರಗಳು ತಪ್ಪು ಹಾಗೂ ನಮ್ಮ ವಿಚಾರಗಳೇ ಸರಿ ಎನ್ನುವುದು ನಮ್ಮ ಸಂಕುಚಿತ ಆಲೋಚನೆಯಾಗುತ್ತದೆ. ನಿಮ್ಮ ಮಾತಿನಿಂದಾಗಲೀ ನಿಮ್ಮ ಭಯದಿಂದಾಗಲೀ ಅವರ್‍ಯಾರೂ ಬದಲಾಗುವುದಿಲ್ಲ. ಅವರವರ ಜೀವನದ ಗುರಿ, ದಾರಿ ಬದಲಾಗುವುದಿಲ್ಲ.
ಕೆಟ್ಟದ್ದನ್ನು ಮಾಡಬಾರದು, ಯಾರಿಗೂ ತೊಂದರೆ ಕೊಡಬಾರದು ಎನ್ನುವುದು ನೂರಕ್ಕೆ ನೂರರಷ್ಟು ಸರಿ. ಅದನ್ನು ನಾವು ಪಾಲಿಸಬೇಕು. ಹಾಗಂತ, ಕೆಟ್ಟದ್ದು ಮಾಡುತ್ತಿರುವವರನ್ನು ತಿದ್ದಲಿಕ್ಕೆ ನಾವು ಶ್ರಮಿಸುವುದಾಗಲೀ ಅವರಿಗಾಗಿ ಚಿಂತಿಸು ವುದಾಗಲೀ ಕೋಪಿಸಿಕೊಳ್ಳುವುದಾಗಲೀ ಹತಾಶರಾಗುವುದಾಗಲೀ ನಮ್ಮ ಕೆಲಸವೇನಲ್ಲ. ಅವರನ್ನು ಸರಿದಾರಿಗೆ ತರಲು ನೀವು ಹೋರಾಟ ಮಾಡುವುದೂ ಬೇಕಾಗಿಲ್ಲ. ಹೋರಾಟವೇ ಎಲ್ಲಾ ಸಮಸ್ಯೆಗಳಿಗೆ ಪರಿಹಾರವೂ ಅಲ್ಲ.
ಸಾವಿರಾರು ವರ್ಷಗಳ ಹಿಂದಿನಿಂದಲೂ ಅನೇಕಾನೇಕ ದೈವಾಂಶಸಂಭೂತರು ಎಲ್ಲರ ಒಳಿತಿಗಾಗಿ ಏನು ಮಾಡಬೇಕು, ಯಾರ್‍ಯಾರು ಏನೇನನ್ನು ಮಾಡಿದರೆ ಸರ್ವರೂ ಸಂತೋಷದಿಂದ ಬದುಕುವುದಕ್ಕೆ ಸಾಧ್ಯವಿದೆ ಎನ್ನುವುದನ್ನೆಲ್ಲ ಹೇಳಿಕೊಟ್ಟಿದ್ದಾರೆ. ಆದರೆ ಅವನ್ನೆಲ್ಲ ತಿಳಿದುಕೊಂಡು, ಬದುಕಿನಲ್ಲಿ ಅಳವಡಿಸಿಕೊಂಡು ಸಂತೋಷದಿಂದ ಬದುಕಿದವರು ಹಾಗೂ ಬದುಕನ್ನು ಸಾರ್ಥಕಗೊಳಿ ಸಿಕೊಂಡವರು ಅಪರೂಪ. ಬೇರೆಯವರ ಬಗ್ಗೆ ಬಹಳ ಚಿಂತೆ ಮಾಡುವುದನ್ನು ಬಿಟ್ಟು, ನಿಮ್ಮ ಮನಸ್ಸು ಶಾಂತವಾಗಿರುವಂತೆ ನೋಡಿಕೊಳ್ಳಿ.
ನೀವು ಮೊದಲು ಸಮಾಜದಲ್ಲಿ ಒಂದು ಒಳ್ಳೆಯ ಸ್ಥಾನವನ್ನು ಗಳಿಸಿಕೊಂಡರೆ, ಅಲ್ಲಿಂದ ಮುಂದೆ ನಿಮ್ಮ ಆಲೋಚನೆಗಳನ್ನು ಅನುಷ್ಠಾನಗೊಳಿಸುವುದು ಸುಲಭವಾಗುತ್ತದೆ. ಲಾಗಾಯ್ತಿನಿಂದಲೂ ರಾಜನ (ಆಳುವವರ) ಮಾತಿಗೆ ಮರ್ಯಾದೆ ಜಾಸ್ತಿ. ಹಾಗಾಗಿ, ನಿಮ್ಮನ್ನು ನೀವು ಸಶಕ್ತರನ್ನಾಗಿ ಮಾಡಿಕೊಳ್ಳುವತ್ತ ಶ್ರದ್ಧೆಯಿಂದ ಗಮನಹರಿಸಿ. ಅದರಿಂದ ಬಹಳಷ್ಟು ಜನರಿಗೆ ಒಳ್ಳೆಯದಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.