ADVERTISEMENT

ಆನ್‌ಲೈನ್‌ ಕೋಚಿಂಗ್ ತರಗತಿ ಆಯ್ಕೆ ಹೇಗಿರಬೇಕು?

ಅರುಣ ಬ ಚೂರಿ
Published 23 ಫೆಬ್ರುವರಿ 2020, 19:30 IST
Last Updated 23 ಫೆಬ್ರುವರಿ 2020, 19:30 IST
Coaching online trainings, group lessons, webinars, online seminars.
Coaching online trainings, group lessons, webinars, online seminars.   

ಸ್ಪರ್ಧಾತ್ಮಕ ಪರೀಕ್ಷೆ: ಅಭ್ಯರ್ಥಿಯು ಆನ್‌ಲೈನ್‌ ಕೋಚಿಂಗ್ ಪಡೆದುಕೊಂಡು ಸ್ವಯಂ ಪ್ರೇರಣೆಯಿಂದ ಅಭ್ಯಾಸ ನಡೆಸಿದರೆ ಬ್ಯಾಂಕಿಂಗ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವುದು ಕಷ್ಟದ ಕೆಲಸವೇನಲ್ಲ. ಇದು ಆಯಾ ವಿದ್ಯಾರ್ಥಿಗಳ ಅವಶ್ಯಕತೆ ಹಾಗೂ ಪ್ರೇರಣೆಯನ್ನು ಅವಲಂಬಿಸಿದೆ.

ಆನ್‌ಲೈನ್‌ ಅಧ್ಯಯನ ಸೂಕ್ತವೋ ಅಥವಾ ಆಫ್‌ಲೈನ್‌ ಅಧ್ಯಯನ ಒಳ್ಳೆಯದೋ ಎಂಬುದರ ಕುರಿತು ಹಿಂದಿನ ವಾರ ತಿಳಿದುಕೊಂಡಿರಬಹುದು. ಈಗ ಆನ್‌ಲೈನ್‌ ಕೋಚಿಂಗ್‌ ತರಗತಿಯ ಆಯ್ಕೆ ಬಗ್ಗೆ ನೋಡೋಣ. ಇವು ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಿರುವುದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೂರುವ ಅಭ್ಯರ್ಥಿಗಳಿಗೆ ಒಂದೆಡೆ ಅನುಕೂಲವಾದರೆ, ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಗೊಂದಲ ಇನ್ನೊಂದೆಡೆ. ಆದರೆ ನಿಮಗೆ ಏನು ಬೇಕು, ಯಾವುದಕ್ಕೆ ಆದ್ಯತೆ ನೀಡಬೇಕು ಎಂದು ಮೊದಲು ಪಟ್ಟಿ ಮಾಡಿಕೊಂಡು ಅದರ ಆಧಾರದ ಮೇಲೆ ಒಳ್ಳೆಯ ಆನ್‌ಲೈನ್‌ ಕೋಚಿಂಗ್‌ ತರಗತಿ ಹುಡುಕಲು ಆರಂಭಿಸಬಹುದು.

ಆನ್‌ಲೈನ್‌ನಲ್ಲಿ ಸದ್ಯ ನಿಮ್ಮ ಸ್ನೇಹಿತರು ತಯಾರಿಸಿದ ಅಧ್ಯಯನ ಸಾಮಗ್ರಿಗಳಿಂದ ಹಿಡಿದು ಅನುಭವವುಳ್ಳ ಒಬ್ಬ ನಿವೃತ್ತ ಬ್ಯಾಂಕ್ ಅಧಿಕಾರಿಯ ಕೋಚಿಂಗ್ ವಿಡಿಯೊ ಸಹ ದೊರಕುತ್ತದೆ. ಯಾವುದು ಸೂಕ್ತ ಎಂಬ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಆ ಸಂಸ್ಥೆಯ ಕೆಲವು ಅಣಕು ಪರೀಕ್ಷೆಗಳು, ಉಚಿತ ಯುಟ್ಯೂಬ್ ವಿಡಿಯೊಗಳು, ಉಚಿತ ಟ್ರಯಲ್ ವಿಡಿಯೊಗಳು ಹಾಗೂ ವಿದ್ಯಾರ್ಥಿಗಳು ಆ ಸಂಸ್ಥೆಗೆ ನೀಡಿದ ಆನ್‌ಲೈನ್‌ ರೇಟಿಂಗ್‌ ಹಾಗೂ ಅಭಿಪ್ರಾಯಗಳು ಇವೆಲ್ಲವನ್ನೂ ಸಂಗ್ರಹಿಸಿ.ಸಾಧ್ಯವಾದರೆ ಈಗಾಗಲೇ ತರಬೇತಿ ಪಡೆಯುತ್ತಿರುವವರನ್ನು ಸಂಪರ್ಕಿಸಿ. ಇಷ್ಟು ಪ್ರಯತ್ನಪಟ್ಟಲ್ಲಿ ನಿಮಗೆ ಸೂಕ್ತವೆನಿಸುವ ಒಂದು ಆನ್‌ಲೈನ್‌ ಕೋಚಿಂಗ್ ಸಂಸ್ಥೆಯನ್ನು ಸುಲಭವಾಗಿ ಹುಡುಕಿಕೊಳ್ಳಬಹುದು.

ADVERTISEMENT

ಕೇವಲ ಉಚಿತ ಕೋಚಿಂಗ್ ಎಂದು ಎಲ್ಲ ವಿಡಿಯೊಗಳನ್ನು ಅನುಸರಿಸದಿರಿ. ಇದರಿಂದ ನಿಮ್ಮ ಅಮೂಲ್ಯ ಸಮಯ ಕಳೆದು ಹೋಗುವುದಲ್ಲದೆ ಅಣಕು ಪರೀಕ್ಷೆಯ ತಯಾರಿಗೆ ಸಮಯವೂ ಸಾಕಾಗುವುದಿಲ್ಲ.

ಶುಲ್ಕ ಸಹಿತ ಆನ್‌ಲೈನ್‌ ತರಬೇತಿ ಸಂಸ್ಥೆಗಳು

ಸದ್ಯ ನಿಮಗೆ ಇಂಟರ್‌ನೆಟ್‌ ಡೇಟಾ ಕಡಿಮೆ ಬೆಲೆಯಲ್ಲಿ ದೊರೆಯುತ್ತಿರುವುದರಿಂದ ಆನ್‌ಲೈನ್‌ ತರಗತಿಗೆ ಸುಲಭವಾಗಿ ಸೇರಿಕೊಳ್ಳಬಹುದು. ಇದರಲ್ಲಿ ಕೆಲವು ಸಂಸ್ಥೆಗಳು ಆನ್‌ಲೈನ್‌ನಲ್ಲಿ ಶುಲ್ಕ ಸಹಿತ ಕೋರ್ಸ್‌ಗಳನ್ನು ಸಹ ಪ್ರಾರಂಭಿಸಿವೆ.

ಸ್ಪರ್ಧಾತ್ಮಕ ಪರೀಕ್ಷಾ ತಯಾರಿಯಲ್ಲಿ ಆಫ್‌ಲೈನ್‌ ಕೋಚಿಂಗ್ ವೆಚ್ಚಕ್ಕೆ ಹೋಲಿಸಿದರೆ ಇದು ಕಡಿಮೆಯೇ ಎನ್ನಬಹುದು. ಇದಲ್ಲದೇ ಹಲವಾರು ಪ್ರತಿಷ್ಠಿತ ಸ್ಟಡಿ ಚಾನೆಲ್‌ಗಳ ಪೈಪೋಟಿಯಿಂದ ಈ ವೆಚ್ಚ ಮುಂಬರುವ ದಿನಗಳಲ್ಲಿ ಇನ್ನೂ ಕಡಿಮೆಯಾಗಲಿದೆ. ಆನ್‌ಲೈನ್‌ ಕೋಚಿಂಗ್‌ನಲ್ಲಿ ಸಮಯವೂ ಉಳಿತಾಯವಾಗುತ್ತದೆ.

ಇನ್ನು ಆನ್‌ಲೈನ್‌ ತರಬೇತಿ ಯಾಕೆ ಸೂಕ್ತ ಎನ್ನುವುದಕ್ಕೆ ಇನ್ನೊಂದಿಷ್ಟು ಕಾರಣಗಳನ್ನು ನೀಡಬಹುದು.

ಅಧ್ಯಯನ ಸಾಮಗ್ರಿ ನವೀಕರಣ

ಆಫ್‌ಲೈನ್‌ ಅಧ್ಯಯನ ಸಾಮಗ್ರಿ ನವೀಕರಣಕ್ಕೆ ಸಮಯ ಹಿಡಿಯುತ್ತದೆ. ದಿನನಿತ್ಯ ಅವುಗಳನ್ನು ನವೀಕರಿಸಲು ಸಾಧ್ಯವಿಲ್ಲ. ಆಫ್‌ಲೈನ್‌ಕೋಚಿಂಗ್‌ನಲ್ಲಿ ಶಿಕ್ಷಕರು ಎಲ್ಲ ರೀತಿಯ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಒಂದು ಸಾಮಾನ್ಯ ವೇಗದಲ್ಲಿ ಬೋಧನೆ ಮಾಡುತ್ತಾರೆ. ಇಲ್ಲಿ ಎಲ್ಲ ರೀತಿಯ ಕಲಿಕಾ ವರ್ಗವಿರುತ್ತದೆ (ಉದಾಹರಣೆಗೆ ನಿಧಾನ, ಸರಾಸರಿ, ವೇಗ ಇತ್ಯಾದಿ). ನೀವು ನಿಧಾನ ರೀತಿಯ ಕಲಿಕಾ ವರ್ಗಕ್ಕೆ ಸೇರಿದವರಾಗಿದ್ದರೆ ವಿವರಿಸಿದ ಕೆಲವು ವಿಷಯಗಳು ಅರ್ಥವಾಗದೇ ಹೋಗಬಹುದು. ಹಾಗೆಯೇ ವೇಗವಾಗಿ ಕಲಿಯುವ ವರ್ಗಕ್ಕೆ ಸೇರಿದವರಾಗಿದ್ದಲ್ಲಿ ಆ ದಿನದ ಪಾಠ ನಿಮಗೆ ಅನವಶ್ಯಕ ಎನಿಸಬಹುದು. ಆದರೂ ನೀವು ಪಾಠ ತಿಳಿದುಕೊಳ್ಳಲೇಬೇಕು. ಇಲ್ಲಿ ನೀವು ಕಳೆದ ನಾಲ್ಕು ಗಂಟೆಯ ಸಮಯ ವ್ಯರ್ಥ ಎನಿಸಬಹುದು

ಆದರೆ ಆನ್‌ಲೈನ್‌ ಅಧ್ಯಯನದಲ್ಲಿ ನೀವು ಯಾವುದೇ ಕಲಿಕಾ ವರ್ಗಕ್ಕೆ ಸೇರಿರಲಿ, ಈ ಸಮಸ್ಯೆ ಬಾರದು. ನಿಮಗೆ ವಿಷಯ ಈಗಾಗಲೇ ಅರ್ಥವಾಗಿದ್ದಲ್ಲಿ ಅದನ್ನು ಅಲ್ಲಿಗೇ ನಿಲ್ಲಿಸಿ ಮುಂದೆ ಹೋಗಿ ಸಮಯದ ಉಳಿತಾಯ ಮಾಡಬಹುದು. ಒಂದು ವೇಳೆ ಬೇಸಿಕ್ ಅರ್ಥವಾಗದಿದ್ದಲ್ಲಿ ಸಂಬಂಧಿಸಿದ ವಿಡಿಯೊಗಳನ್ನು ನೋಡಬಹುದು ಹಾಗೂ ನಮಗೆ ಅರ್ಥವಾಗುವವರೆಗೂ ಎಷ್ಟು ಸಲವಾದರೂ ವೀಕ್ಷಿಸಬಹುದು. ಆದರೆ ಆಫ್‌ಲೈನ್‌ ಸ್ಟಡಿಯಲ್ಲಿ ಈ ಅವಕಾಶ ಇರುವುದಿಲ್ಲ. ಇನ್ನು ಪದವಿಯ ಅಂತಿಮ ವರ್ಷದಲ್ಲಿರುವ ವಿದ್ಯಾರ್ಥಿಗಳು, ಖಾಸಗಿ ಕೆಲಸ ನಿರ್ವಹಿಸುತ್ತಿರುವ ಅಭ್ಯರ್ಥಿಗಳು ಹಾಗೂ ಖಾಸಗಿ ವ್ಯವಹಾರ ನೋಡಿಕೊಂಡು ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಕೋಚಿಂಗ್ ಕ್ಲಾಸ್ ತೆಗೆದುಕೊಳ್ಳಲು ಸಮಯ ಸಾಲದು. ಅಂತಹ ವಿದ್ಯಾರ್ಥಿಗಳು ಸಹಜವಾಗಿಯೇ ಆನ್‌ಲೈನ್‌ ಕೋಚಿಂಗ್ ನ ಮೊರೆ ಹೋಗಬಹುದು.

ಟಿಪ್ಪಣಿ ಮಹತ್ವ

ಟಿಪ್ಪಣಿ (ನೋಟ್ಸ್) ವಿಷಯಕ್ಕೆ ಬಂದರೆ ಆನ್‌ಲೈನ್‌ನಿಂದ ನೀವು ತಯಾರಿಸಿದ ಟಿಪ್ಪಣಿ ಸಹಕಾರಿಯಾಗುವುದು. ಇದರಲ್ಲಿ ಪ್ರತಿಯೊಂದು ಅಕ್ಷರವನ್ನೂ ಸಹ ನೀವು ಅರ್ಥೈಸಿಕೊಂಡು ಬರೆದಿದ್ದರಿಂದ ನೆನಪಿನಲ್ಲಿಟ್ಟುಕೊಳ್ಳಲು ಮತ್ತು ಪುನರಾವರ್ತನೆ ಮಾಡಲು ಬಹಳ ಸುಲಭ.

ಆನ್‌ಲೈನ್‌ನಲ್ಲಿ ಸದ್ಯ ನಿಮಗೆ ಸಾಕಷ್ಟು ಅಧ್ಯಯನ ಸಾಮಗ್ರಿಗಳು ದೊರಕುತ್ತಿವೆ. ಇದರ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.ಆನ್‌ಲೈನ್‌ ಅಧ್ಯಯನದಲ್ಲಿ ಪ್ರತಿನಿತ್ಯ ಸಾಮಾನ್ಯ ಜ್ಞಾನ ಹಾಗೂ ಪ್ರಸಕ್ತ ವಿದ್ಯಮಾನ (GK/ CA) ಪ್ರಶ್ನೆಗಳು ಚಿತ್ರ ಸಮೇತ ವಿವರಗಳೊಂದಿಗೆ ದೊರೆಯುವುದರಿಂದ ನೆನಪಿನಲ್ಲಿ ಇಡುವುದು ಸುಲಭ. ಹೀಗಾಗಿ ಪ್ರತಿನಿತ್ಯ ಈ ಪ್ರಶ್ನೆಗಳನ್ನು ಸವಿವರವಾಗಿ ಓದಿಕೊಂಡು ಟಿಪ್ಪಣಿ ಮಾಡಿಟ್ಟುಕೊಳ್ಳಿ ಹಾಗೂ ಪರೀಕ್ಷೆಯ ಕೊನೆಯ ದಿನಗಳಲ್ಲಿ ಪುನರ್‌ಮನನ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.