ADVERTISEMENT

ಸ್ಪರ್ಧಾ ವಾಣಿ‌ | ಹೇಗಿದೆ ಹೊಸ ಪಂಬನ್‌ ಸೇತುವೆ?

ಸುಕೃತ ಎಸ್.
Published 10 ಏಪ್ರಿಲ್ 2025, 0:44 IST
Last Updated 10 ಏಪ್ರಿಲ್ 2025, 0:44 IST
<div class="paragraphs"><p>ಪಂಬನ್‌ ಸೇತುವೆ</p></div>

ಪಂಬನ್‌ ಸೇತುವೆ

   

(ಪಿಟಿಐ ಚಿತ್ರ)

ತಮಿಳುನಾಡಿನ ರಾಮೇಶ್ವರ ದ್ವೀಪವನ್ನು ರೈಲು ಮೂಲಕ ಸಂಪರ್ಕಿಸುವ ಏಷ್ಯಾದಲ್ಲಿಯೇ ಮೊದಲ ‘ಲಿಫ್ಟ್‌ ಸೇತುವೆ’ಯಾದ ನೂತನ ಪಂಬನ್‌ ಸೇತುವೆಯು ಇತ್ತೀಚೆಗೆ ಲೋಕಾರ್ಪಣೆಗೊಂಡಿದೆ. ಈ ಸೇತುವೆಯ ಎಂಜಿನಿಯರಿಂಗ್‌ ಚಾತುರ್ಯವು ಅಮೆರಿಕದ ಗೋಲ್ಡನ್‌ ಗೇಟ್‌ ಸೇತುವೆ, ಲಂಡನ್‌ನ ಟವರ್‌ ಬ್ರಿಡ್ಜ್‌ಗೆ ಸಮನಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ. ಬ್ರಿಟಿಷರು 1914ರಲ್ಲಿ ನಿರ್ಮಿಸಿದ್ದ ರೈಲು ಸೇತುವೆಯನ್ನು ಬದಲಿಗೆ ಈ ನೂತನ ಸೇತುವೆಯನ್ನು ನಿರ್ಮಿಸಲಾಗಿದೆ. ಭಾರತೀಯ ರೈಲ್ವೆಯ ಅಧೀನ ಸಂಸ್ಥೆಯಾದ ‘ರೈಲ್‌ ವಿಕಾಸ್‌ ನಿಗಮ’ ನಿರ್ಮಿಸಿರುವ ಈ ಸೇತುವೆ ಕುರಿತಾದ ಕಿರು ಮಾಹಿತಿ ಇಲ್ಲಿದೆ
ಈ ಸೇತುವೆಯ ನಿರ್ಮಾಣವು 2020ರಲ್ಲಿ ಆರಂಭಗೊಂಡಿತು. ಆದರೆ, ಇದಕ್ಕೂ ಮೊದಲು ಅಂದರೆ, 2017ರಿಂದ 2019ರವರೆಗೆ ರೈಲ್ವೆ ಇಲಾಖೆಯ ತಜ್ಞರ ತಂಡವು ಅಮೆರಿಕ, ಐರೋಪ್ಯ ಒಕ್ಕೂಟದ ವಿವಿಧ ದೇಶಗಳನ್ನು ಸುತ್ತಾಡಿ ಬಂದಿದೆ. ಆ ದೇಶಗಳಲ್ಲಿ ಈಗಾಗಲೇ ನಿರ್ಮಾಣಗೊಂಡಿರುವ ‘ಮೂವೆಬಲ್‌’ ಸೇತುವೆಗಳ ಅಧ್ಯಯನ ನಡೆಸಿವೆ. ಆ ಮೂಲಕ ನೂತನ ಪಂಬನ್‌ ಸೇತುವೆಯ ವಿನ್ಯಾಸ, ಸ್ವರೂಪವನ್ನು ನಿರ್ಧರಿಸಲಾಯಿತು
ಎಂ.ಪಿ. ಸಿಂಗ್‌, ನಿರ್ದೇಶಕ, ರೈಲ್‌ ವಿಕಾಸ್‌ ನಿಗಮ

ಕಳಪೆ ಗುಣಮಟ್ಟದತ್ತ ಬೊಟ್ಟು ಮಾಡಿದ್ದ ಸುರಕ್ಷಾ ಆಯುಕ್ತಾಲಯ

2024ರ ನವೆಂಬರ್‌ನಲ್ಲಿ ದಕ್ಷಿಣ ರೈಲ್ವೆ ಇಲಾಖೆಯ ಸುರಕ್ಷತಾ ಆಯುಕ್ತ ಎ.ಎಂ. ಚೌಧರಿ ಅವರು ತಮ್ಮ ಪರೀಕ್ಷಾರ್ಥ ಸಂಚಾರ ಹಾಗೂ ಸೇತುವೆಯನ್ನು ಪರಿಶೀಲಿಸಿದ ಬಳಿಕ ವರದಿಯೊಂದನ್ನು ನೀಡಿದ್ದರು. ಈ ವರದಿಯಲ್ಲಿ ಸೇತುವೆ ವಿನ್ಯಾಸದಲ್ಲಿನ ಹಲವು ದೋಷಗಳ ಬಗ್ಗೆ ಎಚ್ಚರಿಕೆ ನೀಡಿದ್ದರು. ‘ವರದಿಯಲ್ಲಿ ಉಲ್ಲೇಖಿಸಲಾದ ಎಲ್ಲ ವಿಚಾರಗಳ ಬಗ್ಗೆ ಗಮನಹರಿಸಿ ಎಲ್ಲವನ್ನೂ ಸರಿಪಡಿಸಲಾಗಿದೆ’ ಎಂದು ರೈಲ್ವೆ ಇಲಾಖೆ ಹೇಳಿದೆ. ಈ ವರದಿಯ ಕುರಿತು ಪರಿಶೀಲನೆ ನಡೆಸಲು, ನವೆಂಬರ್‌ನಲ್ಲಿಯೇ ತಜ್ಞರ ಸಮಿತಿಯನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರು ರೂಪಿಸಿದ್ದರು.

ADVERTISEMENT

ಆಯುಕ್ತರ ವರದಿಯಲ್ಲೇನಿತ್ತು?

  • ರೈಲ್ವೆ ಇಲಾಖೆಯ ಅಡಿಯಲ್ಲಿ ‘ರಿಸರ್ಚ್‌ ಡಿಸೈನ್‌ ಆ್ಯಂಡ್‌ ಸ್ಟ್ಯಾಂಡರ್ಡ್‌ ಆರ್ಗನೈಸೇಷನ್‌’ ಎಂಬ ಸಂಸ್ಥೆ ಕಾರ್ಯನಿರ್ವಹಿಸುತ್ತದೆ. ರೈಲ್ವೆ ಇಲಾಖೆಗೆ ಸಂಬಂಧಿಸಿದ ಎಲ್ಲ ನಿರ್ಮಾಣ, ನಿರ್ವಹಣೆ, ಕಾರ್ಯಾಚರಣೆಯನ್ನು ಇದೇ ಸಂಸ್ಥೆಯೇ ನೋಡಿಕೊಳ್ಳುತ್ತದೆ. ಆದರೆ, ಈ ಸೇತುವೆ ನಿರ್ಮಾಣ ಕಾರ್ಯವು ಈ ಸಂಸ್ಥೆಯ ವಿನ್ಯಾಸ ಮಾರ್ಗಸೂಚಿಗೆ ತಕ್ಕಂತೆ ಇರಲಿಲ್ಲ

  • ಸೇತುವೆಯ ವೆಲ್ಡಿಂಗ್‌ ಕಾಮಗಾರಿಯಲ್ಲಿ ಮಾರ್ಗಸೂಚಿಗಳನ್ನು ಪಾಲಿಸಲಾಗಿಲ್ಲ. ಇದರಿಂದ ಹಳಿಗಳ ಒತ್ತಡ ತಡೆದುಕೊಳ್ಳುವ ಸಾಮರ್ಥ್ಯವು ಶೇ 36ರಷ್ಟು ಕಡಿಮೆಯಾಗಿದೆ

  • ಕ್ಷಿಪ್ರವಾಗಿ ತುಕ್ಕು ಹಿಡಿಯುವ ವಾತಾವರಣ ಇರುವ ಜಾಗಗಳ ಪೈಕಿ ರಾಮೇಶ್ವರ ಬಳಿಯ ಸಮುದ್ರವು ಜಗತ್ತಿನಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಕಾಮಗಾರಿ ಪೂರ್ಣಗೊಂಡ ಒಂದೇ ತಿಂಗಳಲ್ಲಿ ಸೇತುವೆಯ ಕೆಲ ಭಾಗಗಳಿಗೆ ತುಕ್ಕು ಹಿಡಿದಿದೆ. ಆದ್ದರಿಂದ ಈ ಬಗ್ಗೆ ಹೆಚ್ಚು ಗಮನಹರಿಸಬೇಕು

‘ಪರಿಶೀಲನೆ ನಡೆಸಿದೆವು’

ಆಯಕ್ತರು ತಮ್ಮ ವರದಿಯಲ್ಲಿ ಹೇಳಿದ ಎಲ್ಲ ವಿಚಾರಗಳ ಬಗ್ಗೆ ನಾವು ಪರಿಶೀಲನೆ ನಡೆಸಿದ್ದೇವೆ. ಐಐಟಿ ಮದ್ರಾಸ್‌ ಹಾಗೂ ಐಐಟಿ ಬಾಂಬೆಯ ತಜ್ಞರು ಕೂಡ ನಮ್ಮೊಂದಿಗಿದ್ದರು. ವೆಲ್ಡಿಂಗ್‌ ಬಗ್ಗೆ ಹೆಚ್ಚು ಗಮನ ಹರಿಸಿದೆವು. ಬಿಎಚ್‌ಇಎಲ್‌ ಅಡಿಯಲ್ಲಿ ಬರುವ ತ್ರಿಚಿಯಲ್ಲಿರುವ ‘ವೆಲ್ಡಿಂಗ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌’ ಅವರಿಂದ ಕೂಡ ವೆಲ್ಡಿಂಗ್‌ ಕುರಿತು ಪರಿಶೀಲನೆ ನಡೆಸಲಾಯಿತು.

ಆಧಾರ: ದಕ್ಷಿಣ ರೈಲ್ವೆ ‘ಎಕ್ಸ್‌’ ಖಾತೆ, ಪಿಟಿಐ, 

ಚಿತ್ರಗಳು: ದಕ್ಷಿಣ ರೈಲ್ವೆ ‘ಎಕ್ಸ್‌’ ಖಾತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.