ADVERTISEMENT

ಸಮಾಧಾನ ಅಂಕಣ | ತಾರತಮ್ಯದ ಆಕ್ಷೇ‍ಪ: ಇದೆ ಉತ್ತರ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 23:30 IST
Last Updated 26 ಅಕ್ಟೋಬರ್ 2025, 23:30 IST
   
ಮಗಳು ಚೆನ್ನಾಗಿ ಓದುತ್ತಾಳೆ. ಮಗ ಸರಿಯಾಗಿ ಓದುವುದಿಲ್ಲ. ಆದರೆ ಮಗಳಿಗೆ ನಾವು ತಾರತಮ್ಯ ಮಾಡುತ್ತಿದ್ದೇವೆ ಎಂಬ ಭಾವನೆ ಇದೆ. ಅಣ್ಣನಿಗೊಂದು ನ್ಯಾಯ, ನನಗೊಂದು ರೀತಿಯ ನ್ಯಾಯ ಎಂದು ಸದಾ ವಾದಿಸುತ್ತಾಳೆ. ಯಾಕೆ ಹೀಗೆ ಹೋಲಿಕೆ ಮಾಡಿಕೊಂಡು ಮನಸ್ಸು ಹಾಳು ಮಾಡಿಕೊಳ್ಳುತ್ತಾಳೆ ಎಂಬುದೇ ತಿಳಿಯುವುದಿಲ್ಲ. ಅವಳನ್ನು ಇಂತಹ ಭಾವನೆಯಿಂದ ಹೊರತರುವುದು ಹೇಗೆ?– ರಾಜೇಶ್‌ ಗಟ್ಟಿ, ಮಂಗಳೂರು


ಅಪ್ಪ– ಅಮ್ಮ ತನ್ನ ಅಣ್ಣನನ್ನು ಹೆಚ್ಚು ಪ್ರೀತಿಸುತ್ತಾರೆ, ಅವನಿಗೆ ಹೆಚ್ಚು ಮಹತ್ವ ಕೊಡುತ್ತಾರೆ ಎಂದು ನಿಮ್ಮ ಮಗಳಿಗೆ ಅನ್ನಿಸಿರುವುದರಲ್ಲಿ ವಿಶೇಷವೇನಿಲ್ಲ. ಇದು ಮಕ್ಕಳಿರುವ ಬಹುತೇಕ ಸಂಸಾರಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆ. ತನ್ನನ್ನು ಇತರರೊಂದಿಗೆ ಹೋಲಿಸಿಕೊಂಡು ಹಿಗ್ಗುವುದು ಅಥವಾ ಕುಗ್ಗುವುದು ಮನುಷ್ಯರ ಸಹಜ ಸ್ವಭಾವ. ಇದಕ್ಕೆ ನೀವು ಚಿಂತಿತರಾಗಬೇಕಿಲ್ಲ.

ಪಾಲಕರು ಕೂಡ ತಮ್ಮ ಮಕ್ಕಳ ಅರ್ಹತೆ, ವಿಶೇಷ ಸ್ವಭಾವ ಹಾಗೂ ವ್ಯಕ್ತಿತ್ವದ ಕಾರಣಕ್ಕೆ ಅವರೊಂದಿಗೆ ಭಿನ್ನವಾಗಿ ವರ್ತಿಸುವುದು ಅಸಹಜವೇನಲ್ಲ. ಮಗ ದೊಡ್ಡವನು. ಅವನಿಗೆ ಜವಾಬ್ದಾರಿಯನ್ನು ಕಲಿಸುವ ಸಲುವಾಗಿ ನೀವು ಅವನೊಂದಿಗೆ ಬೇರೆ ರೀತಿಯಲ್ಲಿ ವರ್ತಿಸಿರಬಹುದು. ಅವನ ಆಸಕ್ತಿಗೆ ಅನುಸಾರವಾಗಿ ಪ್ರೋತ್ಸಾಹಿಸಿರಬಹುದು. ಮಗಳಿಗೆ ಕೆಲವು ಕಠಿಣ ನಿಯಮಗಳನ್ನು ವಿಧಿಸಿರಬಹುದು. ಅದನ್ನು ಅವಳು ಬೇರೆಯದೇ ರೀತಿಯಲ್ಲಿ ಅರ್ಥ ಮಾಡಿಕೊಂಡಿರಬಹುದು. ಅವನು ಚೆನ್ನಾಗಿ ಓದದಿದ್ದರೂ ಮನೆಯಲ್ಲಿ ಅವನಿಗೆ ತನಗಿಂತ ಹೆಚ್ಚು ಗೌರವ ಸಿಗುತ್ತದೆ ಎಂದು ಅನ್ನಿಸಿರಬಹುದು. ಅವಳಿಗೆ ತಾನು ಹೆಣ್ಣುಮಗು, ಹಾಗಾಗಿ ಪಾಲಕರು ತನಗೆ ಕಡಿಮೆ ಪ್ರೀತಿ ತೋರಿಸುತ್ತಾರೆ ಎಂದುಕೊಂಡಿರಬಹುದು. ಇಂಥದ್ದಕ್ಕೆಲ್ಲ, ಆಕೆ ನೋಡುವ ಸಿನಿಮಾಗಳು, ಸಾಮಾಜಿಕ ಮಾಧ್ಯಮದ ಪೋಸ್ಟ್‌ಗಳು, ಹಿರಿಯರು ಹೇಳಿದ ಮಾತುಗಳು ಅಥವಾ ಕೆಲವು ಪ್ರಕರಣಗಳು ಕಾರಣವಾಗಿರಬಹುದು. ಹಾಗಾಗಿ, ಪಾಲಕರಿಂದ ಅವಳು ಬೇರೆಯದನ್ನೇ ನಿರೀಕ್ಷಿಸುತ್ತಿರಬಹುದು. ಅದನ್ನು ಸ್ಪಷ್ಟವಾಗಿ ಹೆಳಲು ಅವಳಿಂದ ಸಾಧ್ಯ
ವಾಗಿಲ್ಲದೇ ಇರಬಹುದು.

ಆದರೆ ಇಂಥ ಸಮಸ್ಯೆಯ ಅರಿವಾಗುತ್ತಿದ್ದ ಹಾಗೆಯೇ ನೀವು ಜಾಗೃತರಾಗಬೇಕು. ಅವಳ ಅನಿಸಿಕೆಯನ್ನು ತಕ್ಷಣಕ್ಕೆ ಖಂಡಿಸಬಾರದು. ಸಮಾಧಾನದಿಂದ, ಶಾಂತವಾಗಿ, ಪ್ರೀತಿಯಿಂದ ಅವಳೊಂದಿಗೆ ಮಾತನಾಡಬೇಕು. ನೀವು ಯಾವ ಸಂದರ್ಭದಲ್ಲಿ ತಾರತಮ್ಯ ಮಾಡಿದ್ದೀರಿ ಎನ್ನುವುದನ್ನು ತಿಳಿಸುವಂತೆ ಅವಳನ್ನು ಕೇಳಿ. ಆ ಪ್ರಕರಣಗಳಲ್ಲಿ ನಿಮ್ಮ ವರ್ತನೆಯಲ್ಲಿದ್ದ ದೋಷವನ್ನು ಒಪ್ಪಿಕೊಳ್ಳಿ ಮತ್ತು ಅದು ಪುನರಾವರ್ತನೆಯಾಗದಂತೆ ಇರುವುದಾಗಿ ಅವಳಿಗೆ ಹೇಳಿ. ಅವಳ ನಿರೀಕ್ಷೆಯನ್ನು ಗೌರವಿಸಿ. ವಯಸ್ಸಿಗೆ ತಕ್ಕಂತೆ ಅವಳಿಗೆ ಕೊಡಬೇಕಾದಷ್ಟು ಪ್ರಾಮುಖ್ಯತೆ, ಪ್ರೀತಿ, ಕಾಳಜಿ ಹಾಗೂ ಸ್ವಾತಂತ್ರ್ಯವನ್ನು ಕೊಡುತ್ತಿರುವ ಬಗ್ಗೆ ಮುಕ್ತವಾಗಿ ತಿಳಿಸಿ ಹೇಳಿ.

ADVERTISEMENT

ಮಗನಿಗೂ ಮಗಳಿಗೂ ಇರುವ ಸಹಜವಾದ ವ್ಯತ್ಯಾಸವನ್ನು ಸಮಯಾವಕಾಶ ಆದಾಗ ವಿವರಿಸಿ ಹೇಳಿ. ಮನೆಯಲ್ಲಿ ಇಬ್ಬರೂ ಮಕ್ಕಳ ಅಗತ್ಯವನ್ನು ಹಾಗೂ ಅವರ ಏಳಿಗೆಗಾಗಿ ನೀವು ಶ್ರಮಿಸುತ್ತಿರುವುದನ್ನು ವಿವರಿಸಿ. ಇಬ್ಬರನ್ನೂ ನೀವು ಸಮಾನವಾಗಿ ಪ್ರೀತಿಸುವುದನ್ನು, ಎಲ್ಲರೂ ಒಟ್ಟಾಗಿ, ಪರಸ್ಪರ ಪ್ರೀತಿ, ವಿಶ್ವಾಸದಿಂದ ಇರಬೇಕಾದ ಅಗತ್ಯವನ್ನು ತಿಳಿಸಿ.  ಮನೆಯಲ್ಲಿರುವ ಎಲ್ಲರೂ ಸಾಧ್ಯವಾದಷ್ಟೂ ಸಹಜವಾಗಿಯೂ ಮುಕ್ತವಾಗಿಯೂ ಇರಿ. ದಿನಕ್ಕೆ ಒಂದು ಸಲವಾದರೂ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡಿ. ತಿಂಗಳಿಗೆ ಒಮ್ಮೆಯಾದರೂ ಎಲ್ಲರೂ ಒಟ್ಟಿಗೆ ಅರ್ಧದಿನದ ಮಟ್ಟಿಗಾದರೂ ಸರಿ ಹೊರಗೆಲ್ಲಾದರೂ ಹೋಗಿ ಬನ್ನಿ.‌

ಪಾಲಕರು ಬಹಳಷ್ಟು ಬಾರಿ ಮಕ್ಕಳಿಂದಲೂ ಕಲಿಯುವುದು ಇರುತ್ತದೆ. ಅಂತಹ ಅವಕಾಶಗಳ ಬಗ್ಗೆ ನೀವು ಉತ್ಸುಕರಾಗಿರಬೇಕು. ಎಲ್ಲ ಸಂದರ್ಭಗಳಲ್ಲಿಯೂ ಪಾಲಕರು ಹೇಳಿದ್ದೇ ಸರಿ, ಮಕ್ಕಳು ಹೇಳಿದ್ದು ತಪ್ಪು ಎನ್ನುವುದು ಸರಿಯಲ್ಲ. ಇವಿಷ್ಟನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಮಗಳನ್ನು ಹೆಚ್ಚು ಕಾಳಜಿಯಿಂದ, ಆಸ್ಥೆಯಿಂದ ಪ್ರೀತಿಸಿ, ಪ್ರೋತ್ಸಾಹಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.