ADVERTISEMENT

ಸಮಾಧಾನ ಅಂಕಣ: ಹರೆಯದ ಮಗನ ತಿದ್ದುವುದು ಹೇಗೆ?

ಡಿ.ಎಂ.ಹೆಗಡೆ
Published 5 ಅಕ್ಟೋಬರ್ 2025, 23:30 IST
Last Updated 5 ಅಕ್ಟೋಬರ್ 2025, 23:30 IST
   

ನಮಗೆ ಇಬ್ಬರು ಮಕ್ಕಳು. ಮಗ ಎರಡನೇ ಪಿಯುಸಿ ಮತ್ತು ಮಗಳು ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದಾರೆ. ಮಗ ಓದಿನಲ್ಲಿ ಪರವಾಗಿಲ್ಲ. ಆದರೆ ವಿಪರೀತ ಹುಡುಗಾಟಿಕೆಯ ಸ್ವಭಾವ. ಯಾವಾಗಲೂ ಏನಾದರೂ ಕೀಟಲೆ ಮಾಡುತ್ತಾ ಇರುತ್ತಾನೆ. ಇತರರ ಕಾಲೆಳೆಯುವುದೆಂದರೆ ಅವನಿಗೆ ಏನೋ ಮೋಜು. ಎಷ್ಟೇ ಬುದ್ಧಿ ಹೇಳಿದರೂ ಬೈದರೂ ಸರಿಯಾಗುತ್ತಿಲ್ಲ. ತಂಗಿಗೂ ವಿಪರೀತ ಕಿಚಾಯಿಸುತ್ತಾನೆ. ಕಾಲೇಜಿನಿಂದ ದೂರುಗಳು ಬರುತ್ತಿವೆ. ಮಗನಿಗೆ ಬೈದರೆ, ಹೊಡೆದರೆ ಮೈಮೇಲೇರಿ ಬರುತ್ತಾನೆ. ಗೆಳೆಯರೊಟ್ಟಿಗೆ ಊರೆಲ್ಲ ಸುತ್ತುತ್ತಾನೆ. ಸರಿಯಾದ ಸಮಯಕ್ಕೆ ಮನೆಗೆ ಬರುವುದಿಲ್ಲ. ಪರಿಹಾರ ಹೇಗೆ?

ಗೌತಮಿ ಗಿರೀಶ್‌ ಭಂಡಾರಿ, ಬೆಂಗಳೂರು

ಉ: ನಮ್ಮ ಮಕ್ಕಳು ನಾವು ಹೇಳಿದಂತೆ ಕೇಳಬೇಕು ಎನ್ನುವ ಆಸೆಯು ಪಾಲಕರಲ್ಲಿ ಇರುವುದು ತೀರಾ ಸಹಜ. ಮಕ್ಕಳ ಒಳ್ಳೆಯದಕ್ಕೇ ತಾನೆ ನಾವು ಹೇಳುವುದು ಎನ್ನುವ ಅವರ ವಾದವೂ ಸರಿಯೇ. ಆದರೆ, ಪಾಲಕರ ಮಾತನ್ನು ಕೇಳುವ ವ್ಯವಧಾನ ಮಕ್ಕಳಿಗೆ ಇರುವುದಿಲ್ಲ; ಮಕ್ಕಳ ಮನಸ್ಸಿಗೆ ನಾಟುವಂತೆ ಹೇಳಬೇಕಾದ ಸಮಾಧಾನ ಪಾಲಕರಿಗೆ ಇರುವುದಿಲ್ಲ.

ADVERTISEMENT

ಹದಿಹರೆಯದ ಮಗ ಹೀಗೆ ಆಡುತ್ತಿದ್ದರೆ ಪಾಲಕರಿಗೆ ಚಿಂತೆಯಾಗುತ್ತದೆ. ಹಾಗೆಂದು, ನೀವು ಅವನನ್ನು ಹೀನಾಯವಾಗಿ ಬೈಯ್ಯಬಾರದು. ಇನ್ನು ಹೊಡೆಯುವುದಂತೂ ಮಾಡಲೇಬಾರದು. ಅದರಿಂದ ಅವಮಾನಿತನಾಗಿ, ಅವನು ಇನ್ನಷ್ಟು ರೊಚ್ಚಿಗೇಳ ಬಹುದು. ಅವನಿಗೆ ತಂದೆ, ತಾಯಿ ಬಗ್ಗೆ ಗೌರವವಾಗಲೀ ಭಯವಾಗಲೀ ಇದ್ದಂತಿಲ್ಲ. ಎಳವೆಯಿಂದಲೇ ಅವನಿಗೆ ಏನೋ ಕೊರತೆಯಾದಂತಿದೆ. ಅದರ ವಿರುದ್ಧ ಅವನು ಈಗ ಸಿಡಿದೆದ್ದ ಹಾಗಿದೆ. ಬಾಲ್ಯದಲ್ಲಿ ಅವನಿಗೆ ಪಾಲಕರಿಂದ ಅಥವಾ ಶಿಕ್ಷಕರಿಂದ ಹಿಂಸೆ, ಅವಮಾನ ಆಗಿರಬಹುದು. ಅವನ ಮನಸ್ಸು ಆ ನೋವನ್ನು ಮರೆತಿರಲಿಕ್ಕಿಲ್ಲ. ಅದಕ್ಕೆ ಪ್ರತೀಕಾರವಾಗಿ, ಅವನಿಗೇ ಗೊತ್ತಿಲ್ಲದ ಹಾಗೆ ಅವನು ಈಗ ಎಲ್ಲ ಕಟ್ಟಳೆಗಳಿಂದ ಮುಕ್ತನಾದಂತೆ ವ್ಯವಹರಿಸುತ್ತಿರಬಹುದು.

ಮಠದಲ್ಲಿ ಬೆಳೆದ ಗಿಳಿ ಹಾಗೂ ಕಟುಕನ ಮನೆಯಲ್ಲಿ ಬೆಳೆದ ಗಿಳಿಯ ಕತೆ ನಿಮಗೆ ಗೊತ್ತಿರಬಹುದು. ಮಕ್ಕಳೂ ಅಷ್ಟೆ. ತಮ್ಮ ಸುತ್ತಲಿನ ಪರಿಸರದಿಂದ ಕಲಿಯುತ್ತಾರೆ. ತಮ್ಮ ಬದುಕನ್ನು ರೂಪಿಸಿಕೊಳ್ಳುತ್ತಾರೆ. ಯಾವುದು ಸರಿ, ಯಾವುದು ತಪ್ಪು ಎನ್ನುವುದನ್ನು ನಿರ್ಧರಿಸುವ ಪಕ್ವತೆ ಅವರಿಗೆ ಇರುವುದಿಲ್ಲ. ಕೆಲವರಂತೂ ಯಾವಾಗಲೂ ದ್ವಂದ್ವ ಹಾಗೂ ಗೊಂದಲಗಳಿಂದ ಬಳಲುತ್ತಾರೆ.

ನೀವು ನಿಮ್ಮ ಮಗನಿಗೆ ಬೆಂಬಲವಾಗಿಯೇ ಇದ್ದುಕೊಂಡು ಅವನನ್ನು ಸರಿದಾರಿಗೆ ತರಲು ಪ್ರಯತ್ನಿಸಬೇಕು. ಅವನ ಗೆಳೆಯರ ಪಾಲಕರ ಸಹಾಯವನ್ನೂ ಪಡೆಯಬಹುದು. ಅವನ ಶಿಕ್ಷಕರನ್ನು ಸಂಪರ್ಕಿಸಿ ಸಲಹೆ ಪಡೆದುಕೊಳ್ಳಬಹುದು. ಪರೀಕ್ಷೆಯಲ್ಲಿ ಮಕ್ಕಳು ಕಡಿಮೆ ಅಂಕ ಗಳಿಸುತ್ತಾರೆ, ನಪಾಸಾಗುತ್ತಾರೆ ಅಥವಾ ಮಕ್ಕಳು ಮಾಡುವ ಕೆಲವು ತಪ್ಪುಗಳಿಂದ ತಮಗೆ ಅವಮಾನವಾಗುತ್ತದೆ ಎನ್ನುವ ಒತ್ತಡದಿಂದ ಪಾಲಕರು ಮೊದಲು ಹೊರಗೆ ಬರಬೇಕು.

ನಾವೂ ಮಕ್ಕಳಾಗಿದ್ದವರು. ಹೇಗೆ ಹೇಗೋ ಇದ್ದವರು. ಯಾವುದಕ್ಕೆ ಯಾವುದನ್ನೋ ಮಾಡಿದವರು. ಏನೇನೋ ಆಗಬೇಕಾಗಿದ್ದವರು.ಏನೋ ಆದವರು. ಈಗ ಇಲ್ಲಿಯವರೆಗೆ ಬಂದಿದ್ದೇವೆ, ಹೀಗೆ ಆಗಿದ್ದೇವೆ. ಇದನ್ನು ಮನಸ್ಸಿನಲ್ಲಿಟ್ಟು ನಮ್ಮ ಮಕ್ಕಳನ್ನು ಗಮನಿಸಬೇಕು. ಅವರ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು. ಅವರನ್ನು ದೋಷಿಯನ್ನಾಗಿ ಮಾಡಬಾರದು.

ನಿಮ್ಮ ಮಗನ ಮನಸ್ಸಿಗೆ ಸಜ್ಜನರ ಸಂಗದಿಂದ, ಒಳ್ಳೆಯ ವಿಚಾರಗಳಿಂದ ಬಹಳಷ್ಟು ಸಕಾರಾತ್ಮಕ ವಿಷಯಗಳು ಸಿಗುವಂತೆ ಹಾಗೂ ಅದರಿಂದಾಗುವ ಪ್ರಯೋಜನಗಳ ಬಗ್ಗೆ ಅವನಿಗೆ ಅರಿವಾಗುವಂತೆ ನೋಡಿಕೊಳ್ಳಿ. ಒಟ್ಟಿನಲ್ಲಿ ಇದು ಹೀಗೆಯೇ ಎಂದೇನೂ ಹೇಳಲಿಕ್ಕಾಗದು. ಪಾಲಕರು ತಮ್ಮ ಕರ್ತವ್ಯವನ್ನು ಮಾಡಬೇಕು. ಅದನ್ನು ಕಂಡು ಮಕ್ಕಳು ಶಿಸ್ತಿನಿಂದ ತಮ್ಮ ಕೆಲಸವನ್ನು ಮಾಡಬೇಕು. ಆಗ ಇಬ್ಬರಿಗೂ ಯಶಸ್ಸು ಸಿಗಲು ಸಾಧ್ಯ.

ನಿಮ್ಮ ಪ್ರಯತ್ನದ ನಂತರವೂ ಅವನ ವರ್ತನೆಯಲ್ಲಿ ಸಕಾರಾತ್ಮಕ ಬದಲಾವಣೆ ಕಾಣದಿದ್ದರೆ, ಸಮರ್ಥ ಮನೋ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.