ADVERTISEMENT

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ಎಂಬಿಎ ಪ್ರವೇಶಕ್ಕೆ ಪಿಜಿಸಿಇಟಿ ಕಡ್ಡಾಯವೇ ?

ಪ್ರದೀಪ್ ಕುಮಾರ್ ವಿ.
Published 9 ಜುಲೈ 2023, 11:29 IST
Last Updated 9 ಜುಲೈ 2023, 11:29 IST
   

1. ಎಂಬಿಎ ಮಾಡಲು ಪಿಜಿಸಿಇಟಿ ಕಡ್ಡಾಯವೇ? ಸರ್ಕಾರಿ ಕಾಲೇಜಿಗೆ ಪ್ರವೇಶ ಹೇಗೆ? ಈ ಕೋರ್ಸ್‌ನಲ್ಲಿ ಕಲಿಸುವ ವಿಷಯಗಳು ಯಾವುವು?

–ಅಭಿಷೇಕ್ ಪಿ.ಎನ್, ಹರಿಹರ

ಉದ್ಯಮಗಳ ಅಭಿವೃದ್ಧಿಗಾಗಿ, ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಉಪಯೋಗಿಸುವ ಯೋಜನೆಗಳನ್ನು ರಚಿಸಿ, ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುವುದೇ ಮ್ಯಾನೇಜ್‌ಮೆಂಟ್‌ನ ಮೂಲ ಉದ್ದೇಶ. ಈ ಜವಾಬ್ದಾರಿಗಳನ್ನು ನಿರ್ವಹಿಸಲು, ಸಮಗ್ರವಾದ ಜ್ಞಾನ ಮತ್ತು ಕೌಶಲಗಳನ್ನು ಎಂಬಿಎ ಕೋರ್ಸಿನಲ್ಲಿ ನೀಡಲಾಗುತ್ತದೆ. ಇದಲ್ಲದೆ, ಉದ್ಯಮಗಳಲ್ಲಿ ಪ್ರಾಯೋಗಿಕವಾದ ತರಬೇತಿಯನ್ನು ಪ್ರಾಜೆಕ್ಟ್‌ಗಳ ಮುಖಾಂತರ ನೀಡುವುದರಿಂದ ಕಲಿಕೆ ಪರಿಪೂರ್ಣವಾಗುತ್ತದೆ. ನಿಮ್ಮ ನೈಪುಣ್ಯ ಮತ್ತು ಚತುರತೆ ವರ್ಧಿಸಿ, ಯಾವುದೇ ಕೆಲಸವನ್ನು ನಿಭಾಯಿಸುವ ಆತ್ಮವಿಶ್ವಾಸ ಬೆಳೆಯುತ್ತದೆ. ಒಟ್ಟಾರೆ, ಎಂಬಿಎ ಕಲಿಕೆಯ ವೈವಿಧ್ಯಗಳಿಂದ ನಿಮ್ಮ ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಯಾಗುತ್ತದೆ.

ADVERTISEMENT

ಸರ್ಕಾರಿ ಮತ್ತು ಅನೇಕ ಖಾಸಗಿ ಕಾಲೇಜುಗಳಲ್ಲಿ ಎಂಬಿಎ ಪ್ರವೇಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಪಿಜಿಸಿಇಟಿ ಪರೀಕ್ಷೆಯಲ್ಲಿನ ಫಲಿತಾಂಶ ಮತ್ತು ಇನ್ನಿತರ ಪ್ರಕ್ರಿಯೆಗಳ ಮೂಲಕ ನಿರ್ಧರಿಸಲಾಗುತ್ತದೆ.

ಸಾಮಾನ್ಯವಾಗಿ, ಎಂಬಿಎ ಕೋರ್ಸಿನಲ್ಲಿ ಮ್ಯಾನೇಜ್‌ಮೆಂಟ್, ಮಾರ್ಕೆಟಿಂಗ್, ಅರ್ಥಶಾಸ್ತ್ರ, ಹಣಕಾಸು, ಮಾನವ ಸಂಪನ್ಮೂಲ, ಉತ್ಪಾದನೆ, ಲಾಜಿಸ್ಟಿಕ್ಸ್, ಸಾಂಸ್ಥಿಕ ನಡವಳಿಕೆ, ಕೈಗಾರಿಕ ಸಂಬಂಧಗಳು, ಸಂವಹನ, ಕಾನೂನು ಮುಂತಾದ ವಿಷಯಗಳನ್ನು ಕಲಿಸಲಾಗುತ್ತದೆ. ಇದರ ಜೊತೆಗೆ ವೃತ್ತಿಗೂ, ಜೀವನಕ್ಕೂ ಅಗತ್ಯವಾದ ಅನೇಕ ಸೂತ್ರಗಳ, ಮೌಲ್ಯಗಳ ಮನದಟ್ಟಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=WHZTFCmu3zg

2. ನಾನು ಬಿ.ಎಸ್ಸಿ ಓದುತ್ತಿದ್ದು ಎಂ.ಎಸ್ಸಿ (ಭ್ರೂಣಶಾಸ್ತ್ರ) ಅಧ್ಯಯನ ಮಾಡಲು ಇಚ್ಛಿಸಿದ್ದೇನೆ. ಈ ಕೋರ್ಸ್ ಮಾಡಲು ಉತ್ತಮ ಕಾಲೇಜುಗಳು, ಪ್ರವೇಶ ಪರೀಕ್ಷೆ ಮತ್ತು ಕೋರ್ಸ್ ನಂತರದ ವೃತ್ತಿಜೀವನದ ಬಗ್ಗೆ ತಿಳಿಸಿ.

–ಮೌಲ್ಯ, ಬೆಂಗಳೂರು.

ಭ್ರೂಣಶಾಸ್ತ್ರ ವಿಶಿಷ್ಟವಾದ ಮತ್ತು ಬೇಡಿಕೆಯಲ್ಲಿರುವ ಕ್ಷೇತ್ರ. ಎಂ.ಎಸ್ಸಿ (ಭ್ರೂಣಶಾಸ್ತ್ರ) ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯ, ಮೈಸೂರಿನ ಜೆಎಸ್‌ಎಸ್ ಮೆಡಿಕಲ್ ಕಾಲೇಜು, ಕೆಎಂಸಿ ಮಣಿಪಾಲ್ ಸೇರಿದಂತೆ ಕರ್ನಾಟಕದ ಕೆಲವೇ ಶಿಕ್ಷಣ ಸಂಸ್ಥೆಗಳಲ್ಲಿ ಲಭ್ಯವಿದೆ. ದೆಹಲಿಯ ಏಮ್ಸ್‌ (ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನಲ್ಲಿಯೂ ಈ ಕೋರ್ಸ್ ಲಭ್ಯವಿದೆ. ನೀವು ಸೇರಬಯಸುವ ಸಂಸ್ಥೆಯನ್ನು ಆಧರಿಸಿ, ಪ್ರವೇಶ ಪರೀಕ್ಷೆಯಿರುತ್ತದೆ.

ಈ ಕೋರ್ಸ್ ನಂತರ ಉತ್ತಮವಾದ ವೃತ್ತಿಯ ಅವಕಾಶಗಳಿವೆ. ಎಂಬ್ರಿಯಾಲಜಿಸ್ಟ್, ಫರ್ಟಿಲಿಟಿ ರಿಸರ್ಚರ್, ಜೆನಟಿಸಿಸ್ಟ್, ಜೆನಟಿಕ್ ಕೌನ್ಸೆಲರ್, ಲ್ಯಾಬ್ ಮ್ಯಾನೇಜರ್, ರಿಪ್ರೊಡಕ್ಟಿವ್ ಬಯಾಲಜಿಸ್ಟ್, ಎಂಬ್ರಿಯಾಲಜಿ ಉಪನ್ಯಾಸಕರು ಇತ್ಯಾದಿ ಹುದ್ದೆಗಳಿಗೆ ಸೇರಬಹುದು. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ಫರ್ಟಿಲಿಟಿ ಸೆಂಟರ್ಸ್, ಪ್ರಯೋಗಾಲಯಗಳು, ವಿಶ್ವವಿದ್ಯಾಲಯಗಳಲ್ಲಿ ಹುದ್ದೆಗಳನ್ನು ಅರಸಬಹುದು.

3. ನಾನು ಎಂಜಿನಿಯರಿಂಗ್ ಮುಗಿಸಿ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ನನಗೆ ಮನಃಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಕೋರ್ಸ್ ಮಾಡುವ ಆಸಕ್ತಿಯಿದೆ. ಈ ಕೋರ್ಸ್ ಮತ್ತು ವೃತ್ತಿ ಸಂಬಂಧಿತ ಅವಕಾಶಗಳ ಕುರಿತು ತಿಳಿಸಿ.

–ಹೆಸರು ತಿಳಿಸಿಲ್ಲ, ರಾಯಚೂರು.

ಮನಃಶಾಸ್ತ್ರ ವಿಷಯದಲ್ಲಿ ಎಂ.ಎಸ್ಸಿ ಅಥವಾ ಎಂಎ ಮಾಡಬಹುದು. ಎಂ.ಎಸ್ಸಿ ಕೋರ್ಸ್ ವಿಜ್ಞಾನ ಮತ್ತು ಸಂಶೋಧನಾತ್ಮಕ ಅಂಶಗಳ ಮೇಲೆ ಕೇಂದ್ರೀಕೃತವಾಗಿದ್ದು ಎಂಎ ಕೋರ್ಸ್ ಮನೋವಿಜ್ಞಾನದ ಮಾನವಿಕ ಅಂಶಗಳ ಮೇಲೆ ಕೇಂದ್ರೀಕೃತವಾಗಿರುತ್ತದೆ. ಆದ್ದರಿಂದ, ಮುಂದಿನ ನಿಮ್ಮ ವೃತ್ತಿ ಯೋಜನೆಯನ್ನು ಪರಿಗಣಿಸಿ, ಅದರಂತೆ ಕೋರ್ಸ್ ಆಯ್ಕೆಯಿರಲಿ.

ಈ ಕೋರ್ಸ್ ನಂತರ ಪೊಲೀಸ್ ಇಲಾಖೆ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ಮಾನಸಿಕ ಆರೋಗ್ಯ ಸಂಸ್ಥೆಗಳು, ಕೌನ್ಸೆಲಿಂಗ್ ಸಂಸ್ಥೆಗಳು, ಪ್ರಯೋಗಾಲಯಗಳು, ಸಂಶೋಧನಾ ಸಂಸ್ಥೆಗಳು ಮುಂತಾದ ಕ್ಷೇತ್ರಗಳಲ್ಲಿ ಉದ್ಯೋಗವನ್ನು ಪಡೆಯಬಹುದು.

ವೃತ್ತಿಯೋಜನೆಯನ್ನು ಮಾಡುವ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=oyUMPrEKPPU

4. ನಾನು ಬಿ.ಎಸ್ಸಿ (ತೋಟಗಾರಿಕೆ) ಮಾಡಿ ಪೊಲೀಸ್ ಇಲಾಖೆಗೆ ಆಯ್ಕೆಯಾಗಿದ್ದೇನೆ. ನಾನು ಸಹಾಯಕ ಪ್ರಾಧ್ಯಾಪಕನಾಗಬೇಕು ಎಂದುಕೊಂಡಿದ್ದೇನೆ. ಸಲಹೆ ನೀಡಿ.

–ಹೆಸರು ತಿಳಿಸಿಲ್ಲ, ರಾಯಚೂರು.

ಉತ್ತಮ ಸಹಾಯಕ ಪ್ರಾಧ್ಯಾಪಕರಾಗಲು ವಿಷಯದ ಕುರಿತ ಆಳವಾದ ಜ್ಞಾನದ ಜೊತೆಗೆ ಸಂವಹನ ಕೌಶಲ, ಸಮಯದ ನಿರ್ವಹಣೆ, ತಾಳ್ಮೆ, ಸಹನೆ, ನಾಯಕತ್ವದ ಕೌಶಲ ಮತ್ತು ಈ ವೃತ್ತಿಯ ಬಗ್ಗೆ ಅಭಿರುಚಿಯಿರಬೇಕು. ಇವೆಲ್ಲವೂ ನಿಮ್ಮಲ್ಲಿದ್ದು, ಈ ವೃತ್ತಿಯನ್ನು ಸಮರ್ಥವಾಗಿ ನಿಭಾಯಿಸುವ ಆತ್ಮವಿಶ್ವಾಸವಿದ್ದರೆ, ಈ ವೃತ್ತಿಯನ್ನು ಅನುಸರಿಸಬಹುದು.

ಸಾಮಾನ್ಯವಾಗಿ, ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಸಂಬಂಧಪಟ್ಟ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಕನಿಷ್ಠ ಶೇ 55 ಅಂಕಗಳೊಂದಿಗೆ ಪಡೆದಿರಬೇಕು. ಹಾಗೂ, ರಾಷ್ಟ್ರೀಯ/ರಾಜ್ಯ ಮಟ್ಟದ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಪಿಎಚ್‌.ಡಿ ಪದವಿಯನ್ನು ಗಳಿಸಿರುವ ಅಭ್ಯರ್ಥಿಗಳಿಗೆ ಶಿಕ್ಷಕರ ಅರ್ಹತಾ ಪರೀಕ್ಷೆಯಿಂದ ವಿನಾಯಿತಿ ದೊರಕುತ್ತದೆ. ಈ ಶೈಕ್ಷಣಿಕ ಅರ್ಹತೆಯ ನಂತರ ಸರ್ಕಾರಿ ವಲಯದ ಸಹಾಯಕ ಪ್ರಾಧ್ಯಾಪಕ ಹುದ್ದೆಯ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಬೇಕು.

5. ನಾನು ದ್ವಿತೀಯ ಪಿಯುಸಿ ಓದುತ್ತಿದ್ದು, ವೆಟರ್ನರಿ ಕ್ಷೇತ್ರದಲ್ಲಿ ಕೆಲಸ ಮಾಡುವ ಆಸಕ್ತಿಯಿದೆ. ಇಂಡಿಯನ್ ವೆಟರ್ನರಿ ಇನ್‌ಸ್ಟಿಟ್ಯೂಟ್‌ನಲ್ಲಿ ಸಂಶೋಧನೆ ಮಾಡುವುದು ನನ್ನ ಉದ್ದೇಶ. ಇದಕ್ಕಾಗಿ ಯಾವ ಕೋರ್ಸ್ ಸೇರಬೇಕು? ಮಾರ್ಗದರ್ಶನ ನೀಡಿ.

–ಹೆಸರು, ಊರು ತಿಳಿಸಿಲ್ಲ.

ಇಂಡಿಯನ್ ವೆಟರ್ನರಿ ಇನ್‌ಸ್ಟಿಟ್ಯೂಟ್‌ನಲ್ಲಿ ಸಂಶೋಧನೆ ಮಾಡುವುದು ನಿಮ್ಮ ಉದ್ದೇಶವಾದರೆ ಮೊದಲು ಬಿ.ಎಸ್ಸಿ(ವೆಟರ್ನರಿ ಸೈನ್ಸ್) ಕೋರ್ಸ್ ಮಾಡಬೇಕು. ಇಂಡಿಯನ್ ವೆಟರ್ನರಿ ಇನ್‌ಸ್ಟಿಟ್ಯೂಟ್ ಸೇರಿದಂತೆ ರಾಜ್ಯದ ಅನೇಕ ಸಂಸ್ಥೆಗಳಲ್ಲಿ ಈ ಕೋರ್ಸ್ ಲಭ್ಯವಿದೆ. ನೀಟ್ ಪ್ರವೇಶ ಪರೀಕ್ಷೆಯ ಮೂಲಕ ಸೀಟ್ ಹಂಚಿಕೆಯಾಗುತ್ತದೆ. ಈ ಕೋರ್ಸ್ ನಂತರ ಪಿಎಚ್.ಡಿ ಕೋರ್ಸ್ ಮೂಲಕ ಸಂಶೋಧನೆ ಮಾಡಬಹುದು.

ಸಂಶೋಧನಾ ವಿಷಯದ ಬಗ್ಗೆ ಸಂಪೂರ್ಣವಾದ ಮಾಹಿತಿ ಮತ್ತು ಕಲ್ಪನೆಯಿರಬೇಕು. ಸಂಶೋಧನೆ ಕುರಿತು ಸಾಕಷ್ಟು ಸಂಪನ್ಮೂಲಗಳು ಇದ್ದರೂ ಸಹ, ವಿಷಯವನ್ನು ನಿರ್ಧರಿಸುವುದು ಸುಲಭವಲ್ಲ. ವಿಷಯದ ಪ್ರಸ್ತುತತೆ, ವಿಷಯದ ಕುರಿತು ಸ್ವಾಭಾವಿಕವಾದ ಒಲವು ಮತ್ತು ಪ್ರೇರಣೆಯ ಜೊತೆಗೆ ಮಾರ್ಗದರ್ಶಕರ ಸಕಾರಾತ್ಮಕ ಅಭಿಪ್ರಾಯ ಮತ್ತು ಬೆಂಬಲವಿರಬೇಕು. ಹಾಗಾಗಿ, ವಿಷಯದ ಕುರಿತು ಪ್ರಾಥಮಿಕ ಸಂಶೋಧನೆ ಅಗತ್ಯ.

ಹೆಚ್ಚಿನ ಮಾಹಿತಿಗಾಗಿ ಗಮನಿಸಿ: https://www.ivri.nic.in/

6. ನಾನು ಪಿಯುಸಿ (ವಿಜ್ಞಾನ) ಮಾಡಿ ಈಗ ಬಿಸಿಎ ಮಾಡಲು ಇಚ್ಛಿಸಿದ್ದೇನೆ. ಇದರಿಂದ ಭವಿಷ್ಯದಲ್ಲಿ ಹೇಗೆ ಸಹಾಯವಾಗುತ್ತದೆ?

–ಹೆಸರು, ಊರು ತಿಳಿಸಿಲ್ಲ.

ಮಾಹಿತಿ ತಂತ್ರಜ್ಞಾನ ಅಭಿವೃದ್ಧಿಯ ಪಥದಲ್ಲಿರುವ ಕ್ಷೇತ್ರ. ಹಾಗಾಗಿ, ಬಿಸಿಎ ಪದವೀಧರರಿಗೆ ಬೇಡಿಕೆ ಇದೆ. ನಾಲ್ಕು ವರ್ಷದ ಬಿಸಿಎ ಕೋರ್ಸಿನಲ್ಲಿ ವೃತ್ತಿಪರ ಇಂಗ್ಲಿಷ್, ಗಣಿತ, ಸಂಖ್ಯಾಶಾಸ್ತ್ರ, ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಂಬಂಧಿತ ವಿಷಯಗಳನ್ನು ಕಲಿಸಲಾಗುತ್ತದೆ. ಡೇಟಾ ಸೈನ್ಸ್, ಎಐ, ಎಂಎಲ್, ಸೈಬರ್ ಸೆಕ್ಯೂರಿಟಿ, ಕ್ಲೌಡ್ ಕಂಪ್ಯೂಟಿಂಗ್ ಮುಂತಾದ ವಿಷಯಗಳಲ್ಲಿ, ನಿಮ್ಮ ಆಸಕ್ತಿಗೆ ಅನುಗುಣವಾಗಿ ಈ ಕೋರ್ಸ್ ಮಾಡಬಹುದು. ಕ್ಯಾಂಪಸ್ ನೇಮಕಾತಿಯಿರುವ ಕಾಲೇಜಿನಲ್ಲಿ ಬಿಸಿಎ ಮಾಡುವುದರಿಂದ ವೃತ್ತಿಯನ್ನು ಆರಂಭಿಸಲು ಸುಲಭವಾಗುತ್ತದೆ. ನೀವು ಸೇರಬಯಸುವ ಕಾಲೇಜನ್ನು ಅವಲಂಬಿಸಿ ಪ್ರವೇಶ ನೇರವಾಗಿಯೂ ಕೆಲವೊಮ್ಮೆ ಪ್ರವೇಶ ಪರೀಕ್ಷೆಯ ಮುಖಾಂತರವೂ ಆಗುತ್ತದೆ. ಹೆಚ್ಚಿನ ತಜ್ಞತೆಗಾಗಿ, ನಿಮ್ಮ ಅಗತ್ಯಕ್ಕೆ ತಕ್ಕಂತೆ, ಸರ್ಟಿಫಿಕೆಟ್/ಡಿಪ್ಲೊಮಾ/ಎಂಸಿಎ/ಪಿಎಚ್.ಡಿ ಕೋರ್ಸ್ ಮಾಡಬಹುದು.

7. ನಾನು ಎಂಎ (ಅರ್ಥಶಾಸ್ತ್ರ) ಕೋರ್ಸ್ ಅನ್ನು ಮುಕ್ತ ವಿಶ್ವವಿದ್ಯಾಲಯದ ಮೂಲಕ ಮಾಡಲು ಇಚ್ಛಿಸಿದ್ದೇನೆ. ಪ್ರವೇಶ ಪ್ರಕ್ರಿಯೆ ಯಾವಾಗ ಶುರುವಾಗಲಿದೆ? ದಯವಿಟ್ಟು ತಿಳಿಸಿ.

–ಹೆಸರು ತಿಳಿಸಿಲ್ಲ, ರಾಯಚೂರು.

ಸ್ನಾತಕೋತ್ತರ ಕೋರ್ಸ್ ಪ್ರವೇಶ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ. ಉದಾಹರಣೆಗೆ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಕಟಣೆಯ ಪ್ರಕಾರ 2023-2024ನೇ ಶೈಕ್ಷಣಿಕ ವರ್ಷದ ಪ್ರವೇಶಕ್ಕೆ ದಿನಾಂಕ 31, ಆಗಸ್ಟ್, 2023 ಕೊನೆಯ ದಿನಾಂಕವೆAದು ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಗಮನಿಸಿ:

https://ksoumysuru.ac.in/

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.