ADVERTISEMENT

ನಿಮ್ಮ ಪ್ರಶ್ನೆಗೆ ತಜ್ಞರ ಉತ್ತರ: ‘ಪಿಜಿಸಿಇಟಿ’ಗೆ ಸಿದ್ಧತೆ ಹೇಗೆ?

ಪ್ರದೀಪ್ ಕುಮಾರ್ ವಿ.
Published 31 ಅಕ್ಟೋಬರ್ 2022, 3:24 IST
Last Updated 31 ಅಕ್ಟೋಬರ್ 2022, 3:24 IST
   

1. ನಾನು ಬಿಬಿಎ ಕೋರ್ಸ್ ಪೂರ್ಣಗೊಳಿಸಿದ್ದೇನೆ. ಎಂಬಿಎ (ಫೈನಾನ್ಸ್) ಮಾಡಬೇಕು ಎಂದುಕೊಂಡಿದ್ದೇನೆ. ’ಪಿಜಿಸಿಇಟಿ’ಗೆ ಹೇಗೆ ಸಿದ್ಧತೆ ನಡೆಸಬೇಕು? ಮೈಸೂರಿನಲ್ಲಿ ಎಂಬಿಎ ಕಲಿಯಲು ಯಾವ ಕಾಲೇಜು ಉತ್ತಮ ಆಯ್ಕೆ?
ಹೆಸರು, ಊರು ತಿಳಿಸಿಲ್ಲ.

ಪಿಜಿಸಿಇಟಿ ಪರೀಕ್ಷೆಯ ಮಾದರಿ, ವಿಷಯಸೂಚಿ ಇತ್ಯಾದಿಗಳನ್ನು ಅರ್ಥಮಾಡಿಕೊಂಡು, ನಿಮ್ಮ ಸಾಮರ್ಥ್ಯ ಮತ್ತು ಕುಂದುಕೊರತೆಗಳನ್ನು ಗಮನದಲ್ಲಿಟ್ಟುಕೊಂಡು ಸಿದ್ಧತೆ ನಡೆಸಬೇಕು. ಕ್ಯಾಟ್, ಜಿಮ್ಯಾಟ್ ಮುಂತಾದ ಪರೀಕ್ಷೆಗಳಿಗೆ ಹೋಲಿಸಿದರೆ ಪಿಜಿಸಿಇಟಿ ಸುಲಭವೆನ್ನಬಹುದು. ಹಾಗಾಗಿ, ಈ ಪರೀಕ್ಷೆಯಲ್ಲಿ ಉನ್ನತ ಅಂಕಗಳನ್ನು ಪಡೆದು ಉತ್ತಮ ಕಾಲೇಜಿನಲ್ಲಿ ಎಂಬಿಎ ಮಾಡಬಹುದು. ಈ ಪರೀಕ್ಷೆಯಲ್ಲಿ ಇಂಗ್ಲಿಷ್ ಭಾಷಾ ತಜ್ಞತೆ, ಸಾಮಾನ್ಯ ಜ್ಞಾನ, ಪರಿಮಾಣಾತ್ಮಕ ತಾರ್ಕಿಕತೆ, ಸಾಮಾನ್ಯ ಬುದ್ದಿವಂತಿಕೆ ಮತ್ತು ತಾರ್ಕಿಕತೆ ವಿಭಾಗಗಳಿಂದ 100 ಪ್ರಶ್ನೆಗಳಿರುತ್ತವೆ. ಮೈಸೂರಿನಲ್ಲಿ ಅನೇಕ ಉತ್ತಮ ಎಂಬಿಎ ಕಾಲೇಜುಗಳಿವೆ. ಹೆಚ್ಚಿನ ವಿವರಗಳಿಗಾಗಿ, ಗಮನಿಸಿ: https://www.shiksha.com/mba/karnataka-pgcet-exam-preparation

2. ನಾನು ಈಗ ದ್ವಿತೀಯ ಪಿಯುಸಿ (ವಾಣಿಜ್ಯ) ಓದುತ್ತಿದ್ದೇನೆ. ಮುಂದೆ ಚಾರ್ಟೆಟ್‌ ಅಕೌಂಟೆಂಟ್‌(ಸಿಎ) ಹೊರತುಪಡಿಸಿ, ಬೇರೆ ಯಾವ ಕೋರ್ಸ್‌ಗಳನ್ನು ಮಾಡಬಹುದು? ಯಾವ ಕೋರ್ಸ್‌ ಮೂಲಕ ಹೆಚ್ಚು ಹಣ ಗಳಿಸಬಹುದು?
ಹೆಸರು, ಊರು ತಿಳಿಸಿಲ್ಲ.

ADVERTISEMENT

ಇತ್ತೀಚೆಗೆ ಬಿಕಾಂ ಕೋರ್ಸ್‌ಗೆ ಹೆಚ್ಚಿನ ಬೇಡಿಕೆಯಿದೆ. ಹಾಗೆಯೇ ಬಿಕಾಂ ಕೋರ್ಸ್‌ನಲ್ಲಿ ಹತ್ತಕ್ಕೂ ಹೆಚ್ಚು ವರ್ಗೀಕರಣವಿದೆ (ಸ್ಟ್ರೀಮ್ಸ್‌). ಉದಾಹರಣೆಗೆ, ಜನರಲ್, ಬ್ಯಾಂಕಿಂಗ್‌, ಇನ್ವೆಸ್ಟ್ಮೆಂಟ್, ಅಕೌಂಟಿಂಗ್‌, ಟ್ಯಾಕ್ಸೇಷನ್‌, ಟೂರಿಸಮ್, ಎಕನಾಮಿಕ್ಸ್ ಇತ್ಯಾದಿ.
ಪಿಯುಸಿ (ವಾಣಿಜ್ಯ) ನಂತರ ಮಾಡಬಹುದಾದ ಇನ್ನಿತರ ಕೋರ್ಸ್‌ಗಳೆಂದರೆಬಿಬಿಎ, ಬಿಸಿಎ, ಬಿಎಸ್‌ಡಬ್ಲ್ಯು, ಎಸಿಎಸ್, ಐಸಿಡಬ್ಲ್ಯು, ಸಿಎಂಎ, 5 ವರ್ಷದ ಇಂಟಿಗ್ರೇಟೆಡ್ ಎಲ್‌ಎಲ್‌ಬಿ ಇತ್ಯಾದಿ. ಹಾಗಾಗಿ, ನಿಮ್ಮ ಆಸಕ್ತಿ, ಸ್ವಾಭಾವಿಕ ಪ್ರತಿಭೆ ಮತ್ತು ವೃತ್ತಿ ಯೋಜನೆಯ ಅನುಸಾರ ಕೋರ್ಸ್ ಆಯ್ಕೆ ಮಾಡಿಕೊಳ್ಳುವುದು ಸೂಕ್ತ.

ಆದರೆ, ನೀವು ಕೇಳಿರುವ ಹಾಗೆ ಯಾವ ಕೋರ್ಸ್ ಮುಖಾಂತರ ಹೆಚ್ಚು ಹಣ ಗಳಿಸಬಹುದು ಎಂದು ಹೇಳಲಾಗುವುದಿಲ್ಲ. ಏಕೆಂದರೆ, ಯಾವುದೇ ವೃತ್ತಿಯಲ್ಲಿ ನಿಮ್ಮ ಕಾರ್ಯಕ್ಷಮತೆ ನಿರೀಕ್ಷಿತ ಮಟ್ಟಕ್ಕಿದ್ದರೆ ಮಾತ್ರ ಸಂಪಾದನೆಯಲ್ಲಿ ಪ್ರಗತಿಯನ್ನು ಕಾಣಬಹುದು. ಆದ್ದರಿಂದ, ನೀವು ಅನುಸರಿಸುವ ವೃತ್ತಿಯಲ್ಲಿ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಸಾಧಿಸುವುದು ನಿಮ್ಮ ಗುರಿಯಾಗಿರಲಿ.
ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೊ ವೀಕ್ಷಿಸಿ: https://www.youtube.com/watch?v=jmijSoqBDVw

3. ನಾನು ಬಿಎ ಪದವಿ ಮಾಡಿದ್ದೇನೆ. ಈ ಪದವಿ ಮುಗಿದ ನಂತರ ಯಾವ ಕೋರ್ಸ್‌ಗಳನ್ನು ಮುಂದೆ ಮಾಡಬಹುದು?
ವಿಜಯಕುಮಾರ.ಎಸ್, ಯರಗೋಳ ತಾ. ಯಾದಗಿರಿ ಜಿಲ್ಲೆ.

ಬಿಎ ಪದವಿಯ ನಂತರ ಎಂಎ, ಎಂಬಿಎ, ಬಿ.ಇಡಿ, ಎಲ್‌ಎಲ್‌ಬಿ, ಐಎಎಸ್ ಇತ್ಯಾದಿ. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೊ ವೀಕ್ಷಿಸಿ:https://www.youtube.com/watch?v=RW77sMi-ijY

4. ಪಿಎಚ್‌.ಡಿ ಮಾಡುವುದು ಹೇಗೆ ?
ಹೆಸರು, ಊರು ತಿಳಿಸಿಲ್ಲ.

ಸಾಮಾನ್ಯವಾಗಿ ಪಿಎಚ್‌.ಡಿ ಮಾಡಲು ಈ ಕೆಳಗೆ ತಿಳಿಸಿರುವ ಪ್ರಕ್ರಿಯೆ ಇರುತ್ತದೆ:
• ಪಿಎಚ್‌.ಡಿ ಕೋರ್ಸ್‌ಗೆ ಅಗತ್ಯವಾದ ಸಂಶೋಧನೆಯ ವಿಷಯವನ್ನು ನಿರ್ಧರಿಸುವುದು ಸುಲಭವಲ್ಲ. ವಿಷಯದ ಪ್ರಸ್ತುತತೆ, ವಿಷಯದ ಕುರಿತು ಸ್ವಾಭಾವಿಕವಾದ ಒಲವು ಮತ್ತು ಪ್ರೇರಣೆಯ ಜೊತೆಗೆ ಮಾರ್ಗದರ್ಶಕರ ಸಕಾರಾತ್ಮಕ ಅಭಿಪ್ರಾಯ ಮತ್ತು ಬೆಂಬಲವಿರಬೇಕು. ಹಾಗಾಗಿ, ವಿಷಯದ ಕುರಿತು ಪ್ರಾಥಮಿಕ ಸಂಶೋಧನೆ ಅಗತ್ಯ.
• ಸಂಬಂಧಪಟ್ಟ ವಿಷಯದಲ್ಲಿ ಸ್ನಾತಕೋತ್ತರ ಪದವಿಯ ನಂತರ ಪಿಎಚ್‌.ಡಿ ಕೋರ್ಸ್ ಮಾಡಲು ಅರ್ಹತೆ ಸಿಗುತ್ತದೆ. ಆದರೆ, ಈಗ ಅನುಷ್ಠಾನಗೊಳ್ಳುತ್ತಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಸಾರ ನಾಲ್ಕು ವರ್ಷದ ಪದವಿಯ ನಂತರವೇ ಪಿಎಚ್‌ಡಿ ಮಾಡಲು ಅರ್ಹತೆ ಸಿಗುತ್ತದೆ.
• ಪಿಎಚ್‌.ಡಿ ಕೋರ್ಸ್‌ನಲ್ಲಿ ನೀವು ಮಾಡುವ ಸಂಶೋಧನೆ ಕುರಿತ ಸುದೀರ್ಘವಾದ ಪ್ರಸ್ತಾವನೆಯನ್ನು ತಯಾರಿಸಬೇಕು. ಇದರ ಆಧಾರದ ಮೇಲೆ ವಿಶ್ವವಿದ್ಯಾಲಯದ ಅನುಮತಿ ಸಿಗುತ್ತದೆ.
• ಪ್ರತಿ ವಿಶ್ವವಿದ್ಯಾಲಯವು ಪ್ರತಿ ವರ್ಷ ತನ್ನ ಪಿಎಚ್‌.ಡಿ ಕಾರ್ಯಕ್ರಮಗಳಲ್ಲಿ ನಿರ್ದಿಷ್ಟ ಸಂಖ್ಯೆಯ ಅವಕಾಶಗಳನ್ನು ಹೊಂದಿರುತ್ತದೆ. ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಪ್ರವೇಶ ಪರೀಕ್ಷೆಗಳು, ಸಂದರ್ಶನಗಳು ಮತ್ತು ಸಂಶೋಧನಾ ಪ್ರಸ್ತಾವನೆಯ ಮೌಲ್ಯಮಾಪನ ಇತ್ಯಾದಿ ಪ್ರಕ್ರಿಯೆಗಳಿರುತ್ತದೆ.
• ಪಿಎಚ್‌.ಡಿ ಕೋರ್ಸ್‌ಗೆ ಆಯ್ಕೆಯಾದ ನಂತರ ಸಂಶೋಧನೆಯನ್ನು ಪೂರ್ಣಗೊಳಿಸಿ ಮಹಾಪ್ರಬಂಧವನ್ನು (Thesis) ಬರೆದು ವಿಶ್ವವಿದ್ಯಾಲಯಕ್ಕೆ ಸಲ್ಲಿಸಬೇಕು. ಇದಲ್ಲದೆ, ವಿಶ್ವವಿದ್ಯಾಲಯದ ನಿಯಮಾವಳಿಗಳಂತೆ ಪ್ರತಿಷ್ಟಿತ ಪತ್ರಿಕೆಗಳಲ್ಲಿ ಸಂಶೋಧನಾತ್ಮಕ ಲೇಖನಗಳನ್ನು ಪ್ರಕಟಿಸಬೇಕು.
• ನೀವು ಸಲ್ಲಿಸಿದ ಮಹಾಪ್ರಬಂಧವನ್ನು ವಿಷಯ ತಜ್ಞರ ಮೂಲಕ ಮೌಲ್ಯಮಾಪನ ಮಾಡಲಾಗುತ್ತದೆ.
• ಮಹಾಪ್ರಬಂಧವನ್ನು ವಿಶ್ವವಿದ್ಯಾಲಯ ಸ್ವೀಕಾರ ಮಾಡಿದ ನಂತರ ಪಿಎಚ್‌ಡಿ ಪದವಿಯನ್ನು ನೀಡಲಾಗುತ್ತದೆ. ಈ ಇಡೀ ಪ್ರಕ್ರಿಯೆಗೆ 3-5 ವರ್ಷ ಬೇಕಾಗಬಹುದು.
ಪ್ರತಿ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದಂತೆ ನಿಯಮಾವಳಿಗಳು, ಶುಲ್ಕಗಳು, ವಿದ್ಯಾರ್ಥಿ ವೇತನ, ಅನುದಾನ ಇತ್ಯಾದಿಗಳು ವಿಭಿನ್ನವಾಗಿರುತ್ತದೆ.

ಇನ್ನಷ್ಟು ಪ್ರಶ್ನೋತ್ತರಗಳಿಗಾಗಿ https://www.prajavani.net/education-career ಜಾಲತಾಣಕ್ಕೆ ಭೇಟಿ ನೀಡಿ

–––

ವಿದ್ಯಾರ್ಥಿಗಳೇ, ನಿಮ್ಮ ಮುಂದಿನ ಕೋರ್ಸ್‌ ಮತ್ತು ಸೂಕ್ತವಾದ ವೃತ್ತಿಯ ಆಯ್ಕೆ ಹಾಗೂ ಭವಿಷ್ಯವನ್ನು ರೂಪಿಸಿಕೊಳ್ಳುವ ಬಗ್ಗೆ ಗೊಂದಲಗಳಿವೆಯೇ? ಹಾಗಿದ್ದರೆ ನಮಗೆ ಬರೆಯಿರಿ. ನಿಮ್ಮ ಪ್ರಶ್ನೆಗಳಿಗೆ ಶಿಕ್ಷಣತಜ್ಞ ಮತ್ತು ವೃತ್ತಿ ಸಲಹೆಗಾರ ವಿ. ಪ್ರದೀಪ್ ಕುಮಾರ್ ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು shikshana@prajavani.co.in ಗೆ ಕಳಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.